ನಾವು ಜಲಜಾಗೃತರಾಗೋಣ
ನಾವು ಜಲಜಾಗೃತರಾಗೋಣ
ಡಾ. ಜಗದೀಶ ಬಾಳ
ಈ ಪೃಥ್ವಿಯಲ್ಲಿ ಲಭ್ಯವಿರುವ ನೀರಿನಲ್ಲಿ ೯೭.೨ ಶೇಕಡ ಉಪ್ಪುನೀರೇ, ಸೇವನೆಗೆ ಯೋಗ್ಯವಾದ ಸಿಹಿನೀರು ಕೇವಲ ೨.೮ ಶೇಕಡಾ ಮಾತ್ರ. ಈ ಸಿಹಿನೀರು ಕೂಡ ಬಹುಪಾಲು ಧ್ರುವಪ್ರದೇಶಗಳಲ್ಲಿ ಮಂಜುಗಡ್ಡೆಯ ರೂಪದಲ್ಲೇ ಇದೆ. ನಮ್ಮ ಉಪಯೋಗಕ್ಕಾಗಿ ನದಿ, ಕೆರೆ, ಬಾವಿ, ಅಂತರ್ಜಲದಲ್ಲಿ ಲಭ್ಯವಿರುವ ನೀರು ಅತ್ಯಲ್ಪ ಪ್ರಮಾಣದಲ್ಲಿ, ಅಂದರೆ ಸುಮಾರು ಶೇಕಡ ಒಂದರಷ್ಟು ಮಾತ್ರ. ದೇಶದಲ್ಲಿ ನದಿಗಳ ನೀರಿಗಾಗಿ ರಾಜ್ಯ-ರಾಜ್ಯಗಳ ಮಧ್ಯೆ ಜಗಳವಾಗುತ್ತಿದೆ. ಶುದ್ಧ ಕುಡಿಯುವ ನೀರಿನ ಕೊರತೆ ಹಲವಾರು ರೋಗಗಳಿಗೆ ಕಾರಣವಾಗುತ್ತಿದೆ. ಜಾಗತಿಕವಾಗಿ ಶುದ್ಧಜಲ ಗುಣಮಟ್ಟ ಮಾಪನದ ೧೨೨ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ೧೨೦ನೇ ಸ್ಥಾನದಲ್ಲಿರುವುದು ನಿಜಕ್ಕೂ ಕಳವಳಕಾರಿ.
ವಿಶ್ವಸಂಸ್ಥೆಯ ವರದಿಗಳ ಪ್ರಕಾರ ನಮ್ಮ ದೇಶ ಈಗಾಗಲೇ ತಲಾ ನೀರಿನ ಲಭ್ಯತೆಯ ಮಾನದಂಡದಲ್ಲಿ ನೀರಿನ ಒತ್ತಡ ಅನುಭವಿಸುತ್ತಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಮುಂದಿನ ದಶಕದ ಹೊತ್ತಿಗೆ ಶುದ್ಧ ಕುಡಿಯುವ ನೀರಿನ ಅಭಾವ ಎದುರಿಸಬೇಕಾಗಬಹುದು. ಆಧುನಿಕತೆಯ ಭರಾಟೆಯಲ್ಲಿ ಇಂದು ಏರುತ್ತಿರುವ ಜನಸಂಖ್ಯೆ, ನಗರೀಕರಣ, ಕೈಗಾರೀಕರಣ, ಅರಣ್ಯನಾಶ ಮತ್ತು ಹೆಚ್ಚುತ್ತಿರುವ ಜಲಮಾಲಿನ್ಯಗಳಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದೆ.
ನಮ್ಮ ಜಿಲ್ಲೆಯಲ್ಲಿ ಮಳೆ ಪ್ರಮಾಣ: ನಮ್ಮ ಕರಾವಳಿಯ ಜಿಲ್ಲೆಗಳು ಇಂದು ಕೂಡ ರಾಜ್ಯದಲ್ಲಿ ಅತ್ಯಂತ ಹೆಚ್ಚು ಮಳೆ ಪಡೆಯುವ ಪ್ರದೇಶಗಳು. ನಾವು ವಾರ್ಷಿಕವಾಗಿ ಸರಾಸರಿ ೩೫೦೦ ರಿಂದ ೪೦೦೦ ಮಿ.ಮೀ. ಮಳೆ ಪಡೆದರೂ ಕೂಡ ಬೇಸಿಗೆಯಲ್ಲಿ ಜಲಕ್ಷಾಮ ಅನುಭವಿಸುತ್ತಿದ್ದೇವೆ. ಕೃಷಿ ಪದ್ಧತಿಗಳಲ್ಲಿ ಬದಲಾವಣೆಯಾಗಿರುವುದು, ಬದಲಾದ ಜೀವನ ಶೈಲಿ, ವೇಗವಾಗಿ ಬೆಳೆಯುತ್ತಿರುವ ನಗರೀಕರಣ, ಕೈಗಾರಿಕೀಕರಣ ಇವೆಲ್ಲಾ ನಮ್ಮ ನೀರಿನ ಬೇಡಿಕೆಯನ್ನು ಮತ್ತಷ್ಟು ಹೆಚ್ಚಿಸಿವೆ. ಬಿದ್ದ ಮಳೆಯಲ್ಲಿ ಸ್ವಲ್ಪವನ್ನಾದರೂ ನಾಳೆಗಾಗಿ ಹಿಡಿದಿಡುವ ಜಾಗೃತಿ ನಮ್ಮಲ್ಲಿ ಕಡಿಮೆ ಆಗುತ್ತಿರುವುದರಿಂದಲೇ ನೀರಿನ ಮಟ್ಟಿಗೆ ಶ್ರೀಮಂತಿಕೆ ಇದ್ದರೂ ಬಡವರಾಗಿರುವ ದುಃಸ್ಥಿತಿ ನಮಗೊದಗಿದೆ. ಆಧುನಿಕತೆಯ ಅಬ್ಬರದಲ್ಲಿ ಈ ಮಳೆನೀರನ್ನು ನೈಸರ್ಗಿಕವಾಗಿ ಭೂಮಿಗೆ ಇಂಗಿಸುವ ವ್ಯವಸ್ಥೆಗಳು ನಮ್ಮಲ್ಲಿ ಬಹುವಾಗಿ ಕ್ಷೀಣಿಸುತ್ತಿವೆ. ದಶಕಗಳ ಹಿಂದೆ ಲಾರಿಗಳ ಮೂಲಕ ನೀರಿನ ವ್ಯಾಪಾರ ಕೇವಲ ಮಾರ್ಚ್ ತಿಂಗಳ ನಂತರ ಕಾಣಿಸುತ್ತಿದ್ದರೆ, ಈಗ ವರ್ಷಪೂರ್ತಿ ನೀರು ಮಾರಾಟ ಭಾರೀ ಬೇಡಿಕೆಯ ಉದ್ಯಮವಾಗಿ ಬೆಳೆಯುತ್ತಿದೆ. ನಮ್ಮ ಬೆಳೆಯುತ್ತಿರುವ ಮಹಾನಗರಗಳು-ಬೃಹತ್ ಕೈಗಾರಿಕೆಗಳು ಆಸುಪಾಸಿನ ನೀರಿನ ಮೂಲಗಳನ್ನು ಮನಬಂದಂತೆ ಬಳಸುತ್ತಿವೆ ಮಾತ್ರವಲ್ಲ ಮಲಿನಗೊಳಿಸುತ್ತಿವೆ. ಪರಶುರಾಮ ಸೃಷ್ಟಿಯ ಈ ತುಳುನಾಡಿನಲ್ಲಿ ಬರಗಾಲ ಬರಲಾರದು ಎಂಬ ಹಿರಿಯರ ಮಾತುಎಷ್ಟರ ಮಟ್ಟಿಗೆ ಸತ್ಯ ಎಂದು ಸಂಶಯಪಡುವಂತಾಗಿದೆ. ನೀರಿನ ವಿಷಯದಲ್ಲಿ ನಾವು ಇನ್ನು ಮುಂದಾದರೂ ಬುದ್ಧಿವಂತರಾಗದಿದ್ದರೆ ಅಪಾಯ ಖಂಡಿತಾ ತಪ್ಪಿದ್ದಲ್ಲ.
ಪ್ರಕೃತಿ ನಿಯಮವನ್ನು ಮೀರಿ ನೀರಿನ ಬಗ್ಗೆ ಬೇಕಾಬಿಟ್ಟಿ ಧೋರಣೆ ಅನುಸರಿಸಿದರೆ ಮುಂದಿನ ಬರಗಾಲಕ್ಕೆ ನಾವೇ ಆಹ್ವಾನ ನೀಡಿದಂತಾದೀತು. ನಮ್ಮ ಹಿರಿಯರು ಅರಣ್ಯ ಸಂರಕ್ಷಣೆಯಲ್ಲಿ, ನಾಗಬನಗಳ ರಚನೆ/ರಕ್ಷಣೆಯಲ್ಲಿ, ದೇವಾಲಯಗಳ-ಊರಿನ ಕೆರೆಗಳ ಸಂರಕ್ಷಣೆಯಲ್ಲಿ, ಸಾಂಪ್ರದಾಯಿಕ ಕಟ್ಟಗಳ ನಿರ್ಮಾಣದಲ್ಲಿ, ಬಾವಿಗಳ ರಚನೆಯಲ್ಲಿ ಅತ್ಯಂತ ಪ್ರಾಜ್ಞರಾಗಿದ್ದರು. ಅಂತರ್ಜಲದ ಮಟ್ಟವನ್ನು ಧಾರ್ಮಿಕ ನಂಬಿಕೆಗಳೊಂದಿಗೆ ಶ್ರದ್ಧೆಯಿಂದ ಕಾಪಾಡಿಕೊಂಡು ಬಂದಿದ್ದರು.
ಅಪಾಯದ ಮುನ್ಸೂಚನೆ: ನಾವು ಇಂದು ಮಳೆ ಕೊಯ್ಲಿನ ಹಲವಾರು ಸಾಂಪ್ರದಾಯಿಕ ಪದ್ಧತಿಗಳನ್ನು ಬಹುತೇಕ ಮರೆತಿದ್ದೇವೆ. ಕೃಷಿ ಪದ್ಧತಿಯಲ್ಲಿ ಬದಲಾವಣೆಯಾಗಿ ವಾಣಿಜ್ಯ ಬೆಳೆಗಳು ಹೆಚ್ಚುತ್ತಿವೆ. ಕೆಲವು ಕಡೆ ನಗರೀಕರಣದ ಪ್ರಭಾವದಿಂದ ಕೃಷಿಭೂಮಿ ಕನ್ವರ್ಷನ್ ಕಾಣುತ್ತಿದ್ದು, ಇನ್ನು ಕೆಲವು ಕಡೆ ಕೈಗಾರೀಕರಣಕ್ಕಾಗಿ ನೆಲ, ಜಲಗಳನ್ನು ಕಳೆದುಕೊಂಡಿದ್ದೇವೆ/ ಮಲಿನಗೊಳಿಸುತ್ತಿದ್ದೇವೆ. ಪರಿಣಾಮವಾಗಿ ನಮ್ಮ ಹಿರಿಯರು ಭೂಮಿಯ ಒಡಲು ತುಂಬಿಸಲು ನಿರ್ಮಿಸಿದ್ದ ಕೆರೆ, ಬಾವಿ, ಕಟ್ಟಗಳು ಮರೆಯಾಗುತ್ತಿವೆ. ಕೆಲವು ಕಡೆಗಳಲ್ಲಿ ಗುಡ್ಡಗಳು ಲೆವೆಲ್ ಆಗುತ್ತಿದ್ದು, ಅದರ ತಪ್ಪಲಿನ ನೀರಿನ ಒಸರುಗಳು ನಿಂತಿವೆ. ಸಾರ್ವಜನಿಕ ಬಾವಿ-ಕೆರೆಗಳು ಕೆಲವು ಕಡೆ ಮುಚ್ಚಿವೆ, ಇನ್ನೂ ಕೆಲವು ತ್ಯಾಜ್ಯ ತುಂಬಿದ ತಿಪ್ಪೆಗಳಾಗಿ ಪರಿವರ್ತನೆಯಾಗುತ್ತಿವೆ.
ಭೂಮಿಯ ಒಡಲಿಗೆ ಜಲ ಮರುಪೂರಣ ಮಾಡದೆ ನೀರು ತೆಗೆಯುತ್ತಿರುವುದರಿಂದ ಅಂತರ್ಜಲ ಕುಸಿಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲಾ ಅಂತರ್ಜಲ ಇಲಾಖೆಯ ವರದಿಯಂತೆ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಹೆಚ್ಚು ಆಳದ ಕೊಳವೆ ಬಾವಿಗಳಿಂದ ಕುಡಿಯಲು ಯೋಗ್ಯವಲ್ಲದ ನೀರು ದೊರೆಯುತ್ತಿದೆ. ಅಂತರ್ಜಲ ಕುಸಿತದ ಕಾರಣ ಕೊಳವೆ ಬಾವಿಗಳಲ್ಲಿ ಉಪ್ಪು ನೀರಿನ ತೊಂದರೆ ಈಗಾಗಲೇ ವರದಿಯಾಗಿದ್ದು, ಕರಾವಳಿಯ ಜನ ಇನ್ನೂ ಜಲಜಾಗೃತರಾಗದಿದ್ದಲ್ಲ್ಲಿ, ಕೆಲವು ವೈಜ್ಞಾನಿಕ ವರದಿಗಳ ಪ್ರಕಾರ ಜಾಗತಿಕ ತಾಪಮಾನದ ದುಷ್ಪರಿಣಾಮದಿಂದ ಸಮುದ್ರದ ಉಪ್ಪು ನೀರು ನೆಲದೊಳಗೆ ಏರಿಕೆಯಾಗಿ, ನಾವು ನಮ್ಮ ಸಿಹಿನೀರಿನ ಆಗರಗಳನ್ನು ಕಳೆದುಕೊಳ್ಳಬೇಕಾದಿತು. ಡೆಪಾಸಿಟ್ ಮಾಡದೇ ಎನ್‌ಕ್ಯಾಶ್ ಮಾಡುವ ಪ್ರವೃತ್ತಿ ನಾಗರಿಕತೆಯಲ್ಲ. ನಮ್ಮ ಸ್ವಾರ್ಥ ಮುಂದಿನ ಪೀಳಿಗೆಗೆ ಶಾಪವಾಗಬಾರದು.
ಜಲ ಸಂರಕ್ಷಣೆಗಾಗಿ ಮಳೆಕೊಯ್ಲು: ಪ್ರಕೃತಿಸಹಜವಾಗಿ ಬೀಳುವ ಮಳೆನೀರನ್ನು ಬೇರೆ ಬೇರೆ ವಿಧಾನಗಳ ಮೂಲಕ ಭೂದೇವಿಯ ಜಲಪಾತ್ರೆಯನ್ನು ತುಂಬಿಸುವ ಕಾರ್ಯವೇ ಮಳೆಕೊಯ್ಲು. ನೈಸರ್ಗಿಕವಾಗಿ ನೀರು ಭೂಗರ್ಭ ಸೇರುವಂತಹ ವ್ಯವಸ್ಥೆಗಳನ್ನು ವಿವಿಧ ಕಾರಣಗಳಿಂದ ನಾವಿಂದು ಕಳೆದುಕೊಳ್ಳುತ್ತಿದ್ದೇವೆ. ಹಾಗಾಗಿ ಎಲ್ಲಾ ವಿಧಗಳಿಂದ ಪ್ರಕೃತಿಯ ಒಡಲಿಗೆ ಶುದ್ಧವಾದ ಮಳೆನೀರನ್ನು ಮರುಪೂರಣ ಮಾಡಲೇಬೇಕಾದುದು ತುರ್ತಾಗಿ ಆಗಬೇಕಾಗಿದೆ. ನಮ್ಮ ದೇಶದಲ್ಲಿ ಶತಶತಮಾನಗಳ ಹಿಂದೆಯೇ ಜಲಸಂರಕ್ಷಣೆಗಾಗಿ ಸ್ಥಳೀಯವಾಗಿ ಸೂಕ್ತ ವ್ಯವಸ್ಥೆಗಳಿದ್ದ ಬಗ್ಗೆ ಐತಿಹಾಸಿಕ ಪುರಾವೆಗಳಿವೆ. ವೇದ-ಪುರಾಣ, ರಾಮಾಯಣ-ಮಹಾಭಾರತಗಳಲ್ಲಿ ಹಾಗೂ ಬೌದ್ಧ, ಜೈನ ಸಾಹಿತ್ಯಗಳಲ್ಲಿ, ಸಂಸ್ಕೃತ ಸಾಹಿತ್ಯಗಳಲ್ಲಿ ಅಂದಿನ ಕಾಲದ ಜಲಸಂರಕ್ಷಣೆಯ ಹಲವಾರು ವ್ಯವಸ್ಥೆಗಳ ಬಗ್ಗೆ ಉಲ್ಲೇಖಗಳಿವೆ. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ನೀರಿನ ಸಂರಕ್ಷಣೆ, ಬಳಕೆ, ನಿರ್ವಹಣೆ, ಇತ್ಯಾದಿಗಳ ಬಗ್ಗೆ ವಿಸ್ತಾರವಾದ ವಿವರಗಳಿರುವುದು ಸಂಶೋಧನೆಗಳಿಂದ ತಿಳಿದುಬಂದಿರುತ್ತದೆ.
ಮಳೆಕೊಯ್ಲಿನಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ. ಮೊದಲನೆಯದು ಮಳೆನೀರಿನ ನೇರ ಬಳಕೆ, ಇನ್ನೊಂದು ಅಂತರ್ಜಲ ಮರುಪೂರಣೆ. ನಮ್ಮ ಮನೆಯ ತಾರಸಿಯ ಮೇಲೆ ಬಿದ್ದ ನೀರನ್ನು ಶುದ್ಧೀಕರಣಗೊಳಿಸಿ ನೇರವಾಗಿ ಮನೆಯಂಗಳದ ಸಂಪ್‌ನಲ್ಲಿ ಶೇಖರಿಸಿ ಬಳಸುವ ವಿಧಾನವೇ ನೇರ ಬಳಕೆ ವಿಧಾನ. ಇದು ನಗರ ಪ್ರದೇಶಕ್ಕೆ ಅತ್ಯಂತ ಸೂಕ್ತ. ಅದೇ ಮಳೆನೀರನ್ನು ಇಂಗುಗುಂಡಿ, ಕೃಷಿಹೊಂಡ, ಬಾವಿ, ಕೆರೆ, ಕಟ್ಟಗಳ ಮೂಲಕ ಭೂಗರ್ಭಕ್ಕೆ ಇಂಗಿಸಿದರೆ ಅದು ಅಂತರ್ಜಲ ಮರುಪೂರಣೆಯ ಇನ್ನೊಂದು ಸುಲಭ ವಿಧಾನ.
ಇತ್ತೀಚಿನ ವರ್ಷಗಳಲ್ಲಿ ಹಲವಾರು ರಾಜ್ಯ ಸರಕಾರಗಳು ಪ್ರಮುಖ ನಗರಗಳಲ್ಲಿ ಮನೆಗಳಿಗೆ ಮಳೆಕೊಯ್ಲು ವಿಧಾನವನ್ನು ಶಾಸನಾತ್ಮಕವಾಗಿ ಕಡ್ಡಾಯ ಮಾಡುತ್ತಿರುವುದು ಸಮಾಧಾನಕರ ಸಂಗತಿ. ಬೆಂಗಳೂರಲ್ಲಿ ಇಂದು ಮಳೆಕೊಯ್ಲು ಪದ್ಧತಿ ಅಳವಡಿಸಿಕೊಳ್ಳುವುದು ಕಡ್ಡಾಯಗೊಳಿಸಲಾಗಿದೆ. ತಮಿಳುನಾಡಿನ ಚೆನ್ನೈ ನಗರದಲ್ಲಿ ಇದು ಅತ್ಯಂತ ಯಶಸ್ವಿಯಾಗಿ ಜಾರಿಯಾಗಿದ್ದು, ಕೆಲವು ಸರ್ಕಾರಗಳು ಮಳೆಕೊಯ್ಲು ಅಳವಡಿಸಿದವರಿಗೆ ಮನೆತೆರಿಗೆಯಲ್ಲಿ ರಿಯಾಯಿತಿ ಕೂಡ ಪ್ರಕಟಿಸುತ್ತಿವೆ. ಆದರೆ ಕೇವಲ ಕಾನೂನಿನ ಒತ್ತಡಕ್ಕಾಗಿ ಮಳೆಕೊಯ್ಲು ಮಾಡುವುದಕ್ಕಿಂತ, ಪ್ರಜ್ಞಾವಂತ ಸಮಾಜ ಅದರ ಪ್ರಯೋಜನಗಳ ಬಗ್ಗೆ ತಿಳಿದುಕೊಂಡು ಮನಃಪೂರ್ವಕವಾಗಿ ಮಾಡಿದಾಗ ಯೋಜನೆ ದೀರ್ಘಕಾಲದಲ್ಲಿ ಯಶಸ್ವಿಯೂ, ಸುಸ್ಥಿರವೂ ಆಗಬಲ್ಲುದು. ಇಲ್ಲವಾದರೆ ಇದು ಕ್ರಮೇಣ ಕಾನೂನಿಗಾಗಿ ಕಣ್ಣೊರೆಸುವ ತಂತ್ರವಾಗುವ ಸಾಧ್ಯತೆಯೂಇದೆ.
ಪರಿಣಾಮಕಾರಿ ವಿಧಾನ: ಸ್ಥಳೀಯವಾದ ಹಲವಾರು ಸಣ್ಣ ಮತ್ತು ಮಧ್ಯಮ ಗಾತ್ರದ ಜಲಸಂರಕ್ಷಣೆಯ ರಚನೆಗಳು ಒಂದು ಬೃಹತ್ ರಚನೆಗಿಂತ ಶೇಕಡಾವಾರು ಹೆಚ್ಚಿನ ಪ್ರಮಾಣದ ನೀರನ್ನು ಶೇಖರಿಸಿ, ಸಂರಕ್ಷಿಸಬಲ್ಲದು ಎನ್ನುವುದು ಇಂದು ಈ ಬಗ್ಗೆ ದೇಶ/ವಿದೇಶಗಳಲ್ಲಿ ನಡೆದಿರುವ ಹಲವಾರು ವೈಜ್ಞಾನಿಕ ಸಂಶೋಧನೆಗಳಿಂದಲೇ ದೃಢಪಟ್ಟಿದೆ. ತಮ್ಮ ಜಲಸಂರಕ್ಷಣೆಯ ಸಾಂಪ್ರದಾಯಿಕ ಪದ್ಧತಿ/ವ್ಯವಸ್ಥೆಗಳ ಮೂಲಕ ಬರಗಾಲದ ಪರಿಸ್ಥಿತಿಯನ್ನೂ ಸಮರ್ಥವಾಗಿ ನಿಭಾಯಿಸಿದ ಹಳ್ಳಿ/ನಗರಗಳ ಉದಾಹರಣೆಗಳು ನಮ್ಮ ದೇಶದಲ್ಲಿವೆ. ವಿಕೇಂದ್ರೀಕರಣಕ್ಕೆ, ಸ್ವಾವಲಂಬನೆಗೆ ಒತ್ತುನೀಡುವ ಇಂತಹ ವ್ಯವಸ್ಥೆಗಳಿಂದಲೇ ನಾವು ದೇಶದಲ್ಲಿ ಸಮತೋಲಿತ, ಸಮಗ್ರ, ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಬೇಕಾಗಿದೆ.
ನಮ್ಮ ಜಿಲ್ಲೆಯ ಸಾಂಪ್ರದಾಯಿಕ ಕಟ್ಟಗಳಿಗೆ ಮರುಜೀವ ನೀಡಬೇಕು. ಇದು ಅಂತರ್ಜಲದ ಮರುಪೂರಣಕ್ಕೆ ತುಂಬಾ ಸಹಕಾರಿ. ಅರಣ್ಯನಾಶದ ಈ ಸಮಯದಲ್ಲಿ ಕೊನೆಯಪಕ್ಷ ತುಳುನಾಡಿನ ನಾಗಬನಗಳನ್ನಾದರೂ ಸಾಂಪ್ರದಾಯಿಕವಾಗಿ ರಕ್ಷಿಸಬೇಕು. ಉಳಿದಿರುವ ಸಾರ್ವಜನಿಕ ಕೆರೆ-ಬಾವಿಗಳನ್ನು ಗುರುತಿಸಿ ಸೂಕ್ತ ಯೋಜನೆಗಳ ಮೂಲಕ ಪುನರುಜ್ಜೀವನ ಮಾಡಬೇಕಾಗಿದೆ. ಸುಶಿಕ್ಷಿತರ ಜಿಲ್ಲೆಯಲ್ಲ್ಲಿ ಜಲಜಾಗೃತಿಯ ಕೆಲಸಗಳು ಇನ್ನೂ ಹೆಚ್ಚಬೇಕಿದೆ. ಕರಪತ್ರ-ಪುಸ್ತಕಗಳ ಮೂಲಕ, ತಜ್ಞ ಸಂಪನ್ಮೂಲ ವ್ಯಕ್ತಿ ಅಥವಾ ಅನುಭವಿ ಕೃಷಿಕರ ಮೂಲಕ ಸ್ಥಳೀಯ ಸಂಘಸಂಸ್ಥೆಗಳ ಜೊತೆ ಸೇರಿ ಜಲಸಾಕ್ಷರತೆ ಒಂದು ಜನಾಂದೋಲನವಾಗಿ ಮೂಡಿಬರಬೇಕು. ಯುವಶಕ್ತಿ ಜಾಗೃತವಾಗಬೇಕು. ದೇಶ-ವಿದೇಶಗಳ ಜಲಜಾಗೃತಿಯ ಯಶೋಗಾಥೆಗಳನ್ನು, ಜಲಸಂರಕ್ಷಣೆಯ ಮಹತ್ವವನ್ನು ಪತ್ರಿಕೆ, ಟಿವಿ, ಸಾಮಾಜಿಕ ಮಾಧ್ಯಮ, ಕಿರುಚಿತ್ರ, ಜಾಹೀರಾತುಗಳ ಮೂಲಕ ಪರಿಣಾಮಕಾರಿಯಾಗಿ ಪ್ರಚುರಪಡಿಸಬೇಕು.
ಸಮಷ್ಟಿಯ ಮತ್ತು ಸುಸ್ಥಿರ ಅಭಿವೃದ್ಧಿ ಕನಸು ನನಸಾಗಬೇಕಾದರೆ ಜಲಸಂಪನ್ಮೂಲದ ಸಮರ್ಪಕ ನಿರ್ವಹಣೆ ಇಂದಿನ ತುರ್ತು ಅಗತ್ಯ. ನಾಳಿನ ಜಲಸಮೃದ್ಧಿಗಾಗಿ ಸಮಗ್ರವಾಗಿ ಯೋಚಿಸಿ-ಯೋಜನೆಗಳನ್ನು ಜಾರಿಗೆ ತರಬಲ್ಲ ದೂರದರ್ಶಿತ್ವ ಹೊಂದಿದ ನಾಯಕತ್ವ ನಮ್ಮ ನಾಡಿಗೆ ಬೇಕಾಗಿದೆ. ಪರಿಸ್ಥಿತಿ ಕೈಮೀರುವ ಮುನ್ನವೇ ಜಲವಿಲ್ಲದೆ ಜೀವನವಿಲ್ಲ ಎಂಬ ಸತ್ಯದರ್ಶನ ನಮಗಾಗಲಿ ಎನ್ನುವುದೇ ನಮ್ಮ ಹಾರೈಕೆ.