Light of Dharma

Thumbnail

ಧರ್ಮದ ಬೆಳಕು

ಮಹಾತ್ಮ ಗಾಂಧೀಜಿಯವರು 'ಸತ್ಯದೊಂದಿಗೆ ನನ್ನ ಅನುಸಂಧಾನ' ಎಂಬ ತಮ್ಮ ಆತ್ಮಚರಿತ್ರೆಯ ಪ್ರಥಮ ಭಾಗದ ಹತ್ತನೇ ಅಧ್ಯಾಯದಲ್ಲಿ ತಾವು ಇತರ ಧರ್ಮಗಳ ವಿಷಯದಲ್ಲಿ ಸಮಾನಭಾವ ಹೊಂದುವ ಮಾರ್ಗದರ್ಶನವನ್ನು ತನ್ನ ಬಾಲ್ಯದಲ್ಲಿಯೇ ಸಂಪಾದಿಸಿದ ಬಗ್ಗೆ ಹೀಗೆ ತಿಳಿಸುತ್ತಾರೆ

'ಎಲ್ಲಾ ಸಂಪ್ರದಾಯಗಳನ್ನು ಸಮಾನ ಭಾವದಿಂದ ಕಾಣುವ ಶಿಕ್ಷಣ ನನಗೆ ರಾಜಕೋಟೆಯಲ್ಲಿಯೇ ಶ್ರಮವಿಲ್ಲದೆ ದೊರೆಯಿತು. ಹಿಂದೂಧರ್ಮದ ಬೇರೆ ಬೇರೆ ಸಂಪ್ರದಾಯಗಳಲ್ಲಿ ಆದರವಿಡುವುದನ್ನು ನಾನು ಬಾಲ್ಯದಲ್ಲಿಯೇ ಕಲಿತೆ. ನಮ್ಮ ತಂದೆ ತಾಯಿಗಳು ವಿಷ್ಣು ದೇವಾಲಯಕ್ಕಲ್ಲದೆ ರಾಮಮಂದಿರ ಮತ್ತು ಈಶ್ವರ ದೇವಾಲಯಗಳಿಗೂ ನಮ್ಮನ್ನು ಕರೆದುಕೊಂಡು ಹೋಗುತ್ತಿದ್ದರು. ನಾವೇ ಹೋಗಲು ಅವಕಾಶವನ್ನು ಕೊಡುತ್ತಿದ್ದರು....

...ಅಲ್ಲದೆ ನಮ್ಮ ತಂದೆಯವರ ಬಳಿ ಯಾರಾದರೂ ಜೈನ ಸನ್ಯಾಸಿಗಳು ಯಾವಾಗಲೂ ಇರುತ್ತಿದ್ದರು, ತಂದೆಯವರು ಅವರಿಗೆ ದಾನ ನೀಡುತ್ತಿದ್ದರಲ್ಲದೆ ಅವರನ್ನು ಆದರದಿಂದ ಸತ್ಕರಿಸುತ್ತಿದ್ದರು. ಅವರು ತಂದೆಯವರೊಡನೆ ಧಾರ್ಮಿಕ ಮತ್ತು ವ್ಯಾವಹಾರಿಕ ಚರ್ಚೆ ಮಾಡುತ್ತಿದ್ದರು. ಇದಲ್ಲದೆ ನಮ್ಮ ತಂದೆಯವರಿಗೆ ಪಾರಸಿಕ, ಮುಸಲ್ಮಾನ ಮತ್ತು ಇಸಾಯಿ ಮಿತ್ರರಿದ್ದರು ಅವರು ಸಹ ತಮ್ಮ ತಮ್ಮ ಧರ್ಮಗಳ ವಿಷಯವಾಗಿ ತಂದೆಯವರೊಡನೆ ಮಾತನಾಡುತ್ತಿದ್ದರು.  ಈ ಮಾತುಗಳನ್ನು ನಮ್ಮ ತಂದೆ ಆದರದಿಂದಲೂ, ಪ್ರೇಮಭಾವದಿಂದಲೂ ಕೇಳುತ್ತಿದ್ದರು. ನಾನು ನಮ್ಮ ತಂದೆಯವರ ಶುಶ್ರೂಷೆಯಲ್ಲಿರುತ್ತಿದ್ದ ಕಾರಣ ಬಹು ಸಮಯ ಅಲ್ಲಿಯೇ ಕುಳಿತಿರುತ್ತಿದ್ದೆ ಈ ಎಲ್ಲಾ ವಿಷಯಗಳ ಪರಿಣಾಮವಾಗಿ ನನ್ನ ಮನಸ್ಸಿನಲ್ಲಿ ಇತರ ಧರ್ಮಗಳ ವಿಷಯದಲ್ಲಿ ಸಮಾನಭಾವ ಉಂಟಾಯಿತು...'

ರಾಷ್ಟ್ರಪಿತರ ಈ ಮಾತುಗಳು ನಮ್ಮ ಇಂದಿನ ಪರಿಸ್ಥಿತಿಯಲ್ಲಿ ತೀರಾ ಪ್ರಸ್ತುತವಾಗಿವೆ. ಕವಿವಾಣಿ ಹೇಳುವಂತೆ 'ಕಸವರಮೆಂಬರ್ ಸೈರಿಸಬಲ್ಲೊಡೆ ಪರಮತಮನ್, ಪರಧರ್ಮಮನ್' ಮತ ಎಂದರೆ ಅಭಿಪ್ರಾಯ, ಚಿಂತನೆ, ಧರ್ಮ ಎಂದರೆ ಜೀವನ ರೀತಿ.  ನಾವು ಬೇರೆಯವರ ಜೀವನ ರೀತಿಯನ್ನು ಅವರ ಅಭಿಪ್ರಾಯಗಳನ್ನು ಅವರ ನಂಬಿಕೆಗಳನ್ನು ಸ್ವೀಕಾರ ಮಾಡಿ ಅನ್ಯರ ದಾಸ್ಯದಲ್ಲಿ ಬೀಳಬೇಕಾಗಿಲ್ಲ ಆದರೆ ನಮ್ಮ ಹಾಗೆ ಬೇರೆಯವರಿಗೆ ಕೂಡಾ ಅವರದೇ ಆದ ಸ್ವಂತ ಅಭಿಪ್ರಾಯ ಹೊಂದಿರಲು ಸ್ವಾತಂತ್ರ್ಯವಿದೆ  ಎಂದು ಒಪ್ಪಬೇಕಾದುದು ಇಂದಿನ ಭಾರತಕ್ಕೆ ಅನಿವಾರ್ಯವಾಗಿದೆ.

ಸಮಾಜದ ಆರೋಗ್ಯವನ್ನು ಮತ್ತು ಸಮಷ್ಟಿಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟು ನಾನು ನನಗೆ ಬೇಕಾದ ಅಭಿಪ್ರಾಯ ಹೊಂದಿರುತ್ತೇನೆ, ನನ್ನ ಮನಸ್ಸಿನಲ್ಲಿರುವ ಆಲೋಚನೆಗಳನ್ನು ಸೂಕ್ತ ರೀತಿಯಲ್ಲಿ ಅಭಿವ್ಯಕ್ತಿಪಡಿಸುತ್ತೇನೆ. ನನಗೆ ಸರಿ ಕಾಣುವ ಧಾರ್ಮಿಕ - ಆಧ್ಯಾತ್ಮಿಕ ನಂಬಿಕೆ ಹೊಂದಿರುತ್ತೇನೆ, ಅದೇ ರೀತಿ ಅನ್ಯರಿಗೂ ಕೂಡಾ ಅದೇ ರೀತಿಯ ಅಭಿವ್ಯಕ್ತಿ, ನಂಬಿಕೆ ಮತ್ತು ಆಚರಣೆಯ ಸ್ವಾತಂತ್ರ್ಯ ಇದೆ ಎನ್ನುವ ನಂಬಿಕೆ ನಾನು ಹೊಂದಿರುತ್ತೇನೆ ಎನ್ನುವ ಮನೋಗತಿ ನಮ್ಮದಾಗಬೇಕು.

'ಏಕೋದೇವಾಃ ವಿಪ್ರಮ್ ಬಹುದಾ ವದಂತಿ' - ಎನ್ನುವ ಭಾರತೀಯ ಪರಂಪರೆಯಂತೆ ಇರುವವನು ಒಬ್ಬನೇ ದೇವರು ಬುದ್ದಿವಂತರು ಅವನನ್ನು ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ ಎನ್ನುವ ಸತ್ಯವನ್ನು ನಾವು ಸಾಕ್ಷಾತ್ಕರಿಸಿಕೊಳ್ಳಬೇಕು. ಹೀಗೆ ಎಲ್ಲಾ ಧರ್ಮಗಳನ್ನು, ನಂಬಿಕೆಗಳನ್ನು, ಚಿಂತನೆಗಳನ್ನು ಸಮಾನ ಗೌರವದಿಂದ ಕಂಡಾಗಲೇ ಋಗ್ವೇದದ ಒಂದನೇ ಮಂಡಲದಲ್ಲಿ ನೀಡಿರುವ 'ಆ ನೋ ಭದ್ರಾಃ ಕೃತ್‌ವೋ ಯಂತು ವಿಶ್ವತಃ' (ಸೃಷ್ಟಿಯ ಮೂಲೆ ಮೂಲೆಗಳಿಂದ ಉದಾತ್ತ ಚಿಂತನೆಗಳು ನನ್ನಲ್ಲಿ ಬರಲಿ) ಎನ್ನುವ ಮಂತ್ರಸಾರ ವಾಸ್ತವವಾಗುತ್ತದೆ. ಅದಕ್ಕಾಗಿ ನಾವು ಹಿರಿಯರು ಮಹಾತ್ಮ ಗಾಂಧೀಜಿಯವರ ತಂದೆಯವರು ಮಾಡಿದಂತೆ ಎಲ್ಲಾ ಧರ್ಮಗಳ ಸಾರ ಒಂದೇ ಎನ್ನುವ ಉದಾತ್ತಭಾವದಿಂದ ಸರ್ವರನ್ನು ಸಮಾನವಾಗಿ ಸ್ವೀಕರಿಸೋಣ.

ಸ್ಟೀವನ್ ಕ್ವಾಡ್ರಸ್ ಪೆರ್‍ಮುದೆ