ಯುವ ಸಬಲೀಕರಣ
ಯುವ ಸಬಲೀಕರಣ
-ರಿಚರ್ಡ್ ಅಲ್ವಾರಿಸ್. ಕುಲಶೇಖರ
ಭವ್ಯ ಭಾರತದ ಅತ್ಯಂತ ಅಮೂಲ್ಯ ಆಸ್ತಿಯೆಂದರೆ ಅದು ಯುವಶಕ್ತಿ. ಒಂದು ವರದಿಯ ಪ್ರಕಾರ ಆಗಸ್ಟ್ 2023 ರಲ್ಲಿ ಭಾರತದಲ್ಲಿ 18 ರಿಂದ 35 ವರ್ಷದೊಳಗಿನ ಸುಮಾರು 60 ಕೋಟಿ ಯುವಜನರಿದ್ದಾರೆ. ಇದು ಜಾಗತಿಕವಾಗಿ ಅತೀ ಹೆಚ್ಚು ಸಂಖ್ಯೆ. ಇಷ್ಟೊಂದು ಯುವಶಕ್ತಿ ನಮ್ಮಲ್ಲಿದ್ದರೂ ಬಹುಷಾ ಅದು ಇನ್ನೂ ಸಮರ್ಪಕವಾಗಿ ಬಳಕೆಯಾಗದೆ ಉಳಿದದ್ದು ಒಂದು ವಿಪರ್ಯಾಸವೆಂದೇ ಹೇಳಬಹುದು. ಯುವನೇತಾರ ಭಾರತದ ಯೂತ್ ಐಕಾನ್ ಸ್ವಾಮಿ ವಿವೇಕಾನಂದರು ಯುವಕರಿಗೆ ಹೇಳಿದ ಒಂದು ಸ್ಫೂರ್ತಿದಾಯಕ ಸಲಹೆ- 'ನೀವು ಏನು ಯೋಚಿಸುತ್ತೀರೊ ಅದೇ ನೀವಾಗುತ್ತೀರಿ, ನಿಮ್ಮನ್ನು ನೀವು ದುರ್ಬಲರು ಎಂದು ಭಾವಿಸಿದರೆ ನೀವು ದುರ್ಬಲರೇ ಆಗುವಿರಿ, ನಿಮ್ಮನ್ನು ನೀವು ಬಲಶಾಲಿ ಎಂದು ಭಾವಿಸಿದರೆ ನೀವು ಬಲಶಾಲಿಯೇ ಆಗುವಿರಿ. ಇಲ್ಲ, ನನ್ನಿಂದ ಸಾಧ್ಯವಿಲ್ಲ ಎಂದು ಎಂದಿಗೂ ಹೇಳಬೇಡಿ, ಎಲ್ಲಾ ಶಕ್ತಿ ನಿಮ್ಮೊಳಗೆ ಇದೆ, ನೀವು ಏನು ಬೇಕಾದರೂ ಮಾಡಬಹುದು'- ಇದನ್ನು ನಮ್ಮ ಯುವಕರು ಮನದಟ್ಟು ಮಾಡಿದರೆ ಬಹುಷಾ ನಮ್ಮ ದೇಶ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಒಂದು ಎಂದು ಗುರುತಿಸುವ ದಿನಗಳು ಬಹುದೂರವಿಲ್ಲ.
ನಾನು ನಾನಾಗಬೇಕು : ನಮ್ಮ ಯುವಕರು ಸರಿಯಾದ ಸಮಯದಲ್ಲಿ ಸರಿಯಾದ ಆಯ್ಕೆ ಮಾಡಲು ಅವರನ್ನು ಎಳವೆಯಿಂದಲೇ ಸಿದ್ಧಪಡಿಸಬೇಕು. ಮೊತ್ತ ಮೊದಲನೆಯದಾಗಿ ಮಗುವಿಗೆ ಅದರ ಸಾಮರ್ಥ್ಯದಂತೆ ಬೆಳೆಯಲು ಪ್ರೋತ್ಸಾಹಿಸಬೇಕು. ತಾನೊಂದು ವಿಶಿಷ್ಟ ವ್ಯಕ್ತಿ ಎಂಬುದು ಮಗು ಅರ್ಥ ಮಾಡಿಕೊಳ್ಳಬೇಕು. ಮಕ್ಕಳ ಮೇಲೆ ಹೆತ್ತವರು ಯಾವತ್ತೂ ಒತ್ತಡವನ್ನು ಹಾಕದೆ, ಬದಲಾಗಿ ಮಗು ತನ್ನ ಸಾಮರ್ಥ್ಯವನ್ನು ಅರಿತುಕೊಂಡು ಜೀವನದಲ್ಲಿ ನಿಧಾನವಾಗಿ ಬೆಳೆಯಲು ಅವಕಾಶ ಮಾಡಿ ಕೊಡಬೇಕು. ಇನ್ನೊಂದು ಅರ್ಥದಲ್ಲಿ ಮಗುವನ್ನು ಯಾರೊಡನೆಯೂ ಹೋಲಿಸದೆ, ನೀನು ಹೀಗೆಯೇ ಆಗಬೇಕೆಂದು ಒತ್ತಡ ಹಾಕದೆ, ಕಲಿಕೆಯನ್ನು ಕೇವಲ ಅಂಕಕೇಂದ್ರಿತಗೊಳಿಸದೆ ಮಗು ಸ್ವತಂತ್ರವಾಗಿ ತನ್ನನ್ನು ಅರಿತುಕೊಂಡು ಸೂಕ್ತ ಮಾರ್ಗದರ್ಶನದೊಂದಿಗೆ ಮುಕ್ತ ವಾತಾವರಣದಲ್ಲಿ ಬೆಳೆಯಲು ಅವಕಾಶ ಮಾಡಿ ಕೊಟ್ಟಾಗ ಮುಂದೆ ಯುವಪ್ರಾಯದಲ್ಲಿ ಎಡವಿ ಬೀಳದೆ, ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲು ಸಕ್ತವಾಗುತ್ತದೆ. ಅಂದರೆ ಯುವಸಬಲೀಕರಣದ ಬುನಾದಿಯು ಬಾಲ್ಯದಿಂದಲೇ ಆರಂಭಗೊಳ್ಳಬೇಕು. ಇದು ಮನೆ ಮತ್ತು ಶಾಲೆ ಒಟ್ಟು ಸೇರಿ ನಿಭಾಯಿಸಬೇಕಾದ ಜವಾಬ್ದಾರಿ.
ಅವಕಾಶಗಳನ್ನು ಬಾಚಿಕೊಳ್ಳಬೇಕು : ಅವಕಾಶಗಳು ಹುಡುಕಿಕೊಂಡು ಮನೆಬಾಗಿಲಿಗೆ ಬರುವುದಿಲ್ಲ ಬದಲಾಗಿ ಅವಕಾಶಗಳನ್ನು ಹುಡುಕಿ ಹೋಗಬೇಕು. ಇಂದಿನ ಕಾಲದಲ್ಲಿ ಅವಕಾಶಗಳನ್ನು ಹುಡುಕಲು ಅನೇಕ ಮಾರ್ಗಗಳಿವೆ. ಮೊದಲಿನಂತೆ ಕೇವಲ ವಾರ್ತಾಪತ್ರಿಕೆಯನ್ನು ಮಾತ್ರ ಅವಲಂಭಿತವಾಗುವ ದಿನಗಳು ಈಗಿಲ್ಲ. ಈಗ ಏನಿದ್ದರೂ ಜಗತ್ತು ನಮ್ಮ ಅಂಗೈಯಲ್ಲಿಯೇ ಇದೆ. ಆದ್ದರಿಂದ ಯುವಜನರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತಹ ಅವಕಾಶಗಳನ್ನು ಹುಡುಕಿ, ರಿಸ್ಕ್ ತೆಗೊಂಡು ಧುಮುಕಲು ಕಲಿಯಬೇಕು. ತಾನು ಕಲಿತ ವಿಷಯದಲ್ಲಿಯೇ ಕೆಲವೊಮ್ಮೆ ಅವಕಾಶಗಳು ಸಿಗದೇ ಇರಬಹುದು, ಅದಕ್ಕೆ ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿದ್ದರೆ ಮುಂದೊಂದು ದಿನ ತಾನು ಕಲಿತ ವಿದ್ಯೆಗಿಂತ ಉತ್ತಮ ಅವಕಾಶದೊರೆತು ಸಂತೋಷದ ಬದುಕನ್ನು ಜೀವಿಸಬಹುದು. ಒಮ್ಮೆಲೆ ದೊಡ್ಡ ದೊಡ್ಡ ಪ್ಯಾಕೇಜ್ ಹರಸಿಕೊಂಡು ಸಿಕ್ಕಿದ ಚಿಕ್ಕ ಪ್ಯಾಕೆಜನ್ನು ತಿರಸ್ಕರಿಸಿದರೆ ಕಾಲ ಮಿಂಚಿ ಹೋಗಬಹುದು. ಇಂದಿನ ಶರವೇಗದ ಯುಗದಲ್ಲಿ ಯಾವುದೂ ಶಾಸ್ವತವಲ್ಲ. ದೊಡ್ಡ ಪ್ಯಾಕೇಜ್ ಕೆಲವೊಮ್ಮೆ ಯಾವ ಗಳಿಗೆಯಲ್ಲಿ ಜಾರಿಹೋಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಯುವಜನರು ಕಾಲೇಜು ಶಿಕ್ಷಣ ಅಥವಾ ಇನ್ನಾವುದೇ ಉನ್ನತ ಶಿಕ್ಷಣ ಪಡೆಯುವಾಗ ವೃತ್ತಿಮಾರ್ಗದರ್ಶನದ ಸಂಪೂರ್ಣ ಮಾಹಿತಿ ಹಾಗೂ ತರಬೇತಿ ಸಿಗುವ ವ್ಯವಸ್ಥೆ ಆ ಶಿಕ್ಷಣ ಸಂಸ್ಥೆಗಳು ಮಾಡಿದರೆ, ಯುವಸಬಲೀಕರಣದ ಹಾದಿಯು ಸುಗಮವಾಗುವುದು. ಹೊಸ ಶಿಕ್ಷಣ ನೀತಿಯ ಉದ್ದೇಶಗಳಲ್ಲಿ ಇದೂ ಒಂದಾಗಿದೆ.
ಚಿತ್ತ - ಸರಕಾರಿ ಹುದ್ದೆಗಳತ್ತ : ನಮ್ಮ ಯುವಶಕ್ತಿಯು ಇಂದು ವಿದೇಶಗಳಿಗೆ ಪಲಾಯನವಾಗುತ್ತಿದೆ ಕಾರಣ ತಾನು ಕಲಿತ ವಿದ್ಯೆಗೆ ತಕ್ಕಂತೆ ಇಲ್ಲಿ ಕೆಲಸ ಸಿಗುವುದಿಲ್ಲ ಎಂಬ ಒಂದು ನೆಪ. ಜೊತೆಗೆ ತನ್ನ ದೇಶಕ್ಕಿಂತ ವಿದೇಶಕ್ಕೆ ಹೋಗಿ ಬಂದರೆ ತನ್ನ ಗೌರವ ಹೆಚ್ಚುತ್ತದೆ ಎಂಬ ಭಾವನೆ. ಇತ್ತೀಚಿನ ದಿನಗಳಲ್ಲಿ ಈ ದೇಶವನ್ನು ತೊರೆದು ಅಮೇರಿಕಾ, ಇಂಗ್ಲಂಡ್, ಕೆನಡಾ, ಜರ್ಮನಿ, ಆಸ್ಟ್ರೇಲಿಯಾ ಮುಂತಾದ ದೇಶಗಳಿಗೆ ಹೋದಂತಹ ನಮ್ಮ ಯುವಜನರು ಅಲ್ಲಿಯೇ ಖಾಯಂ ನಿವಾಸಿಗಳಾಗಿ ಉಳಿಯುತ್ತಿರುವುದು ಕಂಡು ಬರುತ್ತದೆ. ಆದರೆ ನಮ್ಮ ದೇಶದಲ್ಲಿ ನಮಗೆ ಇದ್ದಂತಹ ಸ್ವಾತಂತ್ರ್ಯ ಅಲ್ಲಿ ನಮಗೆ ಖಂಡಿತಾ ಸಿಗಲಾರದು. ನಮ್ಮ ದೇಶದಲ್ಲಿ ಬೇಕಾದಷ್ಟು ಅವಕಾಶಗಳಿವೆ. ಸ್ವಲ್ಪ ಕಷ್ಟಪಟ್ಟರೆ ಎಷ್ಟೋ ಸರಕಾರಿ ಹುದ್ದೆಗಳನ್ನು ಪಡೆಯಬಹುದು. ಕೆಲವರು ಒಂದೆರಡು ಪ್ರಯತ್ನಗಳನ್ನು ಮಾಡಿ ಮತ್ತೆ ಅದರ ಗೊಡವಿಗೆ ಹೋಗುವುದಿಲ್ಲ. ಅದುವೇ ಹೆಚ್ಚಿನ ನಮ್ಮ ಯುವಜನರು ಮಾಡುವ ದೊಡ್ಡ ತಪ್ಪು. ಇನ್ನು ಕೆಲವರಿಗೆ ದೂರದೂರಿಗೆ ವರ್ಗಾವಣೆ ಮಾಡುತ್ತಾರೆ ಎಂಬ ಚಿಂತೆ. ಎಷ್ಟು ದೂರ ಹೋದರೂ ನಮ್ಮ ದೇಶದೊಳಗೇ ತಾನೆ? ಆದ್ದರಿಂದ ಕೇಂದ್ರ ಹಾಗೂ ರಾಜ್ಯ ಸರಕಾರ ಆಗಾಗ ನಡೆಸುವ ಪರೀಕ್ಷಗಳನ್ನು ಉತ್ತರಿಸುತ್ತಾ ಇರಬೇಕು. ಒಂದಲ್ಲ ಒಂದು ದಿನ ಕೆಲಸ ಸಿಕ್ಕೇ ಸಿಗುತ್ತದೆ. ಅಲ್ಲಿಯವರೆಗೆ ಬೇರೆ ದೊರೆತ ಚಿಕ್ಕಪುಟ್ಟ ಕೆಲಸವನ್ನು ಮಾಡಲು ಹಿಂದೆ ಸರಿಯಬಾರದು. ತನ್ನನ್ನು ತಾನೇ ಸಬಲೀಕರಣಗೊಳಸುವುದನ್ನು ಯುವಜನರು ಕಲಿತುಕೊಳ್ಳಬೇಕು.
ಉದ್ಯಮಿಯಾಗು-ಉದ್ಯೋಗ ನೀಡು : ಇಂದು ಭಾರತದಲ್ಲಿ ಸ್ವ ಉದ್ಯಮಕ್ಕೆ ವಿಫುಲ ಅವಕಾಶಗಳಿವೆ. ಮೇಕ್ ಇನ್ ಇಂಡಿಯಾ, ಸ್ಟಾರ್ಟ್‌ಅಪ್ ಮುಂತಾದ ಯೋಜನೆಗಳಿಗೆ ಬ್ಯಾಂಕ್ ಸಾಲವೂ ದೊರೆಯುತ್ತದೆ. ಇದರಲ್ಲಿ ರಿಸ್ಕ್ ಇಲ್ಲ ಎಂದು ಹೇಳಲಾಗದು. ಆದರೂ ಸ್ವ ಉದ್ಯಮ ಆರಂಭಿಸಿ ಜೀವನದಲ್ಲಿ ಯಶಸ್ಸನ್ನು ಕಂಡ ಅನೇಕ ಯುವಜನರು ಇದ್ದಾರೆ. ಓರ್ವ ಉದ್ಯಮಿಯಾಗಿ ಅನೇಕರಿಗೆ ಉದ್ಯೋಗನೀಡಲು ಸಕ್ತರಾಗಿದ್ದಾರೆ. ಸ್ವ ಉದ್ಯಮಕ್ಕೆ ಅನೇಕ ದಾರಿಗಳಿವೆ. ಯುವಜನರು ತಮ್ಮ ಸಾಮರ್ಥ್ಯ ಮತ್ತು ಆಸಕ್ತಿಗನುಗುಣವಾಗಿ ಸ್ವ ಉದ್ಯಮವನ್ನು ಆಯ್ಕೆ ಮಾಡಬಹುದು.
ಯುವಜನತೆಯ ಸಮಸ್ಯೆಗಳು : ವಿಶ್ವ ಯುವ ವರದಿ ಪ್ರಕಾರ ಸುಮಾರು 200 ಮಿಲಿಯನ್ ಯುವಕರು ಬಡತನದಲ್ಲಿದ್ದಾರೆ. 130 ಮಿಲಿಯನ್ ಯುವಕರು ಅನಕ್ಷರಸ್ತರಾಗಿದ್ದಾರೆ ಮತ್ತು 88 ಮಿಲಿಯನ್ ಯುವಕರು ನಿರುದ್ಯೋಗಿಗಳಾಗಿದ್ದಾರೆ, ಹಾಗೆಯೆ 10 ಮಿಲಿಯನ್ ಯುವಕರು ಎಚ್‌ಐವಿ/ಏಡ್ಸ್‌ನಿಂದ ಬಳಲುತ್ತಿದ್ದಾರೆ, 113 ಮಿಲಿಯನ್ ಯುವಕರು ಶಾಲೆಯಿಂದ ಹೊರಗುಳಿದಿದ್ದಾರೆ. ಶಿಕ್ಷಣಕ್ಕೆ ಸೀಮಿತ ಪ್ರವೇಶ, ಲಾಭದಾಯಕ ಉದ್ಯೋಗ, ಉದ್ಯೋಗ ಭದ್ರತೆ, ತಂತ್ರಜ್ಞಾನದ ಅಡೆತಡೆಗಳು, ಕೌಶಲ್ಯ ನವೀಕರಣ, ಲಿಂಗ ಸಮಾನತೆ, ಕೆಲಸದಲ್ಲಿ ಒತ್ತಡ, ಖಿನ್ನತೆ, ಶೊಷಣೆ, ಕೆಲಸದ ತೃಪ್ತಿಯ ಕೊರತೆ ಸೇರಿದಂತೆ ಹತ್ತು ಹಲವು ಸಮಸ್ಯೆಗಳು! ಇದು ಕೇವಲ ಭಾರತ ಮಾತ್ರ ಅಲ್ಲ, ವಿಶ್ವ ಸಮಸ್ಯೆ!!
ಭಾರತದಲ್ಲಿ ನಿರುದ್ಯೋಗ ದರವು ಗರಿಷ್ಟ ಮಟ್ಟಕ್ಕೇರಿದೆ. ಜುಲೈ 2023 ರಲ್ಲಿ 7.95% ಇದ್ದ ನಿರುದ್ಯೋಗ ದರವು ೨೦೨೩ರ ಅಕ್ಟೋಬರ್‌ನಲ್ಲಿ ಇದು 10.05% ಕ್ಕೆ ಏರಿತು. ಮತ್ತೊಂದು ವರದಿಯ ಪ್ರಕಾರ ಶೇ 51 ರಷ್ಟು ಯುವಕರು ಮಾನಸಿಕ ತೊಂದರೆಯಲ್ಲಿದ್ದಾರೆ.
ಸರಕಾರದ ಜವಾಬ್ದಾರಿ: ಮನೆ ಮತ್ತು ಶಾಲೆ ಜೊತೆ ಸೇರಿ ಮಗುವಿನ ಸರ್ವಾಂಗೀಣ ಬೆಳವಣಿಗೆಗೆ ಪೂರಕ ವಾತಾವರಣವನ್ನು ಒದಗಿಸಿಕೊಡುವಾಗ, ಸರಕಾರವೂ ತನ್ನ ಜವಾಬ್ದಾರಿಯನ್ನು ಮರೆಯಬಾರದು. ಪ್ರತಿಯಬ್ಬರೂ ತಮ್ಮ ಶಿಕ್ಷಣವನ್ನು ಪಡೆದು ಹೊರ ಬರುವಾಗ ತಮ್ಮ ಕಾಲಮೇಲೆ ನಿಲ್ಲುವಂತಾಗಬೇಕು. ಯುವಜನರನ್ನು ಕೇವಲ ಮತಯಾಚನೆಯ ಕಾರ್ಯಕರ್ತರಾಗಿ ಮಾತ್ರ ಬಳಸಿಕೊಳ್ಳದೆ, ತನ್ನ ಸರಕಾರ ಆಡಳಿತಕ್ಕೆ ಬರಲು ನೆರವಾದ ಈ ಯುವಶಕ್ತಿಗೆ ಬಲವನ್ನು ತುಂಬುವ ಕೆಲಸ ಸರಕಾರದಿಂದ ಆಗಬೇಕು. ಪದವಿ ಪಡೆದ ನಿರುದ್ಯೋಗಿ ಯುವಜನರಿಗೆ ಮಾಸಾಶನ ನೀಡುವುದು ಕೇವಲ ತಾತ್ಕಾಲಿಕ ಪರಿಹಾರ. ಸರಕಾರ ಬದಲಾದೊಡನೆ ಅಥವಾ ಆರ್ಥಿಕ ಮುಗ್ಗಟ್ಟು ಉಂಟಾದಾಗ ಇದು ಸ್ಥಗಿತವಾಗುವ ಸಂಭವವಿದೆ. ಅದರ ಬದಲು ಉದ್ಯೋಗಗಳ ಸೃಷ್ಟಿಯಾಗಬೇಕು. ಸಾರ್ವಜನಿಕ ಕ್ಷೇತ್ರಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ತ್ವರಿತವಾಗಿ ಭರ್ತಿಮಾಡುವ ಕೆಲಸವನ್ನು ಸರಕಾರ ಮಾಡಬೇಕು. ನಿಗದಿತ ಕಾಲಕ್ಕೆ ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ನೀಡಿ ಸ್ವ ಉದ್ಯೋಗಕ್ಕೆ ಪ್ರೋತ್ಸಾಹ ನೀಡಬೇಕು. ಈ ರೀತಿಯಾಗಿ ಯುವಜನರನ್ನು ಸಬಲೀಕರಣಗೊಳಿಸಬಹುದು. ಯುವಶಕ್ತಿಯನ್ನು ಅನೇಕರು ದುರುಪಯೋಗಗೊಳಿಸುತ್ತಿದ್ದಾರೆ. ತಮ್ಮ ಸ್ವಾರ್ಥಸಾಧನೆಗಾಗಿ ಯುವಕರನ್ನು ದೊಂಬಿ, ಗಲಾಟೆ, ಹತ್ಯೆ, ಧರ್ಮಗಳ ನಡುವೆ ಕಲಹಕ್ಕಾಗಿ ಬಳಸುತ್ತಾರೆ. ಜುಜುಬಿ ಹಣದ ಆಸೆಯಿಂದ ಅನೇಕ ಯುವಕರು ಇದಕ್ಕೆ ಬಲಿಪಶುವಾಗುತ್ತಾರೆ. ಇಂತಹ ಪರಿಸ್ಥಿತಿಯನ್ನು ಕಾನೂನಾತ್ಮಕವಾಗಿ ಸರಿಪಡಿಸುವ ಜವಾಬ್ದಾರಿಯೂ ಸರಕಾರಕ್ಕಿದೆ. ಕೇವಲ ಸಿಕ್ಕಿಬಿದ್ದವರನ್ನು ಮಾತ್ರ ಶಿಕ್ಷೆಗೆ ಒಳಪಡಿಸದೆ ಅವರ ಹಿಂದೆ ಇರುವ ಅಜ್ಞಾತ ಶಕ್ತಿಗಳನ್ನು ಹಿಡಿದು ಕಠಿಣ ಶಿಕ್ಷೆಗೆ ಒಳಪಡಿಸಿದರೆ ಯುವಶಕ್ತಿಯು ಅನಾವಶ್ಯಕವಾಗಿ ಪೋಲಾಗುವುದನ್ನು ತಡೆಗಟ್ಟಬಹುದು. ಮಾದಕ ದ್ರವ್ಯ ವ್ಯಸನ, ಸಾಮಾಜಿಕ ಜಾಲತಾಣಗಳ ಸೆಳೆತ, ಜೂಜಾಟ, ಅಮಲು ಪದಾರ್ಥ ಸೇವನೆ ಮುಂತಾದ ಚಟಗಳಿಗೆ ಒಳಗಾದ ಯುವಜನರನ್ನು ಸರಿದಾರಿಗೆ ತರುವ ಮಹತ್ತರ ಜವಾಬ್ದಾರಿ ಸರಕಾರಕ್ಕಿದೆ. ಆದರೆ ಈ ಜವಾಬ್ದಾರಿಯನ್ನು ಕೇವಲ ಸರಕಾರದ ಹೆಗಲಮೇಲೆ ಮಾತ್ರ ಹಾಕದೆ ಸಂಘಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಆರೋಗ್ಯ ಕೇಂದ್ರಗಳು ಎಲ್ಲವೂ ಜೊತೆ ಸೇರಿ ನಮ್ಮ ಯುವಜನರನ್ನು ದುಷ್ಚಟದಿಂದ ಹೊರಬರಲು ಸಹಕರಿಸಬೇಕು. ಯುವಜನರಲ್ಲಿರುವ ಸಹಜ ಶಕ್ತಿ, ಸಾಮರ್ಥ್ಯ ಮತ್ತು ಕೌಶಲ್ಯವನ್ನು ಅವರು ಅರಿತುಕೊಂಡು ಒಂದು ಸುಂದರ ಬದುಕನ್ನು ಕಟ್ಟಿಕೊಳ್ಳಲು ಅವರಿಗೆ ಪ್ರೇರಣೆ ನೀಡಿದಾಗ ನಮ್ಮ ದೇಶವು ವಿಶ್ವದಲ್ಲಿಯೇ ಒಂದು ಸದೃಢ ದೇಶವಾಗಿ ರೂಪಿತವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.