ಕ್ಷಮಿಸಿ, ನಿಮ್ಮೊಂದಿಗೆ ಬರಲಾರೆ! ಓಡಬೇಕು..!!

Thumbnail

ಕ್ಷಮಿಸಿ, ನಿಮ್ಮೊಂದಿಗೆ ಬರಲಾರೆ! ಓಡಬೇಕು..!!

-ಜೆ.ವಿ.ಕಾರ್ಲೊ

 

ಹಾಸನದ ಹೊರವಲಯದಲ್ಲಿ ವಾಸಿಸುತ್ತಿರುವ ನಾನು ಕೆಲಸದ ನಿಮಿತ್ತ ಪ್ರತಿದಿನ ಬೈಕಿನಲ್ಲಿ ಎರಡು ಮೂರು ಭಾರಿ ನಗರಕ್ಕೆ ಪ್ರಯಾಣಿಸುವುದು/ ಹಿಂದಿರುಗುವುದು ಅನಿವಾರ‍್ಯವಾಗಿದೆ. ದಾರಿಯಲ್ಲಿ ಲಿಫ್ಟ್ ಕೇಳಿ ಕೈ ಎತ್ತುವವರು ಅದೆಷ್ಟೋ ಮಂದಿ. ಶಾಲಾ ಮಕ್ಕಳು, ಕೆಲಸಗಾರರು, ರೈತರು ಇತ್ಯಾದಿ. ನಾನು ಯಾವತ್ತೂ ಲಿಫ್ಟ್ ಕೇಳಿದವರನ್ನು ಇಲ್ಲವೆಂದಿಲ್ಲ. ಸಾಮಾನ್ಯವಾಗಿ ಎಲ್ಲರೂ ತುರ್ತು ಕೆಲಸದವರೇ. ಕೆಲವೊಮ್ಮೆ ಕೆಲವರನ್ನು ಮಧ್ಯದ ಅಂಗಡಿಗೂ ಡ್ರಾಪ್ ಕೊಟ್ಟಿದ್ದಿದೆ!

ಅದೊಂದು ದಿನ ಸೈಂಟ್ ಜೋಸೆಫ್ಸ್ ಶಾಲೆಯ ರೋಡಿನಿಂದ ಮನೆಯ ಕಡೆಗೆ ಹೊರಟಿದ್ದೆ. ಸುಮಾರು ಐದಾರು ಹುಡುಗರ ಗುಂಪು ನನ್ನನ್ನು ಲಿಫ್ಟಿಗಾಗಿ ಅಡ್ಡಗಟ್ಟಿತು. ನೋಡ್ರಪ್ಪಾ, ನಾನು ಈ ದಾರಿಯಲ್ಲಿ ಹೋಗುತ್ತಿದ್ದೇನೆ. ಒಬ್ಬರೇ ಬರುವುದಿದ್ದರೆ ಬನ್ನಿ. ಎಂದೆ. ಆ ಗುಂಪಿನಲ್ಲಿ ಸ್ವಲ್ಪ ಬಲಿಷ್ಠನಾಗಿದ್ದ ಹುಡುಗ ಉಳಿದವರನ್ನು ಆಚೀಚೆ ತಳ್ಳಿ ಹತ್ತಿ ಕುಳಿತುಕೊಳ್ಳುತ್ತಾ, ನಡೀರಿ ಅಂಕಲ್.. ಎಂದ. ನಾನು ಹೊರಟೆ. ಇನ್ನೂ ನಾಲ್ಕನೆ ಗೇರು ಹಾಕಿರಲಿಲ್ಲ. ಹುಡುಗ, ಸ್ಟೇಡಿಯಮ್ ಬಳಿ, ಅಂಕಲ್, ಅಂಕಲ್ ನಿಲ್ಸಿ. ನಾನು ಇಲ್ಲೇ ಇಳಿಯೋದು. ಎಂದು ಛಕ್ಕನೇ ಇಳಿದು ಥ್ಯಾಂಕ್ಯೂ ಅಂಕಲ್ ಎನ್ನುತ್ತಾ ತಟ್ಟನೇ ಮಾಯವಾದ! ನಾನು ಅವಾಕ್ಕಾಗಿ ಸಿಟ್ಟಿನಿಂದ ಹಲ್ಲು ಕಡಿದದ್ದಷ್ಟೇ ಬಂತು! ಮುನ್ನೂರವೈತ್ತು ನಾನೂರು ಮೀಟರ್ ದೂರದಲ್ಲಿದ್ದ ಸ್ಟೇಡಿಯಂ ಬಳಿಗೆ ಹೋಗಲು ಈ ಹುಡುಗ ಲಿಫ್ಟ್ ಕೇಳಿದನಲ್ಲಾ, ಏನಾಗಿದೆ ಈಗಿನ ಹುಡುಗರಿಗೆ? ಇಷ್ಟು ದೂರನೂ ನಡೆಯಲು ದಿನಾ ಬೆಳಿಗ್ಗೆ ಬೋರ‍್ನ್‌ವೀಟಾನೋ ಹಾರ‍್ಲಿಕ್ಸೋ ಕುಡಿಯುತ್ತಿರುವ ಈ ಮಕ್ಕಳಿಗೆ ಸಾಧ್ಯ ಆಗುತ್ತಿಲ್ಲವಾ!

ನನ್ನ ಶಾಲಾ ದಿನಗಳು ನೆನಪಿಗೆ ಬಂದವು.

ಭಾರತಕ್ಕೆ ಸ್ವಾತಂತ್ರ ಬಂದಿದ್ದರೂ ಬ್ರಿಟೀಷ್ ಯಜಮಾನರ ಕೈಕೆಳಗಿನ ಕಾಫಿ ತೋಟದಲ್ಲಿ ನನ್ನ ತಂದೆ ರೈಟರಾಗಿ ದುಡಿಯುತ್ತಿದ್ದರು. ನಾವು ವಾಸ ಮಾಡುತ್ತಿದ್ದ ಕಾಫಿ ಎಸ್ಟೇಟಿನ ಮನೆಯಿಂದ ಸುಮಾರು ಎರಡೂವರೆ ಕಿಲೋಮೀಟರ್  ದೂರದ ಮೂಗಲಿ ಎಂಬ ಗ್ರಾಮದಲ್ಲಿ ಒಂದು ಸರ್ಕಾರಿ ಪ್ರಾಥಮಿಕ ಶಾಲೆ ಇತ್ತು. ಅಂದರೆ ಒಂದರಿಂದ ನಾಲ್ಕು ತರಗತಿಗಳವರೆಗೆ. ಒಂದೇ ಕೊಠಡಿ. ಒಬ್ಬರೇ ಮೇಷ್ಟ್ರು. ಅವರು ತಾಲ್ಲೂಕು ಕೇಂದ್ರ ಸಕಲೇಶಪುರದಿಂದ ಬರುತ್ತಿದ್ದರು. ಅವರು ಸಕಲೇಶಪುರ-ಬೇಲೂರು ಬಸ್ಸಿನಲ್ಲಿ ಬಂದಿಳಿದು ಮೂಗಲಿಗೆ ಸುಮಾರು ಒಂದೂವರೆ ಕಿಲೋಮೀಟರ್   ನಡೆದು ಬರಬೇಕಿತ್ತು. ಅವರು ಬರುವ ಬಸ್ಸಿನ ಸಮಯ ನಮಗೆಲ್ಲರಿಗೂ ಗೊತ್ತಿದ್ದರಿಂದ ನಾವು ಶಾಲೆಯ ಕಡೆಗೆ ಹೋಗದೆ ಸುಮಾರು ಎಂಟತ್ತು ಮಕ್ಕಳು ಅವರು ಬರುವ ಬಸ್ಸನ್ನು ಕಾಯುತ್ತಾ ಮೂಗಲಿ ಗಡಿಯಲ್ಲಿ ನಿಂತಿರುತ್ತಿದ್ದೆವು. ಅವರು ಬಸ್ಸಿನಿಂದ ಇಳಿದಾಕ್ಷಣ ಅವರನ್ನು ಎತ್ತಿಕೊಂಡು ಹೋಗುವುದೊಂದನ್ನು ಬಿಟ್ಟು ಅವರು ಹೊತ್ತು ತರುತಿದ್ದ ಉಳಿದೆಲ್ಲಾ ಸಾಮಾನುಗಳನ್ನು ಹೊತ್ತು ಕಿಂದರಿ ಜೋಗಿಯ ಹಿಂದೆ ಹೋಗುತ್ತಿದ್ದ ಮೂಷಿಕಗಳಂತೆ ಶಾಲೆಯ ಕಡೆಗೆ ಹೊರಡುತ್ತಿದ್ದೆವು. ನಮ್ಮ ಮಾಸ್ತರರು ನಮ್ಮ ಕೈಗೆ ಏನೇ ಕೊಟ್ಟರೂ ಅವರು ಕಟ್ಟಿಸಿಕೊಂಡು ಬರುತ್ತಿದ್ದ ಬುತ್ತಿಯನ್ನು ಕೊಡುತ್ತಿರಲಿಲ್ಲ. ಅದನ್ನು ಅವರೇ, ಬೇರೆ ಯಾರೂ ಮುಟ್ಟದಂತೆ ಜೋಪಾನವಾಗಿ ಕಾಪಿಟ್ಟುಕೊಳ್ಳುತ್ತಿದ್ದರು! ಮುಟ್ಟಿಸಿಕೊಳ್ಳದ ಬಗ್ಗೆ ನನಗೆ ಆಗೇನೂ ಗೊತ್ತಿರಲಿಲ್ಲ. ಶಾಲೆಗೆ ಹೋಗುತ್ತಿದ್ದ ನಾವೆಲ್ಲಾ ರೈತ ಮಕ್ಕಳು, ಬಿದಿರಿನ ಕೆಲಸ ಮಾಡುತ್ತಿದ್ದವರು ಮತ್ತು ಪೊರ್ಬುಗಳಾದ ನಾನು ಮತ್ತು ನನ್ನ ತಂಗಿ! ನಮ್ಮ ಕಲಿಕೆಯ ಬಗ್ಗೆ ಯಾರಿಗೂ ಅಂತ ಆಸ್ಥೆ ಇರಲಿಲ್ಲ. ಈ ಪಿಶಾಚಿಗಳು ಹಗಲಿನ ಮಟ್ಟಿಗೆ ಒಂದು ಬಂಧೀಖಾನೆಯಲ್ಲಿದ್ದರೆ ಸಾಕು ಎಂದಷ್ಟೇ ನಮ್ಮ ಅವ್ವ-ಅಪ್ಪಂದಿರ ಆಶಯವಾಗಿತ್ತು.

ಶಾಲೆಗೆ ಹೋಗಿ ಬರುವ ನಡಿಗೆ ನಮಗೆ ಏನೂ ಅನಿಸುತ್ತಿರಲಿಲ್ಲ. ಇದು ಶಾಲೆಗಿಂತ ಹೆಚ್ಚು ಅಪ್ಯಾಯಮಾನವಾಗಿರುತ್ತಿತ್ತು. ದಾರಿಯಲ್ಲಿ ಸಿಗುವ ಮರಗಳನ್ನು ಹತ್ತಿ, ತಿನ್ನುವಂತ ಹಣ್ಣುಗಳ ಮರಗಳಲ್ಲಿ ಕಾಯಿಗಳನ್ನೂ ಬಿಡದೆ ಮುಕ್ಕುತ್ತಾ ಮನೆ ಸೇರುವಾಗ ಮುಸ್ಸಂಜೆಯಾಗಿರುತ್ತಿತ್ತು.

ನಾನು ನಾಲ್ಕನೇ ತರಗತಿ ಮುಗಿಸುತ್ತಿದ್ದಂತೆಯೇ ನನ್ನನ್ನು ಹಾಸನದ ಸೈಂಟ್ ಜೋಸೆಪ್ಸ್ ಶಾಲೆಗೆ ಸೇರಿಸಿದರು. ಜಿಲ್ಲೆಯ ಹೊರಗಿಂದ ಬರುವ ವಿದ್ಯಾರ್ಥಿಗಳಿಗೆ ಅಲ್ಲಿ ಬೋರ್ಡಿಂಗ್ ಇತ್ತು. ಬೋರ್ಡಿಂಗಿಂದ ಎಡವಿ ಬಿದ್ದರೆ ಶಾಲೆ ಎನ್ನುವಷ್ಟು ಸಮೀಪ. ಊರಿನ ಶಾಲೆಯ ಹಾಗೆ ನಡಿಗೆ ಇರಲಿಲ್ಲವಾದರೂ, ಅದನ್ನು ಮೀರಿಸುವಷ್ಟು ಆಟ ಆಡುತ್ತಿದ್ದೆವು.

ಅಂತೂ ಹಾಸನದಲ್ಲೇ ಎಸೆಸ್ಸೆಲ್ಸಿ ಹೇಗೋ ಪಾಸಾಯಿತು. ಕಾಲೇಜು ಓದುವವರಿಗೆ ಬೋರ್ಡಿಂಗಿನಲ್ಲಿ ಜಾಗವಿರಲಿಲ್ಲವಾದ್ದರಿಂದ ಆ ವರ್ಷ ಮನೆಯಲ್ಲೇ ಉಳಿದು ಗದ್ದೆ ಕೆಲಸಕ್ಕೆ, ದನ ಮೇಯಿಸುವ ಕೆಲಸಕ್ಕೆ ಹೋಗಬೇಕಾಯಿತು. ಮುಂದಿನ ವರ್ಷ ಸಕಲೇಶಪುರದ ಯಂಗ್ಸ್ (ಬ್ರಿಟಿಶ್ ದೊರೆಯ ಕೊಡುಗೆ) ಮುನ್ಸಿಪಲ್ ಹೈಸ್ಕೂಲಿನಲ್ಲಿ ಹನ್ನೊಂದನೇ ತರಗತಿ (ಪಿಯುಸಿ ಅಲ್ಲ) ಪ್ರಾರಂಭವಾಗಿರುವುದು ತಿಳಿದು ಬಂತು. ನಮ್ಮ ಊರು ಬೇಲೂರು ಮತ್ತು ಸಕಲೇಶಪುರದ ಗಡಿ ಮಧ್ಯದಲ್ಲಿದ್ದು ಈ ಊರುಗಳ ಮಧ್ಯೆ ಬೆಳಿಗ್ಗೆ ಮತ್ತು ಸಂಜೆ ಒಂದೊಂದು ಬಸ್ಸು ಓಡಾಡುತ್ತಿತ್ತು. ನಮ್ಮೂರಿನಿಂದ ಈ ಎರಡೂ ತಾಲ್ಲೂಕು ಕೇಂದ್ರಗಳಿಗೆ ಹೆಚ್ಚು ಕಮ್ಮಿ ಹದಿನೆಂಟು ಕಿ.ಮೀ.ಗಳಿದ್ದರೂ ನಮ್ಮ ಓಡಾಟ ಸಕಲೇಶಪುರದ ಕಡೆಗೇ ಹೆಚ್ಚಿತ್ತು. ಸಕಲೇಶಪುರದಲ್ಲಿ ನನಗೆ ಹನ್ನೊಂದನೆ ತರಗತಿಗೆ ಸೀಟು ಸಿಕ್ಕಿತು. ನಾನು ಹೈಸ್ಕೂಲಿನಲ್ಲಿ ಪಿಸಿಎಂ ಓದಿದ್ದೆನಾದರೂ ಇಲ್ಲಿ ಆರ್ಟ್ಸ್ ತಗೋ ಅಂತ ಗುರು ಹಿರಿಯರ ಅಣತಿಯಂತೆ ಇತಿಹಾಸ, ಅರ್ಥಶಾಸ್ತ್ರ ಮತ್ತು ರಾಜನೀತಿಯನ್ನು ಆರಿಸಿಕೊಂಡೆ. ವಾರದ ಬೇರೆ ದಿನಗಳಲ್ಲಿ ನನಗೆ ತರಗತಿಗೆ ಹಾಜರಾಗಲು ಯಾವುದೇ ತೊಂದರೆಗಳಿರಲಿಲ್ಲ. ಬೇಲೂರಿನಿಂದ ಸಕಲೇಶಪುರಕ್ಕೆ ಹೊರಡುವ ಬೆಳಗಿನ ಬಸ್ಸಿನಲ್ಲಿ ನನಗೆ ತರಗತಿಗೆ ಸರಿಯಾದ ಸಮಯಕ್ಕೆ ಹಾಜರಾಗಲು ಯಾವುದೇ ತೊಂದರೆಗಳಿರಲಿಲ್ಲ. ಆದರೆ, ಶನಿವಾರಗಳಂದು ಮಾತ್ರ ನಾನು ಬಸ್ಸಿನಲ್ಲಿ ಸಮಯಕ್ಕೆ ಸರಿಯಾಗಿ ತರಗತಿಗೆ ಹಾಜರಾಗಲು ಸಾಧ್ಯವಿರಲಿಲ್ಲ. ಹೈಸ್ಕೂಲಿನ ತರಗತಿಗಳಂತೆಯೇ ನಮ್ಮ ತರಗತಿಯೂ ಶನಿವಾರ ಬೆಳಗ್ಗೆ ಎಂಟು ಗಂಟೆಗೇ ಶುರುವಾಗುತ್ತಿತ್ತು. ನಾನು ಹಿಡಿಯುತ್ತಿದ್ದ ಬಸ್ಸು ಬೆಳಿಗ್ಗೆ ಎಂಟು ಗಂಟೆಯ ಆಸುಪಾಸಿನಲ್ಲಿ ನಮ್ಮೂರಿಗೆ ಬರುತ್ತಿತ್ತು. ಆದ್ದರಿಂದ ನಾನು ಸಕಲೇಶಪುರಕ್ಕೆ ನಡೆದೇ ಹೋಗುವುದು ಅನಿವಾರ್ಯವಾಗಿತ್ತು. ಹಿಂದಿನ ರಾತ್ರಿಯ ತಂಗಳನ್ನವನ್ನುಂಡು ನಾನು ಬರೋಬರಿ ಬೆಳಗಿನ ಜಾವ ನಾಲ್ಕು ಗಂಟೆಗೆ ಹೊರಡುತ್ತಿದ್ದೆ. ನಮ್ಮೂರು, ಆವಾಗ ಒಂದು ಊರೇ ಆಗಿರಲಿಲ್ಲ. ಮಲೆನಾಡಿನಲ್ಲಿ ಎಷ್ಟೋ ಕಿಲೋಮೀಟರ್‌ಗಳ ಅಂತರದಲ್ಲಿ ಒಂದೊಂದು ಮನೆ! ನಮ್ಮ ಒಂಟಿ ಮನೆ, ಈಗ ಫಾತಿಮಾಪುರವೆಂದು ಕರೆಯಲ್ಪಡುವ ಸ್ಥಳದಲ್ಲಿತ್ತು. ಎಷ್ಟೋ ವರ್ಷಗಳ ನಂತರ ಲಿಂಗಾಯತ ಪ್ಲಾಂಟರೊಬ್ಬರು ಉದಾರವಾಗಿ ಕೊಟ್ಟ ಜಾಗದಲ್ಲಿ ಒಂದು ಚರ್ಚು ಹಾಗೂ ಪ್ರಾಥಮಿಕ ಶಾಲೆ-ಹೈಸ್ಕೂಲು ನಿರ್ಮಾಣಗೊಂಡಿವೆ.

ನಾನು ಫಾತಿಮಾಪುರದಿಂದ ಸಕಲೇಶಪುರದ ಕಡೆಗೆ ಐದು ಕಿಲೋಮೀಟರ್  ನಡೆದರೆ ಬೆಳಗೋಡು ಎಂಬ ಊರು ಸಿಗುತ್ತಿತ್ತು. ಇದು ಹೋಬಳಿ ಕೇಂದ್ರ. ಬೆಳಗೋಡಿನಲ್ಲಿ ನನಗೆ ನನ್ನಂತೇ ಸಕಲೇಶಪುರದ ಹೈಸ್ಕೂಲಿಗೆ ಹೋಗುವ ಐದಾರು ವಿದ್ಯಾರ್ಥಿಗಳು ಸಿಗುತ್ತಿದ್ದರು. ಅಲ್ಲಿಂದ ಸುಮಾರು ನಾಲ್ಕು ಕಿಲೋಮೀಟರ್  ನಡೆದರೆ ಬೆಂಗಳೂರು-ಮಂಗಳೂರು ಹೈವೇಯ ಬಾಗೆ ಹ್ಯಾಂಡ್ ಪೋಸ್ಟ್. ಅಲ್ಲಿ ಮತ್ತಷ್ಟು ವಿದ್ಯಾರ್ಥಿಗಳು ಜತೆಗೂಡುತಿದ್ದರು. ಅಲ್ಲಿಂದ ಗುಳಗಳಲೆ, ಮಠಸಾಗರ, ಹೊಸೂರು.. ಹೀಗೆ ವಿದ್ಯಾರ್ಥಿಗಳು ಸಕಲೇಶಪುರಕ್ಕೆ ಎಂಟೊಂಭತ್ತು ಕಿಲೋಮೀಟರ್   ನಡೆದು ಸ್ವರ್ಗಕ್ಕೆ ಕಿಚ್ಚು ಹಚ್ಚುತ್ತಿದ್ದೆವು.

ವಾರದಲ್ಲೊಮ್ಮೆ ನನ್ನ ೧೮ ಕಿಲೋಮೀಟರ್ ನಡಿಗೆ ಒಂದು ತಿಂಗಳೂ ನಡೆಯಲಿಲ್ಲ. ನನ್ನ ಬಗ್ಗೆ ಕೇಳಿ ತಿಳಿದುಕೊಂಡ ಸಕಲೇಶಪುರದ ಚರ್ಚಿನ ಗುರುಗಳಾಗಿದ್ದ ದಿ. ವಿಕ್ಟರ್ ಸೆರಾವೋರವರು ನನ್ನನ್ನು ಚರ್ಚಿನ ಮನೆಯಲ್ಲಿ ಉಳಿದು ಶಾಲೆಗೆ ಹೋಗಲು ಆಹ್ವಾನಿಸಿದರು.

ಇದಾಗಿ ಸಕಲೇಶಪುರದ ಸೇತುವೆ ಅಡಿಯಿಂದ ಅದೆಷ್ಟು ನೀರು ಹರಿದು ಹೋಯಿತೋ! ಕ್ರಮೇಣ ಬಸ್ಸುಗಳ, ಟೆಂಪೊಗಳ ಸಂಖ್ಯೆ ಹೆಚ್ಚುತ್ತಾ ಹೋದಂತೆ ವಿದ್ಯಾರ್ಥಿಗಳಷ್ಟೇ ಅಲ್ಲ ಜನರೂ ನಡೆಯುವುದು ಕಡಿಮೆಯಾಯಿತು. ಈಗಂತೂ ಬೈಕು, ಸ್ಕೂಟರುಗಳು ಬಂದ ಮೇಲೆ ಮತ್ತೂ ಕಡಿಮೆಯಾಯಿತು. 

ನಡಿಗೆ, ಓಟದ ಬಗ್ಗೆ ಇಷ್ಟೆಲ್ಲಾ ಏಕೆ ಬರೆಯಬೇಕಾಯಿತು ಎಂದರೆ ಒಂದು ತಿಂಗಳ ಹಿಂದೆ ಸಾಕ್ಷ್ಯಚಿತ್ರ ನಿರ್ಮಾಪಕ ವಿನೋದ್ ಕಾಪ್ರಿಯವರ ಒಂದು ಟ್ಟಿಟ್ಟರ್ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಯಿತು. 

ಅದಕ್ಕೆ ಮೊದಲು ನಾನು ವಿನೋದ್ ಕಾಪ್ರಿಯವರ ಹೆಸರು ಕೇಳಿದ್ದು ಹಾಸನದ ಜನತಾ ಮಾಧ್ಯಮದಲ್ಲಿ. ೨೦೨೦ ರ ಹಟಾತ್ತ್ ಲಾಕ್ಡಾವ್ನ್ ಹೊತ್ತಿನಲ್ಲಿ ಒಮ್ಮೆಲೆ ಕೆಲಸ ಕಳೆದುಕೊಂಡು ಹೊಟ್ಟೆಗೂ ಗತಿ ಇಲ್ಲದೆ, ಕೈಯಲ್ಲಿ ದುಡ್ಡೂ ಇಲ್ಲದೆ ಅತ್ತ ಊರಿಗೂ ಹೋಗಲು ಆಗದ ವ್ಯವಸ್ಥೆಯಿಂದಾಗಿ ಪಡಿಪಾಟಲು ಪಡುತ್ತಿದ್ದ ಗಾಝಿಯಬಾದಿನ ಏಳು ಜನ ಕಟ್ಟಡ ನಿರ್ಮಾಣ ಕಾರ‍್ಮಿಕರನ್ನು ವಿನೋದ್ ಕಾಪ್ರಿ ಸಂಪರ್ಕಿಸಿ ಅವರಿಗೆ ಊಟದ ವ್ಯವಸ್ಥೆ ಇತ್ಯಾದಿ ಕದ್ದು ಮುಚ್ಚಿ ಮಾಡಿಕೊಡುತ್ತಿರುತ್ತಾರೆ. ಆದರೆ ಕೊನೆಗೆ ಈ ಸ್ವಾಭಿಮಾನಿ ಹುಡುಗರು ಬೇಸತ್ತು ಏನೇ ಆಗಲಿ, ಸತ್ತರೂ ಪರವಾಯಿಲ್ಲವೆಂದು ಬಿಹಾರಿನ ತಮ್ಮ ಹಳ್ಳಿ ೧೨೩೨ ಕಿಲೋಮೀಟರ್ ದೂರದ ಸಹಸ್ರಾಕ್ಕೆ ಪೋಲಿಸರನ್ನು ವಂಚಿಸಿ ಸೈಕಲಿನಲ್ಲಿ ಹೊರಟು ೯ ದಿನಗಳ ನಂತರ ತಮ್ಮ ಹಳ್ಳಿಗೆ ತಲುಪುತ್ತಾರೆ. ಈ ಮಹಾಪಯಣದ ಚಿತ್ರೀಕರಣವನ್ನು ವಿನೋದ್ ಕಾಪ್ರಿಯವರು ಮಾಡಿದ್ದೂ ಅಲ್ಲದೆ ೧೨೩೨ ಞms. ಖಿhe ಐoಟಿg ಎouಡಿಟಿeಥಿ ಊome ಪುಸ್ತಕವನ್ನು ಹೊರತಂದರು. ಅಮೆಝಾನಿನಿಂದ ಈ ಪುಸ್ತಕವನ್ನು ನಾನು ಓದಿದ ಒಂದು ತಿಂಗಳ ನಂತರ ಸತೀಶ್ ಜಿ.ಟಿ.ಯವರ ಕನ್ನಡ ಅನುವಾದವೂ ಹಾಸನದಲ್ಲಿ ಬಿಡುಗಡೆಯಾಯಿತು.

ಈಗ ವಿನೋದ್ ಕಾಪ್ರಿಯವರ ಟ್ವಿಟ್ಟರ್ ಪೋಸ್ಟ್ ಬಗ್ಗೆ ಹೇಳುವುದಾದರೆ, ಮಾರ್ಚ್ ೨೧, ೨೦೨೨ ರ ಮಧ್ಯರಾತ್ರಿಯಲ್ಲಿ  ವಿನೋದ್ ಕಾಪ್ರಿಯವರು ನೋಯ್ಡಾದ ರಸ್ತೆಯಲ್ಲಿ ಕಾರು ಚಲಾಯಿಸಿಕೊಂಡು ಹೋಗುತ್ತಿರುವಾಗ ಅವರಿಗೆ ಹುಡುಗನೊಬ್ಬ ಬೆನ್ನಿಗೆ ಬ್ಯಾಗು ನೇತಾಕಿಕೊಂಡು ಓಡುತ್ತಿರುವುದು ಕಾಣಿಸಿ, ಪಾಪ ಹುಡುಗ ಯಾವುದೋ ಸಂಕಷ್ಟದಲ್ಲಿ ಸಿಲುಕಿರಬೇಕೆಂದು ಗಾಡಿಯನ್ನು ನಿಧಾನಿಸಿ ಅವನೊಡನೆ ಸಂಭಾಷಣೆಗೆ ತೊಡಗುತ್ತಾರೆ. ಹುಡುಗನ ಹೆಸರು ಪ್ರದೀಪ್ ಮೆಹ್ರಾ. ವಯಸ್ಸು ೧೯. ಮ್ಯಾಕ್ ಡೊನಾಲ್ಡ್‌ನಲ್ಲಿ ಕೆಲಸ. ಮಧ್ಯರಾತ್ರಿಯಲ್ಲಿ ಪಾಳಿ ಮುಗಿದಿದ್ದು ಹತ್ತು ಕಿಲೋಮೀಟರ್  ದೂರದ ಹಳ್ಳಿಯಲ್ಲಿ ಅಣ್ಣನೊಟ್ಟಿಗೆ ವಾಸ. ತಾಯಿ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದಾಳೆ. ಅಣ್ಣನಿಗೆ ರಾತ್ರಿ ಪಾಳಿ ಕೆಲಸ. ಅವನಿಗೆ ಅಡುಗೆ ಮಾಡಿಡಬೇಕು. ಕಾಪ್ರಿ, ನಾನು ನಿನಗೆ ಮನೆವರೆಗೆ ಬಿಡುತ್ತೇನೆ ಎಂದರೂ ಹುಡುಗ ಕೇಳಲೊಲ್ಲ. ನಾನು ಭಾರತೀಯ ಸೈನ್ಯವನ್ನು ಸೇರಬೇಕೆಂದುಕೊಂಡಿದ್ದೇನೆ. ಹಗಲಿನಲ್ಲಿ ಬಿಡುವಿಲ್ಲ. ಈ ಹೊತ್ತಿನ ರಾತ್ರಿಯಲ್ಲೇ ನನಗೆ ಓಡುವುದರ ಅಭ್ಯಾಸಕ್ಕೆ ಪುರುಸೊತ್ತು. ನಿಮ್ಮೊಂದಿಗೆ ಬರಲಾರೆ, ಥ್ಯಾಂಕ್ಸ್ ಎಂದ.

ಇಂತ ಹುಡುಗರೂ ಇದ್ದಾರೆ ಎಂದು ಆಶ್ಚರ್ಯಪಟ್ಟೆ.