*ಕೈಗಳು ಕೆಸರಾದಾಗ*

Thumbnail

*ಕೈಗಳು ಕೆಸರಾದಾಗ* 

 

ಈ ವರ್ಷದ ಮಳೆಗಾಲದಲ್ಲಿ ವರುಣನ ಆರ್ಭಟಕ್ಕೆ ಇಡೀ ರಾಜ್ಯವೇ ಬೆಚ್ಚಿ ಬಿತ್ತು ಅನ್ನೋದನ್ನ ಹೇಳಬೇಕಾಗಿಲ್ಲ ಬಿಡಿ. ಎಲ್ಲೆಡೆ ಆಸ್ತಿ ಪಾಸ್ತಿಗಳ ನಷ್ಟದ ಜೊತೆಗೆ ಜೀವ ಹಾನಿಗಳೂ ಆದವು. ಹಾಗೆಯೇ ನಮ್ಮ ಕಾಲೇಜಿನ ಆವರಣವೂ ಕೆಸರುಮಯವಾಗೋಗಿತ್ತು. ಕೆಸರಲ್ಲಿ ಕಾಲಿಡದೆ ಹಳೆಯ ಕಟ್ಟಡದ ತರಗತಿಗಳಿಗೆ ಹೋಗೋದು ಕಷ್ಟದ ಮಾತಾಗಿತ್ತು. ಆ ನಡುವೆ ಒಂದಷ್ಟು ವಿದ್ಯಾರ್ಥಿಗಳು ಮಾಡುತ್ತಿದ್ದ ಕೆಲಸ ನನ್ನ ಕಣ್ಮನ ಸೆಳೆಯಿತು. 

 

ಉಪಯೋಗಕ್ಕೆ ಬಾರದೆ ಎಲ್ಲೋ ಬಿದ್ದಿದ್ದ ಒಂದಷ್ಟು ಹಲಗೆಗಳನ್ನು ಆ ವಿದ್ಯಾರ್ಥಿಗಳು ಯೋಜಿಸಿ, ಅವನ್ನು ತಂದು ಕೆಸರಲ್ಲಿ ಕಾಲು ಮುಳುಗದ ಹಾಗೆ ವ್ಯವಸ್ಥೆ ಮಾಡುತ್ತಿದ್ದರು. ಅವರು ಮಾಡುತ್ತಿದ್ದ ಆ ಕೆಲಸ ಸ್ವತಃ ಅಭಿಪ್ರೇರಣೆಗೊಂಡದ್ದು ಎಂದು ತಿಳಿದಾಗ ನಿಜಕ್ಕೂ ಆಶ್ಚರ್ಯಚಕಿತನಾದೆ! ತಡೆಯಲಾಗದೆ, ನಾನು ಆ ಹುಡುಗರಿಗೆ "ಏನ್ರಪ್ಪಾ ಇದು?" ಎಂದು ಕೇಳಿದೆ. ಅದಕ್ಕೆ ಅವರಲ್ಲೊಬ್ಬ ವಿದ್ಯಾರ್ಥಿ;  "ಇನ್ನೈದು ನಿಮಿಷ ಹಾಗೇ ನೋಡ್ತಾ ಇರಿ ಸರ್, ಏನ್ ಮಾಡ್ತೀವಿ ಅಂತಾ" ಎಂದು ಲವಲವಿಕೆಯಿಂದ ಹೇಳಿದ. ಹಾಗೆಯೇ ನಿಂತು ಅವರ ಒಗ್ಗಟ್ಟಿನ ಕೆಲಸ ನೋಡುತ್ತಾ ಖುಷಿ ಪಟ್ಟೆ. 

 

"ಏಯ್ ಸ್ವಲ್ಪ ಹಿಂದೆ ಇಡೋ ಹಲಗೇನಾ" ಅಂತ ಒಬ್ಬ ಹುಡುಗ ಹೇಳಿದ್ರೆ, ಅದಕ್ಕೆ ಪ್ರತಿಯಾಗಿ "ಹಾಂ ಅದೂ ಸರೀನೆ" ಎನ್ನುವವ ಇನ್ನೊಬ್ಬ. ಹೀಗೆ ಒಬ್ಬರಿಗೊಬ್ಬರ ಬಹಳ ಸಹಕಾರದಿಂದ ಸ್ವಲ್ಪ ಹೊತ್ತಲ್ಲಿ ಒಂದು ರೀತಿಯ ನೆಲ ಸೇತುವೆಯೇ ಸಿದ್ಧವಾಯ್ತು. "ಸರ್ ಈಗ ಹೇಗೆ?" ಎಂದು ಒಬ್ಬ ವಿದ್ಯಾರ್ಥಿ ತನ್ನ ಕತ್ತನ್ನು ಓರೆಯಾಗಿಸಿ, ನಗುಮುಖದಿಂದ ಕೇಳಿದರೆ ಇನ್ನೊಬ್ಬ ಹೇಳಿದ; "ಸರ್ ನೀವೇ ಮೊದಲು ಇದರ ಮೇಲೆ ಹೋಗಬೇಕು" ಎಂದು. 

 

ವಿದ್ಯಾರ್ಥಿಗಳ ಮೇಲಿನ ಹೆಮ್ಮೆಯ ಭಾವದಿಂದ ಸರಾಗವಾಗಿ ಹಲಗೆಗಳ ಮೇಲೆ ಹೋಗಿ ಥಟ್ ಅಂತ ನನ್ನ ಕಾಲುಗಳನ್ನು ನೋಡಿಕೊಂಡೆ; ಕಾಲಲ್ಲಿ ಸ್ವಲ್ಪವೂ ಕೆಸರಿಲ್ಲ. 'ಅರೆ ವಾಹ್' ಅನಿಸಿ ಹರ್ಷಿತನಾದೆ. ಆದರೆ ನನ್ನ ಎದೆ ತುಂಬಿ ಬಂದದ್ದು ನನ್ನ ಕಾಲು ಕೆಸರಾಗದಿದ್ದಕ್ಕಲ್ಲ. ಬದಲಿಗೆ ಹಿಂದಿರುಗಿ ಆ ವಿದ್ಯಾರ್ಥಿಗಳ ಕೈಗಳನ್ನು ನೋಡಿದರೆ, ಎಲ್ಲರ ಕೈಗಳೂ ಕೆಸರಾಗಿದ್ದವು! ನನಗೆ ಹೇಗಾಗಿರಬಹುದು ಒಮ್ಮೆ ನೀವೇ ಊಹೆ ಮಾಡಿಕೊಳ್ಳಿ.

 

ಸಹಜವಾಗಿ ನೋಡಿದರೆ ನಮ್ಮ ಹುಡುಗರು ಮಾಡಿದ ಆ ಕೆಲಸವೇನೋ ಬಹಳ ಚಿಕ್ಕದು ಎನ್ನುವ ಹಾಗೆ ಕಾಣಬಹುದು. ಆದರೆ ಆ ವಯಸ್ಸಿನ ಆ ಹುಡುಗರು ಆ ಕೆಲಸ ಮಾಡಲು ಬೇಕಾದ ಮನೋಸ್ಥಿತಿ? ಅಷ್ಟು ಸುಲಭವಾಗಿ ಬರುವಂತಹದ್ದಲ್ಲ! ಹುಡುಗಬುದ್ಧಿ ದೂರವಿದ್ದು ಧನಾತ್ಮಕತೆ ಅನ್ನೋದು ಮೈ ತುಂಬಿಕೊಂಡಿರಬೇಕು! ಅಲ್ವಾ? ಅಲ್ಲೇ ನನಗೆ ಅವರು ಮಾಡುತ್ತಿದ್ದ ಕೆಲಸ ತುಂಬಾ ಪ್ರಶಂಸನೀಯ ಎನಿಸಿದ್ದು.

 

ಪೋಷಕರಾಗಲಿ, ಶಿಕ್ಷಕರಾಗಲಿ  ಮಕ್ಕಳನ್ನು ಇಷ್ಟು ಜವಾಬ್ದಾರಿಯುತವಾಗಿ ನಡವಳಿಕೆ ತೋರಿಸುವ ಹಾಗೆ ಬೆಳೆಸಿಬಿಟ್ಟರೆ ಅವರೆಲ್ಲಾ ಉತ್ತಮ ಮತ್ತು ಮಾದರಿ ನಾಗರಿಕರಾಗುತ್ತಾರೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಏನಂತೀರಿ?

                     -ಡಾ. ನಂದೀಶ್ ವೈ. ಡಿ.