ಹುಲ್ಲು ನೀಲಿಯೆಂದು ವಾದ ಮಾಡಿದ ಕತ್ತೆಯ ಕಥೆ

Thumbnail

ಹುಲ್ಲು ನೀಲಿಯೆಂದು ವಾದ ಮಾಡಿದ ಕತ್ತೆಯ ಕಥೆ

  • ಸ್ಟೀವನ್ ಕ್ವಾಡ್ರಸ್ 9480761017

ವಿಂಧ್ಯಾ ಪರ್ವತದ ತೊಪ್ಪಲಿನ ಕಾಡೊಂದರಲ್ಲಿ ಮಂಕು ಶಿಖಾಮಣಿ ಎಂಬ ಕತ್ತೆಯೊಂದು ಸುಖಸಂತೋಷದಿಂದ ಬದುಕುತ್ತಿತ್ತು.  ಎಲ್ಲಾ ಪ್ರಾಣಿಗಳು ತಮ್ಮ ಗುಂಪಿನಿಂದ ದೂರ ಇಟ್ಟಿದ್ದವು ಅದಕ್ಕೆ ಮುಖ್ಯ ಕಾರಣ ಅದು ಯಾವುದೇ ಕಾರಣಕ್ಕೆ ತನ್ನ ಮೂಗಿನ ನೇರಕ್ಕೇ ವಾದ ಮಾಡುತ್ತಿತ್ತು. ಎಲ್ಲರ ಮುಂದೆ ತಾನೊಬ್ಬನೇ ಮಹಾಮನುಷ್ಯ ಎನ್ನುವಂತೆ ಎದೆಯೊಡ್ಡಿ ನಡೆಯುತ್ತಾ ಇತರರ ಕುರಿತು ವ್ಯಂಗ್ಯವಾಡುತ್ತಿತ್ತು.

ಅದೊಂದು ದಿನ ಹುಲ್ಲು ಮೇಯುತ್ತಿದ್ದ ಕತ್ತೆಗೆ ಕಾಡಿನ ಮಾನ್ಯರಲ್ಲಿ ಒಬ್ಬನಾದ ಚಂಡವ್ಯಾಘ್ರವು ಮುಂದಾಯ್ತು. ಕತ್ತೆಗೆ ಆ ಹುಲಿಯೊಡನೆ ವಾದ ಮಾಡಿ ತನ್ನ ಬುದ್ದಿವಂತಿಕೆ ಪ್ರದರ್ಶಿಸುವ ಮನಸ್ಸಾಗಿ ಅದು ‘ಎಲೈ ಹುಲಿರಾಯನೇ ನಿನಗೆ ತಿಳಿದಿದೆಯೇ ಹುಲ್ಲು ನೀಲಿ ಬಣ್ಣದ್ದಾಗಿದೆ’ ಎಂದಿತು. ಹುಲಿಯು ಸಹಜವಾಗಿ ಅದು ಹೇಗೆ ? ನಾವು ಹುಲ್ಲನ್ನು ನಿತ್ಯ ನೋಡುತ್ತೇವೆ, ತಿನ್ನುತ್ತೇವೆ, ಹುಲ್ಲು ಹಸಿರು ಎಂದು ತನ್ನ ವಾದ ಮಂಡಿಸಿತು. ಕತ್ತೆ ಪಟ್ಟು ಬಿಟ್ಟು ಕೊಡಲಿಲ್ಲ ವಾದದ ಮೇಲೆ ವಾದ, ಮಾತಿನ ಮೇಲೆ ಮಾತು ಬೆಳೆಯಿತು. ಕೊನೆಗೆ ಇಬ್ಬರೂ ಕಾಡಿನ ರಾಜ ಸಿಂಹದ ಬಳಿ ನ್ಯಾಯ ಕೇಳಲು ತೆರಳಿದವು.

ಕಾಡಿನ ರಾಜ ಸಿಂಹ ಇಬ್ಬರ ವಾದಗಳನ್ನು ಆಲಿಸಿ. ಕತ್ತೆಯ ಬಳಿ, ‘ಎಲೈ ಕತ್ತೆಯೇ ಹುಲ್ಲಿನ ಬಣ್ಣ ನೀಲಿ ಎಂದು ನೀನು ನಿಜವಾಗಿ ನಂಬುತ್ತಿಯೋ?’ ಎಂದು ಕೇಳಿತು.  ಕತ್ತೆ ‘ಹೌದು ಮಹಾಪ್ರಭು’ ಎಂದು ಉತ್ತರಿಸಿದಾಗ ಸಿಂಹವು, ‘ಕತ್ತೆ ಹೇಳುವುದೇ ಸರಿ ಹುಲ್ಲಿನ ರಂಗು ನೀಲಿ, ಈ ಮಾತನ್ನು ಒಪ್ಪದ ಹುಲಿಗೆ ಮೂರು ದಿನ ಮೌನಾಚರಣೆಯ ಶಿಕ್ಷೆ’ ಎಂದು ಸಾರಿತು. ಕತ್ತೆ ತನ್ನ ವಾದ ಗೆದ್ದಿತೆಂದು ಬೀಗುತ್ತಾ ಇಡೀ ಊರ ಮೇಲೆ ಈ ವಿಚಾರದ ಕುರಿತು ಹೇಳುತ್ತಾ ಕುಣಿಯುತ್ತಾ ಸಾಗಿತು.

ಎಲ್ಲರೂ ತೆರಳಿದ ಮೇಲೆ ಹುಲಿ ಸಿಂಹದ ಬಳಿ ‘ಮಹಾಪ್ರಭೂ ಇದೇನು ಮೋಸ, ಹುಲ್ಲಿನ ರಂಗು ನೀಲಿಯಲ್ಲ ಹಸಿರು ಎಂದು ನಿಮಗೂ ತಿಳಿದಿದೆ, ಮತ್ತೇಕೆ ಈ ಶಿಕ್ಷೆ ನನಗೆ’ ಎಂದು ಕೇಳಿತು. ಸಿಂಹ ಗಂಭೀರವಾಗಿ, ‘ ಹುಲಿರಾಜ ನೀನು ಒಬ್ಬ ಬುದ್ದಿವಂತ, ಗೌರವಾರ್ಹ ಎಂದು ನಾನು ತಿಳಿದಿದ್ದೆ ಆದರೆ ನೀನು ಆ ಮೂರ್ಖ ಕತ್ತೆಯೊಡನೆ ವಾದಮಾಡಿ ಸಮಯ ಕಳೆಯುವಷ್ಟು ಹುಚ್ಚುತನಕ್ಕೆ ಇಳಿದದ್ದೆ ನಿನಗೆ ಅವಮಾನ, ಆ ನಿನ್ನ ಮೂರ್ಖತನಕ್ಕೆ ಈ ಶಿಕ್ಷೆ’ ಎಂದು ಹೇಳಿತು. ‘ನಿನಗೆ ಮಾಡಲು ಬೇರೆ ಒಳ್ಳೆ ಕೆಲಸಗಳಿಲ್ಲವೇ?, ನಿನ್ನ ಸಮಯವನ್ನು ಮೂರ್ಖರ ಜತೆ ವಾದ ಮಾಡಿ ಯಾಕೆ ಕಳೆಯುತಿ?, ನೀನು ಮೂರ್ಖರಿಗೆ ಎಷ್ಟೇ ಸ್ಪಷ್ಟವಾಗಿ ತಿಳಿಸಿದರೂ ಅವರು ತಮ್ಮದೇ ಹಠದಲ್ಲಿರುತ್ತಾರೆ. ಅದರಿಂದ ಯಾರಿಗಾದರೂ ಲಾಭವಿದೆಯೇ?’ ಎಂದು ಕೇಳಿತು.

ಕೆಲವೊಮ್ಮೆ ನಮ್ಮ ಬದುಕಿನಲ್ಲಿಯೂ ಹೀಗೆ ಆಗುತ್ತಿದೆಯೇ? ‘ತಮ್ಮ ಆಲೋಚನೆಗಳೇ ಸರಿ’ ಎಂದು ಮೊಂಡು ಹಠಮಾಡುವವರ ಬಳಿ ನಮ್ಮ ಾಲೋಚನೆಗಳನ್ನು ತಿಳಿಸುವ ಪ್ರಯತ್ನ ಯಾಕೇ? ನಮ್ಮ ಬಗ್ಗೆ ಈಗಾಗಲೇ ಒಂದು ಚಿಂತನಾರೀತಿಯನ್ನು ಬೆಳೆಸಿಕೊಂಡವರ ಚಿಂತನೆಯನ್ನು ಬದಲಾಯಿಸಲು ನಮ್ಮ ಯಾವ ಮಾತುಗಳಿಂದ ಸಾಧ್ಯವಿಲ್ಲ.ಅವರ ಬಳಿ ನಗುನಗುತ್ತಾ ಇದ್ದು ಅವರ ಾತ್ಮವನ್ನು ಸಂತೋಷಪಡಿಸೋಣವಲ್ಲ.