ತಾನೊಂದು ಬಗೆದರೆ ದೈವವೊಂದು ಬಗೆದಂತೆ
ತಾನೊಂದು ಬಗೆದರೆ ದೈವವೊಂದು ಬಗೆದಂತೆ
ಸ್ಟೀವನ್ ಕ್ವಾಡ್ರಸ್ ಪೆರ್ಮುದೆ, 9480761017
ಈಸೋಪನು ಒಮ್ಮೆ ಮನೆಯಿಂದ ಪೇಟೆಗೆ ಹೊರಟಾಗ ಆಲದ ಮರದ ಅಡಿಯಲ್ಲಿ ವಿಶ್ರಾಂತಿಗೆಂದು ಕುಳಿತನಂತೆ. ಹಾಗೆ ಕುಳಿತಾಗ ಆತನಿಗೆ ಆಲದ ಮರದ ಸಣ್ಣ ಹಣ್ಣು ಕಂಡಿತಂತೆ. ಅಲ್ಲಿಯೇ ಪಕ್ಕದಲ್ಲಿದ್ದ ಸಣ್ಣ ಕುಂಬಳ ಬಳ್ಳಿಯಲ್ಲಿ ದೊಡ್ಡ ಕುಂಬಳದ ಹಣ್ಣು ಅವನ ಕಣ್ಣಿಗೆ ಬಿತ್ತಂತೆ. ಆಶ್ಚರ್ಯದಿಂದ ಈಸೋಪನು ಎಲಾ ದೇವರೆ ಏನು ನಿನ್ನ ಅಭಿಯೋಜನೆ, ಇಷ್ಟು ದೊಡ್ಡ ಮರ ಇಷ್ಟು ಸಣ್ಣ ಹಣ್ಣು, ಇಂತಹ ಸಣ್ಣ ಬಳ್ಳಿಗೆ ಇಷ್ಟು ದೊಡ್ಡ ಕಾಯಿ ಎಂದು ಹಪಹಪಿಸತೊಡಗಿದನಂತೆ. ಸ್ವಲ್ಪ ಸಮಯದಲ್ಲಿ ಈಸೋಪನಿಗೆ ಮರದ ಬುಡದಲ್ಲಿ ನಿದ್ದೆ ಬಿತ್ತಂತೆ. ನಿದ್ದೆಯಲ್ಲಿರುವಾಗ ಒಮ್ಮೆಲೆ ಸಣ್ಣ ಆಲದ ಹಣ್ಣೊಂದು ಈಸೋಪನ ತಲೆಗೆ ಬಡಿಯಿತ್ತಂತೆ ಆಗ ಒಮ್ಮೆಲೆ ಎಚ್ಚರಗೊಂಡ ಈಸೋಪನು ದೈವಸೃಷ್ಟಿಯ ಮಹಿಮೆಯನ್ನು ಅರಿತುಕೊಂಡು ದೇವರನ್ನು ಹೊಗಳತೊಡಗಿದನಂತೆ ಅಯ್ಯಾ ದೇವರೆ ಮೆಚ್ಚಿದೆ ನಿನ್ನ ಮಹಿಮೆಯನ್ನು ಈ ಸಣ್ಣ ಕಾಯಿ ಬಿದ್ದು ನನ್ನ ತಲೆಗೆ ಇಷ್ಟು ನೋವಾದರೆ ಇನ್ನು ಆ ದೊಡ್ಡ ಕುಂಬಳ ಕಾಯಿ ಮೇಲಿಂದ ನನ್ನ ತಲೆಯ ಮೇಲೆ ಬಿದ್ದರೆ ನಾನು ಬದುಕಿ ಉಳಿಯುವುದಾದರೂ ಹೇಗೆ ಇತ್ತು ಎಂದು ದೇವರನ್ನು ಕೊಂಡಾಡತೊಡಗಿದನಂತೆ.
ನಮ್ಮ ಬದುಕೂ ಹಾಗೆ ಈಸೋಪನಂತೆ, ಈಸೋಪನಾದರೂ ಒಂದು ಉದಾಹರಣೆಯಿಂದಲೇ ಪರಿವರ್ತನೆಯಾದನು, ನಾವಾದರೋ ಹಲವು ಸಂದರ್ಭಗಳಲ್ಲಿ ಪಾಠ ತಿಳಿದುಕೊಂಡರೂ ಪರಿವರ್ತನೆಯ ದಾರಿ ಹಿಡಿಯುವುದು ಅಪರೂಪವಾಗಿದೆ. ನಾವೆಲ್ಲರೂ ನಮ್ಮದೇ ಚಿಂತನೆಗಳನ್ನು ಸರಿ ಎಂದುಕೊಂಡು ಬದುಕುತ್ತೇವೆ. ಆದರೆ ನಮ್ಮ ಚಿಂತನೆಯನ್ನೂ ಮೀರಿದ ವ್ಯವಸ್ಥೆಯಿದೆ ಎನ್ನುವುದು ಮರೆತೇ ಬಿಟ್ಟಾಗ ಗೊಂದಲದ ಪರಿಸ್ಥಿತಿ ನಿರ್ಮಾಣಗೊಳ್ಳುತ್ತದೆ. ದೇವರು ಅವರವರ ಭಾವಕ್ಕೆ ಎಂದು ಒಪ್ಪುವ ಆದರೆ ಮಾನವ ಶಕ್ತಿಯನ್ನೂ ಮೀರಿದ ಅಗಾಧ ಶಕ್ತಿಯೊಂದಿದೆ ಹಾಗೂ ಆ ಶಕ್ತಿಯು ಈ ಬ್ರಹ್ಮಾಂಡದ ಅಣುರೇಣು ತೃಣಕಾಷ್ಠಗಳೊಳಗೂ ಅದು ಮನೆ ಮಾಡಿದೆ. ಸಮಷ್ಟಿಯ ಸಾಕಾರ ರೂಪವೇ ಆ ಶಕ್ತಿ ಅದರ ಯೋಜನೆ ಅಭಿಯೋಜನೆಗಳು ನಮ್ಮ ಯೋಜನೆ, ಯೋಚನೆಗಳನ್ನೂ ಮೀರಿವೆ. ಯಾಕೆಂದರೆ ನಾವು ತೀರಾ ಸೀಮಿತವಾಗಿ ನಮ್ಮ ಒಳಿತಿಗಾಗಿ ಮಾತ್ರ ಯೋಜಿಸುತ್ತೇವೆ ಆದರೆ ನಾವು ದೇವರು ಎಂದು ಕರೆಯುವ ಆ ಶಕ್ತಿಯು ಸಮಷ್ಠಿಗಾಗಿ ಅಭಿಯೋಜಿಸುತ್ತದೆ.
ಚೀನಾ ದೇಶದ ಸುಂದರ ಕಥೆಯೊಂದಿದೆ. ಅಲ್ಲಿ ಒಬ್ಬ ಮುದುಕ ತನ್ನ ಒಬ್ಬನೇ ಮಗ ಹಾಗೂ ಒಂದೇ ಕುದುರೆಯೊಂದಿಗೆ ಮನೆಯಾಗಿದ್ದನು. ಯಾವ ವಿಷಯದಲ್ಲಿಯೂ ಒಳ್ಳೆಯದೋ ಕೆಟ್ಟದೋ ದೈವಚಿತ್ತ ಅನ್ನುತ್ತಿದ್ದನು. ಒಮ್ಮೆ ಆತನ ಗಂಡುಕುದುರೆ ಕಾಡಿಗೆ ಹೋದದ್ದು ಹಿಂದೆ ಬರಲೇ ಇಲ್ಲವಂತೆ, ಆಗ ಊರ ಜನರೆಲ್ಲರೂ ಬಂದು ಅಯ್ಯೋ ಅಜ್ಜಯ್ಯ ಭಾರಿ ನಷ್ಟವಾಯ್ತಲ್ಲೋ, ಇದ್ದ ಒಂದು ಕುದುರೆಯೂ ಹೋಯ್ತಲ್ಲೊ ಎಂದು ಅವನನ್ನು ಸಾಂತ್ವಾನಗೊಳಿಸತೊಡಗಿದರು. ಅವನಾದರೋ ಶಾಂತನಾಗಿ ನಷ್ಟವೋ ಲಾಭವೋ ದೈವಚಿತ್ತ ಎಂದು ಉತ್ತರಿಸಿದನು. ಕೆಲವೇ ದಿನಗಳಲ್ಲಿ ಆ ಗಂಡು ಕುದುರೆಯು ದೊಡ್ಡದೊಂದು ಹೆಣ್ಣು ಕುದುರೆಗಳ ಮಂದೆಯನ್ನು ಕರೆದು ಹಿಂದಕ್ಕೆ ಬಂದಿತ್ತಂತೆ. ಈಗ ಒಂದು ಕುದುರೆಯಿದ್ದ ಮುದುಕನ ಮನೆಯಲ್ಲಿ ನೂರಾರು ಕುದರೆಗಳಾದವು. ಪುನಃ ಜನರೆಲ್ಲ ಓಡಿ ಬಂದರು ಅಯ್ಯಾ ಮುದುಕ ನಿನಗೇನು ಸುಖ ಒಂದೇ ಪೆಟ್ಟಿಗೆ ನೀನು ಶ್ರೀಮಂತನಾದಿಯಲ್ಲೋ ನಿನಗೆಷ್ಟು ಕುದುರೆಗಳು ದೊರೆತವು ಎಂದು ಸಂತೋಷಪಟ್ಟರು. ಆಗ ಮುದುಕನು ಸುಖವೋ ದುಃಖವೋ ದೈವಚಿತ್ತ ಎಂದು ಸಮಭಾವವನ್ನು ತೋರಿಸಿದನು. ಆ ಹೊಸ ಕುದುರೆಗಳನ್ನು ತರಬೇತು ಮಾಡುತ್ತಿದ್ದ ಮುದುಕನ ಮಗ ಒಮ್ಮೆ ಕುದುರೆಯ ಮೇಲಿಂದ ಬಿದ್ದು ತನ್ನ ಕಾಳು ಮುರಿದುಕೊಂಡನು ಆಗ ಪುನಃ ಹಳ್ಳಿಯ ಜನರು ಒಡೋಡಿ ಬಂದು ಅಯ್ಯಾ ಮುದುಕನೇ ಇದೇನು ಅನ್ಯಾಯವಾಯ್ತು ಇರುವ ಒಬ್ಬ ಮಗನ ಕಾಲೇ ಮುರಿದು ಹೋಯ್ತಲ ಎಂದು ಸಂಕಟ ವ್ಯಕ್ತಪಡಿಸಿದರು. ಆಗಲೂ ಮುದುಕನು ಅನ್ಯಾಯವೋ ನ್ಯಾಯವೋ ದೈವಚಿತ್ತ ಎಂದು ಸಮಸ್ಥಿತಿಯಿಂದ ಉತ್ತರಿಸಿದನು. ಆ ದೇಶದ ಮೇಲೆ ಶತ್ರುಗಳ ದಾಳಿಯಾಗಲು ಅರಸನು ಎಲ್ಲಾ ಯುವಕರು ಸೈನ್ಯಕ್ಕೆ ಸೇರಬೇಕೆಂದು ಕಡ್ಡಾಯ ಮಾಡಿದನು. ಆದರೆ ಮುದಕನ ಮಗನು ಕಾಲು ಮುರಿದವನಾಗಿದ್ದ ಕಾರಣ ಸೇನೆಗೆ ಸೇರುವಂತಿರಲಿಲ್ಲ. ಆದ್ದರಿಂದ ಮುದುಕನ ಮಗನು ತಂದೆಯ ಬಳಿ ಉಳಿದನು. ಪುನಃ ಜನರು ಮುದುಕನ ಬಳಿ ಒಡೋಡಿ ಬಂದು ಅಯ್ಯಾ ಮುದುಕ ನೀನೆ ಭಾಗ್ಯವಂತ ನಿನ್ನ ಮಗನೊಬ್ಬನೇ ಊರಲ್ಲಿ ಉಳಿದವನು ಎಂದು ಉಲ್ಲಾಸ ತೋರಿದರು. ಮುದುಕನು ಎಂದಿನಂತೆ ಭಾಗ್ಯವೋ ದೌರ್ಭಾಗ್ಯವೋ ದೈವಚಿತ್ತ ಎಂದನಂತೆ.
ಸಾಮಾನ್ಯವಾಗಿ ಮಾನವ ಆಲೋಚನೆಗಳು ಉದಾತ್ತ ಚಿಂತನೆಯಿಂದ ತುಂಬಿಕೊಂಡಿಲ್ಲ ದೈವಚಿತ್ತದಂತೆ ಆಲೋಚಿಸಲು ನಮಗೆ ತುಂಬಾ ಕಷ್ಟ. ಗೀತೆಯಲ್ಲಿ ಹೇಳಿರುವಂತೆ ರೋಧಿಸಲು ನೀನೇನು ತಂದಿರುವೆ? ನಿನ್ನೆ ಯಾರದೋ ಆಗಿತ್ತು ಇಂದು ನಿನ್ನದಾಗಿದೆ. ನಾಳೆ ಮತ್ತ್ಯಾರದೋ ಆಗಿರುತ್ತದೆ ಇಂತಾಹ ಸ್ಥಿತಪೃಜ್ಞತೆಯು ಖಂಡಿತವಾಗಿ ನಮ್ಮಲ್ಲಿ ಆಲೋಚನಾ ವೈಶಾಲ್ಯ ಉಂಟು ಮಾಡಬಹುದು.
ನಮ್ಮ ದೃಷ್ಟಿಯು ಕೂಡಾ ಲೌಕಿಕದ ನೆಲೆಯಿಂದ ಸೃಷ್ಟಿಯಾಗಿದೆ ನಮಗೆ ಶ್ರೀಮಂತರೆಂದರೆ ಧನಕನಕ ಉಳ್ಳವರು, ನಮ್ಮ ಸಂಬಂಧ ಸಂಪರ್ಕಗಳು ಅಂತವರೊಡನೆಯೇ ಆದರೆ ದೇವರಿಗಾದರೋ ಬಡ ನಿರ್ಗತಿಕರು ತೀರಾ ಆಪ್ತರು ಬುದ್ಧನಿಗೆ ಆಮ್ರಪಾಲಿ ನೀಡಿದ ಅರೆಹಣ್ಣೇ ಶ್ರೀಮಂತ ಭಕ್ತರ ರಾಶಿರಾಶಿ ಕೊಡುಗೆಗಳಿಗಿಂತ ಹೆಚ್ಚಿನದಾಯ್ತು. ರಾಶಿರಾಶಿ ದುಡ್ಡನ್ನು ಸುರಿಯುವವರಿಗಿಂತಲೂ ಎರಡು ನಾಣ್ಯ ಹಾಕಿದ ವಿಧವೆಯ ಕಾಣಿಕೆ ಯೇಸುವಿಗೆ ಹೆಚ್ಚಿನದಾಗಿತ್ತು. ವಸುದೈವ ಕುಟುಂಬಕಮ್ ಎನ್ನುವ ಸತ್ಯವನ್ನು ನಂಬಿದವರು ನಾವು. ಅಖಂಡ ಮಾನವ ಕುಲಕ್ಕೆ ಸುಖವಾದಾಗ ನನಗೆ ಸುಖ ಎಂಬ ಚಿಂತನೆ ಬೆಳೆಸಿಕೊಂಡಂತೆ ನಮ್ಮ ಚಿಂತನೆಯು ಸಮಸ್ಥಿತಿಯ ಚಿಂತನೆ ಆಗಿ ಬೆಳೆಯುವುದು ಸಾಧ್ಯವಿದೆ. ಮಾನವನ ಆಸೆಗಳು ಅವನಿಗೆ ದೇವರ ಇಚ್ಛೆಯಂತೆ ಮುಂದುವರಿಯಲು ಹಾಗೂ ಮಾನವನ ಹಾಗೂ ದೇವರ ಆಲೋಚನೆಗಳ ದಾರಿ ಒಂದಾಗಲಿಕ್ಕೆ ಸುಲಭ ಸಾಧ್ಯವಿದೆ.
ಬಡತನ ಶಾಶ್ವತವಲ್ಲ
ಸ್ಟೀವನ್ ಕ್ವಾಡ್ರಸ್ ಪೆರ್ಮುದೆ, 9480761017
ಬಡತನ ಅಂದರೇನು ಎಂಬ ಪ್ರಶ್ನೆ ಬಹಳ ಕಾಲದಿಂದ ಮನುಕುಲವನ್ನು ಕಾಡಿದೆ. ಸಂಪತ್ತಿಲ್ಲದಿರುವ ಸ್ಥಿತಿಯಲ್ಲಿ ಹುಟ್ಟಿ ಬೆಳೆಯುವುದು ಬಡತನವೆಂದು ನಾವು ಸಾಮಾನ್ಯವಾಗಿ ತಿಳಿದಂತಿದೆ. ಆರ್ಥಿಕ ಬಡತನದ ಕುರಿತಷ್ಟೇ ಚಿಂತೆಯೆ? ಹೌದು ಎಂದಾದರೆ ಅದು ಎಷ್ಟು ಸರಿ. ದುಡ್ಡಿಲ್ಲದವನು ಗುಣ ಸಂಪನ್ನನಾಗಿರಬಹುದು ಹಲವು ಪ್ರತಿಭೆಗಳ ಆಗರವಾಗಿರಬಹುದು ಅದೆಲ್ಲವನ್ನು ಮರೆತು ದುಡ್ಡಿಲ್ಲದಿರುವಿಕೆಯ ಸುತ್ತ ಮಾತ್ರ ನಮ್ಮ ಆಲೋಚನೆಯೆ? ಅಪಾರ ಸಂಪತ್ತು ಉಳ್ಳವನು ಅದೊಂದನ್ನು ಹೊರತುಪಡಿಸಿ ಉಳಿದೆಲ್ಲ ವಿಷಯಗಳಲ್ಲಿ ತೀರಾ ಬಡವನಾಗಿರಬಹುದು. ಸಾಮಾಜಿಕವಾಗಿ ನೈತಿಕವಾಗಿ ದುರ್ಬಲನಾದವನು ಆರ್ಥಿಕವಾಗಿ ಎಷ್ಟೇ ಬಲಿಷ್ಠನಾಗಿದ್ದರೂ ಬಡವನೇ ಅಲ್ಲವೆ?
ಆರ್ಥಿಕ ಬಡತನವನ್ನಷ್ಟೇ ಬಡತನವೆಂದುಕೊಂಡರೆ ನನಗೆ ಮೈಕ್ರೋಸಾಫ್ಟ್ ಕಂಪೆನಿಯ ಸಂಸ್ಥಾಪಕ ಬಿಲ್ಗೇಟ್ಸ್ನ ಮಾತು ನೆನಪಾಗುತ್ತದೆ. ಅವರು ಆರ್ಥಿಕ ಬಡತನದಲ್ಲಿ ಹುಟ್ಟುವುದು ತಪ್ಪಲ್ಲ ಆದರೆ ಆರ್ಥಿಕ ಬಡತನದಲ್ಲಿಯೇ ಸಾಯುವುದು ತಪ್ಪು ಎಂಬ ಚಿಂತನೆಯನ್ನು ನೀಡಿದ್ದಾರೆ. ಅಂದರೆ ಮಾನವ ಪ್ರಯತ್ನದಿಂದ ತಾನು ಆರ್ಥಿಕ ಬಡತನದ ಬಲೆಯಿಂದ ಹೊರ ಬರಬಹುದೆಂದಲ್ಲವೆ? ಈ ಮಾತಿನಲ್ಲಿಯೇ ಬಡತನ ಶಾಶ್ವತವಲ್ಲ ಎನ್ನುವ ಚಿಂತನೆ ಅಡಗಿದೆಯಲ್ಲವೆ.
ಬಡವನ ಬದುಕಿನ ಬವಣೆಯ ಕುರಿತು ವಿಪರೀತವಾಗಿ ಚಿಂತೆ ಮಾಡುವ ದೇಶ ಭಾರತ. ಆದರೆ ಬಡವನಲ್ಲಿ ಇರುವ ಅಪಾರ ಸಂಪತ್ತನ್ನು ಗುರುತಿಸುವಲ್ಲಿ ನಾವು ಸ್ವಲ್ಪ ಹಿಂದೆಯೇ ಅನ್ನಬಹುದು. ಸ್ವನಿರಾಕರಣೆಯ ಚಿಂತನೆ ಧಾರ್ಮಿಕ ಹಾಗೂ ಆಧ್ಯಾತ್ಮಿಕ ದೃಷ್ಟಿಯಿಂದ ಅತಿ ಮಹತ್ವದ ಹಾಗೂ ಉತ್ತಮವಾದ ಮೌಲ್ಯ ಆದರೆ ನಮ್ಮ ಲೌಕಿಕ ಬದುಕಿನಲ್ಲಿ ಸ್ವನಿರಾಕರಣೆ ಅತಿಯಾದಾಗ ನಮ್ಮ ಬಡತನದ ಚಿಂತನೆ ಮಾತ್ರ ನಮ್ಮನ್ನು ಕಾಡುತ್ತದೆಯಲ್ಲದೆ ಆ ಬವಣೆಯಿಂದ ಹೊರಬರುವ ದಾರಿ ಕಾಣದಂತಾಗುತ್ತದೆ. ತನ್ನನ್ನೇ ತಿರಸ್ಕರಿಸುವಾತ ಯಾವುದೇ ಒಳಿತನ್ನು ಗುರುತಿಸವಲ್ಲಿ ವಿಫಲನಾಗುತ್ತಾನೆ.
ನಮ್ಮ ದೇಶದ ರಾಷ್ಟ್ರಪತಿಗಳ ಸಾಲಿನಲ್ಲಿಯೇ ಕಂಗೊಳಿಸುವ ಡಾ. ಕೆ ಆರ್ ನಾರಾಯಣನ್ ಒಂದು ಹೊತ್ತಿನ ತುತ್ತಿಗೂ ಗತಿಯಿಲ್ಲದ ತೀರಾ ಬಡ ಕುಟುಂಬದಿಂದ ಬೆಳೆದುಬಂದರು ಆದರೆ ಸಾಯುವ ಮುನ್ನ ಅವರು ಭಾರತ ಗಣತಂತ್ರದ ಅಧ್ಯಕ್ಷರಾಗಿ ಮಾತ್ರವಲ್ಲ ಸಮಕಾಲೀನ ವಿಶ್ವದ ಮಹಾನ್ ಪಂಡಿತರ ಪೈಕಿ ಒಬ್ಬರೆಂದು ಹೆಸರಾದರು. ಅದೇ ರೀತಿ ವಿಶ್ವದ ಖ್ಯಾತ ಭೌತವಿಜ್ಞಾನಿ ಭಾರತೀಯ ಕ್ಷಿಪಣಿ ತಂತ್ರಜ್ಞಾನದ ಪಿತಾಮಹ ಎಂದೆಲ್ಲ ಹೆಸರಾಗಿರುವ ನಮ್ಮ ಮಾಜಿ ರಾಷ್ಟ್ರಪತಿ ಎ ಪಿ ಜೆ ಅಬ್ದುಲ್ ಕಲಾಮ್ ತೀರಾ ಬಡ ಹಿನ್ನಲೆಯಿಂದ ಬಂದು ಲೋಕಜೀವನದ ಉತ್ತುಂಗಕ್ಕೆ ಏರಿ ತಮ್ಮ ಸಾಮರ್ಥ್ಯವನ್ನು ಜಗಜ್ಜಾಹೀರುಗೊಳಿಸಿದರು. ಬಡತನವನ್ನು ಮೀರಿದವರ ಸಾಲಿನಲ್ಲಿ ಧೀರೂಭಾಯಿ ಅಂಬಾನಿಯವರ ದಾಖಲೆಯನ್ನು ಆಗಾಗ ನೀಡಲಾಗುತ್ತಿದೆ, ತೀರಾ ಬಡ ಕುಟುಂಬದಿಂದ ಬಂದ ಅವರು ಲೋಕದಲ್ಲಿ ಶ್ರೀಮಂತ ಉದ್ದಿಮೆ ಸಾಮ್ರಾಜ್ಯವೊಂದನ್ನು ತಮ್ಮ ಮಕ್ಕಳಿಗಾಗಿ ನಿರ್ಮಿಸಿ ಹೋದರು.
ನಿರ್ಗತಿಕರ ಸೇವೆಯಲ್ಲಿಯೇ ಸ್ವರ್ಗ ಕಂಡ ಮದರ್ ತೆರೇಸಾ, ಯುರೋಪಿನ ಸರ್ವಕಾಲಿಕ ಶ್ರೇಷ್ಠ ದಂಡನಾಯಕನಾದ ನೆಪೋಲಿಯನ್ ಬೋನಾಪಾರ್ಟ್, ಭಾರತದ ಸಂವಿಧಾನದ ಸಂರಚಕರಾದ ಬಿ ಆರ್ ಅಂಬೇಡ್ಕರ್, ಇಂಗ್ಲೆಂಡಿನ ಶ್ರೇಷ್ಠ ಪ್ರಧಾನಮಂತ್ರಿ ವಿನ್ಸ್ಟನ್ ಚರ್ಚಿಲ್, ಬಡ ಕರಿಯರ ಮನೆಯಲ್ಲಿ ಹುಟ್ಟಿ ಅಮೇರಿಕಾ ಸಂಯುಕ್ತ ಸಂಸ್ಥಾನದ ಅಧ್ಯಕ್ಷರಾದ ಬರಾಕ್ ಒಬಾಮಾ ತೀರಾ ಬಡತನದ ಹಿನ್ನಲೆಯಿಂದ ಬಂದವರೆಂಬುದನ್ನು ನಾವು ಮರೆಯುವುದಾದರೂ ಹೇಗೆ.
ಬಡತನ ಶಾಶ್ವತವಲ್ಲ ಎನ್ನುವ ಸತ್ಯವನ್ನು ಪಂಡಿತರು ನಾಲ್ಕು ಹಂತಗಳಿಂದ ಶ್ರುತಪಡಿಸುತ್ತಾರೆ. ಒಂದು ಕುಟುಂಬ ನಿರ್ಗತಿಕವಾದಾಗ ಮೊತ್ತಮೊದಲು ಆ ಕುಟುಂಬ ತನಗೆ ನೆಲೆಯನ್ನು ಹುಡುಕಲು ಪ್ರಯತ್ನಿಸಬೇಕು. ಈ ಪ್ರಯತ್ನದಲ್ಲಿ ಸಮಾಜದ ಇತರ ಘಟಕಗಳು ಸಹಾಯ ನೀಡಬೇಕು. ಒಂದು ನೆಲೆಯನ್ನು ಸಂಪಾದಿಸಿಕೊಳ್ಳುವುದು ನಿರ್ಗತಿಕತನದಿಂದ ಹೊರಬರುವಲ್ಲಿ ಪ್ರಥಮ ಹಾಗೂ ಮಹತ್ವದ ಹೆಜ್ಜೆ ಆನಂತರ ಕುಟುಂಬವು ತನ್ನ ಬಡತನ ಕಳೆದುಕೊಳ್ಳಬೇಕಾದ ದೀರ್ಘಾವಧಿ ಕಾರ್ಯಯೋಜನೆ ಹಾಕುಕೊಳ್ಳುವಂತೆ ಪ್ರೇರೇಪಿಸಬೇಕು. ಈ ಕಾರ್ಯಯೋಜನೆಯಲ್ಲಿ ಶಿಕ್ಷಣದ ಮೂಲಕ ಬಡತನವನ್ನು ಎದುರಿಸುವ ಅಂಶ ಮಹತ್ವದ್ದಾಗಿರಬೇಕು. ಮೂರನೇ ಹಂತದಲ್ಲಿ ಕುಟುಂಬವು ಉದ್ಯೋಗದ ಹುಡುಕಾಟ ಮಾಡುವಂತಾಗಬೇಕು. ಉದ್ಯೋಗ ಎಂದಾಗ ಉನ್ನತ ಸ್ಥರೀಯ ಉದ್ಯೋಗವನ್ನೇ ಕಾಯಬೇಕಾಗಿಲ್ಲ, ಸ್ವ ಉದ್ಯೋಗ, ಇತರ ಕೆಳಸ್ಥರದ ಉದ್ಯೋಗಗಳು ಕೂಡಾ ಒಬ್ಬ ವ್ಯಕ್ತಿಯನ್ನು ಬಡತನದ ಬಲೆಯಿಂದ ಹೊರತರಬಹುದು. ನಾಲ್ಕನೇ ಹಾಗೂ ಕೊನೆಯ ಹಂತದಿಂದ ಕುಟುಂಬವು ತನ್ನ ಆರ್ಥಿಕ ನೆಲೆಯನ್ನು ಬಲಪಡಿಸಿಕೊಳ್ಳಲು ಉಳಿತಾಯದ ಹವ್ಯಾಸವನ್ನು ರೂಡಿಸಿಕೊಳ್ಳಬೇಕು. ಇದಕ್ಕಾಗಿ ಚಾಳಿ ಚಟಗಳಿಂದ ದೂರವಾಗುವುದು, ಅನಗತ್ಯ ವೆಚ್ಚವನ್ನು ಕಡಿತಗೊಳಿಸುವುದು ತೀರಾ ಅಗತ್ಯವಾಗಿದೆ.
ವಾಸ್ತವವಾಗಿ ಬಡವರಾಗಿ ಹುಟ್ಟಿದವರು ಬಡವರಾಗಿಯೇ ಬದುಕುತ್ತಾರೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು. ಮಾನವ ಪ್ರಯತ್ನಕ್ಕೆ ಮಿಗಿಲಾದುದು ಯಾವುದೂ ಇಲ್ಲ. ಮಾನವ ಪ್ರಯತ್ನದಿಂದ ಯಾವುದೇ ಹಂತದಲ್ಲಿರುವ ವ್ಯಕ್ತಿ ಆರ್ಥಿಕವಾಗಿ ಉನ್ನತ ಸ್ಥರಕ್ಕೆ ಏರಬಲ್ಲವನೆಂಬ ಸತ್ಯವನ್ನು ಇನ್ಫೊಸಿಸ್ ಸಂಸ್ಥೆಯ ನಾರಾಯಣ ಮೂರ್ತಿ, ಲಕ್ಷ್ಮೀ ಮಿತ್ತಲ್ ಮುಂತಾದವರು ನಮಗೆ ಶ್ರುತಪಡಿಸಿದ್ದಾರೆ.
ಮಾನವ ಪ್ರಯತ್ನವನ್ನು ಮೀರಿದ್ದು ಯಾವುದೂ ಇಲ್ಲ ಯಾಕೆಂದರೆ ಮಾನವನು ಲೋಕದ ಮೇಲಿರುವ ದೇವರ ಪ್ರತಿರೂಪ. ಏನನ್ನು ಸಾಧಿಸಲಿಲ್ಲ ಮಾನವ? ತನ್ನ ಬಡತನದ ಬಂಧನದಿಂದ ಹೊರಬರಲು ಆತನಿಂದ ಅಸಾಧ್ಯವೇ? ದುಡಿಮೆಯೇ ಬಡತನದ ದೊಡ್ಡ ಶತ್ರು, ದುಡಿಯದವನು ಹೇಗಾದರೂ ಉನ್ನತ ಸಾಮಾಜಿಕ ಆರ್ಥಿಕ ಸ್ಥಾನಮಾನಗಳಿಗೆ ಏರುವನು? ನಮ್ಮಲ್ಲಿ ದುಡಿಮೆ ಎಂದರೆ ಮೇಲ್ಸ್ಥರದ ಉದ್ಯೋಗವೇ ಸರಿ ಎಂಬ ಕಲ್ಪನೆ ಇದೆ ಆದರೆ ನಮ್ಮ ನಮ್ಮ ಮನೆಗಳ ಸುತ್ತ ಇರುವ ಸಣ್ಣ ಪಟ್ಟ ಅವಕಾಶಗಳತ್ತ ಗಮನಿಸಿದರೆ ಸ್ವಂತ ನೆಲೆಯಲ್ಲಿ ಬೆಳೆಯಲು ಬೇಕಾದ ಅನುಕೂಲಕರವಾದ ಸಂದರ್ಭಗಳು ನಮಗಾಗಿ ಕಾಯುತ್ತಾ ಇವೆ. ಕೂತು ಉಂಡರೆ ಕುಡಿಕೆ ಹೊನ್ನ ಸಾಲದು, ದುಡಿದು ಉಂಡರೆ ದಾರಿದ್ರ್ಯವು ಎಂದೂ ಬಳಿಬಾರದು ಹಾಗೆಯೇ ಆಗಲಿ ಎಂದು ಆಶಿಸೋಣವೇ?
ದೃಷ್ಟಿ ದೀಪ
ಸ್ಟೀವನ್ ಕ್ವಾಡ್ರಸ್ ಪೆರ್ಮುದೆ 9480761017
ಕುರುಡನೊಬ್ಬ ಕಾಡು ದಾಟುವ ಸಂದರ್ಭದಲ್ಲಿ ಲಾಟೀನು ಖರೀದಿಸಿದ ಸುಂದರ ಕಥೆ ನಾವು ಹಳೆ ಕಾಲದಿಂದ ಓದುತ್ತಾ ಬಂದಿದ್ದೇವೆ. ಅಂಗಡಿಯಾತ ಅಯ್ಯೋ ಪುಣ್ಯಾತ್ಮ ನೀನಂತೂ ಹುಟ್ಟಾ ಕುರುಡ, ಲಾಟೀನು ಯಾವ ಸುಖಕ್ಕೆ? ಎಂದು ಪ್ರಶ್ನಿಸಿದಾಗ, ಇದು ನನಗಲ್ಲ ನನ್ನ ದಾರಿಯಲ್ಲಿ ಇದಿರು ಬರುವವರ ಅನುಕೂಲಕ್ಕಾಗಿ ಅಂದನಂತೆ ಆ ಕುರುಡ. ಅದೆಂತಹ ಉದಾತ್ತ ಚಿಂತನೆ ಕುರುಡನದ್ದು ಅಂದುಕೊಂಡಿರಲ್ಲ? ಕಥೆಯ ಮುಂದಿನ ಭಾಗ ಏನೆಂದರೆ, ಲಾಟೀನು ಹಿಡಿದು ಹೋದ ಅವನಿಗೆ ಎದುರಿನಿಂದ ಬಂದವನೊಬ್ಬ ಅಪ್ಪಳಿಸಿಯೆ ಬಿಟ್ಟ. ಆಗ ಕುರುಡ, ಅಯ್ಯಾ ಪುಣ್ಯಾತ್ಮ, ನಾನಂತೂ ಕುರುಡ, ಅನ್ಯರಿಗೆ ಅನುಕೂಲವಾಗಲಿ ಎಂದು ಲಾಟೀನು ಹಿಡಿದು ಬರುತ್ತಿದ್ದೇನೆ, ಆದರೂ ನೀನು ನನಗೆ ಡಿಕ್ಕಿ ಹೊಡೆದೆಯಲ್ಲ ನೀನೂ ಕುರುಡನೇ ಏನು? ಎಂದು ನೋವು ತುಂಬಿ ಪ್ರಶ್ನಿಸಿದ ಆಗ ಡಿಕ್ಕಿ ಹೊಡೆದವನು, ಎಲೈ ಸಜ್ಜನ ಮಿತ್ರನೇ, ನೀನು ನಮ್ಮ ಅನುಕೂಲಕ್ಕಾಗಿ ಲಾಟೀನು ಹಿಡಿದಿರುವುದೇನು ನಿಜ ಆದರೆ ಆ ಲಾಟೀನಿನಲ್ಲಿ ಎಣ್ಣೆ ಹಾಕಿ ಬತ್ತಿ ಉರಿಸಿ ಬೆಳಕು ಮಾಡಲು ಮರೆತಿರುವೆ ಇಂತಹ ಬೆಳಕಿಲ್ಲದ ಲಾಟೀನಿನ ಉಪಯೋಗವಾದರೂ ಏನು? ಎಂದು ಸತ್ಯ ವಿಷಯವನ್ನು ಹೊರ ತಂದನು.
ನಮ್ಮೆಲ್ಲರ ಬದುಕೂ ಹೀಗೆಯೆ ಅಲ್ಲವೆ. ನಮ್ಮ ಪೈಕಿ ಕೆಲವರು ಕಣ್ಣಿಲ್ಲದೆ ಕುರುಡರು ಹಲವರು ಕಣ್ಣಿದೂ ಕುರುಡರು. ಈ ಎರಡು ಮಹತ್ವದ ಕಾಣದಿರುವಿಕೆಯನ್ನು ನಾವು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕಾಗಿದೆ. ಮೊದಲನೆಯ ರೀತಿಯಲ್ಲಿ ಭೌತಿಕ ಕಣ್ಣಿಲ್ಲದೆ ಇರುವುದು ಅಂಗವಿಕಲತೆ. ಅವರಿಗೆ ನಮ್ಮ ಅನುಕಂಪವಿರಲಿ. ಹಲವಾರು ವೈದ್ಯಕೀಯ ಕಾರಣದಿಂದ ಜನ್ಮಾರಭ್ಯ ಅಥವಾ ಆ ನಂತರ ಅವರು ದೃಷ್ಟಿಹೀನರಾಗಿದ್ದಾರೆ. ಇಂದು ಮಾನವನು ಫಲಿಸಿಕೊಂಡಿರುವ ವೈದ್ಯಕೀಯ ಸಂಶೋಧನೆಗಳ ಫಲವಾಗಿ ಮಾನವರೆಲ್ಲರೂ ದೃಢಸಂಕಲ್ಪ ಮಾಡಿದರೆ ದೈಹಿಕ ಅಂಧತ್ವದ ವಿರುದ್ಧ ವ್ಯವಸ್ಥಿತ ಹೋರಾಟ ನಡೆಸಿ ಎಲ್ಲರೂ ಕಣ್ಣನ್ನು ಹೊಂದುವಂತಹ ವ್ಯವಸ್ಥೆ ರೂಪಿಸಬಹುದಾಗಿದೆ. ಆರೋಗ್ಯಕರ ಕಣ್ಣು ಹೊಂದಿರುವವರೆಲ್ಲರೂ ತಮ್ಮ ಜೀವಿತದ ನಂತರ ನೇತ್ರದಾನ ಮಾಡುವ ಸಂಕಲ್ಪ ಮಾಡಿ ಜಗದ ಜನರೆಲ್ಲರೂ ಕಣ್ಣು ಹೊಂದಿದವರಾಗಿ ಮಾಡಬಹುದಾಗಿದೆ. ನಮ್ಮ ಇಷ್ಟೊಂದು ಸುಂದರ ಕಣ್ಣುಗಳು ಮಣ್ಣಲ್ಲಿ ಮಣ್ಣಾಗದಿರಲಿ.
ನಮಗೆ ಲಭಿಸಿರುವ ಅತಿ ದೊಡ್ಡ ಕೊಡುಗೆಯಾದ ಕಣ್ಣನು ಜಾಗರೂಕತೆಯಿಂದ ಉಳಿಸಲು ಶ್ರಮಿಸಬೇಕು. ಪಟಾಕಿ, ಅತೀವ ಬೆಳಕಿನ ಕಿರಣಗಳು, ವಿಪರೀತ ಸೂರ್ಯರಶ್ಮಿ ಮುಂತಾದವುಗಳಿಂದ ನಮ್ಮ ಕಣ್ಣನ್ನು ಕಾಪಾಡಬೇಕು. ಯಾವುದೇ ವಸ್ತು ನಮ್ಮಲ್ಲಿ ಇದ್ದಾಗ ಅದರ ಬೆಲೆ ತಿಳಿಯದು ಅದನ್ನು ಕಳೆದುಕೊಂಡಾಗ ಮಾತ್ರ ಅಯ್ಯೋ ಎಂದು ಹಳಹಳಿಸುತ್ತೇವೆ, ನಮ್ಮ ಕಣ್ಣುಗಳ ಸಂರಕ್ಷಣೆ ನಮ್ಮ ಆದ್ಯ ಜವಾಭ್ಧಾರಿ ಆಗಲಿ.
ಈ ದೈಹಿಕ ಕುರುಡುತನವನ್ನು ಮೀರಿದ ಕುರುಡುತನವೊಂದಿದೆ ಅದೇ ಕಣ್ಣಿದ್ದು ಕಾಣದಂತಿರುವಿಕೆ. ಬದುಕಿನ ಹಲವಾರು ಸಂದರ್ಭಗಳಲ್ಲಿ ನಮ್ಮಲ್ಲಿ ಹೆಚ್ಚಿನವರು ಕಣ್ಣು ಬಿಟ್ಟು ನೋಡುತ್ತಾ ಕಾಣದಂತಿರುತ್ತೇವೆ. ಕೇನೋಪನಿಷದಿನ ಗುರು ಶಿಷ್ಯರ ಸಂವಾದದಲ್ಲಿ ಕಾಣುವಿಕೆಯ ಕುರಿತಾದ ಪ್ರಶ್ನೆಯನ್ನು ಸ್ಪಷ್ಟವಾಗಿ ಮುಂದಿಡಲಾಗಿದೆ. ಕಾಣುವುದು ಯಾರು ? ಕಣ್ಣು ಕಾಣುವುದೋ? ಕಣ್ಣಿಂದ ಕಾಣುವುದೊ? ನಮ್ಮೊಳಗಿರುವ ಕಾಣುವ ಆ ಅದು ಯಾವುದು ? ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ಆನು ನಾನು ನೀನು ತಾನು ಸೇರಿ ನಾಕುತಂತಿ ಎಂದಿದ್ದಾರೆ. ಆ ನಾಕು ತಂತಿಗಳು ಒಂದಾಗಿ ಕಾಣುವ ಆ ನಿಜವಾದ ದೃಷ್ಟಿಯೇ ದೀಪ. ಹೊರಗಣ್ಣನ್ನು ಮೀರಿದ ಆ ನಿಜವಾದ ಕಣ್ಣು ತೆರೆದಾಗ ಅದೇ ನಿಜವಾದ ದೀಪ. ಯೇಸು ಕ್ರಿಸ್ತನು ಕುರುಡರಿಗೆ ಕಣ್ಣು ನೀಡಿದನು ಎಂದು ಸುವಾರ್ತೆಯಲ್ಲಿ ಬರೆಯಲಾಗಿದೆ. ನಿಜವಾಗಿ ಆತನು ನೀಡಿದ್ದು ಬಾಹ್ಯ ಕಣ್ಣೊ? ಅಲ್ಲ ತೆರೆಸಿದ್ದು ಆಂತರ್ಯದ ದೃಷ್ಟಿಯೋ? ಎನ್ನುವ ಪ್ರಶ್ನೆ ಇಂದಿಗೂ ಇದೆ. ಬೌದ್ಧ ಜಗದ್ಗುರು ದಲಾಯ್ ಲಾಮ ಇದನ್ನೇ ಒಳಗಣ್ಣು ಧನಾತ್ಮಕವಾಗಿ ತೆರೆಯದಿದ್ದರೆ ಹೊರಗಣ್ಣು ಅದೆಷ್ಟೋ ಸುಂದರವಾಗಿದ್ದರೂ ನಿಷ್ಪ್ರಯೋಜಕ ಅಂದಿರುವುದು.
ಮಕ್ಕಳ ಹಕ್ಕುಗಳು
ಸ್ಟೀವನ್ ಕ್ವಾಡ್ರಸ್ ಪೆರ್ಮುದೆ, 9480761017
ಮಕ್ಕಳ ಹಕ್ಕುಗಳ ಬಗ್ಗೆ ಇಂದು ವಿಸ್ತೃತ ಚರ್ಚೆಯಾಗುತ್ತಿದೆ. ಇಲ್ಲಿ ಮೊತ್ತಮೊದಲ ಗೊಂದಲ ಮಕ್ಕಳು ಎಂದರೆ ಯಾರು ಎಂಬ ಪಶ್ನೆಯದಾಗಿದೆ. ಭಾರತದಲ್ಲಿಯೇ ವಿವಿಧ ಉದ್ದೇಶಗಳಿಗೆ ಯಾರನ್ನು ಮಗು ಎಂದು ಪರಿಗಣಿಸಬೇಕು ಎನ್ನುವ ಕುರಿತು ವಿಭಿನ್ನ ವ್ಯಾಖ್ಯೆಗಳಿವೆ. ಅದಾಗ್ಯೂ ೧೯೮೯ ರ ಮಕ್ಕಳ ಹಕ್ಕುಗಳಿಗಾಗಿ ಜಾಗತಿಕ ಸಮಾವೇಶವು ಸಾಮಾನ್ಯ ಪರಿಸ್ಥಿತಿಯಲ್ಲಿ ೧೮ ವರ್ಷಕ್ಕೂ ಕೆಳಗಿನವರು ಮಕ್ಕಳೆಂದು ಪರಿಗಣಿಸಲ್ಪಡಬೇಕೆಂದು ತಿಳಿಸುತ್ತದೆ. ಆ ಸಮಾವೇಶದಲ್ಲಿಯೇ ೧೮ ವರ್ಷಕ್ಕೂ ಕೆಳಗಿನ ಯಾವುದೇ ವ್ಯಕ್ತಿಯು ತನ್ನೊಳಗಿನ ಅಗಾಧ ಸಾಮರ್ಥ್ಯವನ್ನು ಪ್ರಸ್ತುತಪಡಿಸಿ ಜಾಗತಿಕವಾಗಿ ಬೆಳೆಯಲು ನಿರ್ಧಿಷ್ಟವಾದ ಹಕ್ಕುಗಳನ್ನು ಹೊಂದಿರಬೇಕು ಎಂದು ಸ್ಪಷ್ಟಪಡಿಸುತ್ತದೆ. ಮಕ್ಕಳ ಹಕ್ಕುಗಳ ಸಂರಕ್ಷಣೆ ಕುಟುಂಬದ, ಸಮಾಜದ ಹಾಗೂ ಆಯಾಯ ರಾಷ್ಟ್ರ ಸರ್ಕಾರಗಳ ಆದ್ಯ ಕರ್ತವ್ಯವಾಗಬೇಕೆಂದೂ ಈ ಸಮಾವೇಶದಲ್ಲಿ ತಿಳಿಯಪಡಿಸಲಾಗಿದೆ.
ಮಕ್ಕಳ ಹಕ್ಕುಗಳ ಸಂರಕ್ಷಣೆಯ ಮುಖ್ಯ ಅಂಶ ಯಾವುದೇ ಮಗು ತಾನು ಜನಿಸಿದ ಜನಾಂಗ, ಕುಲ, ಧರ್ಮ, ಜಾತಿ, ಲಿಂಗ, ವರ್ಣ, ರಾಷ್ಟ್ರೀಯತೆ ಅಥವಾ ಭಾಷಾವರ್ಗದ ನೆಲೆಯಲ್ಲಿ ಬೇಧಕ್ಕೆ ಒಳಗಾಗಬಾರದೆಂಬುದು. ಈ ಎಲ್ಲಾ ನೈಸರ್ಗಿಕ ಬೇಧಗಳನ್ನು ಮುಂದಿಟ್ಟುಕೊಂಡು ಯಾವುದೇ ಮಗು ಅವಕಾಶ ವಂಚಿತವಾಗಬಾರದು ಮಾತ್ರವಲ್ಲ ಆ ಕಾರಣದಿಂದ ದೈಹಿಕ, ಮಾನಸಿಕ, ನೈತಿಕ ಅನ್ಯಾಯ ಎದುರಿಸುವಂತಾಗಬಾರದು, ರಾಜಕೀಯ, ಧಾರ್ಮಿಕ, ಸಾಮಾಜಿಕ ವ್ಯವಸ್ಥೆಗಳು ಯಾವುದೇ ಮಗುವನ್ನು ಕಾನೂನುಬಾಹಿರ ಒತ್ತಡಗಳಿಗೆ ಒಳಪಡಿಸಬಾರದು ಎನ್ನುವ ಚಿಂತನೆಯೂ ಇಲ್ಲಿದೆ.
೧೯೮೯ ರ ಮಕ್ಕಳ ಹಕ್ಕುಗಳ ಜಾಗತಿಕ ಸಮಾವೇಶದಲ್ಲಿ ಸ್ಪಷ್ಟಪಡಿಸಲಾಗಿರುವ ಚಿಂತನೆಗಳ ಮೇಲೆ ೧೯೨೪ ರ ರಾಷ್ಟ್ರಸಂಘ ಪ್ರಣೀತ ಜಿನೇವಾ ಮಕ್ಕಳ ಹಕ್ಕುಗಳ ಘೋಷಣೆಯ ಅಪಾರ ಪ್ರಭಾವವಿದೆ. ಪ್ರಥಮ ವಿಶ್ವಯುದ್ದ ಮಕ್ಕಳ ಬದುಕಿನ ಮೇಲೆ ಅಪಾರ ಅನಾಚಾರ ಉಂಟುಮಾಡಿತ್ತು. ಮಕ್ಕಳು ತಮಗಾಗಿ ಸ್ವತಂತ್ರವಾಗಿ ನಿರ್ಧರಿಸಲಾರರು. ಅವರ ಹಿರಿಯರ, ಸರ್ಕಾರಗಳ ನಿರ್ಧಾರಗಳು ಮತ್ತು ಜೀವನದ ಒತ್ತಡಗಳು ಅವರ ಭವಿಷ್ಯದ ಮೇಲೆ ಪ್ರಭಾವ ಹಾಕುತ್ತವೆ ಆದುದರಿಂದ ಕುಟುಂಬಗಳ ಮತ್ತು ರಾಷ್ಟ್ರಗಳ ಹಿರಿಯರು ತಮ್ಮ ನಿರ್ಧಾರಗಳನ್ನು ಕೈಗೊಳ್ಳುವಾಗ ಮಕ್ಕಳ ಹಿತಾಸಕ್ತಿಗಳನ್ನು ಗಮನದಲ್ಲಿಡಬೇಕು ಎಂದು ಇಲ್ಲಿ ಕಳಕಳಿಯಿದೆ. ೧೯೪೮ ರ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಪ್ರಘೋಷಣೆ ಹಾಗೂ ೧೯೫೯ ರ ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಪ್ರಘೋಷಣೆ ಕೂಡಾ ಮಕ್ಕಳ ಹಕ್ಕುಗಳ ಸಂರಕ್ಷಣೆಗೆ ಮಹತ್ವ ನೀಡುತ್ತದೆ.
ಮಕ್ಕಳ ಹಕ್ಕುಗಳನ್ನು ಮುಖ್ಯವಾಗಿ ಪ್ರೊವಿಷನ್ (ಅವಕಾಶ)- ಪ್ರೊಟೆಕ್ಷನ್ (ಸಂರಕ್ಷಣೆ) ಮತ್ತು ಪಾರ್ಟಿಸಿಪೇಷನ್ (ಪಾತ್ರ ವಹಿಸುವಿಕೆಯ) ಹಕ್ಕುಗಳೆಂದು ಮೂರು ಭಾಗ ಮಾಡಲಾಗಿದೆ. ಅವಕಾಶದ ಹಕ್ಕುಗಳಲ್ಲಿ ಉತ್ತಮ ಬದುಕಿನ ಅನುಕೂಲಗಳ, ಆರೋಗ್ಯದ, ಶಿಕ್ಷಣದ, ಮನೋರಂಜನೆಯ ಅವಕಾಶಗಳ ಹಕ್ಕುಗಳು ಸೇರಿವೆ. ಸಂರಕ್ಷಣಾ ಹಕ್ಕುಗಳೆಂದರೆ ಶೋಷಣೆಯ ವಿರುದ್ಧ, ಇಚ್ಛಾರಹಿತ ಲೈಂಗಿಕ ಬಳಕೆಯ ವಿರುದ್ಧ, ನಿರ್ಲಕ್ಷ್ಯದ ವಿರುದ್ಧ, ಅಸಮಾನತೆಯ ವಿರುದ್ಧ ಸಂರಕ್ಷಣೆಯ ಹಕ್ಕುಗಳು ಸೇರಿವೆ. ಭಾಗವಹಿಸುವಿಕೆಯ ಹಕ್ಕುಗಳಲ್ಲಿ ಮುಖ್ಯವಾಗಿ ಸಮಾಜ ಅಭಿವೃದ್ಧಿಯ ಸಾಂಸ್ಕೃತಿಕ- ಆರ್ಥಿಕ ಅಭಿವೃದ್ಧಿಯ ಕಾರ್ಯಕ್ರಮಗಳಲ್ಲಿ, ಮಕ್ಕಳು ಭಾಗವಹಿಸುವ, ತಮಗೆ ಅನ್ವಯವಾಗುವ ಸರ್ಕಾರದ ನಿರ್ಧಾರಗಳಲ್ಲಿ ಅಭಿಪ್ರಾಯ ನೀಡುವ ಹಕ್ಕುಗಳನ್ನು ಮಕ್ಕಳು ಹೊಂದಿದ್ದಾರೆ. ಮಕ್ಕಳ ಹಕ್ಕುಗಳ ಸಂರಕ್ಷಣೆಗೆ ವಿವಿಧ ರಾಷ್ಟ್ರ ಸರ್ಕಾರಗಳು ಕೂಡಾ ತಮ್ಮದೇ ನಿಟ್ಟಿನಲ್ಲಿ ಸಾಂವಿಧಾನಿಕ ಮತ್ತು ನ್ಯಾಯಿಕ ಅವಕಾಶಗಳನ್ನು ರೂಪಿಸಿಕೊಂಡಿವೆ.
ಮಕ್ಕಳ ಹಕ್ಕುಗಳ ಸಂರಕ್ಷಣೆಗಾಗಿ ಇಂದು ಸರ್ಕಾರಗಳು, ಅಂತರಾಷ್ಟ್ರೀಯ ವ್ಯವಸ್ಥೆಗಳು ಕ್ರಮ ಕೈಗೊಂಡಿರಬಹುದು, ರಾಜಕೀಯ ಮತ್ತು ನ್ಯಾಯಿಕ ವ್ಯವಸ್ಥೆಗಳನ್ನು ಮಾಡಿರಬಹುದು ಆದರೆ ನಿಜವಾದ ಅರ್ಥದಲ್ಲಿ ಮಕ್ಕಳ ಹಕ್ಕುಗಳ ಸಂರಕ್ಷಣೆಗೆ ಆಗಬೇಕಾದರೆ ಈ ವಿಷಯದ ಕುರಿತು ಪ್ರತಿ ಮನುಷ್ಯನ ಪ್ರಯತ್ನ ಅಗತ್ಯವಾಗಿದೆ. ಮಕ್ಕಳ ಹಕ್ಕುಗಳ ಕುರಿತು ನಾವು ಪ್ರತಿಯೊಬ್ಬರು ಸದ್ಭಾವನೆ ಬೆಳೆಸಿಕೊಳ್ಳಬೇಕಾಗಿದೆ. ಕೈಗಾರಿಕಾ ಮಾಲೀಕರು, ಲೈಂಗಿಕ ಕ್ರಿಯೆಗಳಲ್ಲಿ ಅತಿಯಾಗಿ ತೊಡಗಿಸಿಕೊಂಡವರು, ಮಕ್ಕಳ ಮಾರಾಟದಲ್ಲಿ ತೊಡಗಿಸಿಕೊಂಡವರು ಮಕ್ಕಳ ದುರುಪಯೋಗ ಮಾಡುವ ಸಂದರ್ಭದಲ್ಲಿ ಹೆಚ್ಚು ಎಚ್ಚರಿಕೆ ಮತ್ತು ನೈತಿಕತೆಯಿಂದ ಅಲೋಚನೆ ಮಾಡಿದಾಗ ಮಾತ್ರ ಈ ಸಮಸ್ಯೆಗೆ ಪರಿಹಾರ ದೊರೆಯಬಹುದಾಗಿದೆ. ಸಾಮಾಜಿಕ ಸವಾಲನ್ನು ಎದುರಿಸಲು ಬರೇ ರಾಜಕೀಯ ನ್ಯಾಯಿಕ ಕ್ರಮಗಳಿಂದ ಮಾತ್ರ ಸಾಧ್ಯವಿಲ್ಲ ಹೊರತಾಗಿ ಸಮಾಜದ ಎಲ್ಲಾ ವರ್ಗಗಳ ಸಹಕಾರ ಈ ನಿಟ್ಟಿನಲ್ಲಿ ತೀರಾ ಅಗತ್ಯವಾಗಿದೆ.
ಹಸಿವೆಂಬ ವಿಸ್ಮಯ
- ಸ್ಟೀವನ್ ಕ್ವಾಡ್ರಸ್ ಪೆರ್ಮುದೆ, 9480761017
ಹಸಿವೆಂಬ ಹೆಬ್ಬಾವು ಬಸಿರ ಬಂದು ಹಿಡಿದಡೆ ವಿಷವೇರಿತ್ತಯ್ಯ ಅಪಾದಮಸ್ತಕಕ್ಕೆ ಹಸಿವಿಗನ್ನವನಿಕ್ಕಿ ವಿಷವನಿಳುಹಬಲ್ಲಡೆ ವಸುಧೆಯೊಳಗೆ ಅವನೆ ಗಾರುಡಿಗ ಕಾಣಾ ರಾಮನಾಥ ಎಂದು ವಚನಕಾರರು ಸಾರಿದ್ದಾರೆ. ಈ ಲೋಕದಲ್ಲಿ ಮನುಷ್ಯನ ಪಾಲಿಗೆ ಅತಿ ಮಹತ್ವದ್ದು ಅವನ ಹಸಿವು ಎಂದು ತಜ್ಞರ ಅಂಬೋಣ. ಇಂದು ಮಾನವ ವಿಶ್ವದಲ್ಲಿ ಎಲ್ಲಾ ಪ್ರಗತಿಯ ಹಿನ್ನಲೆಯಲ್ಲಿ ಆತನ ಹಸಿವನ್ನು ತೀರಿಸುವ ಪ್ರಯತ್ನ ಇದೆ ಎನ್ನುವುದು ವಿರ್ಶವವಿಡಿ ತಿಳಿದಿರುವ ಸತ್ಯ. ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ನಮ್ಮೆಲ್ಲ ಪ್ರಯತ್ನಗಳೆಂದು ದಾಸರು ಸಾರಿದ್ದಾರೆ.
ಈ ಹಸಿವು ಎನ್ನುವುದು ತನ್ನಿಂದ ತಾನೇ ಒಂದು ವಿಸ್ಮಯ ಮಾತ್ರವಲ್ಲ ಅದರ ನಮೂನೆಗಳು ಕೂಡಾ ವಿಭಿನ್ನ. ಹೊಟ್ಟೆಯ ಹಸಿವು ಎಲ್ಲಾ ಮನುಷ್ಯರಿಗೂ ಇದ್ದದ್ದೇ. ಅನ್ನಾಹಾರದಿಂದ ಅದನ್ನು ನೀಗಿಸಬಹುದು. ಇಂದು ಹಸಿವಾಯ್ತು, ತಿಂದು ಆ ಹಸಿವನ್ನು ತೀರಿಸಿಕೊಂಡೆವು ಎಂದು ಹೇಳಿ ಆ ಹಸಿವು ನಿಂತು ಹೋಗುವುದಿಲ್ಲ. ತಿಂದ ಅನ್ನ ಕರಗಿದ ನಂತರ ಪುನಃ ಹಸಿವಿನ ಭಾದೆ ಕಾಡುತ್ತದೆ. ಆದುದರಿಂದಲೇ ಉದರ ವೈರಾಗ್ಯ ತೀರಾ ಕ್ಷಣಿಕ ಎನ್ನಲಾಗಿದೆ.
ಅನ್ನಕ್ಕಾಗಿ ಹಸಿವಾದರಷ್ಟೇ ಸಾಕೆ. ಆ ಹಸಿವು ಮನುಷುನಿಗೆ ಮಾತ್ರವಲ್ಲ ಉಳಿದೆಲ್ಲಾ ಜೀವಸಂಕುಲಗಳಿಗೂ ಇದೆ. ದನ, ಕುರಿ, ನಾಯಿ, ಕತ್ತೆ ಕೂಡಾ ಹಸಿಯುತ್ತದೆ, ಹಸಿದಾಗ ತನ್ನ ಆಹಾರ ಹುಡುಕಿ ತಿಂದು ಹಸಿವನ್ನು ತೀರಿಸಿಕೊಳ್ಳುತ್ತದೆ. ಮನುಷ್ಯನು ಕೂಡಾ ಪ್ರಾಣಿಯೇ ಆದರೆ ಆತರ ವಿಚಾರಶೀಲ ಪ್ರಾಣಿ ಮಾನವನಾಗುವ ಸಾಮರ್ಥ್ಯವುಳ್ಳ ಪ್ರಾಣಿ. ಆ ಕಾರಣದಿಂದಲೇ ಅವನಿಗೆ ಇನ್ನಿತರ ಹಸಿವುಗಳಿವೆ. ಸ್ವಾಮಿ ವಿವೇಕಾನಂದರು ಹೇಳುವಂತೆ ಮಾನವ ಬರೇ ಪ್ರಾಣಮಯ ಕೋಶಕ್ಕಷ್ಟೇ ಸೀಮಿತನಾದವನಲ್ಲ. ಆತನು ಪ್ರಾಣದ ಹಸಿವನು ತೀರಿಸಿದ ನಂತರ ಜ್ಞಾನದ ಹಸಿವನ್ನು ತೀರಿಸುವ ಪ್ರಯತ್ನ ಮಾಡಬೇಕು.
ನಮ್ಮಲ್ಲಿ ಜ್ಞಾನಮಯ ಕೋಶ ಬೆಳೆಯಬೇಕಾದರೆ ಸಾಹಿತ್ಯದ ಕುರಿತು ಅಪಾರ ಅಭಿರುಚಿಯನ್ನು ನಾವು ಬೆಳೆಸಿಕೊಳ್ಳಬೇಕು. ಇಂದಿನ ಯುವಜನತೆಯಲ್ಲಿ ಓದು ಕುಂಠಿತವಾಗಿದೆ ಎಂಬ ಮಾತು ಕೇಳಿ ಬರುತ್ತದೆ. ಆದರೂ ನಮ್ಮ ಯುವಜನರು ಓದುತ್ತಾರೆ. ವಾಟ್ಸ್ಯಾಪ್, ಫೇಸ್ಬುಕ್, ಇನ್ಸ್ಟಾಗ್ರಾಮ್ ಮುಂತಾದ ಸಮಾಜಮಾಧ್ಯಮಗಳ ಸಂದೇಶಗಳನ್ನು, ತಮ್ಮ ಪರೀಕ್ಷೆಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಓದಿ ಮುಗಿಸುತ್ತಾರೆ. ಜಾಗತಿಕ ಮಟ್ಟದಲ್ಲಿ ಬೆಳೆದಿರುವ ಅತ್ಯುತ್ತಮ ಸಾಹಿತ್ಯಕೃತಿಗಳ ಪರಿಚಯ ಅವರಿಗೆ ಇದ್ದಂತಿಲ್ಲ. ಕುವೆಂಪುರವರ ಮಲೆಗಳಲ್ಲಿ ಮದುಮಗಳು, ಕಾನೂರು ಸುಬ್ಬಮ್ಮ ಹೆಗ್ಗಡತಿ, ರಬೀಂದ್ರೋ ಥಾಕೂರರ ಗೋರಾ, ಗೀತಾಂಜಲಿ, ಲಿಯೋ ಥೊಲ್ಸ್ತೊಯ್ಯವರ ವಾರ್ ಎಂಡ್ ಪೀಸ್, ಅನ್ನಾ ಕರೆನೀನಾಗಳ ಹಸಿವು ಎಷ್ಟಿರಬೇಕಿತ್ತೋ ಅಷ್ಟು ನಮಗೆ ಇಂದು ಇಲ್ಲವಾಗಿದೆ.
ಜ್ಞಾನಮಯ ಕೋಶವನ್ನು ಮೀರಿದ್ದು ವಿಜ್ಞಾನಮಯ ಕೋಶ. ವಿಶೇಷ ಜ್ಞಾನದ ದಾಹ ನಮ್ಮನ್ನು ಸಂಶೋಧನೆಯತ್ತ, ಹೊಸತನ್ನು ಹುಡುಕುವುದರತ್ತ ಪ್ರೇರೇಪಿಸುತ್ತದೆ. ದುರಾದೃಷ್ಟಕ್ಕೆ ನಮ್ಮ ಇಂದಿನ ಸಂಶೋಧನೆಗಳು ಕೂಡಾ ನಮ್ಮ ಲೌಕಿಕ ಅಗತ್ಯಗಳ ಪೂರೈಕೆಗೆ, ತಾತ್ಕಾಲಿಕ ಅನುಕೂಲಗಳ ಲಾಭಕ್ಕೆ ಸೀಮಿತವಾಗಿದೆ. ಜ್ಞಾನದ ಹಸಿವು, ವಿಜ್ಞಾನದ ಹಸಿವು ಇಂದು ನಮಗೆ ತೀರಾ ಅಗತ್ಯವಾಗಿದೆ. ಇದೆಲ್ಲವನ್ನೂ ಮೀರಿದ ಇನ್ನೊಂದು ಹಸಿವು ನಮಗೆ ಇರಲೇಬೇಕು, ಅದು ಆನಂದದ ಹಸಿವು. ಆನಂದಮಯ ಈ ಜಗ ಹೃದಯ ಎನ್ನುವ ಸತ್ಯ ಸ್ಪಷ್ಟವಾಗಿ ತಿಳಿದುಕೊಂಡ ನಮ್ಮ ಹಿರಿಯರು. ಅವರು ಸುತ್ತಮುತ್ತಲಿನ ಸೃಷ್ಟಿ ವಿಸ್ಮಯ ಎಲ್ಲದರಲ್ಲಿಯೂ ಆನಂದವನ್ನು ಹುಡುಕಿದವರು. ದುರಂತವೆಂದರೆ ಆನಂದಮಯ ಭಾರತೀಯ ಪರಂಪರೆಯ ಉತ್ತರಾಧಿಕಾರಿಗಳಾದ ನಾವೇ ಇಂದು ಆನಂದದ ಹುಡುಕಾಟವನ್ನು ಬರೇ ಲೌಕಿಕದಲ್ಲಿ ಕಾಣುತ್ತಿದ್ದೇವೆ. ಉಂಡು ತಿಂದು, ಉಟ್ಟು ಅಲಂಕರಿಸಿಯಷ್ಟೇ ಆನಂದ ಎಂದುಕೊಂಡಿದ್ದೇವೆ ನಿಜವಾದ ಆನಂದದ ಹಸಿವೇ ನಮಗೆ ಇಲ್ಲದಂತಾಗಿದೆ. ಈಶಾವಾಸ್ಯಮ್ ಇದಂ ಸರ್ವಮ್ ಎಂದು ಈಶಾವಾಸ್ಯೋಪನಿಷತ್ ಸಾರುತ್ತದೆ. ಇರುವ ಎಲ್ಲದರಲ್ಲಿಯೂ ಈಶನನ್ನು ಕಾಣುವ ಮೂಲಕ ಆನಂದದ ಹಸಿವನ್ನು ತೀರಿಸಲು ಸುಲಭ ಸಾಧ್ಯವಿದೆ ಎಂದು ನಮ್ಮ ಹಿರಿಯರು ದೃಢವಾಗಿ ನಂಬಿದ್ದರು. ನಮ್ಮ ಸುತ್ತಲು ಇರುವ ಎಲ್ಲದರಲ್ಲಿಯೂ ದೇವರ ಅಸ್ತಿತ್ವವನ್ನು ಕಂಡರಿಸಿದಾಗ ಆತನ ವಿಸ್ಮಯಕಾರಿ ಸೊಬಗನ್ನು ನಮ್ಮದಾಗಿಸಿ ಆತನ ಆನಂದದಲ್ಲಿ ಭಾಗಿಯಾಗುತ್ತಾ ಆನಂದಮಯಕೋಶವನ್ನು ಬೆಳೆಸಿಕೊಳ್ಳುವುದು ಖಂಡಿತ ಸುಲಭ ಸಾಧ್ಯ.