ಯುವಜನೋ ಯೇನ ಗತಃ ಸ ಪಂಥಃ
21ನೇ ಶತಮಾನದಲ್ಲಿ ರಾಷ್ಟ್ರೀಯ ಸಂಪತ್ತನ್ನು ರಾಷ್ಟ್ರಗಳ ಮಾನವ ಸಂಪತ್ತಿನ ಮೇಲೆ ಅಂದಾಜು ಹಾಕುವ ಚಿಂತನೆಯಿದೆ. ಮಾನವ ಸಂಪನ್ಮೂಲದ ಪ್ರಮುಖ ಭಾಗ ಸಮಾಜದ ಯುವಜನರು. ಸುಶಿಕ್ಷಿತ ಸದುದ್ದೇಶಪೂರಿತ ಯುವಜನರ ಸಹಕಾರ್ಯದಿಂದಲೇ ಯಾವುದೇ ದೇಶ ಅಭಿವೃದ್ಧಿಪಥದಲ್ಲಿ ಮುಂದುವರೆಯಲು ಸುಲಭಸಾಧ್ಯ. ಸ್ವಾಮಿ ವಿವೇಕಾನಂದರು ಹೇಳುವಂತೆ ಪ್ರಗತಿಪರ ಚಿಂತನೆಯ ಆದರೆ ದೀನದಲಿತರ ಕುರಿತು ಕಾಳಜಿಯುಳ್ಳ ಯುವಜನರೇ ಒಂದು ರಾಷ್ಟ್ರದ ನಿಜವಾದ ಶಕ್ತಿ. ಭಾರತ ಯುವ ದೇಶ ಎಂದೇ ಉಲ್ಲೇಖಿಸಲ್ಪಡುತ್ತದೆ. ಭಾರತದ ಜನಸಂಖ್ಯೆಯ 66% ಶೇಕಡಾ ಅಂದರೆ ಸುಮಾರು ಎಂಬತ್ತು ಕೋಟಿಗೂ ಹೆಚ್ಚು ಜನರು ಯುವಕರು. ಭಾರತದ ಎಲ್ಲಾ ರಾಜ್ಯಗಳಲ್ಲಿ ಯುವಕರ ಜನಸಂಖ್ಯೆ ಅದರ ಒಟ್ಟು ಜನಸಂಖ್ಯೆಯ ಮೂರರ ಎರಡರಷ್ಟು ಇದೆ. ಈ ದೃಷ್ಟಿಯಿಂದ ಭಾರತ ಯುವ ರಾಷ್ಟ್ರ, ಉಜ್ವಲ ಭವಿಷ್ಯ ಇರುವ ಸುಭದ್ರ ರಾಷ್ಟ್ರ
ದುರಾದೃಷ್ಟವಶಾತ್ ತುಂಬಾ ನೋವಿನ ಸಂಗತಿಯನ್ನು ಹಂಚಿಕೊಳ್ಳಲೇಬೇಕು. 2019 ರ ವರ್ಷ ಭಾರತದ ಜನಸಂಖ್ಯೆಯ ಒಂದು ಲಕ್ಷಕ್ಕೆ ಸರಾಸರಿ 14 ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂದರೆ ಆ ವರ್ಷ ಸುಮಾರು ಎರಡು ಲಕ್ಷದಷ್ಟು ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯುವಕರ ಆತ್ಮಹತ್ಯಾ ಪ್ರಮಾಣ 2011 ರಲ್ಲಿ 2.3 ಶೇಕಡಾ ಇದ್ದದ್ದು 2021 ರ ಹೊತ್ತಿಗೆ ಸುಮಾರು 8% ಆಗಿದೆ. ಅಂದರೆ ತಮ್ಮ ಕುಟುಂಬಗಳಿಗೆ, ಸಾಮಾಜಿಕ ಘಟಕಗಳಿಗೆ ಆ ಮೂಲಕ ದೇಶಕ್ಕೆ ಭರವಸೆಯಾಗಬೇಕಾಗಿದ್ದ ನಮ್ಮ ಯುವಜನರು ಭರವಸೆ ಕಳೆದುಕೊಳ್ಳುತ್ತಿದ್ದಾರೆ.
ಯಾವ ಕಾರಣದಿಂದ ಯುವಜನರು ಆತ್ಮಹತ್ಯೆಯ ಪಾಶಕ್ಕೆ ಸಿಲುಕುತ್ತಿದ್ದಾರೆ? ಅವರು ಬದುಕಿನಲ್ಲಿ ಭರವಸೆ ಕಳೆದುಕೊಳ್ಳಲು ಕಾರಣವಾಗುವ ಅಂಶಗಳಾದರೂ ಯಾವುವು? ಸೋಲಿನ ಭೀತಿ ಇಂದಿನ ಯುವಜನತೆಯನ್ನು ವಿಪರೀತವಾಗಿ ಕಾಡುತ್ತಿದೆ.
ಇಂದಿನ ಒತ್ತಡ ತುಂಬಿದ ಬದುಕಿನ ನಾಗಾಲೋಟದಲ್ಲಿ ಸಂಪತ್ತು, ಯಶಸ್ಸು, ಕೀರ್ತಿ ಇವುಗಳೇ ಜೀವನದ ಆದರ್ಶಗಳೂ, ಗುರಿಗಳೂ ಅಂದುಕೊಂಡು ಇಲಿಮರಿಗಳಂತೆ ಓಡುತ್ತಾ ಇದ್ದೇವೆ. 'ರ್‍ಯಾಟ್ ರೇಸಿನಲ್ಲಿ ನಾವು ಮೊದಲ ಸ್ಥಾನ ಸಂಪಾದಿಸಿದರೂ, ರ್‍ಯಾಟ್‌ಗಳಾಗಿಯೇ ಉಳಿಯುತ್ತೇವೆ' ಸಂಪತ್ತು, ಸ್ಥಾನಮಾನ, ಸಾಮಾಜಿಕ ಗೌರವ ಎಲ್ಲವೂ ಬೇಕು ಆದರೆ ಎಲ್ಲದಕ್ಕೂ ಮೊದಲು ನಮಗಾಗಿ ನಮ್ಮ ಬಳಿ ಸಮಯ ಉಳಿಯಬೇಕು.
ಬದುಕಿನ ವಿಶ್ಲೇಷಣೆ, ವಿಮರ್ಶೆ ಮಾಡಲು, ತಾಳ್ಮೆಯಿಂದ ನಮ್ಮ ಕುರಿತಾಗಿ ಸಿಂಹಾವಲೋಕನ ಮಾಡಲು ನಮ್ಮ ಬಳಿ ಸಮಯ ಇರಬೇಕು. ತಪ್ಪು ಮಾಡದವರು ಈ ತನಕ ಲೋಕದಲ್ಲಿ ಹುಟ್ಟಲೇ ಇಲ್ಲ. ನಮ್ಮೆಲ್ಲರ ಬದುಕಿನಲ್ಲಿ ವಿವಿಧ ತಪ್ಪುಗಳು ಖಂಡಿತ ಆಗಿರುತ್ತವೆ. ತಪ್ಪುಗಳನ್ನು ತಿಳಿದುಕೊಂಡು, ತಿದ್ದಿಕೊಂಡು ಸುಧಾರಿಸಿಕೊಳ್ಳಲಿಕ್ಕೆ ನಮಗೆ ಸ್ವಲ್ಪ ಸಮಯ ಬೇಕು. ಯುವ ಪ್ರಾಯದಲ್ಲಿ ನಾವು ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ, ಆರ್ಥಿಕ - ರಾಜಕೀಯ ವ್ಯವಹಾರಗಳಲ್ಲಿ ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಲೇಬೆಕು. ಎಲ್ಲದಕ್ಕೂ ಸಮಯ ಕೊಡಲೇ ಬೇಕು. ಆದರೆ ಮೊತ್ತಮೊದಲು ನಮಗೆ ನಾವು ಸಮಯ ನೀಡಲೇಬೇಕು. ಗೆದ್ದವರಿಗೂ ಸೋತವರಿಗೂ ದಿನಕ್ಕೆ 24 ಗಂಟೆಗಳೇ ಲಭ್ಯ. ನಮ್ಮ ಸಮಯದ ಆದ್ಯತಾ ಹಂಚಿಕೆ ಮಾಡುವುದು ಜಾಣತನ.
ಪ್ರಯಾಣಕ್ಕೆ ಹೊರಟವರು ಎಲ್ಲಿ ಹೋಗಿ ಮುಟ್ಟಬೇಕು, ಅಲ್ಲಿಗೆ ಇರುವ ದೂರ, ಪ್ರಯಾಣದ ಸಮಯ, ಈ ಎಲ್ಲಾ ಅಂಶಗಳ ಬಗ್ಗೆ ಆಲೋಚಿಸಬೇಕು. ಅದೇ ರೀತಿ ಬದುಕಿನ ಗುರಿ, ಅಲ್ಲಿ ಮುಟ್ಟುವ ಬಗ್ಗೆ, ಅದಕ್ಕೆ ಬೇಕಾಗುವ ವಿವಿಧ ಕಾರ್ಯಯೋಜನೆಗಳೇನು? ಎನ್ನುವ ಕುರಿತು ಸ್ಪಷ್ಟತೆ ಇದ್ದರೆ ಸೂಕ್ತ ರೀತಿಯ ಯಶಸು ಸಾಧ್ಯ. ಸೂಕ್ತ ಪರಿಶ್ರಮಕ್ಕೆ ಯೋಗ್ಯ ಫಲಿತಾಂಶ ಖಂಡಿತ.