ಒಂದು ಆನೆಯ ಕಥೆ

ದೂರದ ಒಂದು ಊರಿನಲ್ಲಿ ರಾಮಣ್ಣನೆಂಬ ಒಬ್ಬ ದರ್ಜಿಯಿದ್ದನು. ಆ ಊರಿನಲ್ಲಿ ಅತ್ಯುತ್ತಮ ದರ್ಜಿ ಎಂದು ಅವನು ಹೆಸರಾಗಿದ್ದನು. ಅವನ ಅಂಗಡಿಗೆ ದೂರದೂರದಿಂದ ಹಲವಾರು ಜನರು ಬಂದು ತಮ್ಮ ಬಟ್ಟೆಗಳನ್ನು ಹೊಲಿಗೆಗೆ ಕೊಡುತ್ತಿದ್ದರು. ಕ್ರಮೇಣ ಆತನಿಗೆ ಆ ಊರಿನ ಪಕ್ಕದ ಕಾಡಿನ ಒಂದು ಆನೆಯ ಜತೆ ಮಿತೃತ್ವ ಬೆಳೆಯಿತು. ಆ ಆನೆ ನಿತ್ಯ ಬೆಳಿಗ್ಗೆ ಅವನ ಅಂಗಡಿಗೆ ಬರುತ್ತಿತ್ತು. ರಾಮಣ್ಣನಿಗೆ ಆ ಆನೆಯ ಜತೆ ತನ್ನ ಕಷ್ಟ ಸುಖ ಮಾತನಾಡುತ್ತಾ ಸ್ವಲ್ಪ ಸಮಯ ಕಳೆಯುವ ಅಭ್ಯಾಸ ಬೆಳೆಯಿತು. ರಾಮಣ್ಣ ಕೊನೆಯಲ್ಲಿ ಆ ಆನೆಗೆ ಬಾಳೆಹಣ್ಣು, ಕಬ್ಬು ಮುಂತಾದವುಗಳನ್ನು ತಿನಿಸುತ್ತಿದ್ದನು. ದೊಡ್ಡ ಸೊಂಡಿಲಿನ, ಉದ್ದ ದಂತಗಳ ಆನೆ ತನ್ನ ಮಿತ್ರ ಎಂದು ರಾಮಣ್ಣನಲ್ಲಿ ಒಂದು ರೀತಿಯ ಅಹಂಭಾವ ಬೆಳೆಯಿತು. ಅವನು ತನ್ನ ಇತರ ಮಿತ್ರರ ಬಗ್ಗೆ ಸ್ವಲ್ಪ ತಾತ್ಸಾರಭಾವ ಬೆಳೆಸಿಕೊಂಡನು. ಇವರಿಬ್ಬರ ಬಾಂಧವ್ಯವು ಮುಂದುವರೆದ ಹಾಗೆ ಆನೆಯು ಆಗಾಗ ರಾಮಣ್ಣನ ಅಂಗಡಿಯಲ್ಲಿ ಸಣ್ಣಪುಟ್ಟ ಕೀಟಲೆಗಳನ್ನು ಮಾಡುತ್ತಿದ್ದರೂ ಮಿತೃತ್ವದ ಬಲದಲ್ಲಿ ರಾಮಣ್ಣ ಅವುಗಳನ್ನು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ.
ಒಂದು ದಿನ ಆನೆಯು ರಾಮಣ್ಣನ ಅಂಗಡಿಗೆ ಬಂದ ಹೊತ್ತಿಗೆ ರಾಮಣ್ಣ ಒಬ್ಬ ಗ್ರಾಹಕನ ಬಳಿ ಸ್ವಲ್ಪ ಗಂಭೀರವಾದ ಅಗತ್ಯದ ಮಾತುಕತೆಯನ್ನು ನಡೆಸುತ್ತಿದ್ದನು. ಇತರ ಗ್ರಾಹಕರೂ ಕೂಡಾ ರಾಮಣ್ಣನಿಗಾಗಿ ಕಾಯುತ್ತಿದ್ದ ಕಾರಣ ಆನೆಯ ಜತೆ ಮಾತನಾಡಲು. ಕಾಲಕ್ಷೇಪ ಮಾಡಲು ಸಾಧ್ಯವಾಗಲಿಲ್ಲ ಮಾತ್ರವಲ್ಲ ಅವತ್ತು ಅದಕ್ಕೆ ಬೇಕಾದ ತಿಂಡಿ ತಿನಸುಗಳನ್ನು ನೀಡಲು ಸಾಧ್ಯವಾಗಲಿಲ್ಲ. ಇದರಿಂದ ಆನೆಗೆ ವಿಪರೀತ ಅವಮಾನವಾಯ್ತು. ಆ ಅವಮಾನದಿಂದ ಕೋಪಗೊಂಡ ಆನೆಗೆ ರಾಮಣ್ಣ ಈ ತನಕ ಮಾಡಿದ ಎಲ್ಲಾ ಉಪಕಾರಗಳು ಮರೆತು ಹೋದವು.
ರಾಮಣ್ಣನು ತನಗೆ ಅವಮಾನ ಮಾಡಿದ ಎಂದು ತಿಳಿದುಕೊಂಡ ಆನೆಯು ಕೂಡಲೇ ಪಕ್ಕದಲ್ಲೇ ಇದ್ದ ಕೊಳೆನೀರು ತುಂಬಿದ ಕೆರೆಗೆ ಹೋಯ್ತು. ಆ ಕೆಸರಿನ ನೀರಿನಲ್ಲಿ ಹೊರಳಾಡಿ ಅದು ತನ್ನ ಮನಸ್ಸನ್ನು ಸಂತೃಪ್ತಿಪಡಿಸಿಕೊಂಡಿತು ಮಾತ್ರವಲ್ಲ ರಾಮಣ್ಣನಿಗೆ ಒಳ್ಳೆ ಬುದ್ಧಿ ಕಲಿಸಿಯೇ ಸಿದ್ಧ ಎಂದು ಹಠದಿಂದ ಗಟ್ಟಿ ಮನಸ್ಸು ಮಾಡಿಕೊಂಡು ತನ್ನ ಸೊಂಡಿಲಿನ ತುಂಬಾ ಕೆಸರು ನೀರನ್ನು ತುಂಬಿಕೊಂಡು ರಾಮಣ್ಣನ ಅಂಗಡಿಗೆ ಬಂತು. ಅಂಗಡಿಗೆ ಬಂದ ಆನೆ ಕೋಪದಿಂದ ಆ ಕೆಸರು ನೀರನ್ನೆಲ್ಲಾ ಅಂಗಡಿಯ ಒಳಗೆ ಬಿಸಾಡಿತು. ರಾಮಣ್ಣನ ಅಂಗಡಿಯ ತುಂಬಾ ಬೇರೆ ಬೇರೆ ಗಿರಾಕಿಗಳು ಹೊಲಿಗೆಗಾಗಿ ನೀಡಿದ್ದ ಬೆಲೆಬಾಳುವ ಬಟ್ಟೆಗಳಿದ್ದವು. ಅವೆಲ್ಲವೂ ಈ ಕೆಸರಿನಿಂದಾಗಿ ಹಾಳಾಗಿಹೋದವು. ಮಾತ್ರವಲ್ಲ ಅಂಗಡಿಯ ತುಂಬಾ ಕೆಸರಾಗಿ ಅಪಾರ ನಷ್ಟ ಉಂಟಾಯ್ತು.
ಆನೆಯು ತನ್ನ ಗೆಳೆತನಕ್ಕೆ ಯೋಗ್ಯವೇ? ಅದರ ಸ್ವಭಾವ ತನ್ನ ಸ್ವಭಾವಕ್ಕೆ ಸರಿ ಹೊಂದುವುದೇ? ಎಂದೆಲ್ಲಾ ಯೋಚಿಸಬೇಕಾದ ಜವಾಬ್ಧಾರಿಯನ್ನು ಗಂಭೀರವಾಗಿ ಪರಿಗಣಿಸದೆ ಗೆಳೆತನಕ್ಕೆ ಅವಸರ ಮಾಡಿದ್ದೇ ರಾಮಣ್ಣನ ತಪ್ಪೇ? ತನ್ನ ಗೆಳೆಯನ ಅಗತ್ಯ ಅನಿವಾರ್ಯತೆಗಳನ್ನು ಅರ್ಥೈಸಿಕೊಳ್ಳದೆ ಗೆಳೆಯ ತನಗೆ ಮಾತ್ರ ಪ್ರಾಮುಖ್ಯ ನೀಡಬೇಕೆಂದು ಬಯಸಿದ್ದು ಆನೆಯ ತಪ್ಪೇ? ಅದೇನೇ ಆದರೂ ಆನೆ ಅವಸರದ ನಿರ್ಣಯ ಕೈಗೊಂಡಿತೇ? ಆನೆಯ ಒಂದು ಅವಸರದ ನಿರ್ಣಯದಿಂದ ಬೆಲೆಬಾಳುವ ಉಡುಗೆ ತೊಡುಗೆಗಳು ಹಾಳಾದವೇ? ಇನ್ನು ಮುಂದೆ ರಾಮಣ್ಣನ ಹಾಗೂ ಆನೆಯ ಸಂಬಂಧಗಳು ಸಹಜವಾಗಿ ಉಳಿಯುವ ಸಾಧ್ಯತೆ ಇದೆಯೇ? ಈ ಎಲ್ಲಾ ಪ್ರಶ್ನೆಗಳು ನಮ್ಮನ್ನು ಕಂಗಾಲು ಮಾಡುತ್ತವೆಯಲ್ಲವೇ?
ನಮ್ಮ ನಿತ್ಯ ಬದುಕಿನಲ್ಲಿಯೂ ಹೀಗೆ ಆಗುತ್ತದೆಯೇ? ನಮ್ಮ ಅಂಕೆಗೆ, ಅಳತೆಗೆ ಮೀರಿದವರೊಡನೆ ಮಿತ್ರತ್ವ ಹೊಂದಲು ಅವಸರ ಮಾಡಬೇಕೆ? ತುಂಬಾ ಉನ್ನತಸ್ಥಾನಿಯರೊಡನೆ ಮಿತೃತ್ವ ಮಾಡಿದರೆ ಆ ಮೈತ್ರಿ ಸಂಬಂಧವನ್ನು ಸುರಕ್ಷಿತವಾಗಿ, ಸುವ್ಯವಸ್ಥಿತವಾಗಿ ಉಳಿಸಲು ನಾವು ಅಪಾರವಾಗಿ ಒದ್ದಾಡಬೇಕಾಗುತ್ತದೆ. ನಮಗಿಂತ ತುಂಬಾ ಮೇಲಿರುವವರು ನಮ್ಮ ಮೈತ್ರಿಯಿಂದ ತಮಗೆ ಲಾಭ ಪಡೆಯಲು ಶ್ರಮಿಸುತ್ತಾರೆ. ಈ ಪರಿಸ್ಥಿತಿಯು ಅನಗತ್ಯ ತಿಕ್ಕಾಟಗಳನ್ನು ಉಂಟುಮಾಡುತ್ತದೆ. ಅನ್ಯರ ಮರ್ಜಿ ಕಾಯುತ್ತಾ ನಮ್ಮ ಸಾಮರ್ಥ್ಯಗಳನ್ನು ನಾವು ಕುಗ್ಗಿಸಿಕೊಳ್ಳುತ್ತೇವೆ. ಉತ್ತಮ ಮಿತ್ರರನ್ನು ಆಯ್ಕೆ ಮಾಡಿಕೊಳ್ಳುವುದು ಒಂದು ಜವಾಬ್ಧಾರಿಯ ಕೆಲಸ ಎನ್ನುವುದನ್ನು ನಾವು ಅರಿತುಕೊಂಡರೆ ನಮಗೇ ಒಳ್ಳೆಯದು.
- ಸ್ಟೀವನ್ ಕ್ವಾಡ್ರಸ್