ಪರಿವರ್ತನೆ ಜಗದ ನಿಯಮ

Thumbnail

ನಾವು ಮನೆ ಮಾಡಿರುವ ಈ ಸೃಷ್ಟಿ ಹಲವಾರು ವಿಸ್ಮಯಗಳಿಂದ ತುಂಬಿದೆ ಎನ್ನುವ ವಿಷಯ ನಮಗೆಲ್ಲಾ ತಿಳಿದಿದೆ. ಅಂತಹ ವಿಸ್ಮಯಗಳ ಪೈಕಿ ಗರುಡ ಪಕ್ಷಿಯು ಹೊಸ ಹುಟ್ಟು ಪಡೆಯುವ ವಿಸ್ಮಯ ಒಂದು ವಿಶಿಷ್ಟ ಹಾಗೂ ಸುಂದರ ಪ್ರಕ್ರಿಯೆಯಾಗಿದೆ. ಸಾಮಾನ್ಯವಾಗಿ ಗರುಡಗಳು ೪೦ ವರ್ಷಗಳ ಕಾಲ ಬಲಶಾಲಿಯಾಗಿ ಬದುಕುತ್ತದೆ. ಅದು ತನ್ನ ಶಕ್ತಿ ನಡೆಯುವ ದಿನಗಳಲ್ಲಿ ಹೊಳೆಯ, ನದಿಯ ಮಾತ್ರವಲ್ಲದೆ ಸಾಗರದ ಮೀನುಗಳನ್ನು ಹಿಡಿದು ತಿನ್ನುತ್ತದೆ, ದೊಡ್ಡ ದೊಡ್ಡ ಹಕ್ಕಿಗಳನ್ನು ಉರುಳಿಸುತ್ತದೆ. ಮಾತ್ರವಲ್ಲ ಕಾಡಿನ ಪ್ರಾಣಿಗಳನ್ನು ಕೂಡಾ ಹಿಡಿದು ತಿನ್ನುತ್ತದೆ.

ಆದರೆ ಸುಮಾರು ೪೦ - ೪೫ ವರ್ಷಗಳ ಪ್ರಾಯದ ನಂತರ ಗರುಡ ತನ್ನ ಬಲ ಕಳೆದುಕೊಳ್ಳುತ್ತದೆ. ಅದರ ಕಣ್ಣಿಗೆ ಮುಸುಕುಗಳು ತುಂಬಿಕೊಳ್ಳುತ್ತವೆ, ಅದರ ಪಂಜಗಳ ಉಗುರುಗಳು ಕಲ್ಲುಗಟ್ಟುತ್ತವೆ. ರೆಕ್ಕೆಗಳ ಪುಕ್ಕಗಳು ಕಳೆಗೆಟ್ಟು ಒಣಗತೊಡಗುತ್ತವೆ. ಗರುಡ ತನಗೆ ಬೇಕಾದಂತೆ ಸಲೀಸಾಗಿ ವೇಗದಿಂದ ಹಾರಲು ಸಾಧ್ಯವಾಗುವುದಿಲ್ಲ. ಸಲೀಸಾಗಿ ಬೇಟೆ ಲಭಿಸುವುದಿಲ್ಲ. ಗರುಡದ ಮುಂದೆ ಎರಡೇ ಅವಕಾಶಗಳು. ಒಂದೇ ಸಾಯಬೇಕು, ಇಲ್ಲದಿದ್ದರೆ ಬದಲಾಗಬೇಕು. ಸಾಯುವುದು ಸುಲಭ ಆದರೆ ಬದುಕಬೇಕಾದರೆ ಬದಲಾಗಬೇಕು ಅದಕ್ಕಾಗಿ ಕಠಿಣವಾಗಿ ಪರಿಶ್ರಮಿಸಬೇಕು.

ಎಲ್ಲಾ ಗರುಡಗಳು ಬದಲಾಗಲು ಸಿದ್ಧಗೊಳ್ಳುವುದಿಲ್ಲ. ಹಲವಾರು ಗರುಡಗಳು ನನಗೆ ಇನ್ನು ಸಕ್ರಿಯವಾಗಿ ಬಾಳಲು ಸಾಧ್ಯವಿಲ್ಲ ಎಂದು ನಿರ್ಧರಿಸಿ ಸಾವಿಗೆ ಸಿದ್ಧಗೊಳ್ಳುತ್ತವೆ. ಆದರೆ ಕೆಲವು ಗರುಡಗಳು ತಮ್ಮಲ್ಲಿ ಇನ್ನೂ ತುಂಬಿಕೊಂಡಿರುವ ಬದುಕಿನ ಬಲವನ್ನು ಹೆಚ್ಚಿಸಿಕೊಂಡು ದೀರ್ಘಕಾಲ ಬದುಕುವುದಕ್ಕಾಗಿ ಕಠಿಣ ಪರಿಶ್ರಮ ಹಾಕಬೇಕು, ಇದು ಅಪಾರ ನೋವಿನ ಪ್ರಕ್ರಿಯೆ, ಬೆಟ್ಟದ ಮೇಲೇರಿ ಗಡಸು ಕಲ್ಲುಗಳಿಗೆ ಹಳೆಯ ಬಲಹೀನವಾದ ಕೊಕ್ಕನ್ನು ಹೊಡೆದು ಕಳಚಿಕೊಳ್ಳಬೇಕು. ತನ್ನ ಒಣ ಪುಕ್ಕಗಳನ್ನು ತಾನೇ ಕಿತ್ತು ಬಿಸಾಡಬೇಕು, ದೃಷ್ಟಿಗೆ ಅಡ್ಡಲಾಗಿ ದಪ್ಪದಾಗಿ ಬೆಳೆದಿರುವ ಕಣ್ಣು ಮುಸುಕುಗಳನ್ನು ಹರಿದು ತೆಗೆಯಬೇಕು. ಗರಗಟ್ಟಿದ ಉಗುರುಗಳನ್ನು ಕಲ್ಲಿಗೆ ಹೊಡೆದು ತೆಗೆದು ಹಾಕಬೇಕು. ಇದು ತುಂಬಾ ನೋವು ನೀಡುವ ಕೆಲಸ.

ಅಪಾರ ನೋವು ನೀಡುವ ಈ ಎಲ್ಲಾ ಕೆಲಸಗಳ ನಂತರ ಹೊಸ ಬದುಕಿನ ಬಲ ತುಂಬಿಕೊಂಡು, ಹೊಸ ಕೊಕ್ಕು, ಹೊಸ ಪುಕ್ಕಗಳು, ಹೊಸ ಉಗುರುಗಳೊಂದಿಗೆ ಗರುಡ ಪುನಃ ಹಾರಾಡಲು ಆರಂಭಿಸುತ್ತದೆ. ಪುನಃ ಸಮುದ್ರದ ಆಳದಿಂದ  ಮೀನು ಹಿಡಿಯುತ್ತದೆ, ಕಾಡಿನ ಸಣ್ಣಪುಟ್ಟ ಪ್ರಾಣಿಗಳನ್ನು ಹಿಡಿಯುತ್ತದೆ, ಮುಂದಿನ ೩೦ - ೪೦ ವರ್ಷಗಳ ಕಾಲ ಉಪಯುಕ್ತ ಬದುಕನ್ನು ನಡೆಸುತ್ತದೆ. ಅದು ಬದಲಾವಣೆಗಾಗಿ ನಡೆಸಿದ ಪರಿಶ್ರಮ ಫಲಪ್ರದವಾಗುತ್ತದೆ,

ಈ ಗರುಡದ ಬದುಕಿನಂತೆಯೇ ನಮ್ಮ ಬದುಕು, ಮನಸ್ಸಿನಲ್ಲಿ ತುಂಬಿರುವ ಋಣಾತ್ಮಕ ಚಿಂತನೆಗಳನ್ನು, ಪೂರ್ವಾಗೃಹಪೀಡಿತ ಯೋಚನೆಗಳನ್ನು ದೂರಗೊಳಿಸುತ್ತಾ ನಿತ್ಯ ಬದಲಾಗುತ್ತಾ ಮುಂದುವರಿದರೆ ಮಾತ್ರ ನಿರಂತರ ಪ್ರಗತಿ ಇಲ್ಲದಿದ್ದರೆ ನಮಗೆ ಉಳಿಯುವುದು ವಿನಾಶದ ದಾರಿ ಮಾತ್ರ