ಮಹಾನ್ ವ್ಯಕ್ತಿಗಳ ಬದುಕಿನಿಂದ ಬೆಳಕು – 1

Thumbnail

ಮಹಾನ್ ವ್ಯಕ್ತಿಗಳ ಬದುಕಿನಿಂದ ಬೆಳಕು – 1 
ಈ ಎಲ್ಲಾ ಕಥೆಗಳನ್ನು ಬಹುಶಃ ನಾವೆಲ್ಲಾ ಓದಿರುತ್ತೇವೆ. ಆದರೂ ಮಗದೊಮ್ಮೆ ಓದುವುದರಲ್ಲಿ ತಪ್ಪಿಲ್ಲ ಯಾಕೆಂದರೆ ಇಂತಹ ಘಟನೆಗಳು ನಮಗೆ ಪ್ರತಿಬಾರಿಯೂ ಹೊಸ ಬೆಳಕನ್ನು ನೀಡುವ ಸಾಮರ್ಥ್ಯ ಹೊಂದಿವೆ. 
ದಕ್ಷಿಣ ಆಫ್ರಿಕಾದ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ತನ್ನ ಬದುಕನ್ನೇ ಮುಡುಪಾಗಿಟ್ಟ ನೆಲ್ಸನ್ ಮಂಡೇಲಾ ಸ್ವಾತಂತ್ರ್ಯಾನಂತರ ದಕ್ಷಿಣ ಆಫ್ರಿಕಾದ ಅಧ್ಯಕ್ಷರಾದರು. ಆ ಕಾಲದಲ್ಲಿ ಒಮ್ಮೆ ಅವರು ಪ್ರಿಟೋರಿಯಾದ ಹೆಸರಾಂತ ಹೊಟೇಲಿನಲ್ಲಿ ಊಟಕ್ಕೆ ಹೋದರು. ಆಗ ಅವರ ಮೇಜಿನ ಅನತಿ ದೂರದ ಮೇಜಿನಲ್ಲಿ ಒಬ್ಬ ವಯಸ್ಕ ಊಟಕ್ಕೆ ಕುಳಿತಿದ್ದ ಮಂಡೇಲಾ ಆ ವ್ಯಕ್ತಿಯನ್ನು ತನ್ನ ಜತೆ ಬಂದು ಊಟಕ್ಕೆ ಕೂರುವಂತೆ ಕರೆದರು. ಆತ ಬಂದು ಗಡಿಬಿಡಿಯಿಂದ ಬೆವರುತ್ತಾ, ಕೈ ಕಂಪಿಸುತ್ತಾ ಊಟ ಮಾಡಿ ಲಗುಬಗೆಯಿಂದ ತೆರಳಿದರಂತೆ.
ಇದನ್ನು ಕಂಡು ಮಂಡೇಲಾರ ಸಿಬ್ಬಂದಿ ‘ಆ ವ್ಯಕ್ತಿ ಬಹುಶಃ ವಿಪರೀತ ರೋಗದಿಂದ ನರಳುತ್ತಾ ಇರಬಹುದು  ಅದಕ್ಕೆ ಊಟದ ಹೊತ್ತಿಗೆ ಅವರ ಕೈ ನಡುಗುತ್ತಿತ್ತು’ ಎಂದು ಹೇಳಿದರು.  ಆದರೆ ಮಂಡೇಲಾ ನಗುತ್ತಾ ‘ಹಾಗೇನಿಲ್ಲಾ ನಾನು ಜೈಲಿನಲ್ಲಿದ್ದ ಸಮಯದಲ್ಲಿ ಆ ವ್ಯಕ್ತಿ ಜೈಲರ್ ಆಗಿದ್ದರು, ಕೈದಿಗಳನ್ನು ತೀರಾ ಕಠಿಣವಾಗಿ ದಂಡಿಸುತ್ತಿದ್ದರು, ಒಮ್ಮೆ ನನ್ನ ಮೈಮೇಲೆ ಮೂತ್ರವನ್ನೂ ಮಾಡಿದ್ದರು ಈಗ ನಾನು ಅಧ್ಯಕ್ಷನಾಗಿದ್ದೇನೆ, ಬಹುಶಃ ನಾನು ಅವರಿಗೆ ಶಿಕ್ಷೆಗೆ ಒಳಪಡಿಸಬಹುದೇನೋ ಎಂದು ಅವರಿಗೆ ಸಂಶಯವಿರಬೇಕು ಆ ಭಯದಿಂದಲೇ ಅವರ ಕೈ ಕಂಪಿಸುತ್ತಿದ್ದಿರಬೇಕು’ ಎಂದರು
ಸಿಬ್ಬಂದಿಗಳು ‘ಅವರ ತಪ್ಪಿಗೆ ಶಿಕ್ಷೆಯಾಗಬೇಕಾದುದು ಸಹಜವಲ್ಲವೇ’ ಎಂದು ಮಂಡೇಲಾರನ್ನು ಪ್ರಶ್ನಿಸಿದರು.
ಅದಕ್ಕೆ ಮಂಡೇಲಾ ‘ನಮ್ಮ ವಿರುದ್ಧ ತಪ್ಪು ಮಾಡಿದವರನ್ನು ದಂಡಿಸುವುದು ಸಹಜ ಗುಣ ಆದರೆ ನಮ್ಮ ವಿರುದ್ಧ ತಪ್ಪು ಮಾಡಿದವರನ್ನು ಶಿಕ್ಷಿಸುವ ಹಠಕ್ಕಿಂತ ಅವರನ್ನು ಕ್ಷಮಿಸಿ ಗೌರವಿಸುವ ಉದಾತ್ತ ಗುಣ ನಮ್ಮಲ್ಲಿ ಬೆಳೆದಂತೆ ನಾವೇ ಉತ್ತಮರಾಗುತ್ತಾ ಹೋಗುತ್ತೇವೆ, ಇನ್ನೊಬ್ಬನನ್ನು ನಿಂದಿಸಿ, ಶಿಕ್ಷಿಸಿ ಸುಖಪಡುವುದಕ್ಕಿಂತ ನಾವು ಉತ್ತಮರಾಗಿ ಸುಖ ಪಡುವುದು ನನಗೆ ಮುಖ್ಯ’  ಎಂದು ಉತ್ತರಿಸಿದರಂತೆ.
ಪ್ರೀತಿಯ ಯುವಮಿತ್ರರೇ, ಹಲವಾರು ಬಾರಿ ನಾವು ಅನ್ಯರಿಂದ ನಮಗೆ ಅನ್ಯಾಯವಾಗಿದೆ ಎಂದು ಆ ವಿಷಯಗಳ ಕುರಿತೇ  ಚಿಂತಿಸುತ್ತಾ, ತಲೆಬಿಸಿ ಮಾಡುತ್ತಾ ಇರುತ್ತೇವೆ. ಹಾಗೆ ಮಾಡುವುದರಿಂದ ನಮ್ಮ ವ್ಯಕ್ತಿತ್ವಕ್ಕೆ ಕಿಂಚಿತ್ತೂ ಒಳಿತಾಗುವುದಿಲ್ಲ. ಇತರರಿಂದ ನಮಗಾದ ಒಳಿತಿನ ಬಗ್ಗೆ ಮಾತ್ರ ಯೋಚಿಸೋಣ, ನಮ್ಮ ಕುರಿತು ಸದ್ಭಾವ ಹೊಂದಿರೋಣ, ನಮಗೆ ಯಾರು ಕೆಡುಕನ್ನು ಮಾಡಿದ್ದಾರೋ ಅವರಿಗೆ ಒಳಿತನ್ನು ಮಾಡಲು ಪ್ರಯತ್ನಿಸೋಣ ಪರಿಣಾಮವಾಗಿ ನಮ್ಮ ಮನೋಸ್ಥಿತಿ ಧನಾತ್ಮಕವಾಗುತ್ತದೆ. ಅದರಿಂದ ನಮಗೂ ಒಳಿತು ಪರಿಸರಕ್ಕೂ ಒಳಿತು.