ಮಾತು ಪುರಾತನ ; ಕೃತಿ ನೂತನ .

Thumbnail

ಮಾತು ಮಾನವ ಪ್ರಾಣಿಗೆ ಮಾತ್ರ ಒಲಿದಿರುವ ಒಂದು ವರ. ಒಳ್ಳೆಯ ಮಾತನಾಡಬೇಕು ಎಂದು ಎಲ್ಲರೂ ಹೇಳುತ್ತಾರೆ. ಆದರೆ ಮಾತೇ ಎಲ್ಲ ಅಲ್ಲ.ಅದೊಂದು ಸಂವಹನ ಮಾಧ್ಯಮ. ಒಳತುಡಿತಗಳನ್ನು ಇತರರಿಗೆ ತಿಳಿಸಲು ಅಥವಾ ಕೆಲಸದಲ್ಲಿ ತೊಡಗಲು ನೆರವಾಗುವ ಸಾಧನ.ಮಾತನಾಡಿದ ಪ್ರಮಾಣದ ಸಾಸಿವೆ ಕಾಳಷ್ಟಾದರೂ ಸಾಧನೆಯಲ್ಲಿ ತೋರಿಸಿದರೆ ಜೀವನ ಸಾರ್ಥಕ. ಒಣ ಮಾತು ಯಾವುದೇ ಉಪಯೋಗವಿಲ್ಲ. ಮಾತಿನ ಸಂಸ್ಕೃತಿಗಿಂತ ಕೆಲಸದ ಸಂಸ್ಕೃತಿ ಬೆಳೆಸಬೇಕಾಗಿದೆ. ಶತ ಶತಮಾನಗಳಿಂದಲೂ ಮಾತಿಗೆ ಮಣೆ ಹಾಕಿದ್ದರಿಂದ ಇನ್ನೂ ಇದ್ದಲ್ಲಿಯೇ ಇದ್ದೇವೆ. ಇತ್ತೀಚೆಗಷ್ಟೇ ಕಣ್ತೆರೆದ ದೇಶಗಳು ಎಷ್ಟೋ ಮುಂದೆ ಸಾಗಿವೆ. ಅದಕ್ಕೆ ಕಾರಣ ಅವರು ಕೆಲಸಕ್ಕೆ ಕೊಟ್ಟ ಪ್ರಾಧಾನ್ಯತೆ, ಪ್ರಾಮುಖ್ಯತೆ. "An inch of walk is worth miles of talk"  ಎಂದು ಅನಾಮಿಕ ತತ್ವಜ್ಞಾನಿ ಒಬ್ಬ ಹೇಳುತ್ತಾರೆ. ಮಾತಿಗೆ, ಮಂತ್ರಕ್ಕೆ ಮಾವಿನಕಾಯಿ ಉದುರದು. ಅದನ್ನು ಪಡೆಯಲು ಮರ ಹತ್ತಬೇಕು ಇಲ್ಲ ಮತ್ತೇನಾದರೂ ಉಪಾಯ ಹೂಡಬೇಕು.

 ಮಾತು ಒಳ್ಳೆಯದಾಗಲಿ ಕೆಟ್ಟದ್ದಾಗಲಿ ಅದು ಹಸಿವು ನೀಗಿಸುವುದಿಲ್ಲ. ಹಸಿದ ಹೊಟ್ಟೆಗೆ ವಿಚಾರ ಹೇಗೆ ನಿರರ್ಥಕವೋ ಹಾಗೆಯೇ ಕೇವಲ ಮಾತು ಉಪಯೋಗವಿಲ್ಲ. ಮಾತಿನಲ್ಲಿ ಹೊತ್ತು ಕಳೆದರೆ ಅದು ಪುನಃ ದೊರಕದು. ಮಾತು ಮನೆ ಕೆಡಿಸಿತು ತೂತು ಒಲೆ ಕೆಡಿಸಿತು ಎನ್ನುವುದು ಯಾರ ಮಾತೂ ಕೇಳದೆ ಕಾರ್ಯತತ್ಪರ ಆಗಲು ತಿಳಿಸುತ್ತದೆ. ಮಾತಿನ ಮಲ್ಲರು, ಬಾಯಿ ಚಪಲ ಉಳ್ಳವರು ನಿರಂತರ ಮಾತಿನ ಮಳೆಗರೆಯುತ್ತಾರೆ, ಜಂಬ ಕೊಚ್ಚಿಕೊಳ್ಳುತ್ತಾರೆ. ಆದರೆ ಅಂಥವರನ್ನು ಯಾರೂ ಹತ್ತಿರ ಕರೆದುಕೊಳ್ಳುವುದಿಲ್ಲ. ನಮಗೆ ನಮ್ಮ ದೇಶಕ್ಕೆ ಮಾತುಗಾರರಗಿಂತ ಕೆಲಸಗಾರರು ಬೇಕು. ಕಾಯಕವೇ ಕೈಲಾಸ ಎಂದು ಅರಿತು ದುಡಿಯುವ ವರ್ಗ ಆವಶ್ಯಕ. ಸ್ವಾಮಿ ವಿವೇಕಾನಂದರು ಮಾತು, ಮಂತ್ರ ಪೂಜೆ ಇತ್ಯಾದಿಗಳಲ್ಲಿ ಸಮಯ ವ್ಯಯ ಮಾಡುವುದಕ್ಕಿಂತ ಬಯಲಲ್ಲಿ ಫುಟ್ಬಾಲ್ ಆಡುವುದು ಉತ್ತಮ ಎಂದಿದ್ದಾರೆ. ಟನ್ನುಗಟ್ಟಲೆ ಮಾತನಾಡುವುದಕ್ಕಿಂತ ಮಸಿಯಷ್ಟಾದರೂ ಕೆಲಸ ಮಾಡಬೇಕು ಎನ್ನುತ್ತಾರೆ. ಕೆಲಸ ಸಣ್ಣದು ದೊಡ್ಡದು ಎಂದು ಭಾವಿಸದೆ ಇತರರಿಗೆ ಹಾನಿಕಾರಕವಲ್ಲದ ಹೆಚ್ಚಿನ ಜನರಿಗೆ ಉಪಯೋಗ ಆಗುವ ಅಥವಾ ತನಗಾದರೂ ಉಪಯೋಗಕರ ಕೆಲಸ ಮಾಡಬೇಕು. ಶೃದ್ಧೆಯಿಂದ ಮನಃಪೂರ್ವಕವಾಗಿ ತಮ್ಮ ತಮ್ಮ ಕೆಲಸದಲ್ಲಿ ನಿರತರಾಗಿದ್ದರೆ ದೇಶ ತನ್ನಷ್ಟಕ್ಕೆ ತಾನು ಮುಂದೆ ಬರಲು ಸಾಧ್ಯ.

 ಮಾತನಾಡಿದ್ದನ್ನು ಕೃತಿಗಿಳಿಸದವನು ಮನುಷ್ಯ ಅಲ್ಲ ಎಂದು ಅಣ್ಣ ಬಸವಣ್ಣ ಹೇಳುತ್ತಾರೆ. ನುಡಿದರೆ ಮುತ್ತಿನ ಹಾರದಂತಿರಬೇಕು, ಸ್ಫಟಿಕದ ಶಲಾಕೆಯಂತಿರಬೇಕು ಸರಿ ಆದರೆ  ನಮ್ಮ ನಡೆ ಕಿರಾತಕ ಆಗಕೂಡದು. ‘ನುಡಿಯೊಳಗಾಡಿ ನಡೆಯದಿದ್ದರೆ ಮೆಚ್ಚ ನಮ್ಮ ಕೂಡಲ ಸಂಗಮದೇವ’. ಜಗತ್ತಿನಲ್ಲಿ ಕೆಲಸಗಾರರನ್ನೇ ಒಳ್ಳೆಯವರು ಕೆಟ್ಟವರೆನ್ನುವುದು. ಉಪದೇಶ ಮಾಡುವವರನ್ನು ಮಾತನಾಡುವವರನ್ನಲ್ಲ. ಕೆಲಸ ಮಾಡಲು ಅಣಿಯಾದಾಗ ಹಿಂಜರಿಯದೆ, ಕೆಲಸ ಕೆಡುವುದೇನೋ ಎಂದು ಭಾವಿಸದೆ ಮುನ್ನುಗ್ಗುವ ಎದೆಗಾರಿಕೆ ಬೆಳೆಸಿಕೊಳ್ಳಬೇಕು. ಆ ರೀತಿ ಭಾವಿಸಿದಾಗ ಎಲ್ಲವೂ ಸಾಧ್ಯ. ಎಲ್ಲವೂ ಸುಲಭ. ಅಬ್ರಹಾಂ  ಲಿಂಕನ್ ಅವರು ಅದೆಷ್ಟು ಪ್ರಯತ್ನಗಳ ನಂತರ ಅಧ್ಯಕ್ಷ ಸ್ಥಾನಕ್ಕೆ ಏರಿದರು ಎಂಬುದನ್ನು ಮನಕ್ಕಿಳಿಸಿಕೊಳ್ಳಬೇಕು. ಅದಕ್ಕೆ  ಸರ್ವಜ್ಞರು "ಆಡದೆಲೆ ಮಾಡುವವ ರೂಢಿಯೊಳಗುತ್ತಮನು, ಆಡಿ ಮಾಡುವವ ಮಧ್ಯಮ, ಆಡಿಯೂ ಮಾಡದವ ಅಧಮ ಸರ್ವಜ್ಞ" ಎಂದಿದ್ದಾರೆ.

 ಮಾತು ಹಿತ ಮಿತವಾದಷ್ಟು ಒಳ್ಳೆಯದು. ಇಲ್ಲದಿದ್ದರೆ ಅತಿಯಾದರೆ ಅಮೃತವು ಹೇಗೆ ವಿಷವಾಗುತ್ತದೆಯೋ ಮಾತೂ ವಿಷವಾಗುತ್ತದೆ. ಸಹ್ಯವಾಗುವುದಿಲ್ಲ. ಮಾತುಗಾರಿಕೆಗಿಂತ ಕೃತಿಗಾರಿಕೆ ಶೋಭೆ ತರುತ್ತದೆ. ಕೀರ್ತಿ ತರುತ್ತದೆ. ಮಾತು ಪುರಾತನ ಆದರೂ ಕೃತಿ ನೂತನವಾಗಬೇಕು. ಅಂದಾಗ ಅಲ್ಲಿ ಕತ್ತಲು ಕಳೆದು ಬೆಳಕು ಹರಿಯುತ್ತದೆ. ಆದುದರಿಂದ ನಾವೆಲ್ಲರೂ ಮಾತು ಕಡಿಮೆ ಮಾಡಿ ಕೆಲಸ ಮಾಡಲು ಸಿದ್ಧರಾಗುವ.

ಪ್ರೊ ಬಿ ಆರ್ ಅಣ್ಣಾಸಾಗರ