ನೀವು ಎಂದಿಗೂ ಕೀಳಲ್ಲ.

Thumbnail

ನೀವು ಎಂದಿಗೂ ಕೀಳಲ್ಲ.

                 

                                    ಪ್ರಿಯ ವಿದ್ಯಾರ್ಥಿಗಳೆ,

                                                     ನೀವೆಲ್ಲಾ ಹೇಗಿದ್ದೀರಿ? ನೀವು ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ  ಓದುತ್ತಿದ್ದರೂ ತೊಂದರೆಯಿಲ್ಲ, ನೀವು ನನ್ನ ವಿದ್ಯಾರ್ಥಿಗಳೇ ಆಗುತ್ತೀರಿ. ಏಕೆಂದರೆ ನಾನು ಕಳೆದ ಇಪ್ಪತ್ತನಾಲ್ಕು ವರ್ಷಗಳಿಂದ ಕನ್ನಡದ ಉಪನ್ಯಾಸಕನಾಗಿ ಕರ್ತವ್ಯ ನಿರ್ವಹಿಸುತ್ತಾ ಬಂದವನು. ವಿದ್ಯಾರ್ಥಿಗಳಾದ ನಿಮ್ಮ ಮನಸ್ಸನ್ನು ಅರಿಯುವ ಪ್ರಯತ್ನ ಮಾಡುತ್ತಾ ಬಂದವನು. ವಿದ್ಯಾರ್ಥಿಗಳ ಮನಸ್ಸನ್ನು ತಿಳಿದುಕೊಂಡು ಒಂದಿಷ್ಟು ಆಪ್ತ ಸಲಹೆ ಕೊಡಲೆಂದು 2003 ರಲ್ಲಿ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಆಪ್ತ ಸಲಹಾ ತರಬೇತಿಯನ್ನೂ ಕೂಡ ಪಡೆದಿರುತ್ತೇನೆ.

 

                          ವಿದ್ಯಾರ್ಥಿ ಮಿತ್ರರೆ, ಕಳೆದ ಒಂದೂವರೆ ವರ್ಷದಿಂದ ಶೈಕ್ಷಣಿಕ ಚಟುವಟಿಕೆಗಳು ಸರಿಯಾಗಿ ನಡೆದಿಲ್ಲ. ಪದವಿ ಪಡೆಯಲೆಂದು ಶಾಲೆ ಕಾಲೇಜಿಗೆ ಬಂದ ನಿಮಗೆ ತುಂಬಾ ನಿರಾಶೆ ಆಗಿರಬಹುದು. ಯಾವುದೋ ಕಾಲೇಜಿನಲ್ಲಿ ಆನ್ ಲೈನ್ ಪಾಠಗಳು ನಡೆಯುತ್ತಿವೆ. ನಮಗೆ ಏನೂ ಅಧ್ಯಯನ ನಡೆಯುವುದಿಲ್ಲ. ನಮ್ಮ ಹಿತಚಿಂತನೆಯನ್ನು ಯಾರೂ ಮಾಡುತ್ತಿಲ್ಲ ಎಂಬ ಕೊರಗು ಬಾಧಿಸುತ್ತಿರಬಹುದು. ದಯಮಾಡಿ ಅಂಥ ನಿರಾರ್ಥಕ ಚಿಂತನೆಗಳನ್ನು ಬಿಡಿ.

 

ಕೆಲವು  ಟಿವಿ ಚ್ಯಾನೆಲ್ಲುಗಳನ್ನು ನೋಡಿದರೆ ಕೊರೊನಾದಿಂದ ಇಡೀ ಲೋಕವೇ ನಾಶವಾಗಿ ಹೋಯಿತೋ ಎಂಬ ಭಾವನೆಯನ್ನು ಉಂಟು ಮಾಡುತ್ತಿವೆ. ಅಂಥವುಗಳನ್ನು ನೋಡಿದಾಗ ನಿಮ್ಮ ನೆಮ್ಮದಿ ಮತ್ತಷ್ಟು ಕೆಡುತ್ತದೆ. ಆದರೆ ಈ ಸಂದರ್ಭದಲ್ಲಿ ನೀವು ನಿಮ್ಮ ಮನೆಮಂದಿಯ ಜೊತೆಗೆ ಬೆರೆತು ಧನಾತ್ಮಕವಾದ ಚಿಂತನೆಯನ್ನು ರೂಢಿಸಿಕೊಳ್ಳಿ. ವೈದ್ಯರು ಹೇಳುವಂತೆ ಸಾಮಾಜಿಕ, ದೈಹಿಕ ಅಂತರ ಕಾಪಾಡಿಕೊಳ್ಳುವುದು, ಸ್ಯಾನಿಟೈಸರ್ ನಿಂದ ಅಥವಾ ಸೋಪಿನಿಂದ ಆಗಾಗ ಕೈ ತೊಳೆದುಕೊಳ್ಳುವುದು, ಹೊರಗಡೆ ಹೋಗಬೇಕಾಗಿ ಬಂದಾಗ ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಇವೆಲ್ಲ ನಾವು ಪಾಲಿಸಬೇಕಾದ ಆದ್ಯ ನಿಯಮಗಳು.

 

                       ವಿದ್ಯಾರ್ಥಿಗಳಾದ ನಿಮ್ಮ ಕೆಲವು ಸಮಸ್ಯೆಗಳನ್ನು ವಿಶ್ಲೇಷಿಸಿ ಅವುಗಳಿಗೆ ಒಂದಿಷ್ಟು ಪರಿಹಾರವನ್ನು ನೀಡಲು ಪ್ರಯತ್ನಿಸುತ್ತೇನೆ. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಾದ ನೀವು ಕೀಳರಿಮೆಯಿಂದ ನರಳುತ್ತಿರುವುದು ನನಗೆ ಕಂಡ ಮುಖ್ಯ ಅಂಶ. ಈ ಕೀಳರಿಮೆ ಯಾಕಾಗಿ? ಯಾವುದರಿಂದ ಬಂದಿದೆ? ಎಂದು ವಿಶ್ಲೇಷಿಸುವುದಾದರೆ,

                                ಬಹುಪಾಲು ವಿದ್ಯಾರ್ಥಿಗಳು ನೀವು ಹಳ್ಳಿಯವರು ಎಂದು ಕೀಳಾದ ಭಾವನೆಯನ್ನು ನಿಮ್ಮ ಬಗ್ಗೆಯೇ ನೀವು ಹೊಂದಿರುತ್ತೀರಿ. ನಗರಗಳಲ್ಲಿ ಇರುವ ಕಾಲೇಜುಗಳಿಗೆ ಬರುವ ಹಳ್ಳಿಯ ವಿದ್ಯಾರ್ಥಿಗಳನ್ನು ನೋಡಿದ್ದೇನೆ. ಮೊದಲ ವರ್ಷವಂತೂ ಮುದುರಿಕೊಂಡೇ ಇರುತ್ತಾರೆ.. ಮಾತಾಡಲು ಮುಜುಗರ, ನಮ್ಮನ್ನು ಕಂಡರೆ ಯಾರೋ ನಗುತ್ತಾರೆ, ನಾವು ನಗೆಪಾಟಲಿಗೆ ಒಳಗಾಗುತ್ತೇವೆ ಎಂದು ಮುದುರಿ ಕುಳಿತುಕೊಳ್ಳುತ್ತೀರಿ. ಹಳ್ಳಿಯಾಗಲಿ – ದಿಲ್ಲಿಯಾಗಲಿ ಎಲ್ಲವೂ ಒಂದು ಭೂಪ್ರದೇಶವಷ್ಟೇ.

 

                                 ಭಾಷೆಯ ಸಮಸ್ಯೆ

                                     ಪದವಿ ಪಡೆಯಲು ಬಂದ ಗ್ರಾಮೀಣ ವಿದ್ಯಾರ್ಥಿಗಳು ಕೀಳರಿಮೆಯಿಂದ ನರಳಲು ಇನ್ನೊಂದು ಕಾರಣ ಭಾಷೆಯ ಸಮಸ್ಯೆ. ಇಂಗ್ಲಿಷ್ ನಮಗೆ ಆಡಲು, ಓದಲು, ಬರೆಯಲು ಬರುವುದಿಲ್ಲ ಅಂತನ್ನುವ ಭಾವನೆ ನಿಮ್ಮಲ್ಲಿ ಅನೇಕರಲ್ಲಿ ಇದೆ. ಮುಖ್ಯವಾಗಿ ಅನೇಕ ಹೆಣ್ಣು ಮಕ್ಕಳು ಈ ರೀತಿಯ ಭಾವನೆಗಳಿಂದ ಮುದುರಿ ಕೂರುತ್ತಾರೆ. ತಮಗೆ ಇಂಗ್ಲಿಷ್ ಗೊತ್ತಿಲ್ಲ, ಇಂಗ್ಲಿಷ್ ಗೊತ್ತಿಲ್ಲದ ಕಾರಣಕ್ಕೆ ತಾವು ನಗರದ ವಿದ್ಯಾರ್ಥಿಗಳಂತೆ ಜಾಣರಲ್ಲ, ಇತ್ಯಾದಿ ಅನಿಸಿಕೆಗಳು ಹೆಣ್ಣು ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಇಂಗ್ಲಿಷ್ ಕೂಡಾ ಕನ್ನಡದಷ್ಟೇ ಒಂದು ಭಾಷೆ ಅಷ್ಟೇ

                            

ವಿಷಯದ ಆಯ್ಕೆಯ ಬಗ್ಗೆ ಕೀಳರಿಮೆ

                                       ಹೆಚ್ಚಾಗಿ ಬಿಎ ಮಾಡುವ ವಿದ್ಯಾರ್ಥಿಗಳು ತಾವು ಎಲ್ಲರಿಗಿಂತ ಕಳಪೆ. ತಮ್ಮ ವಿಷಯ ಯಾವುದೇ ಮಹತ್ವದ್ದಲ್ಲ ಎಂದು ಅಂದುಕೊಂಡಿರುತ್ತಾರೆ. ಹತ್ತನೆಯ ತರಗತಿಯಲ್ಲಿ ಹೆಚ್ಚು ಅಂಕ ಗಳಿಸಿದವರು ಪಿಯುಸಿಗೆ ಸೇರುವಾಗ ವಿಜ್ಞಾನ ವಿಷಯ  ತೆಗೆದುಕೊಂಡರೆ ಅವರನ್ನು ಬುದ್ಧಿವಂತರಂತೆಯೂ, ಕಾಮರ್ಸ್ ಓದುವವರನ್ನು ಸಾಮಾನ್ಯದವರು, ಹಾಗೂ ಕಲಾ ವಿಭಾಗದವರನ್ನು ದಡ್ಡರು ಎಂಬಂತೆ ,ಸಮಾಜ, ಸಮೂಹ ಮಾಧ್ಯಮಗಳು ಬಿಂಬಿಸುತ್ತ ಬಂದಿವೆ. ನೀವು ಬಿಎ ಓದುತ್ತಿದ್ದರೆ ಕುಟುಂಬದವರ ಜೊತೆ, ಸರಿಸಮಾನರ ಜೊತೆ, ಆ ಬಗ್ಗೆ ಹೇಳಿಕೊಳ್ಳಲೂ ಕೂಡ ಹಿಂಜರಿಯುತ್ತೀರಿ. ಬಿಎ ಎಂದರೆ ಯಾವುದೇ ಸ್ಕೋಪು ಇಲ್ಲದ ವಿಷಯ ಅಂತ ನಿಮ್ಮ ತಲೆಗೆ ಯಾರೋ ತುಂಬಿದ್ದನ್ನು ನೀವು ಹಾಗೆಯೇ ನಂಬಿರುತ್ತೀರಿ.

 

                         ಇವೆಲ್ಲ ತುಂಬ ತಪ್ಪಾದ ತಿಳಿವಳಿಕೆಗಳು. ನೀವು ನಿಮ್ಮ ಕೀಳರಿಮೆಯಿಂದ ಹೊರಬರಲು ಸಾಧ್ಯವಿದೆ. ಎಲ್ಲರಂತೆ ಆತ್ಮ ಗೌರವದಿಂದ ಪದವಿಯ ಶಿಕ್ಷಣದ ಜೊತೆಗೆ ನಿಮ್ಮ ವ್ಯಕ್ತಿತ್ವವನ್ನು ಅರಳಿಸಿಕೊಳ್ಳಲು ಸಾಧ್ಯವಿದೆ.

 

                   ಮೊದಲಿಗೆ ನೀವು ಅಧ್ಯಯನ ಮಾಡುವ  ಕಾಲೇಜು ಕಳಪೆ, ಇತರ ಕಾಲೇಜು ಶ್ರೇಷ್ಠ ಎಂಬ ಭಾವನೆಯನ್ನು ಬಿಡಿ. ಇಂದು ಸರ್ಕಾರದ ಕಾಲ ಕಾಲದ ಉನ್ನತ ತರಬೇತಿಯ ಕಾರಣದಿಂದ  ಪರಿಣತ ಅಧ್ಯಾಪಕರು ಕಾಲೇಜುಗಳಲ್ಲಿ ಇದ್ದಾರೆ. ಕಾಲ ಕಾಲಕ್ಕೆ ಸರಕಾರ ವಿದ್ಯಾರ್ಥಿಗಳಾದ ನಿಮ್ಮ ಉನ್ನತಿಕೆಗೆ  ಹಲವು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿದೆ. ನೀವು ಅವುಗಳ ಸದುಪಯೋಗ ಪಡೆದುಕೊಳ್ಳಬೇಕು.

 

                     ಇಂಗ್ಲಿಷ್ ಭಾಷೆಯನ್ನು ನಿಮ್ಮದಾಗಿಸಿಕೊಳ್ಳುವುದಕ್ಕೆ ಸುಲಭವಾದ ಉಪಾಯವಿದೆ. ನಿಮ್ಮ ಬಳಿ ಇರುವ ಮೊಬೈಲ್ ನಿಂದ ಅದನ್ನು ಸಾಧ್ಯವಾಗಿಸಿಕೊಳ್ಳಬಹುದು. ಆಕಾಶವಾಣಿಯಿಂದ  ಕಾಲಕಾಲಕ್ಕೆ ಇಂಗ್ಲಿಷ್ ವಾರ್ತೆಯು ಬಿತ್ತರಗೊಳ್ಳುತ್ತದೆ. ಬೆಳಿಗ್ಗೆ ಆರು ಗಂಟೆ, ಎಂಟೂ ಕಾಲು, ಮಧ್ಯಾಹ್ನ ಎರಡು ಗಂಟೆ, ಸಂಜೆ ಆರು, ರಾತ್ರಿ ಒಂಬತ್ತು ಹೀಗೆ ಪ್ರಸಾರ ಆಗುತ್ತಿರುತ್ತದೆ. ನೀವು ಅದನ್ನು ಕಿವಿಗೊಟ್ಟು ಕೇಳುತ್ತಿರಬೇಕು. ಸತತ ಕೇಳಿದರೆ ನಿಮಗೆ ಭಾಷೆಯ ಶೈಲಿ, ವ್ಯಾಕರಣದ ಬಳಕೆ ಸಹಜವಾಗಿ ಮನದಟ್ಟಾಗುತ್ತ ಹೋಗುತ್ತದೆ. ಮನೆಯಲ್ಲಿ ಟಿವಿ ಇದ್ದರೆ ದೂರದರ್ಶನದ ನ್ಯೂಸ್ ಚ್ಯಾನೆಲ್ಲಿನಲ್ಲಿ ಕಾಲಕಾಲಕ್ಕೆ ಇಂಗ್ಲಿಷ್ ವಾರ್ತೆಯನ್ನು ಪ್ರಸಾರ ಮಾಡುತ್ತಿರುತ್ತಾರೆ. ಅದನ್ನೂ ಕೂಡ ನೀವು ಕೇಳಬೇಕು. ಯಾವುದೇ ಭಾಷೆಯನ್ನು ಸತತ ಕೇಳಬೇಕು. ತಪ್ಪಾಗಲಿ, ಸರಿಯಾಗಲಿ ಆಡಲು ಪ್ರಾರಂಭಿಸಬೇಕು. ಆಗ ನಿಧಾನವಾಗಿ ಭಾಷೆ ನಿಮ್ಮ ಹಿಡಿತಕ್ಕೆ ಬರುತ್ತದೆ. ಭಾಷೆಯನ್ನು ಮಾತಾಡುವ, ಕೇಳುವ, ಓದುವ ಹಾಗೂ ಬರೆಯುವ ಮೂಲಕ ಕಲಿಯಬೇಕು ಎನ್ನುವ ಸೂತ್ರವಿದೆ. ಅದರಂತೆ ನೀವು ಇಂಗ್ಲಿಷ್ ಅನ್ನು ನಿರ್ಭಿಡೆಯಿಂದ ಆಡಲು ಪ್ರಾರಂಭಿಸಿದರೆ ನಿಧಾನಕ್ಕೆ ಭಾಷೆಯ ಹಿಡಿತ ಸಿಗುತ್ತದೆ. ನೀವು ತಪ್ಪು ಮಾಡಿದಾಗ ತಿದ್ದಿಕೊಳ್ಳಿ. ಯಾರಾದರೂ ನಿಮ್ಮ ಭಾಷಾ ಬಳಕೆಯ ತಪ್ಪಿನ ಬಗ್ಗೆ ಹಾಸ್ಯ ಮಾಡಿದರೆ ಆ ಬಗ್ಗೆ ಚಿಂತಿಸಬೇಡಿ.

 

                  ಈಗ ಲಾಕ್ ಡೌನ್. ಮನೆಯಲ್ಲಿ ಇರಲು ಕಷ್ಟ. ಆದರೂ ಅನಿವಾರ್ಯ. ಕೆಲವರು ಹೊಟ್ಟೆಪಾಡಿಗಾಗಿ ಬೇರೆ ಬೇರೆ ಕಡೆ ಸಣ್ಣಪುಟ್ಟ ವೃತ್ತಿಯಲ್ಲಿ ಇದ್ದೀರಿ. ಈ ಬಗ್ಗೆಯೂ ನಿಮಗೆ ಕೀಳರಿಮೆ ಬೇಡ. ಗೌರವಯುತವಾದ ಯಾವುದೇ ಕೆಲಸವನ್ನು ನೀವು ಮಾಡುತ್ತಿರುವಿರಾದಲ್ಲಿ ಅದರ ಬಗ್ಗೆ ನೀವು ಹೆಮ್ಮೆ ಪಟ್ಟುಕೊಳ್ಳಿ. ನನಗೆ ಎಷ್ಟೋ ವಿದ್ಯಾರ್ಥಿಗಳು ತರಕಾರಿ ಮಾರಾಟ ಮಾಡುತ್ತಲೋ, ಹೋಟೆಲ್ ನಲ್ಲಿ ಸಪ್ಲಾಯರ್ ಆಗಿಯೋ ಸಿಕ್ಕಿದ್ದಿದೆ. ಹಾಗೆ ಕಂಡ ವಿದ್ಯಾರ್ಥಿಗಳು ನಾಚುಗೆಯಿಂದ ಮುಖ ತಪ್ಪಿಸಿಕೊಳ್ಳುವುದನ್ನು ಗಮನಿಸಿದ್ದೇನೆ. ನಿಮ್ಮ, ಹಾಗೂ ಮನೆಯವರ ಆರ್ಥಿಕ ಚೈತನ್ಯಕ್ಕಾಗಿ ನೀವು ಮಾಡಬಹುದಾದ ಪ್ರಾಮಾಣಿಕ ವೃತ್ತಿ ಯಾವುದೂ  ಕೀಳಲ್ಲ. ಆನ್ ಲೈನ್ ಪಾಠ ಕೇಳುತ್ತ ನೀವು ಸಣ್ಣ ಪುಟ್ಟ ಸಂಪಾದನೆಯನ್ನೂ ಕೂಡ ಮಾಡಬಹುದು.

                 ನಿಮ್ಮ ಬಳಿ ಇರುವ ಮೊಬೈಲ್ ಅನ್ನು ಸದುಪಯೋಗಪಡಿಸಿಕೊಳ್ಳುವುದು ಹೇಗೆ? ಎಂಬುದು ನಿಮಗೆ ತಿಳಿದಿರಬೇಕು. ಶೈಕ್ಷಣಿಕವಾದ ಎಷ್ಟೋ ವಿಚಾರಗಳು ನಿಮಗೆ ಗೂಗಲ್, ಯೂಟ್ಯೂಬ್ ಇತ್ಯಾದಿಗಳಲ್ಲಿ ಸಿಗುತ್ತವೆ. ಅಂಥವುಗಳನ್ನು ನೀವು ನೋಡಿ ಹೆಚ್ಚುವರಿಯಾದ ಮಾಹಿತಿಗಳನ್ನು ಪಡೆಯಬಹುದು. ಸುಳ್ಳು, ಅಪ್ರಾಮಾಣಿಕ,ಎಡಿಟ್ ಮಾಡಿದ ಫೇಕ್ ಸುದ್ದಿಗಳನ್ನು ನಂಬಬೇಡಿ. ಫೇಸ್ ಬುಕ್, ವಾಟ್ಸ್ ಆ್ಯಪ್ ಇತ್ಯಾದಿಗಳಲ್ಲಿ ಸುಳ್ಳು ಸುದ್ದಿಗಳನ್ನೇ ಸತ್ಯ ಎಂದು ಬಿಂಬಿಸಲಾಗುತ್ತದೆ. ಅಂಥವುಗಳನ್ನು ನೀವು ನಂಬಿದರೆ ಸುಲಭವಾಗಿ ಮೋಸ ಹೋಗುತ್ತೀರಿ.

 

                  ಹದಿನೆಂಟು ತುಂಬಿದವರು ನೀವು. ಮತದಾನದ ಹಕ್ಕನ್ನು ಪಡೆದವರು. ಹಾಗಾಗಿ ರಾಜಕೀಯ ಪಕ್ಷಗಳು ನಿಮ್ಮನ್ನು ತಮ್ಮ ದಾಳವನ್ನಾಗಿ ಮಾಡಿಕೊಳ್ಳುತ್ತವೆ. ನೀವು ವಿವೇಚನೆಯಿಲ್ಲದೆ ಅವುಗಳ ಬಲಿಪಶು ಆಗಬಾರದು. ಹಾಗೆಯೇ ಜಾತಿ, ಧರ್ಮ, ಮತೀಯವಾದಿ ಸಂಘಟನೆಗಳೂ ಕೂಡ ನಿಮ್ಮನ್ನು ದಾಳವನ್ನಾಗಿ ಮಾಡಿಕೊಳ್ಳುತ್ತವೆ. ಅಂಥವುಗಳ ಮೋಸದ ಜಾಲಕ್ಕೆ ಬಲಿಯಾಗಬಾರದು. ‘ಗುಡಿ ಚರ್ಚು ಮಸೀದಿಗಳ ಬಿಟ್ಟು ಹೊರಬನ್ನಿ’ ಎಂದು ಕುವೆಂಪು ಅವರು ಕರೆದಂತೆ, ನೀವು ಇವುಗಳಿಂದ ಅತೀತವಾಗಿ ನಿಲ್ಲಿ. ಅಗ ವಿಶಾಲವಾದ ದೃಷ್ಟಿಕೋನ ನಿಮ್ಮಲ್ಲಿ ಬೆಳೆಯುತ್ತದೆ. ನಮ್ಮ ನಮ್ಮ ಧಾರ್ಮಿಕ ನಂಬಿಕೆ ,ಆಚರಣೆ, ಪೂಜೆ ಇತ್ಯಾದಿಗಳೆಲ್ಲವೂ ನಮ್ಮ ಸ್ವಂತದ ವಿಷಯ. ನಮ್ಮ ವೈಯಕ್ತಿಕ ಬದುಕಿಗೆ ಸೀಮಿತವಾಗಿದ್ದರೆ ಸೊಗಸು. ಅದು ಇನ್ನೊಬ್ಬರಿಗೆ ಕಿರಿಕಿರಿಯಾಗುವಂತೆ ಮುಂದುವರಿದರೆ ಆಗ ಅಸಹನೆ ಉಂಟಾಗುತ್ತದೆ. ಪದವೀಧರರು ಎನಿಸಿಕೊಳ್ಳುವ ನೀವು ಈ ಸಂಕೋಲೆಗಳಿಂದ ಹೊರಗೆ ಬರಬೇಕು. ಆಗ ನೀವು ಏನೆಂದು ಇನ್ನೊಬ್ಬನ ಕುರಿತಾಗಿ ಭಾವಿಸಿರುತ್ತೀರೋ ಅದು ತಪ್ಪು ಎಂದು ತಿಳಿವಳಿಕೆ ಮೂಡುತ್ತದೆ. ಆಗ ನೀವು ಪೂರ್ವಾಗ್ರಹ ಪೀಡಿತರಾಗಿ ಇದ್ದಿರಿ ಎಂದು ನಿಮಗೇ ಅನಿಸತೊಡಗುತ್ತದೆ.

 

                         ಹೆಣ್ಣು ಮಕ್ಕಳನ್ನು ಉದ್ದೇಶಿಸಿ ಕೆಲವು ಮಾತು ಹೇಳಲು ಇಚ್ಛಿಸುತ್ತೇನೆ. ಎಷ್ಟೋ ಹೆಣ್ಣು ಮಕ್ಕಳು ಪದವಿಯ ಓದು ಸಂಪೂರ್ಣ ಆಗುವ ಮೊದಲೇ ಮದುವೆಯಾಗಿ ಹೋಗುವುದಿದೆ. ಪದವಿ ಓದಲು ಬಂದಿರುವ ಹೆಣ್ಣುಮಕ್ಕಳಾದ ನಿಮ್ಮ ಮೊದಲ ಆದ್ಯತೆ ಓದಿನದ್ದಾಗಿರಬೇಕು. ಕೆಲವರ ಮನೆಗಳಲ್ಲಿ ಬೇರೆ ಬೇರೆ ಸಮಸ್ಯೆಗಳು ಇದ್ದಿರಬಹುದು. ಅನಿವಾರ್ಯ ಎನಿಸಿದಲ್ಲಿ ಮದುವೆ ಮಾಡಿಕೊಳ್ಳಿ. ಆದರೆ ಓದನ್ನು ಅರ್ಧಕ್ಕೆ ಮೊಟಕುಗೊಳಿಸಿಕೊಳ್ಳಬೇಡಿ. ನಿಮ್ಮ ಭವಿಷ್ಯದ ಬದುಕಿನ ದೃಷ್ಟಿಯಿಂದ ಕನಿಷ್ಠ ಪದವಿ ಶಿಕ್ಷಣ ಅವಶ್ಯಕ. ನಂತರ ಸ್ನಾತಕೋತ್ತರ ಪದವಿ ಪಡೆದರೆ ಇನ್ನೂ ಉತ್ತಮ. ಸರ್ಕಾರ  ಇಂದು ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಾಕಷ್ಟು ವೆಚ್ಚ ಮಾಡುತ್ತಿದೆ. ಬೋಧನಾ ಶುಲ್ಕದ ವಿನಾಯಿತಿ ಇದೆ. ಹಳ್ಳಿಗಳ ಸಾಮಾನ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿಯೂ ಇಂದು ಸ್ನಾತಕೋತ್ತರ ಅಧ್ಯಯನ ಕೇಂದ್ರಗಳಿವೆ. ಈಗ ಎಮ್ ಎ, ಎಮ್ ಕಾಮ್ ಇತ್ಯಾದಿ ಮಾಡುವುದು ಸುಲಭವಾಗಿದೆ. ಹೀಗಿರುವಾಗ ಸಿಕ್ಕ ಅವಕಾಶವನ್ನು ಕಳೆದುಕೊಳ್ಳಬೇಡಿ. ಆಮೇಲೆ ನೀವು ಕೀಳರಿಮೆಯಿಂದ ನರಳುವಂತಾಗುತ್ತದೆ.

 

                        ಒಟ್ಟಾರೆಯಾಗಿ ಪ್ರಿಯ ವಿದ್ಯಾರ್ಥಿಗಳೆ, ನೀವು ಯಾರಿಗೂ ಯಾವುದರಲ್ಲೂ ಕಡಮೆಯಲ್ಲ. ನಿಮಗೆ ನಿಮ್ಮ ಸಾಮರ್ಥ್ಯ ತಿಳಿದಿಲ್ಲ. ಮನಸ್ಸು ಮಾಡಿದರೆ  ಅಸಾಧ್ಯವಾದುದನ್ನು ಸಾಧ್ಯವಾಗಿಸಬಲ್ಲಿರಿ. ಹಾಗಾಗಿ ನಾನು ಎಲ್ಲರಿಗಿಂತ ಕೀಳು ಎಂಬ ಕೀಳರಿಮೆಯಿಂದ ಹೊರಬನ್ನಿ. ಈ ಸಂಕಟದ ದಿನಗಳು ಕೆಲವು ತಿಂಗಳು ಮಾತ್ರ. ಕಾಲ ಸರಿ ಹೋದಾಗ ನೀವು ಕಳಕೊಂಡದ್ದನ್ನು ಮರಳಿ ಪಡೆಯಲು ಸಾಧ್ಯ. ಅಂಥ ದಿನಗಳು ಬಂದೇ ಬರುತ್ತವೆ ಎಂಬ ನಂಬಿಕೆಯಿಂದ ವರ್ತಮಾನ ಕಾಲದಲ್ಲಿ ಬದುಕಬೇಕು. ಏಕೆಂದರೆ ಜೀವನ ಮುಖ್ಯ. ನಿಮಗೆ ಒಳಿತಾಗಲಿ.

                                ***********

ಡಾ ಪಿ ಬಿ ಪ್ರಸನ್ನ, ಸಹಪ್ರಾಧ್ಯಾಪಕರು