ಕೋವಿಡ್–19 ಪಯಣ : ನಿರಾಕರಣೆಯಿಂದ ಸ್ವೀಕಾರದತ್ತ (ಕುಬ್ಲರ್ ರಾಸ್ ಮಾದರಿ)

Thumbnail

ಕೋವಿಡ್–19 ಪಯಣ : ನಿರಾಕರಣೆಯಿಂದ ಸ್ವೀಕಾರದತ್ತ

(ಕುಬ್ಲರ್ ರಾಸ್ ಮಾದರಿ)

 

ನಮ್ಮ ದೇಶದ ಕೊರೋನಾ ಎಣಿಕೆ 100 ಆಗಿದ್ದಾಗ ಇದ್ದ ಜನರ ಭಯ ಈಗಿನ ದಿನಗಳಲ್ಲಿ  1,50,000 ಕ್ಕಿಂತ ಹೆಚ್ಚಿರುವಾಗ ಇಲ್ಲ. ಇದಕ್ಕೆ ಉತ್ತರ ಮನುಷ್ಯನ ಮಾನಸಿಕ ದೃಷ್ಟಿಕೋನದಲ್ಲಿದೆ. ಈ ಹಂತದಲ್ಲಿ ನೆನಪಾಗುವುದು“ಕುಬ್ಲರ್ ರಾಸ್ ಮಾದರಿ ಎಂಬ ತತ್ವ. ಅಂದರೆ , ಮನುಷ್ಯನು ಯಾವುದೇ ದುರಂತ, ನೈಸರ್ಗಿಕ ವಿಕೋಪ, ಅಪಘಾತದ ಮೂಲಕ ಹಾದು ಹೋದಾಗ ಐದು ಹಂತಗಳಲ್ಲಿ ಹಾದು ಹೋಗುತ್ತಾನೆ ಎಂದು ಈ ತತ್ವ ಪ್ರತಿಪಾದಿಸುತ್ತದೆ. ಅವುಗಳೆಂದರೆ

•             ನಿರಾಕರಣೆ

•             ಕೋಪ

•             ಚೌಕಾಶಿ

•             ಖಿನ್ನತೆ

•             ಸ್ವೀಕಾರ

ಈ ಮಾದರಿಯನ್ನು ಮೊದಲ ಬಾರಿಗೆ ಸ್ವಿಸ್- ಅಮೇರಿಕನ್ ಮನೋವೈದ್ಯೆ ಎಲಿಝಾಬೆತ್ ಕುಬ್ಲರ್ ರಾಸ್ ಅವರು 1969 ರಲ್ಲಿ ಬರೆದ ಡೆತ್ ಆ್ಯಂಡ್ ಡೈಯಿಂಗ್ ಪುಸ್ತಕದಲ್ಲಿ ಪರಿಚಯಿಸಿದರು. ಆವರು ಚಿಕಾಗೋ ವಿಶ್ವವಿದ್ಯಾಲಯದ ವೈದ್ಯಕೀಯ ಶಾಲೆಯಲ್ಲಿ ಸಾವು ಮತ್ತು ಸಾಯುವ ವಿಷಯದ ಬಗ್ಗೆ ಬೋಧನೆಯ ಕೊರತೆಯಿದೆ ಎಂಬುದನ್ನು ಮನಗಂಡರು. ಆ ಶಾಲೆಯಲ್ಲಿ ಸಾವನ್ನು ಎದುರಿಸುತ್ತಿರುವ ರೋಗಿಗಳನ್ನು ಅವರು ಕಣ್ಣಾರೆ ಕಂಡರು. ರೋಗಿಗಳೊಂದಿಗಿನ ಅವರ ಕೆಲಸವು ಅವರಿಗೆ ಈ ವಿಷಯದಲ್ಲಿ ಬಹಳಷ್ಟು ಪ್ರೇರೆಪಣೆಯನ್ನು ಒದಗಿಸಿತು. ಈ ವಿಷಯದಲ್ಲಿ ಅವರು ಕೈಗೊಂಡ ಪ್ರಾಜೆಕ್ಟ ಕೆಲಸವು ಬಹಳಷ್ಟು ವಿಚಾರ ಸಂಕಿರಣಗಳಿಗೆ ದಾರಿಯಾಯಿತು, ಈ ವಿಚಾರ ಸಂಕಿರಣಗಳು, ರೋಗಿಗಳೊಡನೆ ಅವರ ಸಂದರ್ಶನ, ಅವರ ಸಂಶೋಧನಾ ಕಾರ್ಯ ಈ ಪುಸ್ತಕಕ್ಕೆ ಬುನಾದಿಯಾಯಿತು.

ತೀವ್ರ ಅನಾರೋಗ್ಯಕ್ಕೆ ಅನ್ವಯಿಸಿ ಕುಬ್ಲರ್ ರಾಸ್ ದುಖಃದ ಹಂತಗಳು

                ಕುಬ್ಲರ್ ರಾಸ್ ಮೂಲತಃ ಈ ಹಂತಗಳನ್ನು ತಮ್ಮದೇ ಸಾವಿನೊಂದಿಗೆ ಹೋರಾಡುತ್ತಿರುವ ರೋಗಿಗಳಿಗೆ ಅನ್ವಯಿಸಿ ವಿವರಿಸಿದರಾದರೂ ನಂತರ ಅದನ್ನು ಆ ರೋಗಿಗಳ ಕುಟುಂಬದವರು, ಸ್ನೇಹಿತರು ಸಹ ಈ ಹಂತಗಳ ಪ್ರಕ್ರಿಯೆಗೆ ಒಳಗಾಗುತ್ತಾರೆ ಎಂದು ವಿವರಿಸಿದರು. ಆಂಃಆಂ ಎಂಬ ಸಂಕ್ಷಿಪ್ತ ರೂಪದಿಂದ ಜನಪ್ರಿಯವಾಗಿರುವ ಈ ಹಂತಗಳು ಹೀಗಿವೆ:

1.            ನಿರಾಕರಣೆ – ಮೊದಲ ಪ್ರತಿಕ್ರಿಯೆ ನಿರಾಕರಣೆ. ಈ ಹಂತದಲ್ಲಿ ರೋಗ ನಿರ್ಣಯವು ಹೇಗಾದರೂ ತಪ್ಪಾಗಿದೆ ಎಂದು ವ್ಯಕ್ತಿಗಳು ನಂಬುತ್ತಾರೆ ಅಲ್ಲದೇ ಸುಳ್ಳು ಮತ್ತು ಯೋಗ್ಯವಾದ ವಾಸ್ತವಕ್ಕೆ ಅಂಟಿಕೊಳ್ಳುತ್ತಾರೆ.

2.            ಕೋಪ - ನಿರಾಕರಣೆ ಮುಂದುವರೆಯಲು ಸಾಧ್ಯವಿಲ್ಲ ಎಂದು ಅರಿವಾದಾಗ ನಿರಾಶೆಗೊಳ್ಳುತ್ತಾರೆ, ಆ ನಿರಾಶೆ ಕೋಪದಲ್ಲಿ ಪ್ರಕಟಿಸುತ್ತಾರೆ. “ಇದು ನನಗೇ ಹೇಗೆ ಸಂಭವಿಸಿತು?”, “ಇದು ನ್ಯಾಯವಲ್ಲ!”, “ಯಾರನ್ನು ದೂಷಿಸುವುದು?”, “ಇದು ಏಕೆ ಸಂಭವಿಸುತ್ತದೆ?”

3.            ಚೌಕಾಶಿ - ಮೂರನೆ ಹಂತವು ವ್ಯಕ್ತಿಯು ದುಃಖದ ಕಾರಣವನ್ನು ಹೇಗಾದರೂ ತಪ್ಪಿಸಬಹುದು ಎಂಬ ಭರವಸೆಯನ್ನು ಒಳಗೊಂಡಿರುತ್ತದೆ. ಇನ್ನು ಮುಂದೆ ಜೀವನ ಶೈಲಿಯನ್ನು ಬದಲಾಯಿಸಿ ಬದುಕಿದರೆ ಸರಿ ಹೋಗಬಹುದಾ? ಎಂದುಕೊಳ್ಳುವುದು, ದೇವರೊಂದಿಗೆ ಒಪ್ಪಂದ ಮಾಡಿಕೊಳ್ಳುವುದು, ಇನ್ನೂ ಬದುಕಿರಲು ಏನೇನು ಮಾಡಬಹುದು , ಇತ್ಯಾದಿ.

4.            ಖೀನ್ನತೆ - ನಾಲ್ಕನೇ ಹಂತದಲ್ಲಿ ಇನ್ನೇನು ಸಾಧ್ಯವಾಗದು ಎಂದು ಖಿನ್ನತೆಗೆ ಒಳಗಾಗುತ್ತಾರೆ. “ನಾನು ಶೀಘ್ರದಲ್ಲಿ ಸಾಯುತ್ತೇನೆ, ಯಾಕೆ ಸುಮ್ಮನೆ ಬೇರೆಯವರಿಗೆ ತೊಂದರೆ, ಯಾವುದರಿಂದಲಾದರೂ ಏನು ಪ್ರಯೋಜನ? “ ಹೀಗೆ ನಿರಾಶೆಗೊಳಗಾಗುತ್ತಾರೆ.

5.            ಸ್ವೀಕಾರ- “ಇದು ಸರಿಯಾಗಿದೆ”, “ನಾನು ಇದರ ವಿರುದ್ಧ ಹೋರಾಡಲು ಸಾಧ್ಯವಿಲ್ಲ”, “ನಾನು ಅದಕ್ಕೆ ತಯಾರಿ ನಡೆಸಬಹುದು”. ಈ ಕೊನೆಯ ಹಂತದಲ್ಲಿ ವ್ಯಕ್ತಿಗಳು ಮರಣ ಅಥವಾ ಅನಿವಾರ್ಯ ಭವಿಷ್ಯ, ಅಥವಾ ಪ್ರೀತಿ ಪಾತ್ರರ ಭವಿಷ್ಯ ಅಥವಾ ಇತರ ದುರಂತ ಘಟನೆಯನ್ನು ಸ್ವೀಕರಿಸುತ್ತಾರೆ. ಇದು ಸಾಮಾನ್ಯವಾಗಿ ಶಾಂತ, ಪೂರ್ವಾವಲೋಕನ ದೃಷ್ಟಿಕೋನ ಮತ್ತು ಭಾವನೆಗಳ ಸ್ಥಿರ ಸ್ಥಿತಿಯೊಂದಿಗೆ ಬರುತ್ತದೆ.

ಕೋವಿಡ್ -19 ಮತ್ತು ಕುಬ್ಲರ್ ರಾಸ್ ಮಾದರಿ

                ಇದೇ ತತ್ವವನ್ನು ನಾವು ಕೊರೋನಾ ಸಂದರ್ಭಕ್ಕೆ ಸಹ ಅನ್ವಯಿಸಬಹುದು. ಕುಬ್ಲರ್ ರಾಸ್ ಮಾದರಿಯ ಹಂತಗಳನ್ನು ಕೊರೋನಾವನ್ನು ನಾವು ಎದುರಿಸಿದ ರೀತಿಗೆ ಹೋಲಿಸಿದಾಗ ಈ ಕೆಳಗಿನಂತೆ ಕಾಣಬಹುದು.

1.            ನಿರಾಕರಣೆ – ಕೊರೋನಾ ನಮ್ಮ ಬಳಿಗೆ ಬರುವುದಿಲ್ಲ. ಮತ್ತೆ ಮತ್ತೆ ನಿರಾಕರಿಸುವುದು ಹೇಗೆಂದರೆ ಬಂದರೂ ಸಹ ಉಷ್ಣವಲಯ ಸ್ಥಿತಿಯಿಂದಾಗಿ ನಮ್ಮ ಪ್ರದೇಶಗಳಲ್ಲಿ ಹರಡಲಾರದು. ವೃದ್ಧರಿಗೆ ಮಾತ್ರ ಬರುತ್ತದೆ ನಮಗೇನು ಆಗಲಾರದು. ರೋಗನಿರೋಧಕ ಶಕ್ತಿ ಚೆನ್ನಾಗಿದ್ದರೆ ಸಾಕು ಏನು ತೊಂದರೆಯಿಲ್ಲ. ಹೀಗೆ ನಮಗೆ ನಾವೇ ಹೇಳಿಕೊಂಡೆವು.

2.            ಕೋಪ - ಲಾಕ್ ಡೌನ್ ನಿಂದಾಗಿ ಸಾಮಾನ್ಯ ಜನಜೀವನ ಅಸ್ತವ್ಯಸ್ತವಾದಾಗ, ಆದಾಯ ನಷ್ಟವಾದಾಗ ಕೋಪಗೊಂಡೆವು. “ಹೀಗೆ ಒಮ್ಮೆಲೇ ಜೀವನವನ್ನು ನಿಲ್ಲಿಸಿದಂತೆ ಮಾಡಬೇಕಾಗಿತ್ತಾ?”, “ಮೊದಲೇ ಹೇಳಿ ಸರ್ಕಾರ ಲಾಕ್ ಡೌನ್ ಗೋಷಿಸಬೇಕಾಗಿತ್ತು”, “ಜೀವನಾವಶ್ಯಕ ಸಾಮಾನುಗಳ ಕೊರತೆಯಾಗುತ್ತಾ?” “ದೇವರು ಹೀಗೇಕೆ ಮಾಡಿದ?”, “ ಪ್ರಳಯ ಉಂಟಾಗುವುದು ಎಂದರೆ ಇದೇನಾ?”, “ ಚೀನಾವನ್ನು ಸರ್ವನಾಶ ಮಾಡಿಬಿಡಬೇಕು?” ಹೀಗೆ ನಾವು ಕೋಪಗೊಳ್ಳವುದಕ್ಕೆ ಎಷ್ಟೊಂದು ಕಾರಣಗಳು ಇದ್ದವು. ಆದರೆ ಸಂಶೋಧಕರು ಮತ್ತು ಮಾನಸಿಕ ಆರೋಗ್ಯ ವೃತ್ತಿಪರರು ಈ ಕೋಪವು ಒಂದು ಅಗತ್ಯ ಹಂತವಾಗಿದೆ ಎಂದು ಒಪ್ಪುತ್ತಾರೆ. ಕೋಪವನ್ನು ನಿಜವಾಗಿಯೂ ಅನುಭವಿಸುವುದು ಮುಖ್ಯ. ನಾವು ಅಂತ್ಯವಿಲ್ಲದ ಕೋಪದ ಚಕ್ರದಲ್ಲಿದ್ದೇವೆ ಎಂದು ತೋರುತ್ತದೆಯಾದರೂ , ಅದು ಕರಗುತ್ತದೆ. ಎಷ್ಟು ನಿಜವಾಗಿ ನಾವು ಕೋಪವನ್ನು ಅನುಭವಿಸುತ್ತೇವೆಯೋ , ಅಷ್ಟೇ ಬೇಗ ಅದು ಕರಗುತ್ತದೆ ಮತ್ತು ಅಷ್ಟೇ ಬೇಗ ನಾವು ಸುಧಾರಿಸಿಕೊಳ್ಳುತ್ತೇವೆ. ಕೋಪವು ನಮಗೆ ನೈಜತೆಗೆ ತೆರೆದುಕೊಳ್ಳುವ ಶಕ್ತಿಯನ್ನು ಕೊಡುತ್ತದೆ. ಇದನ್ನು ನೈಸರ್ಗಿಕ ಉಪಶಮನ ದತ್ತ ಇಡುವ ಹೆಜ್ಜೆ ಎಂತಲೂ ಹೇಳಬಹುದು.

3.            ಚೌಕಾಶಿ - ಈ ಹಂತವು ಒಂದು ಸುಳ್ಳು ಭರವಸೆಯ ಹಂತ. ಕೊರೋವಾ ಬರಬಾರದಾಗಿತ್ತು ಮತ್ತು  ಲಾಕ್ ಡೌನ್ ಆಗಬಾರದಾಗಿತ್ತು. “ದೇವರೆ ಹೇಗಾದರೂ ಮಾಡಿ ಇದು ನಮ್ಮಲ್ಲಿಗೆ ಬರದಂತೆ ಮಾಡು” ಎಂದು ಎನೇನೋ ಹರಕೆಗಳನ್ನು ಹೊರುವುದು. ಒಂದು ಸಲ ಇದು ತೊಲಗಲಿ, ನಾವು ಸ್ವಚ್ಛತೆಯನ್ನು ಕಾಪಾಡಿಕೊಂಡರಾಯಿತು, ಎಲ್ಲಂದರಲ್ಲಿ ಉಗುಳದಿದ್ದರಾಯಿತು, ಒಳ್ಳೆಯ ಆಹಾರ ಸೇವಿಸದರಾಯಿತು, ದುಶ್ಚಟಗಳನ್ನು ಬಿಟ್ಟರಾಯಿತು, ಇತ್ಯಾದಿ ಇತ್ಯಾದಿ. ಹೀಗೆ ನಾವೆಲ್ಲ ಎಷ್ಟು ಸಲ ಹೇಳಿಕೊಂಡಿದ್ದೇವೆಯೋ ಗೊತ್ತಿಲ್ಲ.

4.            ಖಿನ್ನತೆ – ಆದರೆ ಕೊರೋನಾ ಹೆಚ್ಚುತ್ತಲೇ ಹೋಯಿತು ಅದರಿಂದಾಗಿ ನಮ್ಮ ಮಾನಸಿಕ ಒತ್ತಡವೂ ಹೆಚ್ಚಿತು ಅದರಿಂದಾಗಿ ಖಿನ್ನತೆ ಆವರಿಸಿತೆಂದೇ ಹೇಳಬಹುದು. ವಾಸ್ತವಕ್ಕೆ ನಾವು ತೆರೆದುಕೊಳ್ಳುತ್ತಾ ಹೋದಂತೆ ಎಲ್ಲಾ ಮುಗಿದೇ ಹೋಯಿತು, ಮನೆಯಲ್ಲೇ ಇದ್ದೂ ಇದ್ದೂ ಈ ಪರಿಸ್ಥಿತಿ ಮುಗಿಯುವುದೇ ಇಲ್ಲವೇನೋ ಎನಿಸತೊಡಗಿತು. ಲಾಕ್ ಡೌನ್ ಮುಂದುವರೆದಂತೆ ಖಿನ್ನತೆ ಹೆಚ್ಚಾಗುತ್ತ ಹೋಯಿತು. ರಜೆ ಬೇಕೆಂದು ಕಾತರದಿಂದ ಕಾಯುತ್ತಿದ್ದ ನಮಗೆ ರಜೆ ಬೇಡವಾಯಿತು. ಕೆಲಸದಿಂದ ಬಿಡುವು ಬೇಡುತ್ತಿದ್ದ ಎಷ್ಟೋ ಜನ ಕೆಲಸ ಕಳೆದುಕೊಳ್ಳುವ ಹಂತಕ್ಕೆ ಬಂದರು. ಆತ್ಮಹತ್ಯೆಯಂತಹ ವರದಿಗಳೂ ಬಂದವು. ಮುಂದೇನು ? ಎಲ್ಲಿಯವರೆಗೆ ಹೀಗೆ? ಉತ್ತರ ಸಿಗದಾಯಿತು. ಆನ್-ಲೈನ್ ಮೂಲಕ ಶಿಕ್ಷಣ ಸಂಸ್ಥೆಗಳು ಪಾಠ ಮಾಡಲು, ಮನೆಯಿಂದ ನೌಕರರು ಕೆಲಸ ಮಾಡಲು ಪ್ರಯತ್ನಿಸಿ ಮೊಬೈಲ್ ನಂತಹ ಉಪಕರಣಗಳ ಬಳಕೆ ಹೆಚ್ಚಾಯಿತು. ಆದರೆ ನಿರೀಕ್ಷಿತ ಫಲಿತಾಂಶ ಕೆಲವು ಕಡೆ ದೊರೆಯಲಿಲ್ಲ. ಹೀಗೆ ಈ ಹಂತವನ್ನು ವಿವಿಧ ರೀತಿ ನಾವು ಕಳೆಯುತ್ತಿದ್ದೇವೆ/ ದೆವು.

5.            ಸ್ವೀಕಾರ- ಕೊನೆಯ ಹಂತ. (ನಾವೀಗ 4 ಮತ್ತು 5 ಹಂತದ ಮಧ್ಯೆ ಇ್ಲದ್ದೇವೆ ಎಂದೇ ಹೇಳಬಹುದು). ಪರಿಸ್ಥಿತಿಯನ್ನು ಒಪ್ಪಿಕೊಳ್ಳುವ ಹಂತ. ಉದಾಹರಣೆಗೆ ಕೊರೋನಾದೊಂದಿಗೆ ಬದುಕಲು ಪ್ರಯತ್ನಿಸುವುದು. ನಾವೀಗ ವಾಸ್ತವದತ್ತ ಬರುತ್ತಿದ್ದೇವೆ. ನಮ್ಮ ಭಾವನೆಗಳು ಸ್ಥಿರತೆಯತ್ತ ಸಾಗುತ್ತಿವೆ. ಕೊರೋನಾ ಇನ್ನೂ ಕೆಲವು ದಿನಗಳು ಇರಬಹುದು ಅಥವಾ ಕೆಲವು ವರ್ಷಗಳು ಇರಬಹುದು ಹಾಗಂತ ಜೀವನ ನಿಲ್ಲಿಸಲಾಗದು ಇದರೊಂದಿಗೇ ಸುರಕ್ಷಿತವಾಗಿ ಬದುಕಲು ಕಲಿಯಲೇಬೇಕು ಎನ್ನುವ ಹೊಸ ವಾಸ್ತವವನ್ನು ಒಪ್ಪಿಕೊಳ್ಳಲು ಕಲಿಯುತ್ತಿದ್ದೇವೆ. ಇದು ಖಂಡಿತವಾಗಿಯೂ ಹೊಂದಾಣಿಕೆ ಮತ್ತು ಮರು ಹೊಂದಾಣಿಕೆಯ ಸಮಯ. ಒಳ್ಳೆಯ ದಿನಗಳಿವೆ, ಕೆಟ್ಟ ದಿನಗಳಿವೆ, ಮತ್ತು ನಂತರ ಮತ್ತೆ ಒಳ್ಳೆಯ ದಿನಗಳಿವೆ. ಒಳ್ಳೆಯ ದಿನಗಳು ಕೆಟ್ಟ ದಿನಗಳನ್ನು ಮೀರಿಸುತ್ತವೆ. ನಾವು ಮತ್ತೆ ಸಾಮಾನ್ಯ ಜೀವನವನ್ನು ಅಗತ್ಯವಿರುವ ಬದಲಾವಣೆಗಳೊಂದಿಗೆ ಪ್ರಾರಂಭಿಸಲು ಪ್ರಯತ್ನ ನಡೆಸಿದ್ದೇವೆ. ಹಳೆಯ ದಿನಗಳು ಮೊದಲಿನಂತೆ ಹಿಂತಿರುಗುವುದಿಲ್ಲ ಎಂದು ನಮಗೆ ಅರ್ಥವಾಗುತ್ತಿದೆ. ಆದರೆ ನಾವು ನಮ್ಮ ಹೊಸ ವಾಸ್ತವಕ್ಕೆ ಚಲಿಸುತ್ತೇವೆ, ಬೆಳೆಯುತ್ತೇವೆ ಮತ್ತು ಖಂಡಿತ ವಿಕಸನಗೊಳ್ಳುತ್ತೇವೆ.

ಉಪಸಂಹಾರ

ಈ 5 ಹಂತಗಳು ಕೊರೋನಾಗೆ ಸೀಮಿತವಾಗಿಲ್ಲ. ಇದು ಮಾನವ ಜೀವನದ ಎಲ್ಲಾ ಸಮಸ್ಯೆಗಳಿಗೆ ಅನ್ವಯಿಸುತ್ತದೆ. ಬುದ್ಧಿವಂತಿಕೆಯೆಂದರೆ ಮೊದಲ ಹಂತದಿಂದ ನೇರವಾಗಿ 5 ನೇ ಹಂತಕ್ಕೆ ಹೋಗುವುದು ಮತ್ತು ಪ್ರಗತಿಯ ಹೆಜ್ಜೆ ಹಾಕುವುದು. ಆದರೆ ಅದು ಅಷ್ಟು ಸುಲಭವಲ್ಲ. 5ನೇ ಹಂತಕ್ಕೆ ಹೋಗದೇ ಮಧ್ಯದಲ್ಲಿ ಸಿಕ್ಕಿಬಿದ್ದರೆ ಮಾನಸಿಕ ಅಸ್ವಸ್ಥತೆ ಉಂಟಾಗಬಹುದು. ಎಂದಿಗೂ ಹಾಗಾಗದಿರಲಿ. ಅತ್ಯುತ್ತಮವಾದುದನ್ನು ಆಶಸೋಣ. ಸಾರ್ವಜನಿಕ ಸ್ಥಳಗಳು ಮತ್ತು ಕೆಲಸದ ಸ್ಥಳಗಳಲ್ಲಿ ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆಗಳನ್ನು ತಗೆದುಕೊಳ್ಳೋಣ ಮತ್ತು ಸಂತೋಷದ ಜೀವನ ನಡೆಸೋಣ.