ಕುಗ್ರಾಮದ ಪರಿಶಿಷ್ಟ ಪಂಗಡದ ಯುವತಿ ಶ್ರೀಧನ್ಯಾ ಸುರೇಶ್ ಸಾಧಿಸಿದ್ದನ್ನು ನೀವು ಯಾಕೆ ಸಾಧಿಸಬಾರದು?

Thumbnail

ಕುಗ್ರಾಮದ ಪರಿಶಿಷ್ಟ ಪಂಗಡದ ಯುವತಿ ಶ್ರೀಧನ್ಯಾ ಸುರೇಶ್ ಸಾಧಿಸಿದ್ದನ್ನು ನೀವು ಯಾಕೆ ಸಾಧಿಸಬಾರದು? 
ಭಾರತ  ಪ್ರಪಂಚದ ಅತಿ ದೊಡ್ಡ ಪ್ರಜಾತಂತ್ರ.  ನಮ್ಮ ದೇಶದಲ್ಲಿ ಚುನಾವಣೆ ನಡೆಸಿ,  ರಾಜಕೀಯ ಪಕ್ಷಗಳು ದೇಶದ ರಾಜಕೀಯ ಆಡಳಿತ ನಡೆಸುತ್ತವೆಯಾದಾರೂ, ರಾಜ್ಯಾಡಳಿತದ ನಿಜವಾದ  ಅಧಿಕಾರ ಚಲಾಯಿಸುವುದು  ಐ.ಏ.ಎಸ್  ಮೊದಲಾದ ಸರ್ಕಾರಿ ಅಧಿಕಾರಿಗಳು.  ಕ್ಯಾಬಿನೆಟ್ ಸೆಕ್ರೆಟರಿ, ಜಿಲ್ಲಾಧಿಕಾರಿ, ವಿದೇಶಾಂಗ ಕಾರ್ಯದರ್ಶಿ ಮೊದಲಾದ  ಪ್ರಮುಖ ಹುದ್ದೆಗಳು ಅವರ ಕೈಯಲ್ಲಿ ಇರುತ್ತವೆ. 
ಬ್ರಿಟೀಷರ ಕಾಲದಲ್ಲಿ ಶ್ರೀಮಂತ  ಕುಟುಂಬದವರು   ಇಂಗ್ಲೆಂಡಿಗೆ ಹೋಗಿ  ಐ.ಸಿ.ಎಸ್ ಪರೀಕ್ಷೆ ಉತ್ತೀರ್ಣರಾಗಿ ಭಾರತಕ್ಕೆ ಬಂದು ಕಲೆಕ್ಟರ್ ಮುಂತಾದ  ಹುದ್ದೆಗಳನ್ನು ಅಲಂಕರಿಸುತ್ತಿದ್ದರು.   ಇಂದು  ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯುಪಿಎಸ್ ಸಿ) ಇಂಡಿಯನ್ ಸಿವಿಲ್ ಸರ್ವಿಸ್ ಪರೀಕ್ಷೆ ಮುಖಾಂತರ ಇಂತಹ ಹುದ್ದೆಗಳಿಗೆ ಯುವಜನತೆ  ಆರಿಸುತ್ತಿದೆ. ಆ ಮೂಲಕ ಭಾರತದ ಶ್ರೀಮಂತರು ಹಾಗೂ ಬಡವರು, ನಗರದವರು  ಹಾಗೂ ಹಳ್ಳಿಯವರು, ಪುರುಷರು ಹಾಗೂ ಮಹಿಳೆಯರು, ಆಂಗ್ಲ ಮಾಧ್ಯಮ ಅಥವಾ ರಾಜ್ಯ ಬಾಷಾ ಮಾಧ್ಯಮದಲ್ಲಿ ಓದಿದವರು, ಬಿ.ಎ, ಬಿ ಎಸ್ ಸಿ ಓದಿದವರು ಅಥವಾ ವೈದ್ಯರು, ಇಂಜಿನಿಯರಿಂಗ್ ಶಿಕ್ಷಣ ಪಡೆದವರು- ಎಲ್ಲರಿಗೂ ಈ ಅವಕಾಶಗಳಿವೆ. ಹಲವಾರು ಸಂದರ್ಭಗಳಲ್ಲಿ ಸಮಾಜದ ತೀರಾ ಕೆಳವರ್ಗದವರು ಇಂತಹ ಉನ್ನತ ಸ್ಥಾನಕ್ಕೆ ಏರಿದ್ದಾರೆ. ಅದೇ ಮಾದರಿಯಲ್ಲಿ ಈ ವರ್ಷ ಕೇರಳದ  ವಯ್ಯನಾಡಿನ ಕುಗ್ರಾಮದ ಪರಿಶಿಷ್ಟ ಪಂಗಡದ ಯುವತಿ ಶ್ರೀಧನ್ಯಾ ಸುರೇಶ್ ಈ ಸಾಧನೆ ಮಾಡಿದ್ದಾರೆ.  
ಶ್ರೀಧನ್ಯಾಳ  ಹೆತ್ತವರು ಅನಕ್ಷರಸ್ಥರು, ಕೂಲಿ ಕೆಲಸಮಾಡಿ ಜೀವನ ಸಾಗಿಸುತ್ತಿರುವವರು.  ಅವರ ಮನೆ ಒಂದು ಪುಟ್ಟ ಗುಡಿಸಲು. ಅವಳು ಓದಿದ್ದು ಮಲಯಾಳಂ ಮಾಧ್ಯಮದಲ್ಲಿ.  ಪಿ.ಯು.ಸಿ ಓದಿದ್ದು ಸರ್ಕಾರಿ ಶಾಲೆಯಲ್ಲಿ. ಬಿ.ಎಸ್ ಸಿ ಓದಿ, ಪ್ರಾಣಿಶಾಸ್ರದಲ್ಲಿ ಎಮ್.ಎಸ್ ಸಿ  ಪದವಿ ಪಡೆದು, ನಂತರ ಸಿವಿಲ್ ಸರ್ವಿಸ್ ಪರೀಕ್ಷೆ ಬರದು ಎರಡನೇ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. 
 ಇಂಡಿಯನ್ ಸಿವಿಲ್ ಸರ್ವಿಸ್ ಪರೀಕ್ಷೆ ಮೂರು ಹಂತದಲ್ಲಿ ನಡೆಯುತ್ತದೆ. ಜೂನ್ 2, 2019 ರಂದು ನಡೆದ ಪ್ರಥಮ ಹಂತದ ಪರೀಕ್ಷೆಗೆ ಸುಮಾರು 8 ಲಕ್ಷ ಮಂದಿ ಹಾಜರಾಗಿದ್ದರು. ಅವರಲ್ಲಿ 11,485 ಮಂದಿ 20-9-2019 ರಂದು ನಡೆದ ಪ್ರಧಾನ ಪರೀಕ್ಷೆಗೆ ಅರ್ಹತೆ ಪಡೆದಿದ್ದರು. ಅವರಲ್ಲಿ ಸುಮಾರು 2000 ಮಂದಿ ಫೆಬ್ರವರಿ 2020 ರಲ್ಲಿ ವ್ಯಕ್ತಿತ್ವ  ಪರೀಕ್ಷೆಗೆ ಆಯ್ಕೆಯಾಗಿದ್ದರು. ಏಪ್ರಿಲ್ 2020 ರಲ್ಲಿ ಅಂತಿಮವಾಗಿ 896 ಮಂದಿ ಆಯ್ಕೆಯಾಗಿದ್ದಾರೆ.   ಶ್ರೀಧನ್ಯಾ 410 ನೇ ರೆಂಕ್ ಪಡೆದು ಸಿವಿಲ್ ಸರ್ವಿಸಸ್ ಗೆ   ಆಯ್ಕೆಯಾಗಿದ್ದಾರೆ. ಹಳ್ಳಿಯ, ಮಲಯಾಳಂ ಮಾಧ್ಯಮದಲ್ಲಿ ಓದಿದ ಯುವತಿ ಜಿಲ್ಲಾಧಿಕಾರಿ ಅಥವಾ ವರಿಷ್ಟ ಪೋಲಿಸ್ ಅಧಿಕಾರಿ ಆಗಲಿದ್ದಾರೆ. ಇದೇ ಪರೀಕ್ಷೆಯಲ್ಲಿ ಕಾಸರಗೋಡು ಜಿಲ್ಲೆಯ ಬದಿಯಡ್ಕದ ರೆಜಿನಾ ಮೇರಿ ವರ್ಗಿಸ್ 49 ನೇ ಸ್ಥಾನ ಗಳಿಸಿ ಐ.ಎ.ಎಸ್ ಹುದ್ದೆ ಗಳಿಸುವುದು ಖಚಿತವಾಗಿದೆ.  ಗ್ರಾಮಾಂತರ ಪ್ರದೇಶದ  ಶ್ರೀಧನ್ಯಾ ಹಾಗೂ ರೆಜಿನಾ ಮೇರಿ ವರ್ಗಿಸ್ ಇವರ ಸಾಧನೆ ಶ್ಲಾಘನೀಯ.    2018 ರಲ್ಲಿ   ಕರ್ನಾಟಕದ ಕೋಲಾರ ಜಿಲ್ಲೆಯ  ನಂದಿನಿ ಕೆ ಆರ್ ಪ್ರಥಮ  ಸ್ಥಾನ ಗಳಿಸಿದ್ದರು.  
ಪರೀಕ್ಷೆಗೆ ಅರ್ಹತೆ ಏನು?   
1. ವಿಶ್ವವಿದ್ಯಾಲಯ ಅನುದಾನ ಆಯೋಗದಿಂದ  ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ  ಯಾವುದೇ ವಿಷಯದಲ್ಲಿ  ಪದವಿ,
2.  ಪ್ರಾಯ  21 ರಿಂದ  32 ರೊಳಗೆ ಇರಬೇಕು. 
3. ಭಾರತದ ನಾಗರೀಕರಾಗಿರಬೇಕು.

ಪರೀಕ್ಷೆ ಹಾಗೂ ಅರ್ಜಿ ದಾಖಲು:
ಪರೀಕ್ಷೆ ಪ್ರತಿ ವರ್ಷ ನಡೆಯುತ್ತಿದೆ.  ಪ್ರಥಮ ಹಂತದ ಪರೀಕ್ಷೆ ಸಾಮಾನ್ಯವಾಗಿ  ಮೇ-ಜೂನ್ ತಿಂಗಳಿನಲ್ಲಿ,  ಪ್ರಧಾನ ಪರೀಕ್ಷೆ ಸಪ್ಟೆಂಬರ್ - ಅಕ್ಟೋಬರಿನಲ್ಲಿ, ಹಾಗೂ ಆ ನಂತರ ವೈಯಕ್ತಿಕ  ಸಂದರ್ಶನ ನಡೆದು,  ಮುಂದಿನ  ಏಪ್ರಿಲ್ ತಿಂಗಳಿನಲ್ಲಿ  ಪಲಿತಾಂಶ ಪ್ರಕಟ ಮಾಡಲಾಗಿತ್ತದೆ.  ಅರ್ಜಿಯನ್ನು ಯು.ಪಿ.ಎಸ್.ಸಿ ಅಂತರ್ ಜಾಲದಲ್ಲಿ  ಓನ್ ಲೈನ್  ಮೂಲಕ ಸಲ್ಲಿಸಬಹುದು.   
ಪರೀಕ್ಷಾ ವಿಧಾನ:
ಪ್ರಾಥಮಿಕ ಹಂತದ ಪರೀಕ್ಷೆ: 400 ಅಂಕಗಳು
ಪೇಪರ್ 1: ಸಿವಿಲ್ ಸರ್ವಿಸ್ ಎಪ್ಟಿಟ್ಯೂಡ್  ಟೆಸ್ಟ್ 1 ( CSAT 1) 200 ಅಂಕ- 
ಪೇಪರ್ 2 : ಸಿವಿಲ್ ಸರ್ವಿಸ್ ಎಪ್ಟಿಟ್ಯೂಡ್  ಟೆಸ್ಟ್ 2 ( CSAT 2 ) 200 ಅಂಕ 
ಪೇಪರ್ 1  CSAT 1 : ಸಾಮಾನ್ಯ ಜ್ಞಾನ ( General Knowledge).  ಸಾಮಾನ್ಯಾ  ವಿಜ್ಞಾನ, ಭೂಗೋಲ, ಇತಿಹಾಸ ಹಾಗೂ  ಸಂಸ್ಕ್ರತಿ, ದಿನನಿತ್ಯದ ಘಟನೆಗಳು, ಅರ್ಥಶಾಸ್ರ,  ಇತ್ಯಾದಿ. 
ಪೇಪರ್ 2:  CSAT -2    ಇಂಗ್ಲೀಷ್,  ಗಣಿತ, ಮಾನಸಿಕ ಸಾಮರ್ಥ್ಯ    ರೀಜನಿಂಗ್ ಇತ್ಯಾದಿ. 
ಪ್ರದಾನ ಪರೀಕ್ಷೆ: 1800 ಅಂಕಗಳು
ಪೇಪರ್ 1 ಪ್ರಬಂಧ, ಇಂಗ್ಲೀಷ್ ವ್ಕಾಕರಣ- 300 ಅಂಕಗಳು
ಪೇಪರ್ 2: ಭಾರತದ ಪರಂಪರೆ, ಸಂಸ್ಕ್ರತಿ,  ಪ್ರಪಂಚದ ಇತಿಹಾಸ ಹಾಗೂ ಭೂಗೋಲ     250 ಅಂಕಗಳು
ಪೇಪರ್ 3: ಆಡಳಿತ, ಸಂವಿಧಾನ , ಸಾಮಾಜಿಕ ನ್ಯಾಯ, ಅಂತರಾಷ್ಟ್ರೀಯ  ಸಂಬಂಧಗಳು, 250 ಅಂಕಗಳು
ಪೇಪರ್ 4:  ತಂತ್ರಜ್ಞಾನ, ಆರ್ಥಿಕ ಅಭಿವ್ರದ್ದಿ, ಪರಿಸರ ಹಾಗೂ ಆಪತ್ತು ನಿರ್ವಹಣೆ  - 250 ಅಂಕಗಳು
ಪೇಪರ್ 5: ಎಪ್ಟಿಟ್ಯೂಡ್, ನೈತಿಕತೆ, ಪ್ರಾಮಾಣಿಕತೆ  ಇತ್ಯಾದಿ-250 ಅಂಕಗಳು
ಪೇಪರ್ 6: ವಿಷಯ - (ಆಪ್ಶನಲ್ ಸಬ್ಜೆಕ್ಟ್ )- ಪೇಪರ್ 1—250 ಅಂಕ
ಪೇಪರ್ 7: ವಿಷಯ - (ಆಪ್ಶನಲ್ ಸಬ್ಜೆಕ್ಟ್ )-  ಪೇಪರ್ 2-250 ಅಂಕ

ಸಂದರ್ಶನ:
ಪ್ರದಾನ  ಪರೀಕ್ಷೆಯಲ್ಲಿ ಆಯ್ಕೆಯಾದರೆ  ವ್ಯಕ್ತಿತ್ವ  ಪರೀಕ್ಷೆ -  ಅಂಕ  275

ಪರೀಕ್ಷೆಗೆ ಸಿದ್ಧತೆ :
ಈ ಪರೀಕ್ಷೆಗಳಿಗೆ  ಹಾಜರಾಗುವ ಸುಮಾರು 10 ಲಕ್ಷ ಅಭ್ಯರ್ಥಿಗಳಲ್ಲಿ  ಕೇವಲ ಒಂದು ಸಾವಿರಕ್ಕೂ ಕಡಿಮೆ ಜನರಿಗೆ ಮಾತ್ರ ಆಯ್ಕೆಯಾಗುವ ಅವಕಾಶ ಇರುವುದರಿಂದ ಇದರಲ್ಲಿ ಯಶಸ್ವಿಯಾಗಲು ಸಾಮಾನ್ಯ ಶಿಕ್ಷಣದ ಜೊತೆಗೆ  ದೀರ್ಘಕಾಲದ (Long Term)  ಹಾಗೂ ಪರೀಕ್ಷೆ ಬರೆಯುವ ಮೊದಲು  ಅಲ್ಪಕಾಲದ (Short Term) ತೀವ್ರ (Intensive) ತರಬೇತಿ ಅಗತ್ಯ ಇದೆ.  
ದೀರ್ಘ ಕಾಲದ (Long Term)  ತರಭೇತಿ: 
ಹೈಸ್ಕೂಲು ಹಾಗೂ  ಪಿ.ಯು.ಸಿ ಶಿಕ್ಷಣದ ಜೊತೆಗೆ  ವಿಜ್ಞಾನ, ಭೂಗೋಲ, ಇತಿಹಾಸ ಹಾಗೂ  ಸಂಸ್ಕ್ರತಿ (ವಿಶ್ವ ಹಾಗೂ ಭಾರತ), ಇಂಗ್ಲೀಷ್,  ಗಣಿತ, ಮಾನಸಿಕ ಸಾಮರ್ಥ್ಯ,   ಸಂವಿಧಾನ ಇತ್ಯಾದಿ ವಿಷಯಗಳ ಕುರಿತು ಶಾಲೆ ಹಾಗೂ ಕಾಲೇಜುಗಳಲ್ಲಿ ಏನನ್ನು ಕಲಿಸುತ್ತಾರೆ ಅದನ್ನು ಹೆಚ್ಚಿನ ಆಸಕ್ತಿಯೊಂದಿಗೆ ಕಲಿತು ನೆನಪಿನಲ್ಲಿ ಇಡಬೇಕಾಗಿದೆ. ಜೊತೆಗೆ ಸಂವಹನ ಕಲೆ, ವ್ಯಕ್ತಿತ್ವ ವಿಕಸನ , ಮುಂದಾಳತ್ವ ಮುಂತಾದ ವಿಷಯಗಳಲ್ಲಿ ದೊರೆಯುವ ಎಲ್ಲಾ ಅವಕಾಶಗಳನ್ನು ಬಳಸುತ್ತಾ ಬೆಳೆಯಬೇಕು. ನಿತ್ಯ ದಿನಪತ್ರಿಕೆಗಳು, ಸಾಮನ್ಯ ಜ್ಞಾನದ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು
ಅಲ್ಪ ಕಾಲದ (Short Term) ತರಭೇತಿ:
ಪರೀಕ್ಷೆ ಬರೆಯುವ ಮೊದಲು ಒಂದು ವರ್ಷದ ತೀವ್ರ ತರಬೇತಿಯ ಅವಶ್ಯಕತೆ ಖಂಡಿತ ಇದೆ.  ದೆಹಲಿ, ಮದ್ರಾಸ್(ಚೆನ್ನೈ), ಮುಂಬಾಯ್, ಬೆಂಗಳೂರು ಹಾಗೂ  ಹೈದರಾಬಾದ್- ಇಲ್ಲಿ ಉತ್ತಮ   ಸಿವಿಲ್ ಸರ್ವಿಸ್ ಪರೀಕ್ಷಾ ತರಬೇತಿ  ಸಂಸ್ಥೆಗಳಿವೆ. 
ಅಲ್ಪಸಂಖ್ಯಾತರಿಗೆ  ಆರ್ಥಿಕ ಸಹಾಯ:
ಅಲ್ಪಸಂಖ್ಯಾತ  ವಿದ್ಯಾರ್ಥಿಗಳಿಗೆ ಕರ್ನಾಟಕ ಅಲ್ಪ ಸಂಖ್ಯಾತ  ಕಲ್ಯಾಣ ಇಲಾಖೆಯಿಂದ  ತರಬೇತಿಗೆ ಆರ್ಥಿಕ  ಸಹಾಯ  ಲಭಿಸುತ್ತದೆ. ತರಬೇತಿಯ ಸಂಪೂರ್ಣ ಖರ್ಚು (7 ತಿಂಗಳು)  ದೆಹಲಿಯಲ್ಲಿ ತಿಂಗಳಿಗೆ ರೂ.10,000, ಹೈದರಾಬಾದಿನಲ್ಲಿ  ರೂ.8000, ಇತರ ನಗರಗಳಲ್ಲಿ  ರೂ.4000 ಸಿಗುತ್ತದೆ. ಇದಕ್ಕೆ  ಜಿಲ್ಲಾ ಹಂತದಲ್ಲಿ  ಅರ್ಹತಾ ಪರೀಕ್ಷೆ ಇರುತ್ತದೆ. ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯ 4.5 ಲಕ್ಷ ಮೀರಬಾರದು. 
ಸಾಧಿಸಿದರೆ ಸಬಳ ನುಂಗಬಹುದು ಎಂಬ ಗಾದೆ ಇದೆ. ಉತ್ತಮ ಗುರಿ, ಸಾದಿಸುವ ಛಲ ಇದ್ದರೆ, ಶ್ರೀಧನ್ಯಾಳಂತೆ ಅವಳಿಗಿಂತ ಅದೆಷ್ಟೋ ಉತ್ತಮ ಅವಕಾಶ ಹೊಂದಿರುವ ನೀವು ಇನ್ನೂ ಹೆಚ್ಚಿನ ಸಾಧನೆ ಖಂಡಿತ ಮಾಡಬಹುದು. 
ಗುರಿಯಿರಲಿ, ಗುರಿ ಸಾಧಿಸುವ ಧನಾತ್ಮಕ ಛಲವಿರಲಿ
ನಿರಂತರ ಉಚಿತ ವ್ರತ್ತಿ ಮಾರ್ಗಗದರ್ಶನಕ್ಕಾಗಿ ಸಂಪರ್ಕಿಸಿರಿ - 9480761017