ಒಂದು ಕಾಗೆಯ ಕಥೆ

Thumbnail

ಹೊಸ ಯುಗಕ್ಕಾಗಿ ಹಳೆ ಕಥೆಗಳು - 2

ಒಂದು ಕಾಗೆಯ ಕಥೆ

-  (ಸಂ) ಸ್ಟೀವನ್ ಕ್ವಾಡ್ರಸ್ ಪೆರ್ಮುದೆ

 

ಅದೊಂದು   ಸಣ್ಣ ಹಳ್ಳಿ, ಹಳ್ಳಿಯ ಮೂಲೆಯಲ್ಲಿ ದಟ್ಟ ಕಾಡು ಕಾಡಿನ ನಡುವಿನ ಹಸಿರು ತುಂಬಿದ ಮರವೊಂದರ ಗೆಲ್ಲುಗಳ ಮೇಲೆ ಸಾವಿರಾರು ಕಾಗೆಗಳ ಹಿಂಡು ಆ ಕಪ್ಪು ಕಾಗೆಗಳ ನಡುವೆ ಒಂದು ಕರಿ ಕಪ್ಪು ಗಂಡುಕಾಗೆ. ಅದನ್ನು ನಾವು ಕಾರ್ಕೋಟಕ ಎಂದೇ ಕರೆಯುವ.

ಈ ಸುಂದರ ಕಾರ್ಕೋಟಕನ ತಲೆಗೆ ಯಾರೋ ಒಮ್ಮೆ ‘ನಿನ್ನಕಪ್ಪುಬಣ್ಣಕರಿಕರಿ, ಕಿರಿಕಿರಿ, ಇದು ನಿನಗೆ ಏನೂ ಚಂದ ಕಾಣುವುದಿಲ್ಲ’ ಎನ್ನುವ ಕಲ್ಪನೆಯನ್ನು ಬಿತ್ತಿದರು. ತಾನು ಕಪ್ಪು, ಕಪ್ಪು ಕೊಳಕು ಎನ್ನುವ ಆಲೋಚನೆ ಕಾರ್ಕೋಟಕನ ತಲೆ ತಿನ್ನತೊಡಗಿತು. ಅದರ ಆಲೋಚನೆಗಳೆಲ್ಲವೂ ತನ್ನ ಮೈಬಣ್ಣದ ಸುತ್ತ ಸುತ್ತ ತೊಡಗಿದವು. ಅದರ ಹಸಿವು, ನಿದ್ದೆ ಕೆಡುತ್ತಾ ಬಂತು.

ಕಡೆಕಡೆಗೆ ಕಾರ್ಕೋಟಕದ ಆರೋಗ್ಯವೂ ಕೆಡುತ್ತಾ ಬಂತು. ಕೊನೆಗೆ ಒಂದು ದಿನ ಅದು ಧೈರ್ಯದಿಂದ ದೇವರ ಬಳಿ ತನ್ನ ನೋವನ್ನು ಹಂಚಿಕೊಳ್ಳಲು ನಿರ್ಧರಿಸಿ ದೇವರ ಬಳಿ ಸಾಗಿತು. ದೇವರ ಬಳಿಕಾಗೆ,  ‘ನೀನು ಎಲ್ಲಾ ಪಕ್ಷಿಗಳಿಗೆ ಚಂದದ ಬಣ್ಣಗಳನ್ನು ನೀಡಿದ್ದೀ, ನನಗೆ ಮಾತ್ರ ಯಾಕೆ ಈ ಕರಿ ಕಪ್ಪು ಬಣ್ಣ?’ ಎಂದು ತನ್ನ ನೋವನ್ನು ಹೇಳಿಕೊಂಡಿತು. ದೇವರು ಕಾಗೆಯ ಅಪೀಲನ್ನು ಸಹನೆಯಿಂದ ಕೇಳಿಕೊಂಡರಾದರೂ, ಕಾಗೆಗೆ ‘ನಾನು ಒಮ್ಮೆ ಬಣ್ಣಗಳೆಲ್ಲವನ್ನು ಹಂಚಿ ಆಗಿದೆ, ಆದುದರಿಂದ ನಿನಗೆ ಬೇರೆ ಬಣ್ಣ ಬೇಕಾದರೆ ನೀನು ಬೇರೆ ಬೇರೆ ಹಕ್ಕಿಗಳ ಬಳಿ ಹೋಗಿ ನಿನಗೆ ಯಾವ ಬಣ್ಣ ಆದೀತು ಎಂದು ಸರಿಯಾಗಿ ವಿಚಾರ ಮಾಡಿ ಬಾ ಮತ್ತೆ ಪುನಃ ವಿವಾದ ಬೇಡ’  ಎಂದು ಹೇಳಿ ಕಳುಹಿಸಿದರು.

ಈಗ ಕಾಗೆ ತನಗೆ ಯಾವ ಪಕ್ಷಿಯ ಬಣ್ಣ ಆಗಬಹುದು ಎನ್ನುವ ಹುಡುಕಾಟಕ್ಕೆ ತೊಡಗಿತು. ಮೊದಲಿಗೆ ಅದು ನವಿಲಿನ ಬಳಿ ಹೋಗಿ ಅದರ ಬಣ್ಣಬಣ್ಣದ ರೆಕ್ಕೆಪುಕ್ಕಗಳ ಕುರಿತು ಅಭಿಮಾನದಿಂದ ಮಾತನಾಡತೊಡಗಿತು. ನವಿಲಾದರೂ ಬೇಸರದಿಂದ ‘ಹೌದು ನಿನಗೆ ನನ್ನ ರೆಕ್ಕೆಪುಕ್ಕಗಳು ಸುಂದರವಾಗಿ ಕಾಣುತ್ತವೆ, ಆದರೆ ನನ್ನ ನೋವು ನನಗೆ ಮಾತ್ರ ತಿಳಿಯುತ್ತದೆ. ಎಲ್ಲರೂ ಬಂದು ನನ್ನ ರೆಕ್ಕೆಗಳನ್ನು ಕಿತ್ತು ಕಿತ್ತು ನೋಯಿಸುತ್ತಾರೆ, ದಯಮಾಡಿ ನಿನ್ನ ಕಪ್ಪು ರೆಕ್ಕೆಗಳನ್ನು ನನಗೆ ಕೊಡು ಈ ಬಣ್ಣಬಣ್ಣದ ರೆಕ್ಕೆಗಳು ನಿನಗಿರಲಿ’ ಎಂದು ತನ್ನ ಅಳಲನ್ನು ತೋಡಿಕೊಂಡಿತು.

ನಂತರ ಕಾಗೆ ಹಸಿರುಹಸಿರಾದ ಗರಿಗಳಿಂದ ಕಂಗೊಳಿಸುವ ಗಿಣಿಯ ಬಳಿ ಹೋಗಿ ಅದರ ರೆಕ್ಕೆಪುಕ್ಕಗಳ ಬಗ್ಗೆ ವರ್ಣನೆ ಮಾಡತೊಡಗಿತು. ಆ ವರ್ಣನೆಗಳೆಲ್ಲವನ್ನೂ ಕೇಳಿದ ಗಿಣಿ, ‘ನಿನಗೆ ನಮ್ಮ ಕಷ್ಟ ತಿಳಿಯುವುದಿಲ್ಲ, ನಮ್ಮ ಹಸಿರು ಬಣ್ಣ, ಕೆಂಪು ಕೊಕ್ಕು ಎಲ್ಲರಿಗೂ ಸುಂದರ, ನಮ್ಮನ್ನು ಹಿಡಿದು ನಮಗೆ ಬೇಕಿಲ್ಲವಾದರೂ ಗುಡ್ ಮಾರ್ನಿಂಗ್ ಹೇಳು, ಗುಡ್ ಇವ್ನಿಂಗ್ ಹೇಳು ಎಂದು ಸುಸ್ತು ಮಾಡುತ್ತಾರೆ ಈ  ರಾಗ ರಗಳೆಯೂ ಬೇಡ ಈ  ರಂಗುರಂಗಿನ ಪುಕ್ಕಗಳೂ ಬೇಡ ನಿನಗೆ ಬೇಕಾದರೆ ಈ ಬಣ್ಣ ತೆಗೆದುಕೋ ನಿನ್ನ ಕಪ್ಪು ಬಣ್ಣ ನನಗೆ ಕೊಡು’ ಎಂದು ಹೇಳಿತು.

ಇಷ್ಟರಲ್ಲಿ ಕಾಗೆಗೆ  ತನ್ನ ಕಪ್ಪು ಬಣ್ಣದ ಮಹತ್ವ ತಿಳಿಯಿತು. ‘ನನ್ನ ಸ್ಥಿತಿಯೇ ನನಗೆ ಸಾಕು’ ಎಂದು ಅದು ಸಮಾಧಾನದ ನಿಟ್ಟುಸಿರು ಬಿಟ್ಟಿತು.

ಕೆಲವೊಮ್ಮೆ ನಮ್ಮ ಬದುಕೂ ಹಾಗೆಯೇ, ನಮ್ಮಲ್ಲಿ ಇದ್ದ ಸಾಮರ್ಥ್ಯಗಳ ಮಹತ್ವ ತಿಳಿಯದೆ, ಅನ್ಯರ ಜತೆ ನಮ್ಮನ್ನು ತುಲನೆ ಮಾಡುತ್ತಾ ಸಾಗುತ್ತೇವೆ. ಇದು ಕೀಳರಿಮೆಗೆ ಕಾರಣವಾಗಿ ನಮ್ಮಲ್ಲಿನ ಪ್ರತಿಭೆ, ಶಕ್ತಿ ಸಾಮರ್ಥ್ಯಗಳ ಸದ್ಬಳಕೆ ಆಗದೆ ಹೋಗುತ್ತದೆ. ಅದೇ ರೀತಿ ಅನ್ಯರು ಸುಖವಾಗಿದ್ದಾರೆ, ಈ ಕಷ್ಟಕೋಟಲೆಗಳೆಲ್ಲ  ನಮಗೆ ಮಾತ್ರ ಎಂಬ ಚಿಂತೆಯಲ್ಲಿ ನರಳಾಡುತ್ತಿದ್ದೇವೆ. ನಮ್ಮ ನರಳಾಟವೇ ನಮಗೆ ಶೂಲ. ಚಿಂತೆಗೂ ಚಿತೆಗೂ ಶೂನ್ಯಮಾತ್ರ ವ್ಯತ್ಯಾಸ.

ಡಿ ವಿ ಗುಂಡಪ್ಪನವರು ತಮ್ಮ ಮಂಕುತಿಮ್ಮನ ಕಗ್ಗ ಕೃತಿಯಲ್ಲಿ

ಬರದಿಹುದರೆಣಿಕೆಯಲಿ ಬಂದಿಹುದ ಮರೆಯದಿರು,     

ಗುರುತಿಸೊಳಿತಿರುವುದನು ಕೇಡುಗಳ ನಡುವೆ,                                                 

ಇರುವ ಭಾಗ್ಯವ ನೆನೆದು ಬಾರೆನೆಂಬುದನು ಬಿಡು,

ಹರುಷಕದೆ ದಾರಿಯೆಲೊ ಮಂಕುತಿಮ್ಮ’ ಎಂದಿದ್ದಾರೆ.