ಅಭಿಪ್ರಾಯ - ಹೊಣೆಗಾರಿಕೆ

Thumbnail

ಅಭಿಪ್ರಾಯ
- ಸ್ಟೀವನ್ ಕ್ವಾಡ್ರಸ್ ಪೆರ್ಮುದೆ, 9480761017
ಮಾನವ ಜನಾಂಗದ ಆರಂಭದಿಂದಲೂ ಪ್ರತಿಯೊಬ್ಬರ ಅಭಿಪ್ರಾಯಕ್ಕೆ ಮನ್ನಣೆ ನೀಡುವ ಪರಂಪರೆ ಬೆಳೆದಿರುವುದನ್ನು ನಾವು ಗಮನಿಸುತ್ತೇವೆ. ಇದೇ ಕಾರಣಕ್ಕೆ ದತ್ತಾಂಶಗಳು ಪವಿತ್ರವಾದರೂ ಅಭಿಪ್ರಾಯವು ಸ್ವತಂತ್ರ ಎಂಬ ನಾಣ್ಣುಡಿ ಬೆಳೆದಿದೆ. ವಿಶ್ವದ ಇತಿಹಾಸ ಗಮನಿಸಿದರೆ ಅಭಿಪ್ರಾಯ ಸ್ವಾತಂತ್ರ್ಯಕ್ಕಾಗಿ ಹಲವಾರು ಚಳುವಳಿಗಳು ನಡೆದಿರುವುದು ಕಂಡುಬರುತ್ತದೆ. ಅಮೇರಿಕೆಯ ಕ್ರಾಂತಿ, ಫ್ರೆಂಚ್ ಕ್ರಾಂತಿ, ರಷ್ಯಾದ ಕ್ರಾಂತಿ ಈ ಎಲ್ಲದರ ಹಿಂದೆ ಇರುವ ಮುಖ್ಯ ಚೇತನ ಶಕ್ತಿ ತನಗೆ ಅಭಿಪ್ರಾಯ ಸ್ವಾತಂತ್ರ್ಯ ಬೇಕೆನ್ನುವ ಮನುಷ್ಯನ ಅದಮ್ಯ ಬೇಡಿಕೆಯೇ ಆಗಿದೆ. 
ಪ್ರತಿಯೊಬ್ಬ ವ್ಯಕ್ತಿಗೆ ಆತನದೇ ಆದ ಚಿಂತನಾಲಹರಿ ಇರುತ್ತದೆ ಹಾಗೂ ಆ ಚಿಂತನೆಯ ಬಗ್ಗೆ ಆತನು ಮುಂದಿಡುವ ಮಾತುಗಳನ್ನು ಯಾರಾದರೂ ಕೇಳಬೇಕು, ಯಾರಾದರೂ ಗೌರವಿಸಬೇಕು ಎಂಬ ಆತುರತೆ ಇರುತ್ತದೆ. ಇದು ಅಸಹಜ ಖಂಡಿತ ಅಲ್ಲ. ಮನುಷ್ಯ ಮಗುವಾಗಿರುವಾಗಲೇ ಆತನು ತನ್ನ ಬೇಡಿಕೆಗಳನ್ನು ಕುಟುಂಬದ ಹಿರಿಯರ ಮುಂದೆ ಇಡುತ್ತಾನೆ. ತನ್ನ ಮಾತುಗಳಿಗೆ ಬೆಲೆ ಸಿಗುವುದಿಲ್ಲ ಎಂದಾದಾಗ ರಚ್ಚೆ ಹಿಡಿಯುವ ಪದ್ದತಿ ಆತನಲ್ಲಿ ಬೆಳೆದಿದೆ. ಸಂಘಜೀವಿ ಮನುಷ್ಯರು ಬೇರೆ ಬೇರೆ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ, ಆರ್ಥಿಕ, ಭೌಗೋಲಿಕ ಹಿನ್ನಲೆಯಿಂದ ಬಂದವರು ಆದುದರಿಂದ ಯಾವುದೇ ಒಂದು ವಿಷಯದ ಕುರಿತು ಅವರ ಅಭಿಪ್ರಾಯಗಳು ಬೇರೆ ಬೇರೆಯಾಗಿರುವುದು ಸಹಜ. ಯಾವುದಾದರೂ ಒಂದು ವಿಷಯದ ಕುರಿತು ಜಾಗತಿಕ ಏಕರೂಪತೆ ಕಂಡುಬರಬಹುದಾದರೂ ಎಲ್ಲಾ ಮನುಷ್ಯರು ಎಲ್ಲಾ ವಿಷಯಗಳ ಕುರಿತು ಒಂದೇ ಅಭಿಪ್ರಾಯ ಹೊಂದಿರಬೇಕು ಎನ್ನುವ ನಿರೀಕ್ಷೆಯೇ ತಪ್ಪು. ಅಭಿಪ್ರಾಯಗಳು ಬೇರೆ ಬೇರೆಯಾಗಿವೆ ಎನ್ನುವ ಮಾತ್ರಕ್ಕೆ ಆ ವ್ಯಕ್ತಿ ನಮ್ಮ ವಿರೋಧಿಯಾಗಬೇಕಾಗಿಲ್ಲ. ನೀನು ನನ್ನ ಪರವಾಗಿಲ್ಲ ಆದುದರಿಂದ ನೀನು ನನ್ನ ಶತ್ರು ಎನ್ನುವ ಚಿಂತನೆ ತೀರಾ ಮಾರಕ.   
ಅನ್ಯರ ಅಭಿಪ್ರಾಯಗಳನ್ನು ಗೌರವಿಸುವ ಪದ್ದತಿ ಭಾರತೀಯರಿಗಂತೂ ಮೂಲಭೂತವಾಗಿ ಬೆಳೆದಿದೆ. ಋಗ್ವೇದದಲ್ಲಿಯೇ ಆನೋ ಭದ್ರಾಃ ಕೃತುವೋ ಯಂತು ವಿಶ್ವತಃ ಎಂದು ಸಾರಲಾಗಿದೆ ಎಲ್ಲಾ ಉತ್ತಮ ಆಲೋಚನೆಗಳಿಗೆ ಇದು ಮುಕ್ತ ಸ್ವಾಗತ ನೀಡುವ ಕರೆಯಾಗಿದೆ. ಭಾರತೀಯ ತತ್ವಶಾಸ್ತ್ರದ ಕೆನೆಯೆಂದೇ ಹೆಸರಾಗಿರುವ ಉಪನಿಷದ್ಗಳು ವಿರುದ್ಧ ಅಭಿಪ್ರಾಯಗಳ ಪರಸ್ಪರ ವಿನಿಮಯದ ಫಲಗಳಾಗಿವೆ. ಮುಕ್ತ ತರ್ಕ, ಚರ್ಚೆಯ ಹಲವಾರು ಸಂದರ್ಭಗಳನ್ನು ನಾವು ನಮ್ಮ ಪ್ರಾಚೀನ ಸಾಹಿತ್ಯದಲ್ಲಿ ಆಗಾಗ ಕಾಣುತ್ತೇವೆ. ಬೌದ್ಧರ ಶ್ರೇಷ್ಟ ಗ್ರಂಥಗಳಲ್ಲಿ ಒಂದಾದ ಮಿಳಿಂದ ಪಣ್ಹ ಬೌದ್ಧ ಗುರು ನಾಗಸೇನ ಹಾಗೂ ಗ್ರೀಕ್ ರಾಜ ಮೆನಾಂಡರ (ಮಿಳಿಂದ) ನ ನಡುವಿನ ಚರ್ಚೆಗಳ ಫಲವಾಗಿದೆ.
‘ನಾನು ಯಾರ ಬಳಿ ಮಾತನಾಡುತ್ತಿದ್ದೇನೊ ಅವರ ಅಭಿಪ್ರಾಯ ನಾನು ಒಪ್ಪಬೇಕಾಗಿಲ್ಲ ಆದರೆ ಆ ಅಭಿಪ್ರಾಯ ನೀಡಲು ಅವರಿಗಿರುವ ಹಕ್ಕನ್ನು ಕಾಪಾಡಲು ನನ್ನ ಜೀವವನ್ನೇ ನೀಡಲು ಸಿದ್ಧ’ ಎಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಸ್ಪಷ್ಟವಾಗಿ ಸಾರಿದ್ದಾರೆ. ಪರಸ್ಪರ ಒಪ್ಪದಿರಲು ಗೌರವಪೂರ್ವಕವಾಗಿ ಒಪ್ಪುವುದು ಪ್ರಬುದ್ಧ ವ್ಯಕ್ತಿಯ ಲಕ್ಷಣ. 
ನಮಗೆ ಅಭಿಪ್ರಾಯ ನೀಡಲು ಸ್ವಾತಂತ್ರ್ಯವಿದೆ, ನಮ್ಮ ಅಭಿಪ್ರಾಯಗಳು ಮುಕ್ತವಾಗಿರಬೇಕು, ಪ್ರತಿಯೊಬ್ಬರ ಅಭಿಪ್ರಾಯ  ನಾವು ಗೌರವಿಸಬೇಕು ನಿಜ. ಆದರೆ ನಾವು ನೀಡುವ ಅಭಿಪ್ರಾಯ ಸಮಾಜದ ಸಾಮಾನ್ಯ ಆರೋಗ್ಯ ಉತ್ತಮಗೊಳಿಸುವಂತಿದ್ದರೆ ಒಳ್ಳೆಯದಲ್ಲವೇ? ಸದಭಿಪ್ರಾಯ ಎನ್ನುವ ಒಂದು ಚಿಂತನೆಯಿದೆ. ಭಗವಾನ್ ಬುದ್ಧ ಹೇಳಿರುವಂತೆ ನಾವು ನೀಡುವ ಅಭಿಪ್ರಾಯ ಸತ್ಯದ ಮೇಲೆ ಹೊಂದಿಕೊಂಡಿದೆಯೇ? ಅದು ಉಪಯುಕ್ತವೇ? ಅದು ಉತ್ತಮ ವಾತಾವರಣ  ಉಂಟು ಮಾಡುತ್ತದೆಯೇ? ಎನ್ನುವ ಮೂರು ಹಂತದ ಪರೀಕ್ಷೆಯ ನಂತರವೇ ನಮ್ಮ ಅಭಿಪ್ರಾಯ ಮುಂದಿಡಬೇಕಾದ ಅನಿವಾರ್ಯತೆ ಇಂದು ಖಂಡಿತ ಇದೆ. ನನ್ನ ಅಭಿಪ್ರಾಯ ಹಾಗೂ ಆ ಅಭಿಪ್ರಾಯ ನೀಡಲು ನನಗಿರುವ ಸ್ವಾತಂತ್ರ್ಯ ಎಷ್ಟು ಮುಖ್ಯವೋ ಅದೇ ರೀತಿ ನಾನು ಯಾವ ವಿಷಯದಲ್ಲಿ ಅಭಿಪ್ರಾಯ ನೀಡುತ್ತಿದ್ದೇನೊ ಆ ವಿಷಯದ ಪಾವಿತ್ರ್ಯ  ಹಾಗೂ ಯಾರ ವಿಷಯದಲ್ಲಿ ಅಭಿಪ್ರಾಯ ನೀಡುತ್ತಿದ್ದೇನೊ ಆ ವ್ಯಕ್ತಿಯ ಸ್ವಂತ ಗೌರವ ಕೂಡಾ ಅಷ್ಟೇ ಮುಖ್ಯ ಎನ್ನುವುದನ್ನು ನೆನಪಿನಲ್ಲಿಡೋಣ.

 

ಹೊಣೆಗಾರಿಕೆ
ಸ್ಟೀವನ್ ಕ್ವಾಡ್ರಸ್ ಪೆರ್ಮುದೆ, 9480761017
ಒಂದು ಹಳೆಯ ಗ್ರೀಕ್ ಕಥೆ ಹೀಗೆ ಇದೆ, ಆ ಊರಿನಲ್ಲಿ ಕಳವಾದಾಗ ಒಬ್ಬ ಮುದಿ ಹೆಂಗಸು ಅರ್ತೇನಸ್ ಎಂಬ ಯುವಕನೇ ಆ ಕಳವು ಮಾಡಿದ ಎಂಬ ಸುದ್ದಿ ಹಬ್ಬಿಸಿದಳು ಅದರ ಪರಿಣಾಮವಾಗಿ ಅರ್ತೇನಸನಿಗೆ ಬಂಧನವಾಯ್ತು. ತಿಂಗಳ ನಂತರ ನಿಜಸುದ್ದಿ ತಿಳಿದು ಅರ್ತೇನಸನನ್ನು ಬಿಡುಗಡೆ ಮಾಡಲಾಯ್ತು ಅರ್ತೇನಸ್ ರಾಜನ ಬಳಿ ಆ ಮುದುಕಿಯ ಕುರಿತು ದೂರು ನೀಡಿದಾಗ ರಾಜನ ಮುಂದೆ ಆ ಮುದುಕಿ ತಾನು ಸುಮ್ಮನೆ ತನ್ನ ಚಿಂತನೆಗಳನ್ನು ಹೇಳಿದೆನೇ ಹೊರತು ಅದು ಸತ್ಯವಲ್ಲ ಎಂದು ಹೇಳಿದಳು.  ರಾಜನು ಮುದುಕಿಗೆ ದಿನ ಇಡೀ ಕೋಳಿಗಳ ಪುಕ್ಕಗಳನ್ನು ರಸ್ತೆಯಲ್ಲಿ ಚೆಲ್ಲಲು ಹಾಗೂ ಮಾರನೇ ದಿನ ತನ್ನ ಬಳಿ ಬರಲು ಆದೇಶಿಸಿದನು ಮಾರನೇ ದಿನ ಆ ಅಜ್ಜಿ ಆಸ್ಥಾನಕ್ಕೆ ಬಂದಾಗ ಹಿಂದಿನ ದಿನ ಚೆಲ್ಲಿದ ಪುಕ್ಕಗಳನ್ನು ಹೆಕ್ಕಿ ತರಲು ಆದೇಶಿಸಿದನು. ಅದು ಹೇಗೆ ಸಾಧ್ಯ ಎಂದು ಅಜ್ಜಿ ಆಶ್ಚರ್ಯಚಕಿತಳಾಗಿ ಕೇಳಿದಳು, ಗಾಳಿ ಎಲ್ಲಾ ಪುಕ್ಕಗಳನ್ನು ಹಾರಿಸದೆಯಲ್ಲವೇ ಎಂದು ಆಕೆ ಭಿನ್ನವಿಸಿದಳು.
ಹೌದು ಒಮ್ಮೆ ಬೇಜವಾಬ್ಧಾರಿಯಿಂದ ಹಾರಬಿಟ್ಟ ಮಾತು ಹೊಣೆಗಾರಿಕೆ ಇಲ್ಲದೆ ಮಾಡಿದ ಕೆಲಸ ಎಲ್ಲವೂ ನಮಗೆ ಮತ್ತು ಇತರರಿಗೆ ಅಪಾಯಕಾರಿ. ಹೊಣೆಗಾರಿಕೆ ಎಂದರೆ ನಮ್ಮ ಎಲ್ಲಾ ಕೆಲಸಗಳನ್ನು ಜವಾಬ್ಧಾರಿಯಿಂದ ಅಚ್ಚುಕಟ್ಟಾಗಿ ಅರ್ಥಪೂರ್ಣವಾಗಿ ಮತ್ತು ಸೂಕ್ತ ಕಾಳಜಿಯಿಂದ ಮಾಡುವುದೇ ಆಗಿದೆ. ಗೀತೆಯಲ್ಲಿ ನಿಯತಮ್ ಕುರು ಕರ್ಮ ಎಂದು ಹೇಳಲಾಗಿದೆ, ನಮ್ಮಿಂದ ಏನನ್ನು ನಿರೀಕ್ಷಿಸಲಾಗಿದೆಯೋ ಅದನ್ನು ಸೂಕ್ತವಾಗಿ ಮಾಡುವುದೇ ಕರ್ಮ ಸಿದ್ಧಾಂತದ ಸಾರ. ನಮ್ಮ ಹೊಣೆಗಾರಿಕೆ  ಅರಿತುಕೊಳ್ಳುವುದು ಅದನ್ನು ಅರ್ಥಪೂರ್ಣವಾಗಿ ನಿಭಾಯಿಸುವ ದಾರಿಯಲ್ಲಿ ಪ್ರಥಮ ಮತ್ತು ಮಹತ್ವದ ಹೆಜ್ಜೆ. ತನ್ನ ಹೊಣೆಗಾರಿಕೆಯ ಸ್ಪಷ್ಟ ಪರಿಚಯವಿಲ್ಲದವನು ಅದನ್ನು ಸರಿಯಾಗಿ ನಿಭಾಯಿಸುವಲ್ಲಿ ಎಂದಿಗೂ ಸಫಲನಾಗಲಾರ. ಹೊಣೆಗಾರಿಕೆ ಅರಿತುಕೊಳ್ಳುವ ತನಕ ನಮ್ಮಲ್ಲಿ ನಾಯಕತ್ವದ ಗುಣಗಳು ಬೆಳೆಯುವುದೇ ಇಲ್ಲ. ತನ್ನ ಹೊಣೆಗಾರಿಕೆ ಸ್ಪಷ್ಟವಾಗಿಸಿಕೊಂಡು ಅದನ್ನು ಪೂರೈಸಿದ ಬಸವೇಶ್ವರರು, ಬಾಬಾ ಸಾಹೇಬರು, ಮದರ್ ತೆರೇಸಾ ಜಗಜ್ಜ್ಯೋತಿಗಳಾಗಿದ್ದಾರೆ. 
ನಮ್ಮ ನಮ್ಮ ಕೆಲಸಗಳು, ಚಟುವಟಿಕೆಗಳನ್ನು ಜವಾಬ್ಧಾರಿಯಿಂದ ಮಾಡುತ್ತಾ ನಮ್ಮಲ್ಲಿ ನಾಯಕತ್ವದ ಮೂಲಲಕ್ಷಣಗಳು ಬೆಳೆದುಬರುತ್ತವೆ. ನಾಯಕತ್ವವನ್ನು ಮೂರು ಮುಖ್ಯ ರೀತಿಯಲ್ಲಿ ಕಾಣಬಹುದಾಗಿದೆ. ಮೊದಲನೆಯದು ಜವಾಬ್ಧಾರಿಯುತ ಸೇವಕನಂತೆ ತನ್ನ ಆಧೀನದಲ್ಲಿರುವವರ ಅಗತ್ಯಗಳನ್ನು ಪೂರೈಸುವ ನಾಯಕತ್ವ, ಎರಡನೆಯದು ಜವಾಬ್ಧಾರಿಯುತ ಕುರುಬನಂತೆ ತನ್ನ ಮಂದೆಯನ್ನು ಮುನ್ನಡೆಸುವ ನಾಯಕತ್ವ ಹಾಗೂ ಕೊನೆಯದಾಗಿ ಜವಾಬ್ಧಾರಿಯುತ ಮನೆವಾರ್ತೆಗಾರನಂತೆ ತನ್ನ ಆಧೀನಕ್ಕೆ ನೀಡಲಾದವುಗಳನ್ನು ಸಂರಕ್ಷಣೆ ಮಾಡುವ ನಾಯಕತ್ವ. ಈ ಮೂರು ಹಂತದಲ್ಲಿಯೂ ಹೊಣೆಗಾರಿಕೆ ಮತ್ತು ಬದ್ಧತೆ ಮಹತ್ವದ ಪಾತ್ರ ವಹಿಸುತ್ತವೆ. 
ಭಾರತೀಯರಾದ ನಮಗೆ ಇಂದು ಹೊಣೆಗಾರಿಕೆ ಎನ್ನುವುದು ಒಂದು ಅನಿವಾರ್ಯ ಮನೋಗತಿಯಾಗಿ ಬೆಳೆಯಬೇಕಾಗಿದೆ. ನಾವು ಒಂದು ಪ್ರಾಚೀನ ಸಂಸ್ಕೃತಿ ಆಗಿರಬಹುದು ಆದರೆ ಒಂದು ಆಧುನಿಕ ರಾಷ್ಟ್ರವಾಗಿ ಇನ್ನೂ ಬೆಳೆಯುತ್ತಾ ಇದ್ದೇವೆ. ಈ ಹಿನ್ನಲೆಯಲ್ಲಿ ಭಾರತೀಯರಾದ ನಾವೆಲ್ಲರೂ ನಮ್ಮ ಕೆಲಸ ಕರ್ತವ್ಯಗಳನ್ನು ಹೊಣೆಗಾರಿಕೆಯಿಂದ ಮಾಡಿದಾಗ ಮಾತ್ರ ರಾಷ್ಟ್ರವು ನಿರಂತರ ಪ್ರಗತಿಯ ಮಾರ್ಗದಲ್ಲಿ ಮನ್ನಡೆಯುವುದು. ಜಪಾನ್ ದೇಶ ದ್ವಿತೀಯ ವಿಶ್ವಯುದ್ಧದಲ್ಲಿ ಪುಡಿ ಪುಡಿಯಾಯ್ತು ನಿಜ ಆದರೆ ಜಪಾನೀಯರೆಲ್ಲರೂ ತಮ್ಮ ದೇಶವನ್ನು ಪ್ರಗತಿಯ ದಾರಿಯಲ್ಲಿ ಮರುಸ್ಥಾಪನೆ ಮಾಡುವುದಕ್ಕಾಗಿ ಹೊಣೆಗಾರಿಕೆಯಿಂದ ದುಡಿದರು. ಅದರ ಪರಿಣಾಮವಾಗಿ ಜಪಾನ್ ಇಂದು ವಿಶ್ವದ ಅಭಿವೃದ್ಧಿಯುತ ರಾಷ್ಟ್ರಗಳ ಸಾಲಿನಲ್ಲಿ ಮುಂಚೂಣಿಯಲ್ಲಿದೆ. 
ಈಗ ಜಪಾನನ್ನು ಕಟ್ಟುವಲ್ಲಿ ಬರೇ ರಾಜಕೀಯ ನಾಯಕರ ಅಥವಾ ಆಡಳಿತಗಾರರ ಹೊಣೆಗಾರಿಕೆ ಮಾತ್ರ ಉಪಯುಕ್ತವಾಗಿಲ್ಲ ಹೊರತಾಗಿ ರಾಷ್ಟ್ರದ ಎಲ್ಲಾ ಸ್ಥರದ ಪ್ರಜೆಗಳ ಹೊಣೆಗಾರಿಕೆಯ ವರ್ತನೆಯೂ ಉಪಯುಕ್ತವಾಗಿದೆ. ಬರೇ ಉನ್ನತ ಸ್ಥರದ ಕಾರ್ಯತತ್ಪರತೆ ಮಾತ್ರವಲ್ಲ ಸಣ್ಣಪುಟ್ಟ ಕೆಲಸಗಳಲ್ಲಿಯೂ ಅವರು ತೋರಿದ ಜವಾಬ್ಧಾರಿಯುತ ವರ್ತನೆ ಜಪಾನಿನ ಒಟ್ಟಾರೆ ಪ್ರಗತಿಯಲ್ಲಿ ಪ್ರತಿಫಲಿತವಾಗಿದೆ. ರಸ್ತೆಯ ಮೇಲೆ ಸಂಚರಿಸುವಾಗ ನಮ್ಮ ವರ್ತನೆ, ವಾಹನಗಳಲ್ಲಿ ಪ್ರಯಾಣಿಸುವಾಗ ನಮ್ಮ ವರ್ತನೆ, ಯಾವುದೇ ಸ್ಥಳದಲ್ಲಿ ಟಿಕೆಟ್ ಪಡೆಯಲು ನಾವು ಸರತಿಯ ಸಾಲಿನಲ್ಲಿ ಕಾಯುವ ರೀತಿಯಲ್ಲಾಗಲಿ ಇಂತಹ ಸಣ್ಣ ಪುಟ್ಟ ಘಟನೆಗಳಲ್ಲಿ ನಾವು ತೋರುವ ಹೊಣೆಗಾರಿಕೆಯೇ ನಮ್ಮ ಕರ್ತವ್ಯ ಮತ್ತು ಹಕ್ಕುಗಳ ಚಲಾವಣೆಯಲ್ಲಿ ತೋರುವ ಹೊಣೆಗಾರಿಕೆಯ ವರ್ತನೆಯಲ್ಲಿ ಪ್ರತಿಫಲನವಾಗುತ್ತಾ ಹೋಗುತ್ತದೆ. ಆದುದರಿಂದ ಉನ್ನತ ಸ್ಥರದಲ್ಲಿ ನಾವು ಬೆಳೆಯಬೇಕಾದರೆ ನಮ್ಮ ನಮ್ಮ ಹೊಣೆಗಾರಿಕೆಯನ್ನು ನಾವು ಗಂಭೀರವಾಗಿ ಪರಿಗಣಿಸಲೇಬೇಕು.