ಬದುಕು ಬಂಗಾರವಾಗುವುದರಲ್ಲಿ ಸಂಶಯವಿಲ್ಲ
ಕಾಶಿಯಲ್ಲಿ ರಾಜ್ಯಭಾರ ಮಾಡುತ್ತಿದ್ದ ಬ್ರಹ್ಮದತ್ತನೆಂಬ ರಾಜನು ಒಂದು ದಿನ ತನ್ನ ಪ್ರಜೆಗಳ ಗುಣಪರೀಕ್ಷೆ ಮಾಡಲು ಆಶಿಸಿದನು. ತನ್ನ ಸೇವಕರನ್ನು ಕರೆದು, ಒಂದು ದೊಡ್ಡ ಬಂಡೆಯನ್ನು ಮಾರ್ಗದ ಮಧ್ಯದಲ್ಲಿ ಇರಿಸಿದನು. ಮತ್ತು ತಾನು ಮಾರ್ಗದ ಬದಿಯಲ್ಲಿ ಇರುವ ಒಂದು ಪೆÇದೆಯಲ್ಲಿ ಅಡಗಿ ಕುಳಿತುಕೊಂಡು ದಾರಿಹೋಕರನ್ನು ಗಮನಿಸುತ್ತಿದ್ದನು. ಊರಿನ ಶ್ರೀಮಂತರು ಆ ರಸ್ತೆಯಲ್ಲಿ ನಡೆದು ಬಂದರು. ಅವರು ಈ ಬಂಡೆಯನ್ನು ಇರಿಸಿದವರನ್ನು ಶಪಿಸಿ ಮುಂದೆ ನಡೆದರು. ಊರಿನ ವ್ಯಾಪಾರಸ್ಥರು ಆ ದಾರಿಯಲ್ಲಿ ಬರುತ್ತಾ ಅವರು ಈ ಬಂಡೆಯಿಂದ ಊರಿನ ವ್ಯಾಪಾರ ಮಾಡುವವರಿಗೆ, ಸಾಮಾನು ಕೊಂಡುಕೊಳ್ಳುವವರಿಗೆ ಬಹಳ ತೊಂದರೆಯೆಂದು ಕೋಪದಿಂದ ಗೊಣಗುಟ್ಟುತ್ತಾ ಮುಂದೆ ಹೋದರು. ಕೊನೆಗೆ ಆ ಊರಿನ ಒಬ್ಬ ಬಡ ಕೃಷಿಕ ಬುಟ್ಟಿಯಲ್ಲಿ ತರಕಾರಿ ಹೊತ್ತು ನಡೆದು ಬಂದನು. ಆ ಬಡ ಕೃಷಿಕ ತನ್ನ ಬುಟ್ಟಿಯನ್ನು ಬದಿಯಲ್ಲಿ ಇಟ್ಟು, ಬಂಡೆಯನ್ನು ಬಹಳ ಕಷ್ಟದಿಂದ ದೂಡಿ ದೂಡಿ ರಸ್ತೆಯ ಅಂಚಿಗೆ ಸರಿಸಿದನು. ಅವನು ಆ ಬಂಡೆಯನ್ನು ಬದಿಯಲ್ಲಿಟ್ಟು ಬಂಡೆ ಇದ್ದ ಸ್ಥಳವನ್ನು ಪರಿಶೀಲಿಸಿದಾಗ, ಅಲ್ಲಿ ಒಂದು ಸಣ್ಣ ಚೀಲವನ್ನು ಕಂಡನು ಅದರಲ್ಲಿ ಚಿನ್ನದ ನಾಣ್ಯಗಳಿದ್ದವು ಹಾಗೂ ‘ಈ ಬಂಡೆಯನ್ನು ಬದಿಗೆ ಸರಿಸಿದವರಿಗೆ ಈ ಕಾಣಿಕೆ’ ಎಂದು ಅದರಲ್ಲಿ ಬರೆದಿತ್ತು
ಯಶಸ್ವಿ ಜೀವನ ನಡೆಸಬೇಕಾದರೆ ಕೆಲವು ಸೂತ್ರಗಳನ್ನು ಈ ಸಣ್ಣ ಕಥೆಯಿಂದ ಅರಿಯಬಹುದಾಗಿದೆ.
ಜೀವನದಲ್ಲಿ ಯಾವುದೇ ಪರಿಶ್ರಮ, ಕೆಲಸ ಮಾಡಲು ಹಿಂಜರಿಯಬಾರದು: ‘ಕಾಯಕವೇ ಕೈಲಾಸ’ವೆಂಬ ಗಾದೆಯಂತೆ ನಾವು ನಮ್ಮ ಬದುಕಿಗೆ ಸಂಬಂಧಿಸಿದ, ನಮಗೆ ಹಾಗೂ ಇತರರಿಗೆ ಅನುಕೂಲವಾಗುವ ಎಲ್ಲಾ ತರಹದ ಕೆಲಸಗಳನ್ನು ಅನ್ಯರಿಗೆ ನಿರಂತರ ಸಹಾಯ ಹಸ್ತವನ್ನು ನೀಡಬೇಕು. ಮನೆಯೇ ಮೊದಲ ಪಾಠ ಶಾಲೆ, ಅಂತೆಯೇ ನಾವು ಮನೆಯಲ್ಲಿ ಯಾವುದೇ ಕೆಲಸವನ್ನು ಮಾಡಿದರೆ, ಮುಂದೆ ನಾವು ಶಿಕ್ಷಣ, ವಿದ್ಯಾಭ್ಯಾಸ ಪಡೆದು ಕುಟುಂಬ ಜೀವನವನ್ನು ನಡೆಸುವಾಗ ಎಲ್ಲಾ ತರಹದ ಕೆಲಸವನ್ನು ಮಾಡಲು ಸುಲಭವಾಗುತ್ತದೆ.
ನಮ್ಮ ಬದುಕು ಪರರಿಗೆ ಉಪಯುಕ್ತವಾಗಬೇಕು: ದೀಪ ತನಗಾಗಿ ಬೆಳಗುವುದಿಲ್ಲ, ಹೂವು ತನಗಾಗಿ ಅರಳುವುದಿಲ್ಲ, ಹಾಗೆಯೇ ನಮ್ಮ ಜೀವನದಲ್ಲಿ ನಾವು ಮಾಡುವ ಪ್ರತಿಯೊಂದು ಕಾರ್ಯವು ಪರರಿಗೆ ಉಪಯುಕ್ತವಾಗಬೇಕು. ಜನರ ಸೇವೆ ಜನಾರ್ಧನ ಸೇವೆ ಎಂಬಂತೆ ನಾವು ಮಾಡಿದ ಸಣ್ಣ ಸಣ್ಣ ಕೆಲಸಗಳು ದೇವರು ಮೆಚ್ಚುವನು.
ಜೀವನವು ಪಂಥಾಹ್ವಾನಗಳಿಂದ ಕೂಡಿದೆ: ಬದುಕು ಗುಲಾಬಿ ಹೂವಿನ ಮಂಚವಲ್ಲ. ಪ್ರತಿ ಗುಲಾಬಿ ಹೂವಿಗೆ ಮುಳ್ಳುಗಳಿವೆ. ಆ ಮುಳ್ಳಿನ ಗಿಡದಲ್ಲಿ ಬಹಳ ಸುಂದರವಾದ ಹೂವು ಅರಳುವುದು ಕಣ್ಣಿಗೆ ಅಂದ ತರುತ್ತದೆ. ಹಾಗೆಯೇ ಕಷ್ಟಪಟ್ಟು ದುಡಿದರೆ ಪ್ರತಿದಿನವು ನಮ್ಮ ಧ್ಯೆಯವನ್ನು ಸಾಧಿಸಿದರೆ, ಕೊನೆಗೆ ಜಯವನ್ನು ಗಳಿಸಬಹುದು. ಜೀವನದುದ್ದಕ್ಕೂ ಕಲ್ಲು, ಮುಳ್ಳು, ಬಂಡೆಗಳು, ಕಷ್ಟ-ನಷ್ಟ, ಸಾವು-ನೋವು ಇದ್ದೇ ಇರುತ್ತದೆ. ಬಾಳ ಬಟ್ಟಲಿನಲ್ಲಿ ಉಣಬಡಿಸುವ ಸಿಹಿಯೊಂದಿಗೆ ಕಹಿಯನ್ನು ಕೂಡಾ ಎಕರೂಪವಾಗಿ ಸ್ವೀಕರಿಸುವ ಉದಾತ್ತ ಚಿಂತನೆ ನಮ್ಮದಾಗಲಿ. ಜೀವನ ಸಂಗ್ರಾಮದಲ್ಲಿ ಕೊನೆತನಕ ಛಲದಿಂದ ಮುನ್ನುಗ್ಗುವುದೇ ನಮ್ಮ ಧ್ಯೇಯವಾಗಿರಲಿ.
ನಮ್ಮ ಜೀವನ ನಿರಂತರ ಪ್ರಯತ್ನಶೀಲವಾಗಿರಬೇಕು. ಪ್ರತಿಯೊಂದು ಬೃಹತ್ ಉದ್ಯಮಗಳು ಸಣ್ಣ ಸಣ್ಣ ಮೆಟ್ಟಿಲುಗಳಿಂದ ಸಾಗಿ, ಒಂದು ದಿನ ದೊಡ್ಡ ಮಟ್ಟಕ್ಕೆ ಏರುವುದನ್ನು ನಾವು ನೋಡಿರುತ್ತೇವೆ. ಪ್ರತಿ ದಿನ ತ್ಯಾಗ- ಕಷ್ಟದ ಜೀವನದಿಂದ ನಿರಂತರ ಶ್ರಮದಿಂದ ಸಾಗಿಸಿದ ಬಾಳು ದೇವರು ಹರಸುತ್ತಾರೆ. ಜೀವನದಲ್ಲಿ ಜಯಶಾಲಿಯಾಗುತ್ತೇವೆ. ಆದುದರಿಂದ ಸಣ್ಣ ಪುಟ್ಟ ಅಡಚಣೆ ಬಂದೇ ಬರುತ್ತದೆ. ಅದಕ್ಕೆ ನಾವು ನಮ್ಮ ಭವಿಷ್ಯವನ್ನು ಶಪಿಸುವುದಕ್ಕಿಂತ, ಅಡಚಣೆಯನ್ನು ಬದಿಗೆ ಸರಿಸಿ ಮುಂದೆ ನುಗ್ಗುವುದೇ ನಮ್ಮ ಪರಿಶ್ರಮವಾಗಿರಬೇಕು.
ಯುವ ಮಿತ್ರರೇ, ಸುಂದರ ಭವಿಷ್ಯದ ಕನಸು ಕಂಡು ಅದಕ್ಕಾಗಿ ನಿರಂತರ ಸದುದ್ದೇಶದಿಂದ ಶ್ರಮಿಸಿ, ದೇವರ ಮತ್ತು ಇತರರ ಶುಭ ಹಾರೈಕೆ ಲಭಿಸಿ ನಿಮ್ಮ ಬಾಳು ಬಂಗಾರವಾಗುವುದರಲ್ಲಿ ಸಂಶಯವಿಲ್ಲ.