ಅಂದ ಹಾಗೆ ನೀವು ಯಾವ ರೀತಿಯ ಡ್ರೈವರ್?!

Thumbnail

ಅಂದ ಹಾಗೆ ನೀವು ಯಾವ ರೀತಿಯ ಡ್ರೈವರ್?!

 

ಅದೊಂದು ದೂರ ಪ್ರಯಾಣದ ಬಸ್. ಅದಕ್ಕೆ ಇಬ್ಬರು ಡ್ರೈವರುಗಳು. ದಿನ ಬಿಟ್ಟು ದಿನ ಸರದಿಯಂತೆ ಬಸ್ ಚಲಾಯಿಸುವುದು ಅವರ ಕೆಲಸ  ಒಂದು ದಿನ ಒಬ್ಬ ಬಸ್ ಚಲಾಯಿಸಿದರೆ ಮರುದಿನ ಆತನಿಗೆ ವಿರಾಮ. ಆ ದಿನ ಇನ್ನೊಬ್ಬನ ಸರದಿ. ಇಬ್ಬರ ಡ್ರೈವಿಂಗ್ ಶೈಲಿಯೂ ಬೇರೆ ಬೇರೆ. ಮೊದಲನೆಯ ಡ್ರೈವರನಿಗೆ ಹಾರ್ನ್ ಮಾಡದೆ ಬಸ್ ಚಲಾಯಿಸಲು ಸಾಧ್ಯವೇ ಇಲ್ಲ. ಆತನದೇನಿದ್ದರೂ ದಾರಿಯುದ್ದಕ್ಕೂ ಕರ್ಕಶ ಹಾರ್ನ್ ಮೂಲಕ ಸಿಟ್ಟು, ಅಸಹನೆಯಿಂದ ಎಲ್ಲರಿಗೂ ಬೈದುಕೊಂಡು ಸಾಗುವ ಅಭ್ಯಾಸ. ಬಸ್ಸಿನಲ್ಲಿ ಕುಳಿತ ಪ್ರಯಾಣಿಕರಿಗೂ ಇತರ ವಾಹನ ಸವಾರರಿಗೂ ಅದೊಂದು ಅಸಹ್ಯ ಅನುಭವ. ಇಷ್ಟೆಲ್ಲಾ ರಂಪಾಟ ಮಾಡಿದರೂ ಆತ ಸಾಮಾನ್ಯವಾಗಿ ಕೊನೆಯ ನಿಲ್ದಾಣ ತಲುಪುವುದು 5-10 ನಿಮಿಷ ತಡವಾಗಿಯೇ. 

 

ಇನ್ನೊಬ್ಬ ಡ್ರೈವರ್ ಇದಕ್ಕೆ ತದ್ವಿರುದ್ಧ. ಡ್ರೈವರ್ ಸೀಟ್ ಮೇಲೆ ಕೂತನೆಂದರೆ ಆತನೊಬ್ಬ ಸ್ಥಿತಪ್ರಜ್ಞನಾಗಿಬಿಡುತ್ತಿದ್ದ.  ಅಪರೂಪಕ್ಕೆ ಅನಿವಾರ್ಯವಾದರೆ ಹಾರ್ನ್ ಬಳಕೆ. ಸಿಟ್ಟು, ಬೈಗುಳ ಇಲ್ಲವೇ ಇಲ್ಲ. ತನ್ನ ಡ್ರೈವಿಂಗ್ ಕೌಶಲ್ಯದ ಮೇಲೆ ನಂಬಿಕೆಯಿಟ್ಟು ಸಹನೆ ಮಂದಹಾಸದಿಂದ ಸಹ ಪ್ರಯಾಣಿಕರಿಗೂ ಇತರ ಸವಾರರಿಗೂ ಸಹ್ಯವೆನಿಸುವಂತೆ ಸಲೀಸಾಗಿ ಆತ ಬಸ್ ಚಲಾಯಿಸುವುದನ್ನು ನೋಡುವುದೇ ಚಂದ. ವಿಶೇಷವೆಂದರೆ ಆತ ನಿಲ್ದಾಣಕ್ಕೆ ತಡವಾಗಿ ತಲುಪಿದ್ದೆ ಇಲ್ಲ. 

 

ಇಬ್ಬರೂ ಡ್ರೈವರುಗಳು ಮಾಡುತಿದ್ದ ಕೆಲಸ ಒಂದೇ, ಸಾಗುತ್ತಿದ್ದ ದಾರಿ ಒಂದೇ. ಆದರೆ ಕೆಲಸವನ್ನು ನಿಭಾಯಿಸುತ್ತಿದ್ದ ಪರಿ ವಿಭಿನ್ನ. ಅವರೇನಿದ್ದರೂ ವಿಭಿನ್ನ ವ್ಯಕ್ತಿತ್ವಗಳು. 

 

ಈ ಎರಡೂ ವ್ಯಕ್ತಿತ್ವಗಳನ್ನು ನಮ್ಮ ನಡುವೆ ನಾವು ದಿನ ನಿತ್ಯ ಕಾಣುತ್ತೇವೆ. ದೈನಂದಿನ ಕೆಲಸಗಳನ್ನು ಅಥವಾ ವಹಿಸಿದ ಜವಾಬ್ದಾರಿಗಳನ್ನು ನಿರ್ವಹಿಸುವಾಗ ಕೆಲವರು ಮೊದಲನೆಯ ಡ್ರೈವರನ ರೀತಿಯಾದರೆ ಇನ್ನು ಕೆಲವರು ಎರಡನೆಯವನಂತೆ. ಕೋಪ, ಅಸಹನೆ, ಬೈಗುಳಗಳಿಲ್ಲದೆ ಯಾವುದೇ ಕೆಲಸವನ್ನು ಮುಗಿಸಲು, ಸವಾಲುಗಳನ್ನು ಎದುರಿಸಲು ಸಾಧ್ಯವೇ ಇಲ್ಲ ಎನ್ನುವುದು ಕೆಲವರ ನಂಬಿಕೆ. ಸವಾಲುಗಳನ್ನು ಸಹಜವಾಗಿ ಸ್ವೀಕರಿಸಿ ನಿರ್ಲಿಪ್ತ ಮನಃಸ್ಥಿತಿಯಲ್ಲಿ ಮೌನವಾಗಿ ಎಲ್ಲರಿಗೂ ಸಹ್ಯವೆನಿಸುವ ರೀತಿಯಲ್ಲಿ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸುವ ಶೈಲಿ ಇನ್ನೂ ಕೆಲವರದ್ದು. ಈ ಎರಡೂ ರೀತಿಯ ವ್ಯಕ್ತಿತ್ವಗಳಲ್ಲಿ ಇರುವ ಬಹು ಮುಖ್ಯ ವ್ಯತ್ಯಾಸ ಕೆಲಸದ ಬಗ್ಗೆ ಅವರಿಗಿರುವ ಮನೋಭಾವನೆ. ಜೀವನದ ಬಗ್ಗೆ ಅವರ ದೃಷ್ಟಿಕೋನ ಹಾಗೂ ಸವಾಲುಗಳನ್ನು ಸ್ವೀಕರಿಸುವ ಹಾಗೂ ನಿಭಾಯಿಸುವ ರೀತಿ. ಮೊದಲನೆಯ   ಡ್ರೈವರ್ ನ ಮನಸ್ಥಿತಿಯ ವ್ಯಕ್ತಿಗಳಿಗೆ ಎಲ್ಲವೂ ಕಷ್ಟ.   ಎರಡನೆಯ ಡ್ರೈವರನ ರೀತಿಯವರಿಗೆ ಎಲ್ಲವೂ ಸಹಜ ಹಾಗೂ ಅವರ ಬದುಕಿನ  ರೀತಿ ಯಾವತ್ತಿಗೂ ಸಹ್ಯ, ಸುಂದರ ಹಾಗೂ ಆಕರ್ಷಣೀಯ. 

 

ಸ್ನೇಹಿತರೇ, ಅಂದ ಹಾಗೆ ನೀವು ಯಾವ ರೀತಿಯ ಡ್ರೈವರ್?!