ಸ್ಪರ್ಧಾತ್ಮಕ ಪರೀಕ್ಷಾ ತಯಾರಿ ಹೇಗೆ?

Thumbnail

ಸ್ಪರ್ಧಾತ್ಮಕ ಪರೀಕ್ಷಾ ತಯಾರಿ ಹೇಗೆ?


ಪ್ರಿಯ ಸ್ಪರ್ಧಾರ್ಥಿಗಳೇ,

ಪ್ರತಿಯೊಬ್ಬ ವ್ಯಕ್ತಿಯು ಸ್ವಾವಲಂಬನೆಯ ಬದುಕನ್ನು ಅರಸುವುದು ಸಹಜ. ಸ್ವಾವಲಂಬನೆಯ ಬದುಕಿಗೆ ಉದ್ಯೋಗವು ಆವಶ್ಯಕ. ಹಾಗೆಯೇ ಹಲವರು ಸರ್ಕಾರಿ ಉದ್ಯೋಗವನ್ನು ಪಡೆಯಲು ಪ್ರಯತ್ನಿಸುತ್ತಾರೆ. ಸರ್ಕಾರಿ ಉದ್ಯೋಗ ಗಳಿಸಲು ಆಯಾ ಉದ್ಯೋಗದ ಸ್ವರೂಪವನ್ನು ಆಧರಿಸಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಪ್ರಸ್ತುತ ಎಲ್ಲೆಡೆಯೂ ಒಂದೇ ವಿಚಾರದ ಅನುರಣನ. ಅದು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಹೇಗಿರಬೇಕು? ಯಾವ ರೀತಿ ಅಧ್ಯಯನ ಮಾಡಿದರೆ ಯಶಸ್ವಿಯಾಗಬಹುದು? ಈ ಪ್ರಶ್ನೆಗಳಿಗೆ ಈಗಾಗಲೇ ಅಂತಹ ಪರೀಕ್ಷೆಗಳಲ್ಲಿ ಯಶಸ್ವಿಯಾದವರು ವಿಭಿನ್ನ ಅಭಿಪ್ರಾಯಗಳನ್ನು ಹೊಂದಿರುತ್ತಾರೆ ಮತ್ತು ಅವರವರ ದೃಷ್ಟಿಯಿಂದ ಅದು ಸರಿ ಆಗಿರುತ್ತದೆ. ಅಂತಹ ವಿಭಿನ್ನ ಅಭಿಪ್ರಾಯಗಳನ್ನು ಒಟ್ಟುಗೂಡಿಸಿ ಒಂದು ಸ್ಥೂಲವಾದ ಮಾರ್ಗವನ್ನು ನಾವು ಗಮನಿಸೋಣ. ಸಾಮಾನ್ಯ ಪರೀಕ್ಷೆಗಳಿಗೂ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಇರುವ ಮೂಲಭೂತ ವ್ಯತ್ಯಾಸ ಎಂದರೆ ಸಾಮಾನ್ಯ ಪರೀಕ್ಷೆಗಳಿಗೆ ನಾವು ಆಯ್ಕೆ ಮಾಡಿಕೊಂಡಿರುವ ವಿಷಯ ಮತ್ತು ನಮ್ಮ ಅಧ್ಯಯನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾತ್ರ ತಯಾರಿ ನಡೆಸುತ್ತೇವೆ. ಆದರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಮ್ಮ ಅಧ್ಯಯನ ವಿಷಯಗಳು ಮಾತ್ರವಲ್ಲದೆ, ನಾವು ಕಲಿಯದೇ ಇರುವ ಮತ್ತು ಪ್ರಸ್ತುತ ಸಮಾಜದಲ್ಲಿನ ಆಗುಹೋಗುಗಳ ಕುರಿತಾಗಿಯೂ ಅರಿವನ್ನು ಹೊಂದಿರಬೇಕಾಗುತ್ತದೆ. ಸೀಮಿತ ಕಾಲಾವಧಿಯಲ್ಲಿಯೇ ಹತ್ತು ಹಲವು ವಿಷಯಗಳ ಮೇಲೆ ಗಮನ ಹರಿಸಿ ಮನದಟ್ಟು ಮಾಡಿಕೊಳ್ಳುವುದು ಸ್ಪರ್ಧಾತ್ಮಕ ಪರೀಕ್ಷಾ ತಯಾರಿಯಲ್ಲಿ ಬಹುಮುಖ್ಯ ಅಂಶವಾಗಿರುತ್ತದೆ.

* ಪ್ರಥಮ ಆದ್ಯತೆಯಾಗಿ ನಿಮ್ಮನ್ನು ನೀವು ಅರಿಯಿರಿ

ಜಗತ್ತಿನ ಎಲ್ಲಾ ವ್ಯಕ್ತಿಗಳು ವಿಭಿನ್ನರೇ ಆಗಿದ್ದಾರೆ. ಈ ವಿಭಿನ್ನತೆಯು ಕಲಿಕಾ ಸಾಮರ್ಥ್ಯಕ್ಕೂ ಅನ್ವಯಿಸುತ್ತದೆ. ಕೆಲವರು ಯಾವುದೇ ವಿಷಯವನ್ನಾದರೂ ತ್ವರಿತವಾಗಿ ಗ್ರಹಿಸುತ್ತಾರೆ ಮತ್ತು ಕೆಲವರು ನಿಧಾನವಾಗಿ ಗ್ರಹಿಸುತ್ತಾರೆ ಹಾಗೆಯೇ ನಮ್ಮಲ್ಲಿ ಕೆಲವರು ಕೆಲವು ಕ್ಷೇತ್ರಗಳಲ್ಲಿ ಅತ್ಯಂತ ಸಮರ್ಥರಿದ್ದರೆ ಕೆಲವು ಅಂಶಗಳಲ್ಲಿ ದುರ್ಬಲರಾಗಿರುತ್ತಾರೆ. ಹಾಗಾಗಿ ಯಾವುದೇ ಸ್ಪರ್ಧಾತ್ಮಕ ಪರೀಕ್ಷಾ ತಯಾರಿಗೂ ಮುನ್ನ ನಮ್ಮ ಸಾಮರ್ಥ್ಯ ಮತ್ತು ದೌಬರ್ಲ್ಯಗಳ ಬಗ್ಗೆ ತಿಳಿದಿರಬೇಕಾಗುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ನಮ್ಮ ಪರೀಕ್ಷಾ ತಯಾರಿ ಇರಬೇಕಾಗುತ್ತದೆ.

•ನಿಮಗೆ ಬೇಕಿರುವುದು ಒಂದು ಹುದ್ದೆ ಮಾತ್ರ 

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧವಾಗುತ್ತಿರುವ ಸ್ಪರ್ಧಾರ್ಥಿಗಳಿಗೆ ಪದೇ ಪದೇ ಒಂದು ನಕಾರಾತ್ಮಕ ಭಾವನೆ ಸುಳಿಯುವುದು ಸಹಜ. ಅದು ಯಾವುದೆಂದರೆ ಲಕ್ಷಾಂತರ ಮಂದಿ ಅರ್ಜಿ ಸಲ್ಲಿಸಿದ್ದಾರೆ ಹುದ್ದೆಗಳ ಸಂಖ್ಯೆ ಕಡಿಮೆಯಿದೆ ಎಂಬುದು. ಆದರೆ ಅಧಿಸೂಚಿಸಿರುವ ಹುದ್ದೆ ಒಂದೇ ಆದರೂ ಅಥವಾ ಸಾವಿರವಾದರೂ ನಿಮಗೆ ಅಗತ್ಯವಿರುವುದು ಒಂದು ಹುದ್ದೆ ಮಾತ್ರ ಹಾಗೆಯೇ
ಅಧಿಸೂಚಿಸಿರುವ ಹುದ್ದೆ ಒಂದೇ ಆದರೂ ಅದು ನಮಗೆ ಮೀಸಲು ಎಂಬಂತೆ ತಯಾರಿ ನಡೆಸಬೇಕು.

•ನಿಮ್ಮ ಪರೀಕ್ಷಾ ಸಿದ್ಧತೆ ಈ ಮುಂದಿನಂತಿರಲಿ

*ನೀವು ಅರ್ಜಿ ಸಲ್ಲಿಸಿರುವ ಹುದ್ದೆಯ ಆಯ್ಕೆಗೆ ನಿಗದಿ ಪಡಿಸಿರುವ ಪಠ್ಯಕ್ರಮವನ್ನು ಮನದಟ್ಟು ಮಾಡಿಕೊಳ್ಳಿ.

*ನಿಮ್ಮದೇ ಅಧ್ಯಯನ ವೇಳಾಪಟ್ಟಿ ತಯಾರಿಸಿ ಸಾಧ್ಯವಾದಷ್ಟು ಅದನ್ನು ಅನುಸರಿಸಿ
*ಸುದೀರ್ಘ ಸಮಯದ ಅಧ್ಯಯನಕ್ಕಿಂತ ಚಿಕ್ಕ ಚಿಕ್ಕ ಅವಧಿಯ ಅಧ್ಯಯನಗಳು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.
*ಓದಿನ ನಡುವೆ ಮೆಲುದನಿಯ ಸಂಗೀತ, ಸಣ್ಣ ನಿದ್ರೆ ಅಥವಾ ಚಿಕ್ಕ ನಡಿಗೆಯಂತಹ ವಿರಾಮಗಳನ್ನು ಪಡೆಯುವುದು ಅಗತ್ಯ.
*ನಿರಂತರವಾಗಿ ಏಕರೂಪದ ವಿಷಯಗಳನ್ನು ಅಧ್ಯಯನ
ಮಾಡುವುದಕ್ಕಿಂತಲೂ ವೈವಿಧ್ಯತೆಗೆ ಒತ್ತು ನೀಡಿದರೆ ವಿಷಯ ಗ್ರಹಿಕೆ ಸುಲಭವಾಗುತ್ತದೆ,
*ಸಾಮಾಜಿಕ ಜಾಲತಾಣ, ಟಿ.ವಿ, ಹರಟೆ, ಸುದೀರ್ಘ ಆಟ ಮೊದಲಾದ ಆಕರ್ಷಣೆಗಳನ್ನು ನಿಯಂತ್ರಿಸಿಕೊಳ್ಳುವುದು ಅಗತ್ಯ. 
*ಅಧ್ಯಯನಕ್ಕೆ ಹೆಚ್ಚಿನ ಬೆಳಗ್ಗಿನ ಪ್ರಶಾಂತ ಸಮಯವನ್ನು ಬಳಸಿಕೊಳ್ಳುವುದು ಉತ್ತಮ.
*ಒಂದು ಕಠಿಣ ವಿಷಯದ ಅಧ್ಯಯನದ ನಂತರ ಅದೇ ರೀತಿಯ ವಿಷಯದ ಅಧ್ಯಯನಕ್ಕಿಂತ ಸುಲಭವಾದ ವಿಷಯವನ್ನು ಓದುವುದು ಉತ್ತಮ.
*ಹಿಂದಿನ ಪ್ರಶ್ನೆ ಪತ್ರಿಕೆಯು ಪರೀಕ್ಷಾ ಸ್ವರೂಪ, ವಿಷಯ ಪ್ರಾತಿನಿಧ್ಯ ಮತ್ತು ಸಮಯ ನಿರ್ವಹಣೆ ಕುರಿತು ಗ್ರಹಿಸಲು ಮಾರ್ಗದರ್ಶನ ನೀಡುತ್ತದೆ.
*ಅಣಕು ಪರೀಕ್ಷೆಗಳನ್ನು ತೆಗೆದುಕೊಳ್ಳುವುದು ಮತ್ತು ಸಮಯ ನಿರ್ವಹಣೆಗೆ ಬದ್ಧರಾಗಿರುವುದು.
*ಪುನರಾವರ್ತನೆಗೆ ಸಮಯ ನಿಗದಿಮಾಡಿಕೊಳ್ಳುವುದು.
ಮುಖ್ಯಾಂಶಗಳ ಪುನರ್ಮನನ ಮಾಡುವುದು.
*ಸರಿಯಾದ ಆಹಾರಕ್ರಮ ಅನುಸರಿಸುವುದು ಮತ್ತು ನಿಗದಿತವಾಗಿ ವ್ಯಾಯಮ ಮಾಡುವುದು ಹಾಗೂ ನಿದ್ದೆಗೆಡದಿರುವುದು ಬಹಳ ಮುಖ್ಯ.
*ಕಲಿಕೆ+ಗಳಿಕೆ+ಸಂತಸ+ಸೇವೆ= ಯಶಸ್ಸು ಎಂಬುದನ್ನು ಮನದಟ್ಟು ಮಾಡಿಕೊಳ್ಳುವುದು.
•ಪ್ರಯತ್ನದಿಂದ ಪ್ರತಿಫಲದವರೆಗೆ ಪರಿಶ್ರಮವೊಂದೇ ಮಾರ್ಗ ಎಂಬುದನ್ನು ತಿಳಿದು ಕಾರ್ಯಪ್ರವೃತ್ತರಾಗುವುದು.

•ರಾಜ್ಯ ಮಟ್ಟದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ತಳಹದಿಯ ಜ್ಞಾನವು, ರಾಜ್ಯ ಪಠ್ಯಪುಸ್ತಕ ನಿರ್ದೇಶನಾಲಯದಿಂದ ಪ್ರಕಟಿತ 8,9,10 ನೇ ತರಗತಿಗಳ ಸಮಾಜ ವಿಜ್ಞಾನ, ಗಣಿತ ಮತ್ತು ವಿಜ್ಞಾನ ವಿಷಯಗಳ ಪಠ್ಯ ಪುಸ್ತಕಗಳಿಂದ ಲಭ್ಯವಾಗುತ್ತದೆ.
*8,9,10 ನೇ ತರಗತಿಯ ಕನ್ನಡ ವ್ಯಾಕರಣ.
ಪಠ್ಯ ಪುಸ್ತಕಗಳ ಇಲಾಖೆ ಪ್ರಕಟಿಸಿರುವ 'ಕನ್ನಡ ವ್ಯಾಕರಣ
ದರ್ಪಣ'
*ಪದವಿ ಪೂರ್ವ ಶಿಕ್ಷಣ ಇಲಾಖೆ ಹೊರತಂದಿರುವ ಪ್ರಥಮ ಮತ್ತು ದ್ವಿತೀಯ ಪಿ.ಯು.ಸಿ ಕಲಾ ವಿಭಾಗದ ಪಠ್ಯಪುಸ್ತಕಗಳು. 
*ಕನ್ನಡ ಮತ್ತು ಆಂಗ್ಲ ಭಾಷೆಯ ಎರಡು ದಿನಪತ್ರಿಕೆಗಳು,
*ಯಾವುದಾದರೂ ಒಂದು ಸ್ಪರ್ಧಾತ್ಮಕ ಪರೀಕ್ಷೆಗಳ ವೃತ್ತಪತ್ರಿಕೆ. 
*ರಾಜ್ಯ ಮತ್ತು ರಾಷ್ಟ್ರದ ಬಜೆಟ್ ಕುರಿತ ವಿಶ್ಲೇಷಣೆಗಳು.
*ಸರಕಾರದ ವಿಭಿನ್ನ ಇಲಾಖೆಗಳ ಜಾಲತಾಣಗಳಲ್ಲಿ ಲಭ್ಯವಿರುವ ಆಯಾ ಇಲಾಖೆಯ ಮುಖ್ಯ ಯೋಜನೆಗಳ ಮಾಹಿತಿ.

ಇದಿಷ್ಟು ಪರಿಪೂರ್ಣವಾಗಿ ಅರಿತರೆ ಒಂದು ಹಂತದವರೆಗೆ ಸ್ಪರ್ಧಾತ್ಮಕ ಪರೀಕ್ಷಾ ತಯಾರಿಯನ್ನು ಸಮರ್ಪಕವಾಗಿ ಮಾಡಿಕೊಂಡಂತೆ. ಎಷ್ಟು ಓದಿದೆ ಎಂಬುದಕ್ಕಿಂತ ಏನನ್ನು ಓದಿದೆ ಎಂಬುದು ಮುಖ್ಯ.
ತಯಾರಿ ಸರಿಯಾಗಿದ್ದರೆ ಕಾರ್ಯವೂ ಸರಿಯಾಗಿರುತ್ತದೆ ತನ್ಮೂಲಕ ಫಲಿತಾಂಶವೂ ಸರಿಯಾಗಿರುತ್ತದೆ.


-ಕಾಂತರಾಜು ಸಿ. ಕನಕಪುರ