ನಮ್ಮ ನೆಮ್ಮದಿ ನಮ್ಮ ಕೈಯಲ್ಲಿಯೇ!

Thumbnail

ನಮ್ಮ ನೆಮ್ಮದಿ ನಮ್ಮ ಕೈಯಲ್ಲಿಯೇ!

 

ಕೆಲ ದಿನಗಳ ಹಿಂದೆ ತರಬೇತಿಯೊಂದಕ್ಕಾಗಿ ಧಾರವಾಡಕ್ಕೆ ತೆರಳಿದ್ದೆ. ನಮಗೆ ತಂಗಿಕೊಳ್ಳಲು ನೀಡಿದ್ದ ಹೋಟೆಲ್ ತರಬೇತಿ ಕೇಂದ್ರಕ್ಕಿಂತ ಒಂದಷ್ಟು ಕಿಲೋಮೀಟರ್ ದೂರದಲ್ಲಿತ್ತು. ಆದಕಾರಣ, ಬಸ್ ವ್ಯವಸ್ಥೆ ಮಾಡಲಾಗಿತ್ತು. ನಾನು ಲವಲವಿಕೆಯಿಂದ ಓಡಾಡುತ್ತಿದ್ದಕ್ಕೊ ಏನೋ ಗೊತ್ತಿಲ್ಲ, ನನಗೆ ಎಲ್ಲರನ್ನೂ ಸಮಯಕ್ಕೆ ಸರಿಯಾಗಿ ಪ್ರತಿದಿನ ಕರೆದುಕೊಂಡು ಹೋಗುವ ಕೆಲಸ ವಹಿಸಿಕೊಟ್ಟಿದ್ದರು. ಅದರ ಜೊತೆಗೆ ಪ್ರತಿದಿನವೂ ಟಿಕೆಟುಗಳ ಒಟ್ಟು ಮೊತ್ತ ನನಗೆ ಕೊಡಲಾಗುತ್ತಿತ್ತು. ಆ ಟಿಕೆಟ್‌ಗಳನ್ನು ಜೋಪಾನವಾಗಿ ಕಛೇರಿ ಹುಡುಗರ ಕೈಯಲ್ಲಿ ಕೊಡಬೇಕಾಗಿತ್ತು. ನನಗೇನೋ ಇಂಥದ್ದರಲ್ಲಿ ಹೇಳಲಾಗದ ಉತ್ಸುಕತೆ. ಖುಷಿ ಖುಷಿಯಾಗಿಯೇ ನನ್ನ ಜವಾಬ್ದಾರಿ ನಿರ್ವಹಿಸುತ್ತಿದ್ದೆ. ಒಂಥರ ಕಂಡಕ್ಟರ್ ತರಹ ಸೀಟಿ ಹಾಕಿ ಎಲ್ಲರನ್ನು ಬಸ್ ಹತ್ತಿಸಿಕೊಳ್ಳುವುದು ಮತ್ತು ಬಂದ ಟಿಕೆಟುಗಳನ್ನು ಜಾಗರೂಕತೆಯಿಂದ ಯಾರಾದರೊಬ್ಬ ಕಛೇರಿ ಹುಡುಗನಲ್ಲಿ ಒಪ್ಪಿಸುವುದು. ಹೀಗೆ ಒಂದೆರಡು ವಾರಗಳು ಜರುಗಿದವು. ಆದರೆ ಅದೊಂದು ದಿನ ನನಗೊಂದು ಅನಿರೀಕ್ಷಿತ ವಿಚಾರ ಕಾದಿತ್ತು. ಕಛೇರಿಯ ಮ್ಯಾನೇಜರ್ ನನ್ನ ಬಳಿ ಬಂದು, "ಸರ್, ನೀವು ನೆನ್ನೆಯ ಟಿಕೆಟುಗಳನ್ನು ಕೊಟ್ಟಂತಿಲ್ಲವಲ್ಲ" ಎಂದರು. ಸುಮಾರು ₹ 1600 ಮೊತ್ತದ ಟಿಕೆಟುಗಳು ಅವು!. ತಕ್ಷಣವೇ ನಾನು "ಆ ಮೂವರು ಹುಡುಗರಲ್ಲಿ ಯಾರೋ ಒಬ್ಬನಿಗೆ ಕೊಟ್ಟಿದ್ದೇನೆ ಸರ್" ಎಂದು ಉತ್ತರಿಸಿದೆ. ಅವರು "ಓ ಹಾಗಾ?" ಎಂದು ಹೋದವರೇ, ತುಸು ಹೊತ್ತಿನ ನಂತರ ಮರಳಿ ಬಂದು "ಆ ಮೂವರೂ ಹುಡುಗರು ನಮ್ಮ ಬಳಿ ಕೊಟ್ಟಿಲ್ಲ ಎಂದೇ ಹೇಳುತ್ತಿದ್ದಾರೆ" ಎಂದರು. 'ಅರೇ, ಏನಿದು ಹೀಗಾಯ್ತಲ್ಲಾ?' ಎಂದು ಮನದೊಳಗೆ ಹೇಳಿಕೊಳ್ಳುತ್ತಾ "ಸರ್, ಹಾಗಾದರೆ ಅವುಗಳು ಇದ್ದರೆ ನನ್ನ ವಾಲೆಟಿನಲ್ಲಿಯೇ ಇರಬೇಕು, ಸ್ವಲ್ಪ ಹೊತ್ತಿನ ನಂತರ ನಾನು ಖಚಿತವಾಗಿ ಹೇಳಿಬಿಡುತ್ತೇನೆ" ಎಂದೆ. ಅವರು ಒಪ್ಪಿಕೊಂಡರು. ನನ್ನ ವಾಲೆಟ್ನಲ್ಲಿ ಪ್ರತಿದಿನ ಇಡುತ್ತಿದ್ದ ಜಾಗದ ಜೊತೆಗೆ ನನ್ನ ಇಡೀ ಬ್ಯಾಗನ್ನೆಲ್ಲಾ ಶೋಧಿಸಿದರೂ, 'ಊಹುಂ' ಟಿಕೆಟುಗಳು ಮಾತ್ರ ಸಿಗಲೇ ಇಲ್ಲ!. "ನಾನು ಎಂದಿನಂತೆ, ಆ ಹುಡುಗರಲ್ಲೊಬ್ಬನಿಗೆ ಖಂಡಿತ ಕೊಟ್ಟಿದ್ದೇನೆ" ಎಂದು ಮ್ಯಾನೇಜರ್ ಗೆ ಖಚಿತವಾಗಿ ಹೇಳಿಬಿಟ್ಟೆ,  ಅವರಿಗೂ ತಲೆ ಕೆಟ್ಟಂತಾಯ್ತು. ಮ್ಯಾನೇಜರ್ "ಸರ್, ಆ ಹುಡುಗರು ತಂತಮ್ಮ ಮನೆಗಳಿಗೆ ಮರಳಿದ್ದಾರೆ, ನಾಳೆ ನಿಮ್ಮ ಮುಂದೆ ಕರೆದು ನಿಲ್ಲಿಸುತ್ತೇನೆ, ನೀವೇ ಇದನ್ನು ಇತ್ಯರ್ಥ ಮಾಡಿಬಿಡಿ" ಎಂದರು. "ಸರಿ ಸರ್ " ಎಂದೆ. ಏನು ಹುಡುಗರಪ್ಪಾ ಇವರು, ಹೀಗೆ ಮಾಡಿಬಿಟ್ಟರು ಎಂದುಕೊಳ್ಳುತ್ತಾ, ಹೋದರೆ ₹ 1600 ತಾನೆ, ಒಂದು ಪಾಠ ಕಲಿತಂತಾಗುತ್ತದೆ ಎಂದುಕೊಂಡು ಮತ್ತೆ ಎಂದಿನಂತೆ ಎಲ್ಲರೊಡನೆ ಹೋಟೆಲ್ ತಲುಪಿದೆ. ಅಲ್ಲಾ, ಅವರೇನಾದರೂ ಕಳೆದುಕೊಂಡಿದ್ದೇ ಆಗಿದ್ದಲ್ಲಿ ಅವರು ನನಗೆ ನೇರವಾಗೇ ಹೇಳಬಹುದಿತ್ತಲ್ಲಾ, ಅಷ್ಟು ದುಡ್ಡೇನು ಮಹಾ ದೊಡ್ಡದು ನನಗೆ, ನನ್ನ ಕೈಯಿಂದಲೇ ಕಟ್ಟಿಕೊಟ್ಟುಬಿಡುತ್ತಿದ್ದೆ ಎಂದುಕೊಳ್ಳುತ್ತಲೇ ಮೆಟ್ಟಿಲುಗಳನ್ನು ಹತ್ತಿದೆ. ಹೀಗೆ ಏನೆಲ್ಲಾ ಲೆಕ್ಕಾಚಾರದ ನಡುವೆ ಸಪ್ಪೆಮೋರೆಯಿಂದಲೇ ಹೋಟೆಲ್ ರೂಮಿನೊಳಗೆ ಹೋದವನೇ, ಲೈಟ್ ಹಾಕಿದೆ. ಅತ್ಯಾಶ್ಚರ್ಯವೆಂದರೆ, ಹಾಸಿಗೆಯ ಮೇಲೆಯೇ ಆರಾಮವಾಗಿಯೇ ಬಿದ್ದಿದ್ದ ಆ ಹಿಂದಿನ ದಿನದ ಟಿಕೆಟುಗಳು ನನ್ನ ಕಣ್ಣಿಗೆ ಗೋಚರಿಸಿದವು!! ಅವು ನಗುನಗುತ್ತಾ, ಹಾಸ್ಯಾಸ್ಪದವಾಗಿ ನನಗೆ ಭವ್ಯಸ್ವಾಗತವನ್ನು ಕೋರಿದಂತೆ ಭಾಸವಾಯ್ತು! 'ಥುತ್ ಏನಪ್ಪ ಇದು'? ಅಂದುಕೊಂಡೆ, ನನ್ನಲ್ಲಿ ಅಸಹ್ಯದ ಮನೋಭಾವನೆಯೂ ಉಂಟಾಯ್ತು. ಅದು ಸರಿ, ಈಗ ಮುಂದೇನು ಮಾಡಬೇಕು? ಎನ್ನುವ ಗಲಿಬಿಲಿಯ ಯೋಚನೆಗಳೂ ಪ್ರಾರಂಭವಾದವು! ಅತೀ ಮುಜುಗರದಿಂದಲೇ ಟಿಕೆಟುಗಳನ್ನು ವಾಲೆಟಿನಲ್ಲಿ ಇಟ್ಟುಕೊಂಡು ಅಸಮಾಧಾನದಿಂದಲೇ ಮಲಗಿದೆ. ತಡವಾಗಿ ನಿದ್ರೆ ಬಂತು.

 

ಮರುದಿನ ತರಬೇತಿ ಕೇಂದ್ರ ತಲುಪುತ್ತಲೇ, ಮೂವರಲ್ಲಿ ಒಬ್ಬನನ್ನು ಕರೆದು, ನಡೆದ ಘಟನೆಯನ್ನು ತಿಳಿಸಿ, ಕ್ಷಮೆಯಾಚಿಸಿದೆ. ಮತ್ತು ಇತರ ಹುಡುಗರಿಗೂ ನನ್ನ ಕ್ಷಮೆ ತಲುಪಿಸು ಎಂದೆ. ಅದಕ್ಕವನು ನಗುತ್ತಾ, "ಅರೇ, ಸರ್ ಇಷ್ಟಕ್ಕೆಲ್ಲಾ ಏಕೆ ಈ ಕ್ಷಮೆ ಗಿಮೆ ಎಲ್ಲಾ ಬಿಡಿ ಸಾರ್" ಎಂದ. ಸಾಯಂಕಾಲ ಎಲ್ಲರೂ ಒಟ್ಟಿಗೆ ಚಹ ಕುಡಿದೆವು ಮತ್ತು ಅವರಲ್ಲೊಬ್ಬ ಮರುದಿನದ ಟಿಕೆಟುಗಳಿಗಾಗಿ ಹಣವನ್ನು ನನ್ನ ಕೈಯಲ್ಲಿರಿಸಿ ನಕ್ಕುಬಿಟ್ಟ. ಹಣದ ಜೊತೆಗೆ ಅವನ ಅಂಗೈಯನ್ನು ಸ್ವಲ್ಪ ಬಿಗಿ ಹಿಡಿದು ಕೈ ಅಲುಗಾಡಿಸುತ್ತಾ ನಾನೂ ನಕ್ಕೆ. ಕೆಲ ಕ್ಷಣಗಳಲ್ಲಿ ಸೂರ್ಯ, ಎಂದಿನಂತೆ ಯಾರ ಅಪ್ಪಣೆಯೂ ಇಲ್ಲದೆ ಮುಳುಗಿದ. ಕಲಿಕೆಯೊಂದಿಗೆ ನನ್ನ ದಿನ ಕಳೆದಿತ್ತು.

 

ಮನುಷ್ಯನ ಬುದ್ಧಿಯೇ ಹಾಗೆ. ಎಷ್ಟೋ ಬಾರಿ ಅಸತ್ಯವನ್ನು ಸತ್ಯ ಎಂದೇ ನಂಬಿಬಿಡುತ್ತೇವೆ. ಪರಿಶೀಲನೆಯ ಮನೋಭಾವವಿಲ್ಲದೆ ಖಚಿತ ಉಪಸಂಹಾರ ಕಂಡುಕೊಂಡುಬಿಡುತ್ತೇವೆ. ಇತರರನ್ನು ಅವರು ಮಾಡದ ತಪ್ಪಿಗೆ ದೂಷಿಸಿಯೂ ಬಿಡುತ್ತೇವೆ. ನಮ್ಮ ಮನಸ್ಸು ಮತ್ತು ಬುದ್ದಿ ಎಲ್ಲವೂ ನಾನೇ ಸರಿ ಎಂಬ ಅಹಂ ಅನ್ನು ಸಲೀಸಾಗಿ ಸ್ವೀಕರಿಸಿಬಿಡುತ್ತವೆ. ನಾನು ದೊಡ್ಡವನು/ಳು, ಅನುಭವ ಬೇರೆ ಸಾಕಷ್ಟು ಇದೆ ಎಂದೆಲ್ಲಾ ಬೀಗುತ್ತಾ ತಪ್ಪು ಹೆಜ್ಜೆಗಳನ್ನು ಇಟ್ಟುಬಿಡುತ್ತೇವೆ. ಸ್ವಲ್ಪ ಎಡವಟ್ಟಾದರೂ ಸಂಬಂಧಗಳಿಗೆ ಬೆಂಕಿ ಹೊತ್ತಿಕೊಂಡೂ ಬಿಡುತ್ತದೆ. ತಾಳ್ಮೆ, ಸಹನೆ ಈ ಎಲ್ಲಾ ಸಂದರ್ಭಗಳಲ್ಲಿಯೂ ನಮ್ಮೊಂದಿಗೆ ಸ್ನೇಹಿತರಂತೆ ಇರಬೇಕು ಅಲ್ವೆ? ಹೆಚ್ಚಾನೆಚ್ಚು ಸಂದರ್ಭಗಳಲ್ಲಿ ನಮ್ಮ ನೆಮ್ಮದಿ ನಮ್ಮ ಕೈಯಲ್ಲಿಯೇ ಇರುತ್ತದೆ, ಜೋಪಾನ ಮಾಡುವ ಮನಸ್ಸಿರಬೇಕು ಅಷ್ಟೇ!                                                                     

  - ಡಾ. ನಂದೀಶ್. ವೈ. ಡಿ.