ನಾನು ನೋಡಬಲ್ಲೆ..., "ನಾನು ಕೇಳಬಲ್ಲೆ", " ನಾನು ಮಾತನಾಡಬಲ್ಲೆ",
ಅಧ್ಯಾಪಕರು ಎಂದಿನಂತೆ ವಿದ್ಯಾರ್ಥಿಗಳಿಗೆ ತರಗತಿ ತೆಗೆದುಕೊಳ್ಳುತ್ತಿದ್ದರು. ಏನೋ ನೆನಪಾದವರಂತೆ "ಮಕ್ಕಳೇ, ನಾನು ಒಂದು ಪ್ರಶ್ನೆ ಕೇಳುವೆನು. ನೀವು ಪ್ರಾಮಾಣಿಕವಾಗಿ ಧೈರ್ಯದಿಂದ ಉತ್ತರಿಸಬೇಕು. ಸರಿಯಾ?" ಅಂದರು.
"ಸದ್ಯ, ಕಷ್ಟದ ಪ್ರಶ್ನೆ ಕೇಳದಿದ್ದರೆ ಸಾಕು" ಅಂತ ಮನಸ್ಸಿನಲ್ಲಿ ಅಂದುಕೊಳ್ಳುತ್ತಾ " ಪ್ರಶ್ನೆ ಕೇಳಿ ಸರ್. ಉತ್ತರ ಗೊತ್ತಿದ್ದರೆ ಖಂಡಿತಾ ಹೇಳುವೆವು" ಅಂತ ವಿದ್ಯಾರ್ಥಿಗಳು ಮರು ಉತ್ತರಿಸಿದರು.
"ಸರಿ ಹಾಗಾದರೆ. ನನ್ನ ಪ್ರಶ್ನೆ ಹೀಗಿದೆ. ಇಲ್ಲಿಯ ತನಕ ನೀವು ಹೆದರಿಕೆ ಇಲ್ಲದೆ, ಧೈರ್ಯದಿಂದ ಮಾಡಿದ ಕೆಲಸಗಳನ್ನು ಹೇಳಿ" . "ಅಯ್ಯೋ, ಯಾವ ಕೆಲಸವನ್ನು ಹೇಳಲಿ. ಯಶಸ್ವಿಯಾಗಿ ಮಾಡಿದ ಕೆಲಸ ಆಗಿರಬೇಕಂತೆ". ಇಡೀ ತರಗತಿ ಮೌನವಾಯಿತು. ಯಾರಿಂದಲೂ ಉತ್ತರ ಬರುತ್ತಿಲ್ಲ
. "ಇಷ್ಟು ಸುಲಭದ ಪ್ರಶ್ನೆಗೆ ಉತ್ತರಿಸಲು ಯಾಕೆ ತಡ?" ಅಂದರು ಅಧ್ಯಾಪಕರು ಮತ್ತೂ ಮುಂದುವರಿಸಿದರು "ಉತ್ತರ ನಿಮ್ಮ ಬಳಿ ಇದೆ. ನಿಮಗೇ ಗೊತ್ತಿಲ್ಲದೆ ಎಷ್ಟೋ ಕೆಲಸಗಳನ್ನು ನೀವು ಯಶಸ್ವಿಯಾಗಿ ಮಾಡಿರಬಹುದು ಅಥವಾ ಗೊತ್ತಿದ್ದೂ ಮಾಡಿರಬಹುದು".
ತರಗತಿಯ ಕೊನೆಯ ಬೆಂಚಿನಲ್ಲಿ ಕುಳಿತಿದ್ದ ವಿದ್ಯಾರ್ಥಿಯೊಬ್ಬ ಮೆಲ್ಲಗೆ ಎದ್ದು ನಿಂತು "ಸರ್, ನಾನು ಚೆನ್ನಾಗಿ ನಿದ್ದೆ ಮಾಡುತ್ತೇನೆ. ಒಮ್ಮೆ ಮಲಗಿದ ನಂತರ ಮಧ್ಯೆ ಏಳುವುದೇ ಇಲ್ಲ". ಅವನ ಉತ್ತರ ಕೇಳಿ ಉಳಿದ ವಿದ್ಯಾರ್ಥಿಗಳಿಗೆ ನಗು ತಡೆಯಲಾಗಲಿಲ್ಲ. "ಯಾಕೆ ನಗುತ್ತಿದ್ದೀರಿ? ಅವನು ಸರಿಯಾದ ಉತ್ತರವನ್ನೇ ಹೇಳಿದ್ದಾನೆ. ನಿದ್ರೆ ನಮ್ಮ ದೇಹಕ್ಕೆ ತುಂಬಾ ಅವಶ್ಯಕ. ನಿದ್ರೆ ಬರುತ್ತಿದ್ದರೆ ಅವನು ಸುಖಿಯೇ. ಎಷ್ಟೋ ಜನರನ್ನು ನೋಡಿ. ಅನಗತ್ಯ ವಿಷಯಗಳಿಗೆ ಚಿಂತಿಸುತ್ತಾ ರಾತ್ರಿಯಿಡೀ ಒದ್ದಾಡುತ್ತಾ ಅಥವಾ 'ಅಮ್ಮ/ಅಪ್ಪ ನೋಡಿದರೆ ಬಯ್ಯುತ್ತಾರೆ' ಎಂದು ಹೊದಿಕೆಯೊಳಗಿಂದಲೇ ಮೊಬೈಲ್ ವೀಕ್ಷಿಸುತ್ತಾ ಆರೋಗ್ಯ ಹಾಳು ಮಾಡಿಕೊಳ್ಳುವ ಯುವ ಜನರ ಸಂಖ್ಯೆ ಜಾಸ್ತಿ ಆಗುತ್ತಿದೆ" ಅಂತ ಅಧ್ಯಾಪಕರು ನುಡಿದಾಗ ವಿದ್ಯಾರ್ಥಿಗಳು ಹೌದೆಂದು ತಲೆ ಅಲ್ಲಾಡಿಸಿದರು.
ಇನ್ನೊಬ್ಬಳು ಹುಡುಗಿ ಎದ್ದು ನಿಂತು "ಸರ್, ನಾನು ಸಾಂಪ್ರದಾಯಿಕ ಅಡುಗೆ ಚೆನ್ನಾಗಿ ಮಾಡುತ್ತೇನೆ, ನನಗೆ ಹೋಟೆಲ್ ಊಟ ಅಷ್ಟು ಇಷ್ಟವೂ ಇಲ್ಲ" ಅಂದಳು. ಅಧ್ಯಾಪಕರು ಅವಳೆಡೆ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಾ "ಈಗಿನ ಯುವಜನತೆ ಕೋಕ್, ಪಿಜ್ಜಾ, ನೂಡಲ್ಸ್ ಅಂತ ಹೊಟ್ಟೆ ತುಂಬಿಸಿಕೊಂಡು ತಾವೇ ತಮ್ಮ ಕೈಯಾರೆ ಆರೋಗ್ಯ ಹಾಳುಮಾಡಿಕೊಂಡು ಇರುವಾಗ, ಅಡುಗೆ ಮನೆಗೆ ಹೋಗುವ ಕೆಲಸ ಯಾರಿಗೆ ಬೇಕು ಅಂತ ಮೂಗು ಮುರಿಯುವವರ ಮಧ್ಯೆ ನೀನು ಅಡುಗೆ ಚೆನ್ನಾಗಿ ಮಾಡುತ್ತೇನೆ ಅನ್ನುತ್ತಿರುವುದು ನಿಜವಾಗಿಯೂ ಶ್ಲಾಘನೀಯ" ಅಂದರು ಅಧ್ಯಾಪಕರು.
ಈಗ ಕೆಲವು ವಿದ್ಯಾರ್ಥಿಗಳಿಗೆ ಧೈರ್ಯ ಬಂತು. "ನಾನು ಹಾಡಬಲ್ಲೆ", "ನಾನು ನೃತ್ಯ ಮಾಡಬಲ್ಲೆ", "ಸಮಯವಿದ್ದಾಗ ಸಣ್ಣ ಪುಟ್ಟ ಲೇಖನ ಬರೆಯುತ್ತೇನೆ".... ಹೀಗೆ ಉತ್ತರಗಳು ಬರಲಾರಂಭಿಸಿದವು. ಅಧ್ಯಾಪಕರು "ಸರಿ, ಸರಿ,.... ಇನ್ನೂ ಯೋಚಿಸಿ. ಪ್ರತಿಯೊಬ್ಬರೂ ತಾವು ಕೆಲಸ ಮಾಡುತ್ತಿದ್ದೇವೆ ಅನ್ನುವ ಅರಿವೇ ಇಲ್ಲದೆ ಮಾಡುವ ಹಲವಾರು ಕೆಲಸಗಳಿವೆ. ಯಾರೂ ಹೇಳಿಲ್ಲ. ಈ ಉತ್ತರ ಹೇಳಲು ಯೋಚಿಸುವುದೇ ಅಗತ್ಯವಿಲ್ಲ. ಉದಾಹರಣೆಗೆ ನಾನು ನೋಡಬಲ್ಲೆ..."ಅನ್ನುತ್ತಿದ್ದಾಗಲೇ ವಿದ್ಯಾರ್ಥಿಗಳು ಒಬ್ಬೊಬ್ಬರಾಗಿ "ನಾನು ಕೇಳಬಲ್ಲೆ, ನಾನು ಮಾತನಾಡಬಲ್ಲೆ, ನಾನು ಬರೆಯಬಲ್ಲೆ, ನಾನು ನಡೆಯಬಲ್ಲೆ....." ಹೇಳತೊಡಗಿದರು. ಈಗ ಅಧ್ಯಾಪಕರು ತಾವೇನು ಹೇಳಬೇಕಿತ್ತು ಅನ್ನುವುದನ್ನು ಹೇಳಲು ಸಕಾಲ ಅಂದುಕೊಂಡು ತಮ್ಮ ಮಾತುಗಳನ್ನು ಮುಂದುವರಿಸಿದರು.
ಕಣ್ಣು, ಕಿವಿ, ಕೈ, ಕಾಲು, ಬಾಯಿ ಎಲ್ಲವೂ ಸರಿ ಇದ್ದಾಗ ನಮಗೆ ಅದರ ಬೆಲೆ ಗೊತ್ತಾಗುವುದಿಲ್ಲ. ಹುಟ್ಟಿನಿಂದಲೇ ಯಾವುದಾದರೊಂದು ವೈಕಲ್ಯತೆ ಇರುವವರನ್ನು ನೋಡಿದಾಗ ಆ ಭಗವಂತನು ನಮಗೆ ಯಾವೆಲ್ಲಾ ಭಾಗ್ಯಗಳನ್ನು ಕರುಣಿಸಿದ್ದಾನೆ ಅನ್ನುವುದರ ಅರಿವಾಗುವುದು. ಹಾಗಾದರೆ ಎಲ್ಲವೂ ಸರಿ ಇರುವಾಗ ಜೀವನದಲ್ಲಿ ಎದುರಾಗುವ ಸಣ್ಣ ಪುಟ್ಟ ಸಮಸ್ಯೆಗಳಿಗೆ ಹೆದರಿ "ಆ ದೇವರು ನನಗೆ ಮಾತ್ರ ಇಷ್ಟು ಕಷ್ಟ ಯಾಕೆ ಕೊಡುತ್ತಾನೆ" ಅಂತ ಮರುಗುವವರನ್ನು ಕಂಡಾಗ ನಿಜವಾಗಿಯೂ ದುಃಖವಾಗುವುದು. ವಿದ್ಯಾರ್ಥಿಗಳೇ "ನಿಮ್ಮ ಶರೀರ ನಿಮ್ಮ ಬಹು ದೊಡ್ಡ ಆಸ್ತಿ. ನಿಮಗೆ ಬೇಕಾಗಿರುವುದು ಕುಂದದ ಆತ್ಮವಿಶ್ವಾಸ. ಎಷ್ಟೇ ಕಷ್ಟಗಳು ಬಂದರೂ ಮುನ್ನಡೆಯುತ್ತೇನೆ ಅನ್ನುವ ಗಟ್ಟಿ ನಂಬುಗೆ. ಏನಂತೀರಿ?" ಎಂದಾಗ ವಿದ್ಯಾರ್ಥಿಗಳ ಕಣ್ಣ ನೋಟದಲ್ಲಿ ಮೆಚ್ಚುಗೆಯನ್ನು ಕಂಡರು.
"ಸರಿ, ನಾನು ಕೆಲವು ಹೆಸರು ಹೇಳುತ್ತೇನೆ. ಅವರ ಬಗ್ಗೆ ಸ್ವಲ್ಪ ಓದಿ ತಿಳಿದುಕೊಳ್ಳಿ. ನಾಗನರೇಶ್ ಕರುಟುರ, ಅರುಣಿಮಾ ಸಿಂಗ್, ಸುಧಾಚಂದ್ರನ್....ಹುಟ್ಟುವಾಗ ನಮ್ಮೆಲ್ಲರಂತೆ ಸರಿ ಇದ್ದವರು. ನಂತರ ಬೇರೆ ಬೇರೆ ಕಾರಣಗಳಿಂದ ತಮ್ಮ ಕಾಲು ಕಳೆದುಕೊಂಡವರು. ಆದರೆ ನನಗೆ ಕಾಲಿಲ್ಲ ಅಂತ ಕೊರಗುತ್ತಾ ಕುಳಿತುಕೊಳ್ಳದೆ ಸಾಧಿಸಿ ತೋರಿಸಿದವರು. ಇವರ ಬಗ್ಗೆ ಓದಿ, ಮಾಹಿತಿ ಸಂಗ್ರಹಿಸಿ, ಅವರ ಜೀವನದಿಂದ ಪ್ರೇರಣೆ ಪಡೆದುಕೊಳ್ಳಿ" ಅಂದರು ಅಧ್ಯಾಪಕರು.
"ಹುಟ್ಟಿನಿಂದಲೇ ಎರಡು ಕೈಗಳಿಲ್ಲದೇ ಇದ್ದರೂ ಕಾಲಿನಿಂದಲೇ ಬರೆದು ಸ್ನಾತಕೋತ್ತರ ಪದವಿ ಪಡೆದು ಉದ್ಯೋಗ ಪಡೆದಿರುವ ಸಬಿತಾ ಮೋನಿಸ್ ಬಗ್ಗೆ ಕೂಡಾ ತಿಳಿದುಕೊಳ್ಳಿ". “ಹ್ಞಾ, ನೆನಪಾಯಿತು ಹುಟ್ಟುವಾಗಲೇ ಎರಡು ಕೈ ಮತ್ತು ಎರಡು ಕಾಲುಗಳಿಲ್ಲದೆ ಜನಿಸಿದ ಓರ್ವ ವ್ಯಕ್ತಿಯ ಬಗ್ಗೆ ನೀವು ಓದಿ ತಿಳಿದುಕೊಳ್ಳಲೇ ಬೇಕು. ಆಸ್ಟ್ರೇಲಿಯಾ ದೇಶದಲ್ಲಿ ಹುಟ್ಟಿದ ನಿಕ್ ವೂಜಿಸಿಕ್ ಬಗ್ಗೆ ನೀವು ಓದಲೇ ಬೇಕು. ನಿಕ್ ತನ್ನ ಜೀವನದಲ್ಲಿ ಎಷ್ಟೆಲ್ಲಾ ಸಾಧಿಸಿ ಪ್ರಸಿದ್ಧ ವ್ಯಕ್ತಿಯಾಗಿದ್ದಾನೆ" ಅಂದ ಅಧ್ಯಾಪಕರ ಮಾತಿಗೆ ಒಪ್ಪಿದರು ವಿದ್ಯಾರ್ಥಿಗಳು.
"ಬರುವ ತರಗತಿಯಲ್ಲಿ ನಾನು ಹೇಳಿದ ವ್ಯಕ್ತಿಗಳು ಹಾಗೂ ನಿಮಗೆ ಗೊತ್ತಿರುವ ಇಂತಹ ವ್ಯಕ್ತಿಗಳ ಬಗ್ಗೆ ಸೆಮಿನಾರ್ ಮಾಡೋಣ. ಆಗಬಹುದೇ?" ಅನ್ನುವ ಪ್ರಶ್ನೆಗೆ "ನಾವು ಸಿದ್ಧ" ಅಂದ ವಿದ್ಯಾರ್ಥಿಗಳನ್ನು ಕಂಡ ಅಧ್ಯಾಪಕರಿಗೆ ಏನೋ ಆತ್ಮತೃಪ್ತಿಯ ಅನುಭವ.