ನಾಯಿ ಮರಿಗಳು ಮಾರಟಕ್ಕಿವೆ

ನಾಯಿ ಮರಿಗಳು ಮಾರಟಕ್ಕಿವೆ
ಒಮ್ಮೆ ಒಬ್ಬ ಅಂಗಡಿ ಮಾಲಿಕನು ತನ್ನ ಅಂಗಡಿಯ ಮುಂಭಾಗದಲ್ಲಿ ಒಂದು ಫಲಕದಲ್ಲಿ ಜಾಹಿರಾತನ್ನು ಪ್ರಕಟಿಸಿದ್ದನು. ಅದರಲ್ಲಿ ನಾಯಿ ಮರಿಗಳು ಮಾರಟಕ್ಕಿವೆ ಎಂದು ಬರೆಯಲಾಗಿತ್ತು.
ಇಂತಹ ಸಾಕು ಪ್ರಾಣಿಗಳ ವಿಷಯ ಮಕ್ಕಳಲ್ಲಿ ಬಹಳ ಕುತೂಹಲ ಕೆರಳಿಸುತ್ತದೆ. ಒಂದು ದಿನ ಒಬ್ಬ ಸಣ್ಣ ಹುಡುಗ ಈ ಪ್ರಕಟನೆಯನ್ನು ಓದಿದ ಮತ್ತು ಅಂಗಡಿಯ ಮಾಲಿಕನಿಗೆ ಕೇಳಿದ ನಾಯಿ ಮರಿಗಳನ್ನು ಎಷ್ಟು ಕ್ರಯಕ್ಕೆ ಮಾರುತ್ತೀರಿ? ಅಂಗಡಿಯವನು ೧೦೦,೨೦೦ ರೂಪಾಯಿಯಿಂದ ೫೦೦ ತನಕ ಎಂದು ಹೇಳಿದ.
ಹುಡುಗ ತನ್ನ ಜೇಬಿನಿಂದ ಹಣದ ಚೀಲ ತೆಗೆದು ಎಲ್ಲಾ ಹಣ ಮೇಜಿನ ಮೇಲೆ ಹಾಕಿ ಲೆಕ್ಕ ಮಾಡಿದ. ಅದರಲ್ಲಿ ರು. ೪೪.೫೦ ಮಾತ್ರ ಇದ್ದವು. ಆಗ ಹುಡುಗ ಅಂಗಡಿಯವನಿಗೆ ನಾನು ನಾಯಿ ಮರಿಗಳನ್ನು ನೋಡಬಹುದೆ? ಎಂದು ಕೇಳಿದನು.
ಅಂಗಡಿಯವನು ಮುಗುಳುನಗೆ ಬೀರುತ್ತಾ, ಹತ್ತಿರದಲ್ಲಿದ್ದ ನಾಯಿ ಮರಿಗಳನ್ನು ಕೂಡಿ ಹಾಕಿದ ಸ್ಥಳವನ್ನು ತೋರಿಸಿದ. ನಾಯಿ ಮರಿಗಳನ್ನು ನೋಡಿ ಹುಡುಗನ ಆತುರವು ಉನ್ನತಕ್ಕೇರಿತ್ತು.
ಅಲ್ಲಿ ೫ ನಾಯಿ ಮರಿಗಳನ್ನು ನೋಡಿದ.
೫ ನಾಯಿ ಮರಿಗಳಲ್ಲಿ ಒಂದು ಮರಿಯು ಎಲ್ಲಾ ನಾಯಿ ಮರಿಗಳಿಗಿಂತ ಹಿಂದೆ ನಿಂತಿತ್ತು. ಆ ಮರಿಯು ಕುಂಟುತ್ತಾ ಮುಂದೆ ಬರುವುದನ್ನು ನೋಡಿದ.
ಆಗ ಹುಡುಗ ಮಾಲಿಕನಿಗೆ ಪ್ರಶ್ನಿಸಿದ ಆ ಕುಂಟುವ ಮರಿಗೆ ಏನಾಗಿದೆ? ಅಂಗಡಿ ಮಾಲಿಕನು, ಆ ನಾಯಿ ಮರಿಯನ್ನು ನಾನು ಪಶು ವೈದ್ಯರಿಗೆ ತೋರಿಸಿದ್ದೇನೆ, ಅವರು ಅದನ್ನು ಚೆನ್ನಾಗಿ ಪರಿಶೀಲಿಸಿರುತ್ತಾರೆ. ಅದರ ಸೊಂಟದ ಆಧಾರದ ಕೀಲು ಇಲ್ಲದಾಗಿದೆ, ಇನ್ನು ಮುಂದೆಯೂ ಆ ಮರಿ ಕುಂಟುತ್ತಾ ಇರುವುದು ಎಂದು ವಿವರಿಸಿದರು.
ಇದನ್ನು ಕೇಳಿ ಹುಡುಗನ ಆತುರ ಇನ್ನಷ್ಟು ಮುಗಿಲು ಮುಟ್ಟಿತು. ಹುಡುಗ ಅಂಗಡಿಯವನಿಗೆ ಹೇಳಿದ ನನಗೆ ಅದೇ ನಾಯಿ ಮರಿ ಬೇಕು. ನಾನು ಅದನ್ನು ಕೊಂಡು ಕೊಳ್ಳುತ್ತೇನೆ. ಆಗ ಅಂಗಡಿ ಮಾಲಿಕ ಆ ಮರಿಯನ್ನು ನಿನಗೆ ನಾನು ಉಚಿತವಾಗಿ ನೀಡುತ್ತೇನೆ ಎಂದನು. ಆಗ ಹುಡುಗ ಮನಸ್ಸಿನಲ್ಲಿಯೇ ತಳಮಳಗೊಂಡು, ಅಂಗಡಿಯವನ ಕಣ್ಣಿಗೆ ಕಣ್ಣು ಇಟ್ಟು, ಆ ಕುಂಟುತ್ತಾ ಇರುವ ಬೆರಳು ತೋರಿಸಿ ಹೀಗೆ ಹೇಳಿದ ನನಗೆ ಉಚಿತವಾಗಿ ಆ ನಾಯಿ ಮರಿಯನ್ನು ಕೊಡುವುದು ಬೇಡ, ಈ ನಾಯಿ ಮರಿಗೂ ಉಳಿದ ನಾಯಿ ಮರಿಗಳಷ್ಟೇ ಬೆಲೆ, ಯೋಗ್ಯತೆ, ಶ್ರೇಷ್ಟತೆಯುಳ್ಳದ್ದಾಗಿದೆ. ನಾನು ಈ ಮರಿಯನ್ನು ತೆಗೆದುಕೊಂಡು ಈಗ ನನ್ನಲ್ಲಿರುವ ರು. 44.50 ನ್ನು ಕೊಟ್ಟು ಉಳಿದ ರು. 55.50 ಈ ತಿಂಗಳ ಕೊನೆಗೆ ಕೊಡುತ್ತೇನೆ ಎಂದನು.
ಅಂಗಡಿಯವನು ತುಂಬಾ ಅಸಮಾಧಾನಗೊಂಡು, ಹುಡುಗನಿಗೆ ಹೇಳಿದನು ಈ ನಾಯಿ ಮರಿಯನ್ನು ಕೊಂಡುಕೊಳ್ಳ ಬೇಡ, ಈ ಮರಿಯು ನಿನ್ನೊಡನೆ ಓಡಾಡಲು, ಹಾರಾವುದಕ್ಕೆ, ಕುಣಿಯುವುದಕ್ಕೆ ಸಾಧ್ಯವಾಗದು ಎಂದನು. ಆಗ ಹುಡುಗ ಅಂಗಡಿಯ ಮಾಲಿಕನಿಗೆ ತನ್ನ ಒಂದು ಕಾಲಿನ ಪ್ಯಾಂಟನ್ನು ಮೇಲೆತ್ತಿ ತನ್ನ ತಿರುಚಿದ ಹಾಗೂ ಅದಕ್ಕೆ ಆಧಾರವಾಗಿದ್ದ ಲೋಹದ ಸಲಕರಣೆಯನ್ನು ತೋರಿಸಿದ. ಹುಡುಗ ಅಂಗಡಿಯವನನ್ನು ನೋಡುತ್ತಾ ನನಗೂ ಓಡಾಡಲು, ಕುಣಿಯಲು ಸಾಧ್ಯವಾಗಲ್ಲ, ಹಾಗೆಯೇ ಈ ನಾಯಿ ಮರಿಯ ಕಷ್ಟವನ್ನು ಅರಿಯಲು ಯಾರಾದರೂ ಬೇಕಲ್ಲವೇ? ಎಂದನು.
ಪರರ ಕಷ್ಟ ದುಃಖವನ್ನು ಅರಿತು ಅವರೊಂದಿಗೆ ನಾವೂ ಹೆಜ್ಜೆ ಹಾಕೋಣವೇ?
ಕೃಪೆ: ಇಂಟರ್ನೆಟ್