ಭವಿಷ್ಯದ ಶಿಕ್ಷಣದ ಆಯ್ಕೆಯ ಹಿಂದೆ...
ಇಂದು ಶಿಕ್ಷಣ ಮುಂದುವರಿಸಲು ಇಚ್ಛಿಸುವವರಿಗೆ ಆಯ್ಕೆಗಾಗಿ ವಿವಿಧ ವಿಭಾಗಗಳು ಮತ್ತು ವಿಷಯಗಳು ಲಭ್ಯವಿರುವುದರಿಂದ ಮುಂದೇನು? ಎನ್ನುವ ಆಯ್ಕೆಯ ಪ್ರಶ್ನೆ ಬಹುತೇಕ ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ಕಾಡುತ್ತದೆ. ಇನ್ನೂ ಯಾವ ವಿಷಯ ಅಧ್ಯಯನ ಮಾಡಿದರೆ ಭವಿಷ್ಯಕ್ಕೆ ಒಳ್ಳೆಯದು? ಯಾವ ವಿಷಯ ಕಲಿತರೆ ಏನಾಗಬಹುದು? ಯಾವ ಶಿಕ್ಷಣಕ್ಕೆ ಹೆಚ್ಚು ಅವಕಾಶ ಇದೆ? ಯಾವ ಡಿಗ್ರಿಗೆ ಬೆಲೆ ಇದೆ? ಹೀಗೆ ಪ್ರಶ್ನೆಗಳ ಸರಮಾಲೆಯೇ ಮುಂದೆ ನಿಲ್ಲಬಹುದು. ಈ ಎಲ್ಲಾ ಪ್ರಶ್ನೆಗಳಿಗೆ "ರೆಡಿಮೇಡ್" ಉತ್ತರ ನೀಡಲು ಅಸಾಧ್ಯವಾದರೂ, ಒಂದು ನಿರ್ದಿಷ್ಠ ಶಿಕ್ಷಣ ವಿಷಯವನ್ನು ಆರಿಸುವಾಗ "ಜೀವನದ ಉದ್ಧೇಶ", "ಸ್ವ -ವ್ಯಕ್ತಿತ್ವ", “ಬಾದ್ಯತೆ" ಮತ್ತು" ಬೆಳೆದ ಪರಿಸರ" ಈ ನಾಲ್ಕು ವಿಷಯಗಳನ್ನು ಗಮನದಲ್ಲಿರಿಸಿ, ಸೂಕ್ತ ವಿಷಯ ಆರಿಸಿ, ಶಿಕ್ಷಣ ಮುಂದುವರಿಸುವುದು ಇಂದಿನ ಸ್ಪರ್ಧಾತ್ಮಕ ಸಮಾಜದಲ್ಲಿ ಆನೀವಾರ್ಯ ಮತ್ತು ಅಗತ್ಯ.
ಉದ್ದೇಶ : ಅನೇಕ ವಿದ್ಯಾರ್ಥಿಗಳಲ್ಲಿ ತಮ್ಮ ಭವಿಷ್ಯದ ಕುರಿತಂತೆ ಕನಸುಗಳು, ಆಸೆ-ಆಕಾಂಕ್ಷೆಗಳು, ನಿರೀಕ್ಷೆಗಳು ಮತ್ತು ಭರವಸೆಗಳು ಮಾತ್ರ ಇವೆ ಎಂದರೆ ತಪ್ಪಾಗಲಾರದು. ಈ ವಿದ್ಯಾರ್ಥಿಗಳು ತಮ್ಮ ಕನಸುಗಳನ್ನೇ ತಮ್ಮ ಜೀವನದಉದ್ದೇಶವೆಂದು ಭಾವಿಸಿದ್ದು ಇದೆ. ತಾನು ಹಾಗೆ ಆಗಬೇಕು, ಹೀಗೆ ಆಗಬೇಕು, ಆ ಕೋರ್ಸ್ ಮಾಡಬೇಕು, ಇಂತಹ -ಅಂತಹ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಬೇಕು, ಆ ವೃತ್ತಿ ಆರಿಸಬೇಕು, ಈ ಹುದ್ದೆ ಅಲಂಕರಿಸಬೇಕು ಎಂದು ಅವರು ಹೇಳುವುದನ್ನು ನಾವು ಕೇಳುತ್ತೇವೆ. ಒಂದು ರೀತಿಯಲ್ಲಿ ಇದು ಒಳ್ಳೆಯ ಮನೋಭಾವ. ಆದರೆ ‘ತಮಗೆ ಇದು ಸಾದ್ಯವೇ?’ ಎಂದು ತಿಳಿದುಕೊಳ್ಳುವುದು ಅಷ್ಟೇ ಅತ್ಯಗತ್ಯ. "ಅಸಾಧ್ಯ" ಎಂಬುದು ನಿಘಂಟಿನಲ್ಲಿ ಮಾತ್ರ ಇರುವ ಶಬ್ದ ಎಂದು ಹೇಳುವುದನ್ನು ನಾವು ಕೇಳಿದ್ದೇವೆ. ಕೆಲವು ವಿಷಯಗಳಲ್ಲಿ ಈ ಮಾತು ಸರಿಯಾದರೂ ಶಿಕ್ಷಣ ಮತ್ತು ವೃತ್ತಿಯ ಆಯ್ಕೆ ಮಾಡುವಾಗ "ಅಸಾಧ್ಯ" ಎಂಬ ಸಂಗತಿಗಳು ಕೂಡಾ ಇವೆ ಎಂಬುದನ್ನು ವಿದ್ಯಾರ್ಥಿಗಳು ಮತ್ತು ಪಾಲಕರು ಗಮನದಲ್ಲಿಡುವುದು ಅತೀ ಅವಶ್ಯ.
ವಿವಿಧ ವ್ಯಕ್ತಿಗಳಿಗೆ ವಿವಿಧ ರೀತಿಯ ಪ್ರತಿಭೆಗಳಿರಬಹುದು. ಬುದ್ದಿವಂತಿಕೆ ಕೂಡ ವಿವಿಧ ಪ್ರಮಾಣದಲ್ಲಿರಬಹುದು. ಹಾಗೆಯೇ ವಿವಿಧ ಶಿಕ್ಷಣ ವಿಷಯ ಮತ್ತು ವೃತ್ತಿಗಳಿಗೆ ವಿವಿಧ ರೀತಿಯ ಅರ್ಹತೆಗಳು ಅಗತ್ಯ. ಉದಾಹರಣೆಗೆ ರಕ್ಷಣಾದಳದಲ್ಲಿ ಸೇವೆ ಸಲ್ಲಿಸಬಯುಸುವವರಿಗೆ ಒಂದು ನಿರ್ದಿಷ್ಟ ಮಟ್ಟದ ದೈಹಿಕ ಅರ್ಹತೆಯಿದ್ದರೆ ಮಾತ್ರ ಸಾದ್ಯ. ಅದೇ ರೀತಿ ಬುದ್ದಿವಂತಿಕೆ ಮತ್ತು ದೈಹಿಕ ಅರ್ಹತೆಯ ಜತೆ ದೈರ್ಯ ಮತ್ತು ಸಾಹಸಿ ಮನೋಬಾವ ಕೂಡಿರಬೇಕು. ಹೀಗಿರುವಾಗ ಯಾವುದೇ ವಿದ್ಯಾರ್ಥಿ ಮುಂದಿನ ಶಿಕ್ಷಣ ವಿಷಯವನ್ನು ಆರಿಸುವಾಗ "ನಾನು ಯಾರು" ಎಂಬುದನ್ನು ಸಮಗ್ರವಾಗಿ ಅರ್ಥಮಾಡಿಕೊಳ್ಳಬೇಕು. ಇಲ್ಲಿ "ನಾನು ಯಾರು" ಅಂದರೆ ತನ್ನ ಆಸಕ್ತಿ ಯಾವುದು?, ತನ್ನ ಆಕಾಂಕ್ಷೆ ಏನು? ತನ್ನ ಸಾಮಥ್ರ್ಯ ಏನು?, ತಾನು ಯಾವ ವಿಷಯವನ್ನು ಸುಲಭವಾಗಿ ಗ್ರಹಿಸಬಲ್ಲೆ ಮತ್ತು ಯಾವ ವಿಷಯಗಳನ್ನು ಆರ್ಥೈಸಲು ಕಷ್ಟಪಡುತ್ತೇನೆ? ಯಾವ ವಿಷಯ ತನಗೆ ಅಧ್ಯಯನಕ್ಕೆ ಕಷ್ಟವಾಗುತ್ತದೆ ಮತ್ತು ಯಾಕೆ? ತನ್ನ ಕುಟುಂಬದ ಸ್ಥಿತಿ-ಗತಿ ಏನು? ಹೀಗೆ ವಿವಿಧ ವಿಷಯಗಳನ್ನು ಕೂಲಂಕಷವಾಗಿ ಪರಿಶಿಲಿಸುವುದು ಅಗತ್ಯ.
ಹೀಗಾದಲ್ಲಿ ಮಾತ್ರ ಜೀವನದ ಉದ್ಧೇಶವನ್ನು, ಸ್ಪಷ್ಟವಾಗಿ, ಸಮರ್ಥವಾಗಿ, ವಾಸ್ತವಿಕವಾಗಿ ಮತ್ತು ಸಾಧಿಸಲು ಆಗುವಂತೆ ರೂಪಿಸಲು ಸಾಧ್ಯ. ಯಾವುದನ್ನು ಕಲಿಯುತ್ತೇನೆ, ಯಾವ ಸಂಸ್ಥೆಯಲ್ಲಿ ಕಲಿಯುತ್ತೇನೆ ಎನ್ನುವುದಕ್ಕಿಂತಲೂ, ಏತಕ್ಕಾಗಿ ಕಲಿಯುತ್ತೇನೆ ಮತ್ತು ಹೇಗೆ ಕಲಿಯುತ್ತೇನೆ ಎಂಬುದು ಅತೀ ಮುಖ್ಯ. ಕಲಿಯುವ ಶಿಕ್ಷಣ ವಿಷಯ ಮತ್ತು ಮುಂದೆ ಕೈಗೊಳ್ಳುವ ವೃತ್ತಿ ಯಾವುದೇ ಇರಲಿ, ಪ್ರತಿಯೊಂದಕ್ಕೂ ತನ್ನದೇ ಆದ ಗೌರವ ಮತ್ತು ಆವಕಾಶಗಳಿವೆ. ಜೀವನದಲ್ಲಿ ಹಣ ಮುಖ್ಯ ಅದರೆ ಹಣಗಳಿಸುವುದೊಂದೆ ಶಿಕ್ಷಣ ಮತ್ತು ಕೈಗೊಳ್ಳಲಿರುವ ವೃತ್ತಿಯ ಉದ್ಧೇಶವಾಗಬಾರದು. ಮಾನವನ ಬದುಕಿಗೆ ಮತ್ತು ಸಮಾಜದ ಆಸ್ತಿತ್ವಕ್ಕೆ ಪ್ರತಿಯೊಂದು ವೃತ್ತಿ ಮತ್ತು ಪ್ರತಿ ವ್ಯಕ್ತಿ ಸಲ್ಲಿಸುವ ಸೇವೆ ಆಗತ್ಯ ಮತ್ತು ಅವಶ್ಯವಾಗಿದೆ.
ಬದ್ದತೆ ಇರಲಿ : ಇಂದಿನ ಸ್ಪರ್ದಾತ್ಮಕ ಶೈಕ್ಷಣಿಕ ಮತ್ತು ವೃತ್ತಿ ಜಗತ್ತಿನಲ್ಲಿ ನಾವು ಬಯಸಿದ್ದು ಸಿಗಬೇಕಾದರೆ ಕೇವಲ “ಒಳ್ಳೆಯ ವಿದ್ಯಾರ್ಥಿ”ಯಾದರೆ ಸಾಲದು .ಅದಕ್ಕಿಂತ ಮಿಗಿಲಾಗಿ ಒಬ್ಬ “ಉತ್ತಮ ವಿದಾರ್ಥಿ” ಆಗಿರಬೇಕಾಗುತ್ತದೆ. ವಿದ್ಯಾರ್ಥಿ ಜೀವನದ ಪ್ರತಿಯೊಂದು ಹಂತದಲ್ಲೂ “ಉತ್ಕಷ್ಠತೆ” ಕಾಪಾಡಬೇಕಾಗಿದೆ. ಕೇವಲ ಆಸಕ್ತಿಯಿಂದ ಉತ್ಕಷ್ಠತೆ ಸಾಧಿಸಲಾಗುವುದಿಲ್ಲಾ. ಆಸಕ್ತಿಗಿಂತ ಮಿಗಿಲಾಗಿ ವಿದ್ಯಾರ್ಥಿಯುತನ್ನ ಶಿಕ್ಷಣ ಮತ್ತು ಇತರ ಚಟುವಟಿಕೆಗಳಿಗೆ ತನ್ನ ಬದ್ದತೆಯನ್ನು ನೂರಕ್ಕೆ ನೂರರಷ್ಟು ನೀಡಬೇಕು. ಬದ್ದತೆಯಿದ್ದರೆ ಅಲ್ಲಿ ನೆಪಗಳು ಬರುವುದಿಲ್ಲಾ. ಇತ್ತೀಚಿನ ಒಲಿಂಪಿಕ್ಸ್ ಮತ್ತು ಎಷಿಯಾಡ್ ಕ್ರೀಡೆಗಳಲ್ಲಿ ಪದಕಗಳಿಸಿದ ನಮ್ಮ ದೇಶದ ಕ್ರೀಡಾಪಟುಗಳು ತಮ್ಮ ನಿರಂತರ ಬದ್ದತೆಯಿಂದ ಪ್ರತಿ ದಿನ ಸತತ ಆಭ್ಯಾಸಮಾಡಿ ಪದಕ ಗಳಿಸಲು ಯಶಸ್ವಿಯಾಗಿದ್ದರು ಎಂಬುದನ್ನು ಪ್ರತಿಯೊರ್ವ ವಿದ್ಯಾರ್ಥಿ ಆರಿತಿರಬೇಕು. ಬದ್ದತೆಯಿದ್ದರೆ ಸಮಯದ ಮಿತಿ ಬರುವುದಿಲ್ಲ, ಹಸಿವೆ-ಬಾಯಾರಿಕೆ ಇರುವುದಿಲ್ಲ, ಗುರಿ ಮುಟ್ಟುವ ತನಕ ಪ್ರಯತ್ನ ನಿಲ್ಲುವುದಿಲ್ಲ. ಬದ್ದತೆ ಇದ್ದವರಿಗೆ ಎಂದೂ ಅಡಚಣೆ ಕಾಣುವುದಿಲ್ಲ. ಪ್ರತಿಯೋರ್ವ ಯಶಸ್ವಿ ವ್ಯಕ್ತಿಯ ಹಿಂದೆ ಇರುವುದು ಅವರ ಬದ್ಧತೆ ಎಂಬುದನ್ನೂ ನಾವೆಂದೆಂದಿಗೂ ಮರೆಯಬಾರದು.
ವ್ಯಕ್ತಿತ್ವ ಮತ್ತು ಸಾಮಥ್ರ್ಯ
ಪ್ರತಿಯೊಬ್ಬ ವ್ಯಕ್ತಿ/ ವಿದ್ಯಾರ್ಥಿ ತನ್ನದೇ ಆದ ಒಂದು ವಿಶಿಷ್ಟ ವ್ಯಕ್ತಿತ್ವದಿಂದ ಕೂಡಿರುತ್ತಾನೆ. ಹೀಗೆ ಕೆಲವರು ತಮ್ಮಷ್ಟಕ್ಕೆ ಇರಲು ಪ್ರಯತ್ನ ಪಟ್ಟರೆ, ಇನ್ನು ಕೆಲವರು ಇತರರೊಡನೆ ಬೆರೆಯುವುದರಲ್ಲಿ ಖುಷಿ ಪಡುತ್ತಾರೆ. ಕೆಲವರಿಗೆ ಕೈಯಲ್ಲಿ ಕೆಲಸ ಮಾಡಲು ಉತ್ಸಾಹ ಆದರೆ, ಇನ್ನೂ ಕೆಲವರಿಗೆ ಒಂದು ನಿರ್ದಿಷ್ಟ ಚೌಕಟ್ಟಿನೊಳಗೆ ಕೆಲಸ ಮಾಡುವುದು ಖುಶಿ ಕೊಡುತ್ತದೆ. ಮತ್ತೆ ಕೆಲವರಿಗೆ ಸೃಜನಶೀಲ ಮತ್ತು ರಚನಾತ್ಮಕ ಕೆಲಸ ಮಾಡುವುದರಲ್ಲಿ ಆನಂದ. ಕೆಲವರಿಗೆ ವ್ಯಕ್ತಿಗಳ ಜೊತೆಗೆ ಕೆಲಸ ಮಾಡಲು ಆಸಕ್ತಿಯಾದರೆ, ಇನ್ನೂ ಕೆಲವರಿಗೆ ಯಂತ್ರಗಳೊಡನೆ ಕೆಲಸ ಮಾಡಲು ಹೆಚ್ಚು ಆಪೇಕ್ಷೆ ಇರಬಹುದು. ಕೆಲವರಿಗೆ ಸಾಹಸ ಪ್ರಧಾನ ಕೆಲಸ ಮಾಡಲು ಇಚ್ಛೆಯಾದರೆ ಇನ್ನು ಕೆಲವರಿಗೆ ಹೇಳಿದ ಕೆಲಸ ಮಾಡುವುದರಲ್ಲಿ ಸಮಾದಾನ ಇರಬಹುದು. ಹೀಗೆ ವಿವಿಧ ಸ್ವರೂಪ ಮತ್ತು ಮನೋಭಾವದ ವ್ಯಕ್ತಿತ್ವ ಉಳ್ಳವರಿಗೆ ಬೇರೆ ಬೇರೆ ರೀತಿಯ ಶಿಕ್ಷಣ ವಿಷಯ ಪ್ರಿಯವಾಗುತ್ತದೆ.
ಉದಾಹರಣೆಗೆ ನಿರ್ದಿಷ್ಟ ಚೌಕಟ್ಟಿನೊಳಗೆ ಕೆಲಸ ಮಾಡಬಯುಸುವವರು ಕ್ಲಾರ್ಕ್, ಲೆಕ್ಕಿಗನಂತಹ ಕೆಲಸವನ್ನು ಬಯಸುತ್ತಾರೆ. ಆಂತಹವರಿಗೆ ವಾಣಿಜ್ಯ ಶಿಕ್ಷಣ ಸೂಕ್ತವಾದುದು. ವ್ಯಕ್ತಿಗಳ ಜೊತೆಗೆ ಕೆಲಸ ಮಾಡಲು ಆಸಕ್ತಿ ಇದ್ದವರು ನರ್ಸಿಂಗ್, ಸಮಾಜಸೇವೆ, ಅಧ್ಯಾಪನ, ಸೇಲ್ಸ್‍ಮ್ಯಾನ್ ಮುಂತಾದ ವೃತ್ತಿಗಳನ್ನು ಆರಿಸಬಹುದು. ಸಾಹಸ ಮನೋವೃತ್ತಿಯವರು ರಕ್ಷಣಾದಳ, ಪತ್ರಿಕೋದ್ಯಮ, ಸ್ವ-ಉದ್ಯಮ ಮುಂತಾದ ವೃತ್ತಿಗಳನ್ನು ಆರಿಸಬಹುದು. ವ್ಯಕ್ತಿತ್ವಕ್ಕೆ ಪೂರಕವಾದ ಶಿಕ್ಷಣ ವಿಷಯ ಮತ್ತು ವಿಭಾಗಗಳನ್ನು ಆರಿಸಿದರೆ, ವಿದ್ಯಾರ್ಥಿ ಶಿಕ್ಷಣವನ್ನು ಆಸಕ್ತಿಯಿಂದ, ಶೃದ್ದೆಯಿಂದ ಮತ್ತು ದೃಡತೆಯಿಂದ ಕಲಿಯುತ್ತಾನೆ ಎಂಬುದರಲ್ಲಿ ಸಂಶಯವಿಲ್ಲ.
ಪರಿಸರದ ಮಹತ್ವ : ಶಿಕ್ಷಣ ವಿಷಯ ಆರಿಸುವಾಗ ಕುಟುಂಬ ಮತ್ತು ಬೆಳೆದ ಪರಿಸರದ ಪ್ರಭಾವವನ್ನು ಗಣನೆಗೆ ತೆಗೆದುಕೊಳ್ಳುವುದು ಅವಶ್ಯಕ. ಒಬ್ಬ ವಿದ್ಯಾರ್ಥಿಯ "ಕಲಿಯುವಿಕೆಯ ಅವಕಾಶಗಳು" ತನ್ನ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಬಹಳವಾಗಿ ಅವಲಂಬಿಸಿರುತ್ತದೆ. ಜೊತೆಗೆ ಕುಟಂಬದಲ್ಲಿ ಆ ವಿದ್ಯಾರ್ಥಿಯ ಜವಾಬ್ದಾರಿ, ಆ ವಿದ್ಯಾರ್ಥಿಯ ಮೇಲೆ ಕುಟಂಬದವರ ಆಪೇಕ್ಷೆ, ನೀರಿಕ್ಷೆಗಳನ್ನೂ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಆದೇ ರೀತಿ ಗ್ರಾಮೀಣ ಪರಿಸರದ ವಿದ್ಯಾರ್ಥಿಗಳಿಗೆ ವಿಷಯದ ಆಯ್ಕೆಯ ಆವಕಾಶಗಳು ತುಂಬಾ ಕಡಿಮೆ. ತಂದೆತಾಯಿಯ ಕಸುಬು ಹಾಗು ವೃತ್ತಿ ಮತ್ತು ಅವರ ಮನೋಭಾವ ಕೂಡ ವಿದ್ಯಾರ್ಥಿಯೊಬ್ಬನ ವಿಷಯದ ಆಯ್ಕೆಯಲ್ಲಿ ಪ್ರಭಾವ ಬೀರುತ್ತದೆ. ಹೀಗೆ ಆನೇಕ ಸಲ ಪರಿಸರದ ಒತ್ತಡ, ಪ್ರಭಾವ, ಅಡಚಣೆಗಳಿಂದ ಆನೇಕ ವಿದ್ಯಾರ್ಥಿಗಳಿಗೆ ಸರಿಯಾದ ಆಯ್ಕೆ ಮಾಡುವುದಕ್ಕೆ ಆಸಾಧ್ಯವಾಗುತ್ತದೆ ಆಥವಾ ಆವಕಾಶ ಇಲ್ಲದಂತ್ತಾಗುತ್ತದೆ. ಇಂತಹ ಹಿನ್ನಲೆಯಲ್ಲಿ ಆಸಕ್ತಿ ಇದ್ದ, ಸಾಧಿಸಬಲ್ಲ ವಿಷಯ, ವಿಭಾಗ, ಸಂಸ್ಥೆ ಸಿಗದಿರುವಾಗ ಅದಕ್ಕೆ ಸಮೀಪದ ಅಥವಾ ಬದಲಿ ವಿಷಯ ಆಯ್ಕೆಮಾಡುವುದು ಸೂಕ್ತ. ವಿದ್ಯಾರ್ಥಿ ಮತ್ತು ವೃತ್ತಿಜೀವನದಲ್ಲಿ ನಾವು ಬಯಸಿದ್ದು ಸಿಗದಿದ್ದಾಗ ನಮಗೆ ಸಿಕ್ಕಿದ್ದನ್ನು ಬಯಸುವುದೇ ಹಿತವಾಗಿರುತ್ತದೆ. ನಾವು ಕೆಲವೊಮ್ಮೆ ಅನಿವಾರ್ಯತೆಗಳಿಗೆ ಒಳಗಾಗಿ ಯಾವುದೇ ವಿಷಯವನ್ನು ಆಯ್ಕೆ ಮಾಡಿರಲಿ ಅದರಲ್ಲಿ ಆಸಕ್ತಿ ಬೆಳೆಸಿಕೊಂಡು ಶ್ರಮಯುತ ದುಡಿಮೆ ಮಾಡಿದಲ್ಲಿ ಯಶಸ್ಸು ಖಂಡಿತ.