ಬದುಕು ಕಲಿಸಿದ ಪಾಠ

Thumbnail

ಅನುಭವಜನ್ಯ ಶಿಕ್ಷಣವೇ ವಾಸ್ತವಿಕ ಶಿಕ್ಷಣ

ಶಿಕ್ಷಣ ಕೇವಲ ಔಪಚಾರಿಕತೆಯ ವಿಷಯವಲ್ಲ ಎನ್ನುವುದು ನನ್ನ ಭಾವನೆ. ಬರೇ ತರಗತಿಯ ನಾಲ್ಕು ಗೋಡೆಗಳ ನಡುವೆ ನಾವು ಸಂಪಾದಿಸುವ ಪಠ್ಯ ಆಧಾರಿತ ಶಿಕ್ಷಣವು ಅದರ ಜೊತೆಜೊತೆಗೆ ಪ್ರಾಯೋಗಿಕ ನೆಲೆಯಲ್ಲಿ ನಾವು ಸಂಪಾದಿಸುವ ಜೀವನಾನುಭವದ ಜೊತೆಜೊತೆಗೆ ಸೇರಿಕೊಂಡು ಬಂದರೆ ಅದರ ಮೌಲ್ಯ ಇನ್ನಷ್ಟು ಹೆಚ್ಚುತ್ತದೆ. ಜೀವನಾನುಭವದ ಹಿನ್ನಲೆಯಲ್ಲಿಯೇ ನಾವು ಲೋಕವನ್ನು ನೋಡುವ, ಲೋಕದಲ್ಲಿ ಸಹಬಾಳ್ವೆ ನಡೆಸುವ ಹಾಗೂ ಪರಸ್ಪರ ಸುಧಾರಿಸಿಕೊಳ್ಳುವ ದ್ರಷ್ಟಿ ಬದಲಾಗಲು ಸಾಧ್ಯವಾಗಿದೆ. ಈ ಹಿನ್ನಲೆಯಲ್ಲಿ ನನ್ನ ಅನುಭವಕ್ಕೆ ಬಂದ ಹಾಗೂ ಈಗಲೂ ಸದಾ ನನ್ನ ನೆನಪಿನಲ್ಲಿ ಹಚ್ಚಹಸಿರಾಗಿರುವವು ನಾನು ಕಾಲೇಜು ಬದುಕಿನಲ್ಲಿ ಸಂಪಾದಿಸಿದ ನನ್ನ ಅನುಭವಗಳು.

ನಾನಾಗ ಡಿಗ್ರಿ ಕಾಲೇಜಿನಲ್ಲಿ ಪತ್ರಿಕೋಧ್ಯಮ ಅಭ್ಯಾಸ ಮಾಡುತ್ತಿದ್ದ ಸಮಯವದು. ಬೇಸಿಗೆಯ ರಜೆಯಲ್ಲಿ ಇಂಟರ್ನ್ಶಿಪ್ಪಿಗೆ ಹೋಗುವ ಸದಾವಕಾಶ ಒಂದು ನನಗೆ ಲಭಿಸಿತು. ಕಾಲೇಜು – ಹಾಸ್ಟೆಲ್ – ಮನೆ ಇಷ್ಟಕ್ಕೇ ಸೀಮಿತವಾಗಿದ್ದ ನನ್ನ ಪಾಲಿಗೆ ಬಂದ ಕಲಿಕೆಯ ಈ ಅತ್ಯುತ್ತಮ ಅವಕಾಶವನ್ನು ಕಳೆದುಕೊಳ್ಳಲ್ಲು ನನ್ನ ಮನಸ್ಸು ಸುತಾರಾಂ ಒಪ್ಪಲಿಲ್ಲ.

ನನ್ನ ಸ್ನೇಹಿತೆಯೊಬ್ಬಳ ಸಂಬಂಧಿಕರ ದಿನಪತ್ರಿಕೆಯೊಂದರಲ್ಲೇ ತರಬೇತಿ ಪಡೆಯುವುದೆಂದು ಎಲ್ಲಾ ಜೊತೆಗಾರರು ಕೂಡಿ ನಿಶ್ಚಯ ಮಾಡಿಯೂ ಆಯ್ತು. ಸುದೈವವಶಾತ್ ಪತ್ರಿಕೆಯ ಮಾಲೀಕರು ಸಕಾರಾತ್ಮಕವಾಗಿ ಸ್ಪಂದಿಸಿ ನಮಗೆ ಅವಕಾಶ ಕಲ್ಪಿಸುವುದಾಗಿ ತಿಳಿಸಿದರು. ನನ್ನ ಹೊರತಾಗಿ ಉಳಿದ ಎಲ್ಲಾ 5 ಜನರು ಮಾಲೀಕರ ಮನೆಯಲ್ಲಿಯೇ ವಸತಿಗೆ ತಂಗುವುದೆಂದು ಮೊದಲೇ ನಿಗದಿ ಮಾಡಿಕೊಂಡು ತಮ್ಮ ತಮ್ಮ ಬ್ಯಾಗುಗಳ ಸಮೇತ ಮೊದಲ ದಿನವೇ ಹಾಜರಾಗಿದ್ದರು. ಶಿಸ್ತಿನ ಸಿಪಾಯಿಯಾಗಿದ್ದ ನನ್ನ ತಂದೆಯವರು ‘ನಾನು ನಿತ್ಯ ಮನೆಯಿಂದಲೇ ಪತ್ರಿಕೆ ಕಚೇರಿಗೆ ಹೋಗಿ ಬರಬೇಕೆಂದು’ ಮೊದಲೇ ತಾಕೀತು ಮಾಡಿದ್ದರು.

ಮೊದಲ ದಿನ ಪರಿಚಯ ಮಾಡುವ ಉದ್ದೇಶದಿಂದ ಅಪ್ಪನೂ ನನ್ನಜತೆ ಪತ್ರಿಕಾ ಕಚೇರಿಗೆ ಬಂದಿದ್ದರು.ಮಾಲೀಕರ ಆತ್ಮೀಯತೆಯನ್ನು ಅರ್ಥೈಸಿಕೊಂಡು ಅವರ ಆ ಪ್ರೀತಿಗೆ ಮನಸೋತು ತಂದೆಯವರ ಶಿಸ್ತಿನ ಕಠಿಣತನ ಮೆಲ್ಲಮೆಲ್ಲನೆ ಕರಗಿ ಅವರು ನನ್ನನ್ನೂ ಉಳಿದ ಸ್ನೇಹಿತರ ಜತೆ ಪತ್ರಿಕೆಯ ಮಾಲೀಕರ ಮನೆಯಲ್ಲಿಯೇಉಳಿದುಕೊಳ್ಳಲುಅನುಮತಿನೀಡಿದರು. ಹೀಗೆ ಇಂಟರ್ನ್ಶಿಪ್ಪಿನ ಜತೆಗೇ ಅಪರಿಚಿತರೊಡನೆ ಅವರ ಮನೆಯಲ್ಲಿ ವಾಸಿಸುತ್ತಾ ಹೊಸಹೊಸ ಅನುಭವ ಸಂಪಾದಿಸುವ ಸುಯೋಗ ಒದಗಿ ಬಂದಿತು.

ವಯೋಸಹಜವಾದ ನಾಚಿಕೆಯೊಡನೆ ಸಂಕೋಚದ ಸ್ವಭಾವವನ್ನು ಹೊಂದಿದ್ದ ನಾನು ಆ ಮನೆಯಲ್ಲಿ ಒಂದೆರಡು ದಿನಗಳ ಪರಕೀಯತೆಯ ಭಾವವನ್ನು ಅನುಭವಿಸಿದೆನಾದರೂ ಕ್ರಮೇಣ ಮನೆಯೊಡತಿಯ ಉಪಚಾರ, ಹಾರೈಕೆ, ಪ್ರೀತಿ ನನ್ನ ದಾಕ್ಷಿಣ್ಯವನ್ನು ದೂರಮಾಡತೊಡಗಿತು. ನಾವು 5-6 ಜನ ಪರಸ್ಥಳದ, ಪರಕೀಯರಿಗೆ ಬೆಳಗಿನ ತಿಂಡಿ, ರಾತ್ರಿಯ ಊಟದ ಜತೆಗೆ ಬೇರೆ ಎಲ್ಲಾ ಹಾರೈಕೆ ಹಾಗೂ ವ್ಯವಸ್ಥೆಗಳನ್ನು ಯಾರ ಸಹಾಯವೂ ಇಲ್ಲದೆ ಆ ಹಿರಿಯ ಮಹಾತಾಯಿ ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು. 

ಕಾಲೇಜು ಹುಡುಗಿಯರಾದರೂ ಮನೆಕೆಲಸಗಳ ಕುರಿತು ಅಷ್ಟೊಂದು ಆಸಕ್ತಿ – ಅಭ್ಯಾಸವಿರದ ನಾವು ಕೆಲವೊಮ್ಮೆ ಮುಜುಗರವಾಗಿ ಅವರ ಕೆಲಸಗಳಲ್ಲಿ ಕೈಜೋಡಿಸಲು ಪ್ರಯತ್ನ ಮಾಡಿದ್ದು, ಕೆಲವೊಮ್ಮೆ ಸಮಾಧಾನದ ಮಾತನಾಡಿದ್ದು ಬಿಟ್ಟರೆ ಬೇರೇನೂ ಮಾಡಲು ನಮಗೆ ಸಾಧ್ಯವಾಗಲಿಲ್ಲ, ಆಕೆ ಅವಕಾಶವನ್ನೂ ನೀಡಲಿಲ್ಲ. ಇದೆಲ್ಲದರ ಜತೆ ಬಹಳ ಕಾಲದಿಂದ ನಾವು ಅವರಿಗೆ ಪರಿಚಿತರೆಂಬಂತೆ ನಮ್ಮ ಜತೆ ಆಪ್ತತೆಯಿಂದ ಅವರು ನಡೆದುಕೊಂಡ ರೀತಿ, ಗೌರವಯುತ ಸಂಭಾಷಣೆಗಳು ನಮ್ಮನ್ನು ಅತೀವವಾಗಿ ತಟ್ಟುತ್ತಿದ್ದವು. ಒಂದು ತಿಂಗಳು ಕಳೆಯುವ ಮೊದಲೇ ನಮ್ಮ ನಡುವೆ ಒಂದು ಆತ್ಮೀಯ ಭಾವನಾ ಸಂಬಂಧ ಹುಟ್ಟಿ ಬೆಳೆಯಿತು.

ಅವರೊಂದಿಗಿನ ಅಷ್ಟು ದಿನದ ಭಾವನಾತ್ಮಕ ಸಂಬಂಧ ನಮ್ಮಲ್ಲಿ ತೀವ್ರವಾಗಿ ಸಂಚಲನ ಮೂಡಿಸಿದ್ದರಿಂದ ನಾವು ಅವರಿಗಾಗಿ ಏನಾದರೊಂದು ಉಡುಗೊರೆ ನೀಡಬೇಕೆಂದು ನಮ್ಮಲ್ಲೇ ನಿಶ್ಚಯಿಸಿಕೊಂಡೆವು. ನೋಡುನೋಡುತ್ತಿದ್ದಂತೆ ನಮ್ಮ ಸಹಜೀವನವನ್ನು ಕೊನೆಗೊಳಿಸುವ ಹಾಗೂ ಪರಸ್ಪರ ಬೀಳ್ಕೊಡುವ ಆ ದಿನವೂ ಬಂದೇಬಿಟ್ಟಿತು. ಅಷ್ಟು ದಿನ ಅವರ ಮನೆಯಲ್ಲಿ ಇದ್ದ ಕಾರಣದಿಂದ ಇದ್ದಬದ್ದ ಒಂದಿಷ್ಟು ಹಣವನ್ನು ಒಗ್ಗೂಡಿಸಿ ಸಣ್ಣ ಕಾಣಿಕೆ ನೀಡಿ ಇರುವುದರಲ್ಲೇ ಸಮಾಧಾನಪಡುವ ಭಾವನೆಯಿಂದ ಸಣ್ಣ ಗಡಿಯಾರವೊಂದನ್ನು ಖರೀದಿಸಿ ತಂದಿಟ್ಟೆವು. ಖುಷಿಯಿಂದ ಆ ಪ್ರೀತಿಪಾತ್ರ ಮಮತಾಮಯಿಗೆ ಕಿರುಕಾಣಿಕೆಯೊಂದನ್ನು ಒಪ್ಪಿಸಿ ಋಣಭಾರವನ್ನು ತಕ್ಕಮಟ್ಟಿಗಾದರೂ ಕಳೆದುಕೊಳ್ಳುವೆವಲ್ಲ ಎಂಬ ಭಾವನೆಯಿಂದ ಹೆಮ್ಮೆಪಟ್ಟು ಒಂದಷ್ಟು ಉಬ್ಬಿಹೋದೆವು.

ದಂಪತಿಗಳಿಬ್ಬರನ್ನು ಜೊತೆಯಾಗಿ ಕೂಡಿಸಿ ಉಡುಗೊರೆ ಹಸ್ತಾಂತರಿಸಿ ಆಶೀರ್ವಾದ ಪಡೆಯೋಣವೆಂಬ ಹಂಬಲದ ಲೆಕ್ಕಾಚಾರ ನಮ್ಮದಾಗಿತ್ತು.ಅಷ್ಟುಹೊತ್ತಿಗೆ ಆ ಮಹಾತಾಯಿ ಕೈಯಲ್ಲಿ ಏನೋ ಹಿಡಿದು ನಮ್ಮತ್ತ ಧಾವಿಸಿ ಬರುವುದು ಕಾಣಿಸಿತು. ‘ಮಕ್ಕಳೆ ನಿಮಗೆ ನೀಡಲು ನನ್ನಬಳಿ ಇನ್ನೇನೂ ಇಲ್ಲ, ಈ ಪ್ಲೇಟುಗಳನ್ನೇ ಪ್ರೀತಿಯಿಂದ ಕೊಡುತ್ತಿದ್ದೇನೆ’ ಎನ್ನುತ್ತಾ ನಮ್ಮ ಆರು ಜನರ ಕೈಗೆ ಒಂದೊಂದು ಸ್ಟೀಲ್ ಬಟ್ಟಲುಗಳನ್ನು ನೀಡಿದರು.ಅಷ್ಟೂದಿನ ನಿರಾಪೇಕ್ಷೆಯಿಂದ ನಮ್ಮೆಲ್ಲರ ಸೇವೆಯನ್ನು ಮಾಡಿದ್ದಲ್ಲದೆ ನಮ್ಮ ಕೈಗೆ ಆ ಉಡುಗೊರೆಯನ್ನು ಕೊಟ್ಟಾಗ, ನಮ್ಮ ಪಾಲಿಗೆ ಅದು ಪ್ರಪಂಚದ ಅತ್ಯಮೂಲ್ಯ ವಸ್ತುವಾಗಿತ್ತು.

ಹೆಮ್ಮೆಯಿಂದ ಆ ಅಮ್ಮನಿಗೆ ಗಡಿಯಾರ ಕೊಟ್ಟು ಋಣಭಾರ ಇಳಿಸಿಕೊಳ್ಳುವ ಯೋಚನೆ ಮಾಡಿದ್ದ ನಮ್ಮ ಕಣ್ಣಾಲಿಗಳು ಒದ್ದೆಯಾಗಿದ್ದವು. ‘ಯಾವ ಜನ್ಮದ ಮೈತ್ರಿ…’ ಹಾಡು ಮನಸ್ಸಿನ ಪಟಲದಲ್ಲಿ ಹಾದು ಗುನುಗುನಿಸತೊಡಗಿತು. ಅವರ ನಿರ್ಮಲ ಮೈತ್ರಿ, ಪ್ರೀತಿ ಹಾಗೂ ಮಮತೆಯ ಮುಂದೆ ನಾವು ಕುಬ್ಜರಾದೆವು.

ಕಾಲೇಜು ಬದುಕನ್ನು ಮುಗಿಸಿ ಬದುಕಿನ ವಿಸ್ತಾರಕ್ಕೆ ಹೆಜ್ಜೆ ಇಡುವ ಆರಂಭದಲ್ಲಿಯೇ ದೊರೆತ ಈ ಅನುಭವ ಬದುಕು ಕಲಿಸಿದ ಪಾಠ. ಎಲ್ಲರ ಸಂಬಂಧಗಳ ಆಳ ಮತ್ತು ಮೈತ್ರಿಯುತ ಭಾವನೆಗಳನ್ನು ಸಂಪತ್ತಿನ ನೆಲೆಯಿಂದ ಅಳೆಯಲಾಗದು ಎನ್ನುವ ಸತ್ಯ ನನಗೆ ಮನನವಾಯ್ತು. ತಾಯಿಯ ಪ್ರೀತಿ ಬರೇ ತನ್ನ ಮಕ್ಕಳಿಗಾಗಿ ಅಲ್ಲ ಹೊರತಾಗಿ ತಾಯಿಯ ಅಂತಃಕರಣವುಳ್ಳವರೆಲ್ಲರೂ ಇತರರಲ್ಲಿ ತನ್ನ ಮಗುವನ್ನು ಕಾಣುತ್ತಾರೆ ಎನ್ನುವುದು ನನಗೆ ಅರಿವಾಯ್ತು. ನನ್ನ ಹ್ರದಯವನ್ನು ತಟ್ಟಿ ಬದುಕಿಗೆ ಹೊಸ ಪಾಠವನ್ನು ಹೇಳಿಕೊಟ್ಟ ಆ ಮಹಾತಾಯಿಗೆ ಶರಣು.