ಮಹಾನ್ ವ್ಯಕ್ತಿಗಳ ಬದುಕಿನಿಂದ ಬೆಳಕು – 2

Thumbnail


ಮಹಾನ್ ವ್ಯಕ್ತಿಗಳ ಬದುಕಿನಿಂದ ಬೆಳಕು – 2
ಭಾರತದ ಪ್ರಥಮ ಗ್ರಹಮಂತ್ರಿ ಸರ್ಧಾರ್ ವಲ್ಲಭ ಬಾಯ್ ಪಟೇಲ ನಮ್ಮ ನಾಡಿನ ಶ್ರೇಷ್ಟ ನಾಯಕರಲ್ಲಿ ಒಬ್ಬರು. ಅವರ ನಿರಂತರ ಪರಿಶ್ರಮದ ಫಲವಾಗಿ ಭಾರತದ ರಾಷ್ಟ್ರೀಯ ಐಕ್ಯ ಸಾಧ್ಯವಾಯ್ತು.  ಪಟೇಲರು ದೇಶದ ಅಷ್ಟೊಂದು ಉನ್ನತ ಹುದ್ದೆಯಲ್ಲಿದ್ದರೂ ತೀರಾ ಸರಳ ಬದುಕನ್ನು ಬದುಕಿದರು. 
ಒಂದು ದಿನ ಪಟೇಲರು ತಮ್ಮ ಕಾರಿನಲ್ಲಿ ಕುಳಿತು ಅಗತ್ಯ ಕೆಲಸದ ಮೇಲೆ ಹೋಗುತ್ತಿದ್ದರು. ರಸ್ತೆಯಲ್ಲಿ ಒಬ್ಬ ಸ್ಥಳೀಯ ಪೋಲಿಸ್ ಅಧಿಕಾರಿಯ ಕಾರು ಕೆಟ್ಟು ನಿಂತಿತ್ತು. ಆ ಅಧಿಕಾರಿ ಅಕ್ಕಪಕ್ಕದ ಜನರನ್ನು ತನ್ನ ವಾಹನ ದುರಸ್ತಿ ಮಾಡಿಕೊಡುವಂತೆ ಒತ್ತಾಯ ಹಾಕುತ್ತಿದ್ದ. ಪಟೇಲರ ವಾಹನ ನಿಂತಾಗ ಅವರ ಚಾಲಕನೂ ಈ ಅಧಿಕಾರಿಯ ವಾಹನ ಸರಿಪಡಿಸಲು ಕೈಜೋಡಿಸಿದ. ಸಾಮಾನ್ಯ ರೈತರಂತೆ ಕಾಣುತ್ತಿದ್ದ ಪಟೇಲರು ಅಲ್ಲಿಯೇ ನಿಂತಿದ್ದರು. 
ಪೋಲಿಸ್ ಅಧಿಕಾರಿ ದರ್ಪದಿಂದ ತುಂಬಿದ್ದ ಆತನಿಗೆ ಪಟೇಲರ ಗುರುತು ಹತ್ತಲಿಲ್ಲ. ಆತ ಪಟೇಲರನ್ನು ಕರೆದು ತನ್ನ ವಾಹನ ದುರಸ್ತಿಮಾಡಲು ಕೈಜೋಡಿಸುವಂತೆ ಒತ್ತಾಯಿಸಿದ. ಪಟೇಲರು ತುಟಿ ಪಿಟಕ್ಕೆನ್ನದೆ ಆ ಅಧಿಕಾರಿ ಹೇಳಿದಂತೆ ವಿಧೇಯತೆಯಿಂದ ವಾಹನ ದುರಸ್ತಿಗೆ ತೊಡಗಿದರು. 
ಎಲ್ಲಾ ಕೆಲಸ ಮುಗಿದ ನಂತರ ಪಟೇಲರ ಚಾಲಕ ಆ ಅಧಿಕಾರಿಯನ್ನು ದಬಾಯಿಸಿ ಆತನಿಗೆ ಇಡೀ ದೇಶದ ಗ್ರಹಮಂತ್ರಿ ಪಟೇಲರನ್ನು ಆತ ಅವಮಾನಿಸಿದ ಎನ್ನುವುದರ ಕುರಿತು ಆಕ್ಷೇಪ ತೆಗೆದ. ಪೋಲಿಸ್ ಅಧಿಕಾರಿ ಆಶ್ಚರ್ಯಚಕಿತನೂ, ಭಯಭೀತನೂ ಆಗಿ ಪಟೇಲರ ಕ್ಷಮೆಯಾಚಿಸತೊಡಗಿದ.
ಪಟೇಲರು ಅವನಿಗೆ ಸದಾಚಾರದ ವರ್ತನೆಯ ಕುರಿತಾಗಿ ಎರಡು ಬುದ್ದಿಮಾತುಗಳನ್ನಷ್ಟೇ ಹೇಳಿದರು ಹೊರತಾಗಿ ಯಾವುದೇ ಮನನೋಯಿಸುವ ಅಥವಾ ದಂಡನೆಯ ನುಡಿಗಳನ್ನು ಆಡಲಿಲ್ಲ. ಪಟೇಲರ ೀ ರೀತಿಯ ನಡವಳಿಕೆಯಿಂದ ಅವರ ಚಾಲಕನಿಗೆ ಕಸಿವಿಸಿಯಾಯ್ತು ಇದನ್ನು ತಿಳಿದುಕೊಂಡ ಪಟೇಲರು, ‘ಜನರು ಕೆಲವೊಮ್ಮೆ ಅಧಿಕಾರದ ಮದದಿಂದ ಇತರರೊಂದಿಗೆ ಕೆಟ್ಟದಾಗಿ ನಡೆದುಕೊಳ್ಳುತ್ತಾರೆ, ಅದು ತಪ್ಪು ಆದರೆ ಅವರ ಕೆಟ್ಟತನವನ್ನು ನಾವು ನಮ್ಮ ಅಧಿಕಾರ ಬಳಸಿ ತಿದ್ದಲು ನೋಡುವುದಕ್ಕಿಂತ ಆದಷ್ಟು ಸೌಮ್ಯತನದಿಂದ, ಒಳ್ಳೆಯ ವರ್ತನೆಯಿಂದ ನಾವು ತಿದ್ದಲು ಪ್ರಯತ್ನಿಸಬೇಕು, ಅದರ ಪರಿಣಾಮ ದೀರ್ಘಕಾಲದ್ದಾಗಿರುತ್ತದೆ’ ಅಂದರು.
ತಮ್ಮ ಅಧಿಕಾರ, ಸಂಪತ್ತು, ಸ್ಥಾನಮಾನ, ಯೌವ್ವನದ ಬಲದಿಂದ ಕೆಲವೊಮ್ಮೆ ಬಲಿಷ್ಟರು ದುರ್ಬಲರಂತೆ ಕಂಡವರನ್ನು ಕೆಟ್ಟದಾಗಿ ನಡೆಸುವುದಿದೆ. ಅವರನ್ನು ಸರಿದಾರಿಗೆ ತರುವುದು ನಮ್ಮೆಲ್ಲರ ಕರ್ತವ್ಯ. ಆದರೆ  ಆ ಕರ್ತವ್ಯ ನಿಭಾಯಿಸುವಾಗ ನಾವು ಉತ್ತಮ ದಾರಿಯನ್ನು ಹಿಡಿಯಬೇಕಾದುದು ನಮ್ಮೆಲ್ಲರ ಜವಾಬ್ಧಾರಿಯಾಗಿದೆ. ಕತ್ತಲೆಯನ್ನು ಕತ್ತಲೆಯಿಂದ ಹೊಡೆದೋಡಿಸಲು ಸಾಧ್ಯವಿಲ್ಲ ಅದಕ್ಕೆ ಬೆಳಕು ಬೇಕು. ನಾವು ಬೆಳಕಾದಾಗ ಕತ್ತಲೆ ತನ್ನಿಂದ ತಾನಾಗಿಯೇ ದೂರಾಗುತ್ತದೆ.