ಭಾರತೀಯ ಸಂವಿಧಾನ (ಭಾಗ – 1)

Thumbnail

ಭಾರತೀಯ ಸಂವಿಧಾನ (ಭಾಗ – 1)

ಸಂವಿಧಾನ ಎನ್ನುವ ಶಬ್ಧಕ್ಕೆ ಸಂರಚಿಸುವುದು, ಸ್ವರೂಪ ನೀಡುವುದು ಎನ್ನುವ ಅರ್ಥ ಇದೆ . ಒಂದು ಕಟ್ಟಡವನ್ನು ನಿರ್ಮಿಸಲು ಸೂಕ್ತ ತಳಗಟ್ಟನ್ನು ಹಾಕಬೇಕಾಗುತ್ತದೆ ಅದು ಆ ಕಟ್ಟಡದ ಮೂಲ ಸಂವಿಧಾನ ಆಗುತ್ತದೆ. ಮುಂದುವರಿದು, ಹಲವಾರು ರೀತಿಯ ನಿರ್ಮಾಣಗಳಿವೆ ಅಂದುಕೊಳ್ಳೋಣ ಆ ಪೈಕಿ ಒಂದು ನಿರ್ದಿಷ್ಟ ನಿರ್ಮಾಣವನ್ನು ಯಾವ ಆಕಾರದಲ್ಲಿ ಯಾವ ಶೈಲಿಯಲ್ಲಿ ನಿರ್ಮಿಸಲಾಗಿದೆ, ಯಾವೆಲ್ಲಾ ಮೂಲವಸ್ತುಗಳನ್ನು ಬಳಸಿ ನಿರ್ಮಿಸಲಾಗಿದೆ. ಅದನ್ನು ಯಾವ ಉದ್ದೇಶಕ್ಕಾಗಿ ನಿರ್ಮಿಸಲಾಗಿದೆ ಹಾಗೂ ಯಾವ ಉದ್ದೇಶಕ್ಕಾಗಿ ಬಳಸಲಾಗುತ್ತದೆ ಎನ್ನುವ ಈ ಎಲ್ಲಾ ಅಂಶಗಳು ಸೇರಿ ಆ ನಿರ್ಮಾಣದ ಸಂವಿಧಾನ ಎನ್ನಬಹುದು. 

ಸಂವಿಧಾನ ‘ಒಂದು ವ್ಯವಸ್ಥೆಯನ್ನು ಹೇಗೆ ನಿಭಾಯಿಸಬೇಕು ಎನ್ನುವುದರ ಕುರಿತು ಲಿಖಿತ ಅಥವಾ ಅಲಿಖಿತ ನಿರ್ದೇಶಗಳನ್ನು ಅಥವಾ ಪೂರ್ವ ನಿದರ್ಶನಗಳ ವಿವರಗಳ ಸಂಗ್ರಹ’ ಎಂದು ಸಾಮಾನ್ಯವಾಗಿ ತಿಳಿದುಕೊಳ್ಳಲಾಗಿದೆ. ಒಂದು ಕೈಗಾರಿಕೆಯಲ್ಲಿ ಒಂದು ಬೃಹತ್ತಾದ ಯಂತ್ರ ಇದೆ ಎಂದುಕೊಳ್ಳೋಣ ಆ ಯಂತ್ರದ ವಿವಿಧ ಭಾಗಗಳನ್ನು ಯಾವ ರೀತಿಯಲ್ಲಿ ಬಳಸಬೇಕು ಹಾಗೂ ಆ ಯಂತ್ರದ ಸೂಕ್ತ ಉಪಯೋಗ ಹೇಗೆ ಮಾಡಬೇಕು ಹಾಗೂ ಆ ಯಂತ್ರದ ಮೂಲಕ ಹೇಗೆ ಅಗತ್ಯ ಕೆಲಸಗಳನ್ನು ಮಾಡಿಸಿಕೊಳ್ಳಬೇಕು ಎನ್ನುವ ಕುರಿತು ನಮಗೆ ಮಾರ್ಗದರ್ಶಿ ಒಂದು ಬೇಕಾಗುತ್ತದೆ. ಇಲ್ಲದಿದ್ದಲ್ಲಿ ಆ ಯಂತ್ರದ ಸೂಕ್ತ ಬಳಕೆ ಮಾಡಲು ನಮ್ಮಿಂದ ಸಾಧ್ಯವಾಗಲಿಕ್ಕಿಲ್ಲ ಕ್ರಮೇಣ ಆ ಯಂತ್ರವು ನಿಷ್ಪ್ರಯೋಜಕವೂ ನಿರುಪಯುಕ್ತವೂ ಆಗಬಹುದು ಆದುದರಿಂದ ಯಂತ್ರ ಎಷ್ಟು ಬೆಲೆಬಾಳುವುದಾಗಿದೆಯೋ ಅಷ್ಟೇ ಆ ಯಂತ್ರವನ್ನು ಕಾರ್ಯರೂಪಕ್ಕೆ ಹಾಕಲು ಬಳಸುವ ಮಾರ್ಗದರ್ಶಿ ಸೂತ್ರಗಳ ಸಂಗ್ರಹವು ಅಷ್ಟೇ ಬೆಲೆಬಾಳುವುದು ಹಾಗೂ ಮಹತ್ವದ್ದಾಗಿದೆ.ಳ್ಳ

ರಾಜ್ಯಶಾಸ್ತ್ರದ ಅರ್ಥವನ್ನು ತೆಗೆದುಕೊಂಡರೆ ಸಂವಿಧಾನ ಎಂದರೆ ಒಂದು ದೇಶದ ಸರ್ವೋಚ್ಛ ಕಾನೂನು ಎಂದು ತಿಳಿದುಕೊಳ್ಳಬಹುದು. ಒಂದು ದೇಶದ ರಾಜಕೀಯ ವ್ಯವಸ್ಥೆಯನ್ನು ರೂಪಿಸುವ ಎಲ್ಲಾ ನಿಯಮಗಳ ಸಂಗ್ರಹವನ್ನು ಸಂವಿಧಾನ ಎನ್ನುತ್ತಾರೆ. ಆ ದೇಶದ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ, ಆಡಳಿತ ಸಂಘಟನೆಗಳು ಜನರ ಹಕ್ಕುಗಳು, ಜನರ ಕರ್ತವ್ಯಗಳು ಮತ್ತು ಸರ್ಕಾರದ ಜವಾಬ್ಧಾರಿಗಳು ಮುಂತಾದ ಕುರಿತು ಸಂವಿಧಾನವು ಸ್ಪಷ್ಟವಾದ ಮಾಹಿತಿ ನೀಡುತ್ತದೆ. ಜನರು ಯಾವ ವಿಧಾನದಲ್ಲಿ ತಮ್ಮ ಸರ್ಕಾರವನ್ನು ನಡೆಸಬೇಕು ಎನ್ನುವ ವಿವರಗಳನ್ನು ಉಳ್ಳ ದಾಖಲೆಯೇ ಸಂವಿಧಾನವಾಗಿದೆ.

ಸರಳ ಅರ್ಥದಲ್ಲಿ ಸಂವಿಧಾನ ಒಂದು ದೇಶ, ರಾಜ್ಯ ಅಥವಾ ಸಂಘಟನೆ ಹೇಗೆ ಕಾರ್ಯನಿರ್ವಹಿಸಬೇಕು ಎನ್ನುವ ಮಾರ್ಗದರ್ಶನ ನೀಡುವ ನಿಯಮಗಳ ಸಂಗ್ರಹವಾಗಿದೆ. ಅದು ಸರ್ಕಾರದ ವಿವಿಧ ಶಾಖೆಗಳ ಕುರಿತು ಅವುಗಳ ಅಧಿಕಾರ ವ್ಯಾಪ್ತಿಯ ಕುರಿತು ತಿಳಿಸುತ್ತದೆ ಹಾಗೂ ಪ್ರಜೆಗಳ ಹಕ್ಕನ್ನು ಸ್ಪಷ್ಟಪಡಿಸುತ್ತದೆ. ಸಂವಿಧಾನ ಒಂದು ಸಂಘಟನೆ, ಸಂಸ್ಥೆ, ಸಾಮಾಜಿಕ ಘಟಕ, ರಾಷ್ಟ್ರ ಮುಂತಾದವುಗಳ ಮೂಲಭೂತ ಕಾನೂನು, ಅವುಗಳ ಎಲ್ಲಾ ಘಟಕ ಮತ್ತು ಉಪ ಘಟಕಗಳ ಅಧಿಕಾರ ವ್ಯಾಪ್ತಿ, ಜವಾಬ್ಧಾರಿಗಳು, ಹಕ್ಕುಗಳು, ಕರ್ತವ್ಯಗಳು, ಬಾಧ್ಯತೆಗಳನ್ನು ಮತ್ತು ನಿಯಂತ್ರಣ ಇತಿಮಿತಿಗಳನ್ನು ಸ್ಪಷ್ಟಪಡಿಸುವ ಲಿಖಿತ ಅಥವಾ ಅಲಿಖಿತ ದಾಖಲೆ ಎಂದು ಹೆಚ್ಚಿನ ತಜ್ಞರು ಅಭಿಪ್ರಾಯಿಸುತ್ತಾರೆ. ಇಂಗ್ಲೆಂಡನ್ನು ಸಂವಿಧಾನಗಳ ತವರೂರು ಎಂದು ಸಾಮಾನ್ಯವಾಗಿ ಕರೆಯುತ್ತಾರೆ ಆದರೆ ಅಲ್ಲಿ ಒಂದು ಸಂವಿಧಾನ ಗ್ರಂಥ ಲಿಖಿತ ರೀತಿಯಲ್ಲಿ ದೊರೆಯುವುದಿಲ್ಲ ಈ ತನಕ ಅಲ್ಲಿ ಬೆಳೆದು ಬಂದಿರುವ ಸಂಪ್ರದಾಯಗಳು, ಅಲ್ಲಿನ ಆಳರಸರ ಮತ್ತು ನ್ಯಾಯಾಲಯಗಳ ತೀರ್ಪುಗಳು, ಪದ್ಧತಿಗಳು, ಶಾಸನ ಸದನಗಳಲ್ಲಿ ಕೈಗೊಂಡ ನಿರ್ಣಯಗಳು ಇವೆಲ್ಲವೂ ಸೇರಿ ಸಂವಿಧಾನ ಎಂಬ ರೂಪು ಉಂಟಾಗಿದೆ. 

ರಾಜ್ಯಾಡಳಿತದ ಇತಿಮಿತಿಗಳನ್ನು ಸ್ಪಷ್ಟಪಡಿಸುವ ಲಿಖಿತ ಅಥವಾ ಅಲಿಖಿತ ದಾಖಲೀಕರಣವೇ ಸಂವಿಧಾನ ಎಂದು ಕೆಲವು ಪಂಡಿತರು ವಾದಿಸುತ್ತಾರೆ. ಅನಾದಿ ಕಾಲದಲ್ಲಿ ಮಾನವರು ತಮ್ಮ ಅಸ್ತಿತ್ವಕ್ಕಾಗಿ ಪರಸ್ಪರ ಸಂಘರ್ಷ ನಡೆಸುವ ಪರಿಸ್ಥಿತಿ ಉಂಟಾದಾಗ ದುರ್ಬಲರು ಪ್ರಬಲರ ಕೈಯಲ್ಲಿ ನಾಶವಾಗದೆ ಹೋಗುವುದಕ್ಕಾಗಿ ಕೆಲವು ಸಾಮಾಜಿಕ ಒಪ್ಪಂದಗಳನ್ನು ಮಾಡಿಕೊಂಡು ತಮ್ಮ ಹಿತಾಸಕ್ತಿಯ ಸಂರಕ್ಷಣೆ ಮಾಡಿಕೊಂಡರು ಈ ಒಪ್ಪಂದದ ಅಭಿವ್ಯಕ್ತಿಯೇ ಸಂವಿಧಾನವಾಗಿ ರೂಪುಗೊಂಡಿದೆ ಎನ್ನುವುದು ಅವರ ಅಭಿಪ್ರಾಯವಾಗಿದೆ. ಫ್ರಾನ್ಸಿನಲ್ಲಿ ಬೂರ್ಬನ್ ಅರಸರ ದಬ್ಬಾಳಿಕೆಯ ವಿರುದ್ಧ ಸಂಘಟಿತರಾದ ಜನಸಾಮಾನ್ಯರು ತಮಗಾಗಿ ಸಂವಿಧಾನ ರಚಿಸಿಕೊಂಡರು. ಅಮೇರಿಕಾದಲ್ಲಿ ಇಂಗ್ಲೀಷ್ ಸರ್ಕಾರದ ಹೊಡೆತದ ವಿರುದ್ಧ ಒಟ್ಟಾದ 13 ವಸಾಹತುಗಳ ನಾಯಕರು ತಮಗಾಗಿ 

ಭಾರತದ ಸಂವಿಧಾನವನ್ನು ನಾವು ನೋಡಿದರೆ ನಮ್ಮ ಸಂವಿಧಾನವು ನಮ್ಮ ದೇಶವನ್ನು ಸರ್ವತಂತ್ರ, ಸಮಾಜವಾದಿ, ಸರ್ವಧರ್ಮ ಸಮಭಾವದ, ಪ್ರಜಾತಾಂತ್ರಿಕ ಗಣತಂತ್ರವನ್ನಾಗಿ ಸಂರಚಿಸುತ್ತದೆ. ಹೀಗೆ ಅದು ಸಂರಚನಾತ್ಮಕ ಉದ್ದೇಶವನ್ನು ಹೊಂದಿದೆ. ಅದು ಭಾರತೀಯರಿಗೆ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ನ್ಯಾಯವನ್ನು ಒದಗಿಸುತ್ತದೆ ಹೀಗೆ ಅದು ಪ್ರಜೆಗಳನ್ನು ಸಲಹುವ ದಾಖಲೆಯಾಗಿದೆ. ಅದು ಭಾರತದ ಸರ್ವೋಚ್ಛ ಕಾನೂನಾಗಿದ್ದು ರಾಜಕೀಯ ಮತ್ತು ಆಡಳಿತಾತ್ಮಕ ನಿರ್ದೇಶಕ ದಾಖಲೆಯಾಗಿದೆ. ಸರ್ಕಾರಗಳ ಹಾಗೂ ಪ್ರಜೆಗಳ ಹಕ್ಕುಗಳು, ಜವಾಬ್ಧಾರಿಗಳು ಮತ್ತು ಕರ್ತವ್ಯವನ್ನು ಅದು ಸ್ಪಷ್ಟಪಡಿಸಿ ರಾಜ್ಯಾಡಳಿತವು ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳುತ್ತದೆ.

ಬೆಂಜಮಿನ್ ಫ್ರ್ಯಾಂಕ್ಲಿನ್ ‘ಸಂವಿಧಾನವು ಜನರಿಗೆ ತಮ್ಮ ನಾಗರಿಕ ಬದುಕನ್ನು ಅರ್ಥಪೂರ್ಣವಾಗಿ ನಡೆಸಲು ಸಹಕರಿಸಿ ಅವರಿಗೆ ಸಂತೋಷವನ್ನು ನೀಡುವ ಶ್ರೇಷ್ಟ ಸಾಧನ’ ಎಂದು ಕರೆದಿದ್ದಾರೆ, ಸಂವಿಧಾನವು ನಾಡಿನಲ್ಲಿ ಸುವ್ಯವಸ್ಥೆಯನ್ನು ಸ್ಥಾಪಿಸುತ್ತದೆ. ಪರಸ್ಪರ ವ್ಯಕ್ತಿ ಗೌರವದ ವಾತಾವರಣವನ್ನು ಸೃಷ್ಟಿ ಮಾಡುತ್ತದೆ ಆ ಮೂಲಕ ಎಲ್ಲಾ ಪ್ರಜೆಗಳು ಪರಸ್ಪರ ಶಾಂತಿ ಸಹಬಾಳ್ವೆಯ ವಾತಾವರಣ  ಉಂಟಾಗಿ ಸಂತಸಮಯ ಬದುಕು ಎಲ್ಲರಿಗೂ ಲಭಿಸುತ್ತದೆ. ಒಂದು ದೇಶದ ಜನರು ಸಮಾನತೆಯ, ಭ್ರಾತೃತ್ವದ ನೆಲೆಯಲ್ಲಿ ಬದುಕಲು ಪೂರಕವಾಗುವ ಸಂವಿಧಾನ ನಿಜವಾದ ಅರ್ಥದಲ್ಲಿ ಎಲ್ಲರಿಗೂ ಸಂತೋಷ ಉಂಟುಮಾಡುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.

ಕ್ರಿಸ್ತಪೂರ್ವ 4-5 ನೇ ಶತಮಾನಗಳ ಕಾಲದಲ್ಲಿಯೇ ಗ್ರೀಕರು ತಮ್ಮ ನಗರ ರಾಜ್ಯಗಳಲ್ಲಿ ಸಂವಿಧಾನದ ವ್ಯವಸ್ಥೆಯನ್ನು ಹೊಂದಿದ್ದರು. ಕ್ರಿಸ್ತಶಕ 1215 ರ ಕಾಲಕ್ಕೆ ಇಂಗ್ಲೆಂಡಿನ ಶ್ರೀಮಂತ ಭೂಮಾಲೀಕರು ಅರಸನ ಶೋಷಣೆಯ ವಿರುದ್ಧ ತಿಕ್ಕಾಡಿ ಅಧಿಕಾರ ಹಂಚಿಕೆಯ ಕುರಿತಾದ ಮಹಾಸನ್ನದ್ದನ್ನು (ಮ್ಯಾಗ್ನಾಕಾರ್ಟ) ಪಡೆದರು ಇದನ್ನೇ ಆಧುನಿಕ ಸಂವಿಧಾನಗಳ ಬೆಳವಣಿಗೆಯ ಪ್ರಥಮ ಹಂತದ ದಾಖಲೆ ಎನ್ನುತ್ತಾರೆ. 1689 ರಲ್ಲಿ ಇಂಗ್ಲೀಷರು ಅರಸೊತ್ತಿಗೆಯ ಅಧಿಕಾರದ ಮೇಲೆ ಇನ್ನಷ್ಷು ನಿಯಂತ್ರಣ ಹೇರುವ ‘ಬಿಲ್ಲ್ ಆಫ್ ರೈಟ್ಸ್’ನ್ನು ಸಂಪಾದಿಸಿಕೊಂಡರು. 1789 ರಲ್ಲಿ ಅಮೇರಿಕೆಯ ಸಂಯುಕ್ತ ಸಂಸ್ಥಾನದ ಸಂವಿಧಾನವು ಕಾರ್ಯರೂಪಕ್ಕೆ ಬಂದಿತು. ಅದು ವಿಶ್ವದ ಪ್ರಥಮ ಲಿಖಿತ ಸಂವಿಧಾನವಾಗಿದೆ. ಫ್ರಾನ್ಸ್ ದೇಶವು 1791 ರಲ್ಲಿ ದೂರಗಾಮಿ ಪ್ರಭಾವಗಳುಳ್ಳ ಸಂವಿಧಾನವನ್ನು ಮಂಜೂರು ಮಾಡಿತು. ಭಾರತದ ಸಂವಿಧಾನವು 26.11.1949 ರಂದು ಮಂಜೂರಾಗಿ 26.01.1950 ರಿಂದ ಕಾರ್ಯರೂಪಕ್ಕೆ ಬಂದಿತು.

 

 

ಸಂವಿಧಾನವು ಒಂದು ಮಹತ್ವದ ದಾಖಲೆಯಾಗಿದೆ ಯಾಕೆಂದರೆ 

ಸಂವಿಧಾನವು ದೇಶದ ಸರ್ವೋಚ್ಛ ಕಾನೂನಾಗಿದೆ ಹಾಗೂ ಆ ಮೂಲಕ ಎಲ್ಲಾ ಕಾನೂನುಗಳಿಗೆ ಅರ್ಥ ಮತ್ತು ಅಸ್ತಿತ್ವವನ್ನು ನೀಡುತ್ತದೆ.

ಸಂವಿಧಾನವು ಆ ದೇಶದ ಎಲ್ಲಾ ಪ್ರಜೆಗಳ ರಾಜಕೀಯ, ಸಾಮಾಜಿಕ, ಆರ್ಥಿಕ ಹಿತಾಸಕ್ತಿಯನ್ನು ಕಾಪಾಡುವ ಮಹತ್ವದ ದಾಖಲೆಯಾಗಿದೆ. 

ಆ ದೇಶದ ವಿವಿಧ ಆಡಳಿತ ಸಂರಚನೆಗಳ ನಡುವಿನ ಸಂಬಂಧವು ಸುವ್ಯವಸ್ಥಿತವಾಗಿರುವುದಕ್ಕೆ ಸಂವಿಧಾನವು ಅಗತ್ಯವಾಗಿದೆ.

 ಆ ದೇಶದ ಆಳುವವರು ಮತ್ತು ಆಳಲ್ಪಡುವವರ ನಡುವೆ ಇರುವ ಸಂಬಂಧಗಳು ಈ ದಾಖಲೆಯನುಸಾರ ನಿರ್ದೇಶಿಸಲ್ಪಡುತ್ತವೆ. 

ಜನರು ಯಾವುದೇ ಅಧಿಕಾರ ದುರುಪಯೋಗಕ್ಕೆ ಒಳಗಾಗಬಾರದಾದರೆ ಸಂವಿಧಾನದ ಶಕ್ತಿ ಅವರಿಗೆ ಅನಿವಾರ್ಯವಾಗಿದೆ. ಕುರಿಮಂದೆಯನ್ನು ತೋಳಗಳ ಮುಷ್ಟಿಯಿಂದ ಕಾಯುವುದು ಎಷ್ಟು ಮುಖ್ಯವೋ ಕುರುಬನ ಅತಿಯಾಸೆಯ ಹೊಡೆತದಿಂದ ಕಾಯುವುದೂ ಅಷ್ಟೇ ಮುಖ್ಯವಾಗಿರುತ್ತದೆ. (ಪರಕೀಯರ ದಾಳಿಯಿಂದ ಪ್ರಜೆಗಳನ್ನು ಕಾಯುವುದು ಮಾತ್ರವಲ್ಲದೆ ಆ ಜನರನ್ನು ಆಳುವವರ ಶೋಷಣೆಯಿಂದ ಕಾಯುವುದೂ ಮುಖ್ಯವಾಗಿದೆ) ಅದಕ್ಕೆ ಸಂವಿಧಾನದ ಅಗತ್ಯವಿದೆ

ಅದು ಸರ್ಕಾರದ ವಿವಿಧ ಹಂತಗಳ ಮತ್ತು ಅಂಗಗಳ ನಡುವಿನ ಸಂಬಂಧಗಳನ್ನು, ಮಿತಿಗಳನ್ನು, ವ್ಯಾಪ್ತಿಗಳನ್ನು ಸ್ಪಷ್ಟಪಡಿಸುತ್ತದೆ ಇದರಿಂದ ಅಧಿಕಾರ ದುರುಪಯೋಗದ ಸಾಧ್ಯತೆಗಳು ಇಲ್ಲದಂತಾಗುತ್ತವೆ.

ಸಂವಿಧಾನವು ಒಂದು ದೇಶದ ಎಲ್ಲಾ ಕಾನೂನುಗಳಿಗೆ ಆಕರದಂತಿದ್ದು ಜನರು ಕಾನೂನಿನ ಆಳ್ವಿಕೆಯ ಅಭಿರಕ್ಷೆ ಪಡೆಯಲು ಅದರ ಮೂಲಕ ಸಾಧ್ಯವಾಗುತ್ತದೆ.

ಸಂವಿಧಾನವು ಆಡಳಿತ ನಡೆಸುವವರು ಈಗಾಗಲೇ ಇರುವ ಕಾನೂನುಗಳ ಬಳಕೆಯ ಕುರಿತು ಸ್ಪಷ್ಟ ಮಾರ್ಗದರ್ಶನ ನೀಡುತ್ತದೆ ಮಾತ್ರವಲ್ಲದೆ ಕಾಲಕಾಲದ ಅನಿವಾರ್ಯತೆಯನ್ನು ಅರ್ಥಮಾಡಿಕೊಂಡು ಅದಕ್ಕೆ ತಕ್ಕಂತೆ ಅಗತ್ಯ ಕಾನೂನುಗಳನ್ನು ರೂಪಿಸುವ ಅಥವಾ ತಿದುವಿಕೆ ಮಾಡುವ ವ್ಯವಸ್ಥೆಯನ್ನು ಸ್ಪಷ್ಟಪಡಿಸುತ್ತದೆ. 

ಸಂವಿಧಾನವು ಒಂದು ರಾಷ್ಟ್ರಕ್ಕೆ ರಾಜಕೀಯ ಸ್ಥಿರತೆಯನ್ನು ಒದಗಿಸುತ್ತದೆ ಮತ್ತು ಆಡಳಿತಾತ್ಮಕ ನಿರಂತರತೆಯನ್ನು ಉಂಟುಮಾಡುತ್ತದೆ. ಸಂವಿಧಾನಗಳೇ ಇಲ್ಲದ ನಾಡಿನಲ್ಲಿ ಅಧಿಕಾರಕ್ಕಾಗಿ ನಿರಂತರ ತಿಕ್ಕಾಟ ಮತ್ತು ಅರಾಜಕತೆಯ ಪರಿಸ್ಥಿತಿ ಬೆಳೆಯುವುದು ಸುಲಭವಾಗಿದೆ. ಆದರೆ ಸಾಂವಿಧಾನಾತ್ಮಕವಾದ ರಾಷ್ಟ್ರಗಳಲ್ಲಿ ಅಧಿಕಾರ ಹಸ್ತಾಂತರವೂ ಸೇರಿದಂತೆ ಎಲ್ಲಾ ಪ್ರಕ್ರಿಯೆಗಳು ಹೆಚ್ಚು ವ್ಯವಸ್ಥಿತವಾಘಿ ನಡೆಯುತ್ತವೆ.

ಸಂವಿಧಾನವು ಒಂದು ದೇಶದ ಪ್ರಜೆಗಳ ಮತ್ತು ಪ್ರಭುಗಳ ಹಕ್ಕು, ಕರ್ತವ್ಯಗಳು, ಭಾದ್ಯಸ್ಥಿಕೆಗಳು, ಸೀಮಿತತೆಗಳು,, ನಿಯಂತ್ರಣ ವ್ಯವಸ್ಥೆಗಳನ್ನು ಜವಾಬ್ಧಾರಿಗಳನ್ನು ಸ್ಪಷ್ಟಪಡಿಸುವುದರಿಂದ ಜನರು ಪರಸ್ಪರ ಗೌರವದಿಂದ ಮತ್ತು ಭದ್ರತೆಯಿಂದ ಬದುಕಲು ಸುಲಭಸಾಧ್ಯವಾಗುತ್ತದೆ. ಇದರಿಂದ ಶಾಂತಿಯುತ ಸಹಬಾಳ್ವೆ ಸುಲಭವಾಗುತ್ತದೆ. ದೇಶದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಿದಾಗ ಆರ್ಥಿಕ ಪ್ರಗತಿಗೆ ಪೂರಕ ವಾತಾವರಣ ನಿರ್ಮಾಣವಾಗುತ್ತದೆ.

ಸಂವಿಧಾನವು ಸರ್ಕಾರದ ಅಗತ್ಯಗಳಿಗೆ ಬೇಕಾದ ಹಣಕಾಸನ್ನು ಯಾವ ರೀತಿಯಲ್ಲಿ ಪೂರೈಸಿಕೊಳ್ಳಬೇಕು ಎನ್ನುವುದಕ್ಕೆ ಸ್ಪಷ್ಟ ವ್ಯವಸ್ಥೆಯನ್ನು ರೂಪಿಸುತ್ತದೆ. ಆನರಿಂದ ತೆರಿಗೆ ಸಂಗ್ರಹದ ವಿಧಾನಗಳು, ಹೀಗೆ ಸಂಗ್ರಹವಾದ ತೆರಿಗೆಯ ಬಳಕೆಯ ರೀತಿ ನೀತಿಗಳು ಮುಂತಾದವುಗಳನ್ನು ಅದು ತಿಳಿಸುತ್ತದೆ. ಇದರಿಂದ ಆಡಳಿತ ನಿರ್ವಹಣೆಗೆ ಅದು ಮಹತ್ವದ ಮಾರ್ಗದರ್ಶಿಯಾಗಿದೆ.

ಸಂವಿಧಾನದ ಮುಕೇನ ಅಧಿಕಾರದ ಹಂಚಿಕೆಯು ನಡೆಯುವುದು ಮತ್ತು ಸರ್ಕಾರ ಹಾಗೂ ಆಡಳಿತದ ವಿವಿಧ ಸ್ಥರಗಳು, ಘಟಕಗಳು ಮತ್ತು ವಿಭಾಗಗಳ ನಡುವೆ ಸಮನ್ವಯ ಉಂಟಾಗುವುದು. ಈ ಸಮನ್ವಯವು ಸುಸ್ಥಿರ ಪ್ರಗತಿಗೆ ಅಗತ್ಯವಾದ ಅಂಶವಾಗಿದೆ.

ಲಿಖಿತ ಸಂವಿಧಾನವಾಗಲಿ, ಅಲಿಖಿತ ಸಂವಿಧಾನವಾಗಲಿ ಅದು ದೇಶದ ಹಾಗೂ ಅದರಲ್ಲಿನ ಎಲ್ಲಾ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ವ್ಯವಸ್ಥೆಗಳ ಕುರಿತಾದ ಕಾನೂನು ವ್ಯವಸ್ಥೆಯನ್ನು ಸ್ಪಷ್ಟಪಡಿಸುತ್ತದೆ. ಇದರಿಂದಾಗಿ ಯಾವುದೇ ತಿಕ್ಕಾಟ ಅಥವಾ ಸಂಘರ್ಷವಿಲ್ಲದೆ ಈ ಎಲ್ಲಾ ಘಟಕಗಳು ಪರಸ್ಪರ ಸಮನ್ವಯ ಮತ್ತು ಸಹಕಾರದಿಂದ ಕಾರ್ಯಾಚರಿಸಲು ಸಾಧ್ಯವಾಗುತ್ತದೆ. ಅವೆಲ್ಲವುಗಳ ಗುರಿ ಮತ್ತು ಉದ್ದೇಶಗಳು ಕಾರ್ಯರೂಪಕ್ಕೆ ಬರಲು ಇದರಿಂದ ಸಾಧ್ಯವಾಗುತ್ತದೆ. ಒಂದು ವೇಳೆ ಸಂವಿಧಾನದ ಚೌಕಟ್ಟು ಇಲ್ಲದಿದ್ದರೆ ರಾಷ್ಟ್ರದಲ್ಲಿ ಅರಾಜಕತೆ ಹಾಗೂ ನಾಗರಿಕ ಸಂಘರ್ಷಗಳು ನಿತ್ಯದ ವ್ಯವಸ್ಥೆ ಆಗುವ ಎಲ್ಲಾ ಸಾಧ್ಯತೆಗಳಿವೆ.

ಸಂವಿಧಾನ ಯಾವುದೇ ಆಡಳಿತಾತ್ಮಕ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎನ್ನುವ ಕುರಿತು ಸ್ಪಷ್ಟ ಚಿತ್ರಣ ನೀಡುತ್ತದೆ. ತುರ್ತುಪರಿಸ್ಥಿತಿಗಳು, ಆಡಳಿತಾತ್ಮಕ ಸಂಕೀರ್ಣತೆಯ ಪರಿಸ್ಥಿತಿಗಳು ಮಾತ್ರವಲ್ಲದೆ ಯಾವ ಯಾವ ಮಹತ್ವದ ಅಥವಾ ಸಾಮಾನ್ಯ ಪರಿಸ್ಥಿತಿಗಳನ್ನು ಯಾವ ಯಾವ ರೀತಿಯಲ್ಲಿ ನಿಭಾಯಿಸಬೇಕು ಎನ್ನುವ ಹಾಗೂ ಅವುಗಳ ಪರಿಹಾರ ಹೇಗೆ ಕಂಡುಹಿಡಿಯಬೇಕು ಎನ್ನುವ ಕುರಿತು ನಮಗೆ ಸಂವಿಧಾನದ ಮೂಲಕ ಅರಿವಿಗೆ ಬರುತ್ತದೆ. ಉದಾಹರಣೆಗೆ ಭಾರತದ ರಾಷ್ಟ್ರಪತಿಗಳ ಆಯ್ಕೆ, ಭಾರತದ ಕೇಂದ್ರ ಶಾಸನಸಭೆಯ ಆಯ್ಕೆ, ಸುಪ್ರಿಮ್ ಕೋರ್ಟಿನ ನ್ಯಾಯಾಧೀಶರ ನೇಮಕಾತಿ ಮುಂತಾದ ಸಂದರ್ಭಗಳಲ್ಲಿ ಯಾವ ರೀತಿಯಾಗಿ ನಾವು ಪ್ರವರ್ತಿಸಬೇಕು ಎನ್ನುವುದರ ಸ್ಪಷ್ಟ ಮಾಹಿತಿ ನಮಗೆ ಭಾರತದ ಸಂವಿಧಾನದ ಮೂಲಕ ತಿಳಿಯುತ್ತದೆ.

ಸಂವಿಧಾನ ಒಂದು ದೇಶದ ಉದ್ದೇಶಗಳನ್ನು ಮತ್ತು ಗುರಿಗಳನ್ನು ನಿರ್ದಿಷ್ಟಪಡಿಸಿ ಅವುಗಳನ್ನು ಎಲ್ಲರಿಗೂ ತಿಳಿಯಪಡಿಸುತ್ತದೆ. ಆ ಮೂಲಕ ಆ ದೇಶ ಮತ್ತು ದೇಶದ ಸಕಾರ ಯಾವ ದಾರಿಯಲ್ಲಿ ಮುನ್ನಡೆಯಬೇಕು, ಅದರ ಅಂತರಾಷ್ಟ್ರೀಯ ಸಂಬಂಧಗಳು ಯಾವ ರೀತಿಯಾಗಿರಬೇಕು ಹಾಗೂ ಅದು ತನ್ನ ಪ್ರಜೆಗಳಿಗೆ ಯಾವ ರೀತಿಯ ಆಡಳಿತ ವ್ಯವಸ್ಥೆಯನ್ನು ಮತ್ತು ಜೀವನಾವಕಾಶಗಳನ್ನು ಒದಗಿಸಬೇಕು ಎನ್ನುವ ವಿಷಯವನ್ನು ಸ್ಪಷ್ಟಪಡಿಸುತ್ತದೆ.

ಅಮೇರಿಕೆಯ ಸಂಯುಕ್ತ ಸಂಸ್ಥಾನದ ಸಂವಿಧಾನವು ತನ್ನ ಪ್ರಜೆಗಳಿಗೆ ಹೆಚ್ಚು ಸುವ್ಯವಸ್ಥಿತವಾದ ಒಕ್ಕೂಟ ಸರ್ಕಾರವನ್ನು, ನ್ಯಾಯದ ಸಂರಕ್ಷಣೆಯನ್ನು, ಆಂತರಿಕ ಶಾಂತಿ ಸಮಾಧಾನವನ್ನು, ಸರ್ವಸಮನ್ವಯದಿಂದ ಸುರಕ್ಷೆಯನ್ನು, ಸ್ವಾತಂತ್ರ್ಯದ ಅಭಿರಕ್ಷೆಯನ್ನು ಹಾಗೂ ಕಲ್ಯಾಣರಾಜ್ಯವನ್ನು ಒದಗಿಸುವ ಭರವಸೆ ನೀಡುತ್ತದೆ.

ಭಾರತದ ಸಂವಿಧಾನವು ಭಾರತೀಯರಿಗೆ sಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯವನ್ನು, ವಿಚಾರ, ಅಭಿವ್ಯಕ್ತಿ, ವಿಶ್ವಾಸ, ಧರ್ಮಶೃದ್ಧೆ ಮತ್ತು ಉಪಾಸನೆಯ ಸ್ವಾತಂತ್ರ್ಯವನ್ನು, ಸ್ಥಾನಮಾನ ಹಾಗೂ ಅವಕಾಶದ ಸಮಾನತೆಯನ್ನು ಹಾಗೂ ವ್ಯಕ್ತಿ ಗೌರವ, ರಾಷ್ಟ್ರದ ಏಕತೆ ಮತ್ತು ಅಖಂಡತೆಯನ್ನು ಸುನಿಶ್ಚಿತಗೊಳಿಸಿ ಭ್ರಾತೃತ್ವವನ್ನು ಒದಗಿಸುವ ಭರವಸೆ ನೀಡುತ್ತದೆ.  

ಭಾರತೀಯ ಸಂವಿಧಾನದ ಸಂರಚನೆ – 

ಭಾರತೀಯ ಸಂವಿಧಾನವು ಆ ಉದ್ದೇಶಕ್ಕಾಗಿಯೆ ಆಯ್ಕೆಯಾದ ಸಂವಿದಾನ ಸಂರಚನಾ ಸಭೆಯಿಂದ ರಚಿಸಲ್ಪಟ್ಟಿದ್ದು. 1946 ರಿಂದ ಭಾರತೀಯರಾದ ನಾವು ಬ್ರಿಟೀಷರ ದಬ್ಬಾಳಿಕೆಯ ವಿರುದ್ಧ ಹೋರಾಡುತ್ತಿದ್ದ ಕಾಲದಲ್ಲೇ ನಮ್ಮ ದೇಶಕ್ಕೆ ಒಂದು ಸಂವಿಧಾನ ಬೇಕು ಎನ್ನುವ ಕಲ್ಪನೆ ಹೊಂದಿದ್ದೆವು. 1922 ರಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ‘ಭಾರತೀಯರ ಹಿತಾಸಕ್ತಿಗಳನ್ನು ಮತ್ತು ಅಭಿವ್ಯಕ್ತಿಗಳನ್ನು ಬಿಂಬಿಸುವ ಭಾರತೀಯರೆ ಸಂರಚಿಸಿದ ಸಂವಿಧಾನವನ್ನು ನಾವು ಹೊಂದಿರಬೇಕು’ ಎಂದು ಕರೆ ನೀಡುತ್ತಾರೆ. 1925 ರ ಸೈಮನ್ ಕಮಿಷನ್ನಿನ ವಿರುದ್ಧದ ಹೋರಾಟದ ಭಾಗವಾಗಿ ರೂಪುಗೊಂಡ ಮೋತಿಲಾಲ್ ನೆಹರೂ ಆಯೋಗವು ಮಂಡಿಸಿದ್ದ ನೆಹರೂ ವರದಿಯಲ್ಲಿಯೇ ಭಾರತೀಯ ಸಂವಿಧಾನದ ಮೂಲ ಪರಿಕಲ್ಪನೆ ಇದೆ. 1934 ರಲ್ಲಿ ಭಾರತದ ಶ್ರೇಷ್ಟ ಕಮ್ಯೂನಿಸ್ಟ್ ನಾಯಕ ಎಮ್ ಎನ್ ರೊಯ್ ಅವರು ಭಾರತಕ್ಕೆ ಭಾರತೀಯರದೆ ಆದ ಸಂವಿಧಾನ ಸಂರಚನಾಸಭಾ ರೂಪುಗೊಳ್ಳಬೇಕು ಎಂದು ಕರೆ ನೀಡುತ್ತಾರೆ 1935 ರಲ್ಲಿ ಸಂವಿಧಾನ ಸಂರಚನಾ ಸಭೆಯ ಬೇಡಿಕೆ ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧಿಕೃತ ಬೇಡಿಕೆ ಆಗುತ್ತದೆ. 1939 ರಲ್ಲಿ ಚಕ್ರವರ್ತಿ ರಾಜಗೋಪಾಲಾಚಾರಿ ಪ್ರಜಾತಾಂತ್ರಿಕ ರೀತಿಯಲ್ಲಿ ಆಯ್ಕೆಯಾದ ಸಂವಿಧಾನ ಸಂರಚನಾ ಸಭೆ ರೂಪುಗೊಳ್ಳಬೇಕೆಂದು ಕರೆ ಕೊಡುತ್ತಾರೆ.

1940 ರಲ್ಲಿ  (ಎರಡನೇ ಮಹಾಯುದ್ಧ ನಡೆಯುತ್ತಿದ್ದ ವೇಳೆ ಅಗೋಸ್ಟ್ ಕೊಡುಗೆಯಂತೆ ಭಾರತಕ್ಕೆ ಸಂವಿಧಾನ ಸಂರಚನಾ ಸಭಾ ರೂಪಿಸಲಾಗುವುದೆಂದು ಬ್ರಿಟೀಷರು ಆಶ್ವಾಸನೆ ನೀಡುತ್ತಾರೆ.  ಕೊನೆಯಲ್ಲಿ  ಕ್ಯಾಬಿನೆಟ್ ಆಯೋಗದ (ಅಗೋಸ್ತ್ 16, 1946) ಚಿಂತನೆಗಳು ಮತ್ತು ಸಲಹೆಗಳಂತೆ ಭಾರತದ ಸಂವಿಧಾನ ಸಂರಚನಾ ಸಭೆ ಸ್ಪಷ್ಟ ರೂಪ ಪಡೆಯುತ್ತದೆ. ಒಟ್ಟು 389 ಸದಸ್ಯರ  ಸಂವಿಧಾನ ಸಂರಚನಾ ಸಭಾ ಸಂರಚಿಸಲ್ಪಡುತ್ತದೆ. ಆ ಪೈಕಿ 292 ಸದಸ್ಯರು ಬ್ರಿಟೀಶ್ ಪ್ರಾಂತ್ಯಗಳ ಪ್ರತಿನಿದಿಗಳು, 93 ದೇಶಿ ಸಂಸ್ಥಾನಗಳ ರಾಜರುಗಳ ಪ್ರತಿನಿಧಿಗಳು (1947 ರಲ್ಲಿ ಅಂಥಹ ರಾಜ್ಯಗಳ ಒಟ್ಟು ಸಂಖ್ಯೆ 565) ಹಾಗೂ ಕಮೀಷನರ್ ಸೀಮೆಗಳ 4 ಪ್ರತಿನಿಧಿಗಳು (ಡೆಲ್ಲಿ, ಆಜ್ಮೇರ್- ಮೆರ್ವಾರ್, ಕೂರ್ಗ್ ಹಾಗೂ ಬ್ರಿಟೀಶ್ ಬಲೂಚಿಸ್ಥಾನ್) 

ಬ್ರಿಟೀಶ್ ಇಂಡಿಯಾದ 292 ಪ್ರತಿನಿಧಿಗಳನ್ನು ಪ್ರಾಂತ್ಯಗಳ ಶಾಸನ ಸಭೆಯಿಂದ ಆಯ್ಕೆಮಾಡಲಾಗುತ್ತದೆ. ದೇಶಿರಾಜರುಗಳ ಪ್ರತಿನಿಧಿಗಳನ್ನು ಸಂಘಟಿತವಾಗಿ ದೇಶಿರಾಜರುಗಳೇ ನಾಮ ನಿರ್ದೇಶನ ಮಾಡುವ ವ್ಯವಸ್ಥೆ ಮಾಡಲಾಯ್ತು.  4 ಕಮೀಶನರ್ ಸೀಮೆಗಳ ಪ್ರತಿನಿದಿಗಳನ್ನು ಗವರ್ನರ್ ಜನರಲ್ ನೇಮಕ ಮಾಡಬೇಕಾಗಿತ್ತು. ಅಗೋಸ್ತ್ 1946 ರಲ್ಲಿ ಅಗತ್ಯ ಚುನಾವಣೆಗಳು ನಡೆದು ಕಾಂಗ್ರೆಸ್ 208 ಸ್ಥಾನಗಳನ್ನು ಗೆದ್ದುಕೊಂಡಿತು. ಮುಸ್ಲಿಮ್ ಲೀಗ್ 73 ಸ್ಥಾನಗಳನ್ನು ಪಡೆಯಿತು. ಇತರ ಪಕ್ಷಗಳು ಒಟ್ಟು 11 ಸ್ಥಾನಗಳನ್ನು ಪಡೆದವು. ಆರಂಭದಲ್ಲಿ ಮುಸ್ಲಿಮ್ ಲೀಗ್ ಕಾಂಗ್ರೆಸ್ಸಿನೊಡನೆ ಸಹಕರಿಸಲು ಸಿದ್ಧವಿರಲಿಲ್ಲ ಮಾತ್ರವಲ್ಲ ಭಾರತೀಯ ಮುಸಲ್ಮಾನರಿಗಾಗಿ ಪ್ರತ್ಯೇಕ ಸಂವಿಧಾನ ರಚನಾ ಸಭಾ ಆಗಬೇಕು ಎಂಬ ಬೇಡಿಕೆಯನ್ನು ಅದು ಮುಂದಿಟ್ಟಿತು.

ಈ ಹಿನ್ನಲೆಯಲ್ಲಿ ಸಂವಿಧಾನ ಸಂರಚನಾ ಸಭೆಯ ಪ್ರಥಮ ಅಧಿವೇಶನ ಡಿಸೆಂಬರ್ 9 1946 ರಂದು ನಡೆಯುವ ಸಂದರ್ಭದಲ್ಲಿ ಬರೇ 207 ಸದಸ್ಯರ ಸಭೆ ನಡೆಯಿತು. ಕ್ರಮೇಣ ಮುಸ್ಲಿಮ್ ಲೀಗ್ ಹಾಗೂ ದೇಶಿ ರಾಜರು ಈ ಸಭೆಯಲ್ಲಿ ಪಾಲುದಾರರಾಗಲು ಒಪ್ಪಿದರು. ಅದಾಗ್ಯೂ 14 ಅಗೋಸ್ತ್ 1947 ರಂದು ಪಾಕಿಸ್ಥಾನ ಸಂರಚನೆಯಾದ ಕಾರಣ ಆ ಭೂಪ್ರದೇಶದ 90 ಸದಸ್ಯರು ಪಾಕಿಸ್ಥಾನದ ಸಂವಿಧಾನ ಸಂರಚನಾ ಸಭೆಯ ಸದಸ್ಯರಾಗಿ ಹೋದ ಕಾರಣ ಭಾರತದ ಸಂವಿಧಾನ ಸಂರಚನಾ ಸಭೆಯಲ್ಲಿ 299 (ಪ್ರಾಂತ್ಯಗಳ 229 + ದೇಶಿ ರಾಜ್ಯಗಳಿಂದ 70) ಸದಸ್ಯರು ಉಳಿದರು. .

ಪ್ರಾಂತ್ಯಗಳ ಸದಸ್ಯರು - 229

1. ಮದ್ರಾಸ್ 49

2. ಬೊಂಬಯ್ 21

3. ಪಶ್ಚಿಮ ಬಂಗಾಲ¯ 19

4. ಸಂಯುಕ್ತ ಪ್ರಾಂತ್ಯ (ಈಗಿನ ಉತ್ತರ್ ಪ್ರದೇಶ್) 55

5. ಪೂರ್ವ ಪಂಜಾಬ್ 12

6. ಬಿಹಾರ್ 36

7. ಕೇಂದ್ರ ಪ್ರಾಂತ್ಯ (ಈಗಿನ ಮಧ್ಯ ಪ್ರದೇಶ್) 17

8. ಆಸ್ಸಾಮ್ 8

9. ಒರಿಸ್ಸಾ   9

10. ಡೆಲ್ಲಿ 1

11. ಆಜ್ಮೇರ್- ಮೇರ್ವಾರಾ 1

12. ಕೂರ್ಗ್ 1

 

ದೇಶಿರಾಜ್ಯಗಳು -70

1. ಆಳ್ವಾರ್ 1

2. ಬರೋಡಾ 3

3. ಭೋಪಾಲ್ 1

4. ಬಿಕಾನೇರ್ 1

5. ಕೊಚ್ಚಿನ್ 1

6. ಗ್ವ್ವಾಲಿಯಾರ್ 4

7. ಇಂದೋರ್ 1

8. ಜಯ್ಪುರ್ 3

9. ಜೋಧ್ಪುರ್ 2

10. ಕೊಲ್ಹಾಪುರ್ 1

11. ಕೋಟಾ 1

12 ಮಯೂರ್ಭಂಜ್ 1

13. ಮೈಸೂರು 7

14. ಪಟಿಯಾಲ 2

15 ರೇವಾ 2

16. ಟ್ರಾವಂಕೂರ್ 6

17. ಉದಯ್ಪುರ್ 2

18. ಸಿಕ್ಕಿಮ್ ಹಾಗೂ ಕೂಚ್ಬಿಹಾರ್ 1

19. ತ್ರಿಪುರ, ಮಣಿಪುರ ಹಾಗೂ ಖಾಸಿ ರಾಜ್ಯಗಳಿಂದ 1

20. ಯುಪಿ ರಾಜ್ಯಗಳ ಪಂಗಡ 1

21. ಪೂರ್ವ ರಜಪುತಾನಾ ರಾಜ್ಯಗಳ ಪಂಗಡ 3

22. ಕೇಂದ್ರ ಭಾರತ ರಾಜ್ಯಗಳ ಪಂಗಡ 3

23. ಪಶ್ಚಿಮ ರಾಜ್ಯಗಳ ಪಂಗಡ 4

24. ಗುಜರಾಥ್ ರಾಜ್ಯಗಳ ಪಂಗಡ 2

25. ಮದ್ರಾಸ್ ಹಾಗೂ ದಖ್ಖನ್ ರಾಜ್ಯಗಳ ಪಂಗಡ 2

26. ಪಂಜಾಬ್ ರಾಜ್ಯಗಳ ಪಂಗಡ 3

27. ಪೂರ್ವ ರಾಜ್ಯಗಳ ಪಂಗಡ -1 4

28. ಪೂರ್ವ ರಾಜ್ಯಗಳ ಪಂಗಡ - 2 3

29 ಇತರ ಬಿಡಿ ರಾಜ್ಯಗಳ ಪಂಗಡ 4

 ಒಟ್ಟು = 229 + 70 = 299

 

ಸಂವಿಧಾನ ಸಂರಚನಾ ಸಭೆಯ ಪ್ರಥಮ ಅಧಿವೇಶನದಲ್ಲಿ ಡಾ. ಸಚ್ಚಿದಾನಂದ ಸಿನ್ಹಾ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯ್ತು ನಂತರ ಬಾಬು ರಾಜೇಂದ್ರ ಪ್ರಸಾದ್ ಈ ಸಭೆಯ ಅಧ್ಯಕ್ಷರಾಗಿ ಆಯ್ಕೆಯಾದರು. ಬಂಗಾಲ ಪ್ರಾಂತ್ಯದ ಪ್ರತಿನಿಧಿ  ಹರೇನ್ ಕುಮಾರ್ ಮುಖರ್ಜಿ ಸಭೆಯ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಸಂವಿಧಾನ ಸಂರಚನಾ ಸಭೆಯ ಕಾರ್ಯಕಲಾಪಗಳನ್ನು ಸಲೀಸಾಗಿ ನಿರ್ವಹಿಸುವಂತೆ ಮಾಡಲು ಒಟ್ಟು 13 ಸಮಿತಿಗಳನ್ನು ರಚಿಸಲಾಗಿತ್ತು ಆ ಪೈಕಿ 8 ಮಹತ್ವದ ಸಮಿತಿಗಳಿದ್ದವು. ತೀರಾ ಮಹತ್ವದ ಸಂವಿಧಾನ ಕರಡು ಪ್ರತಿ ರಚನಾ ಸಮಿತಿಗೆ ಬಾಬಾಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಅಧ್ಯಕ್ಷರಾದರು. ಇವರನ್ನು ದೇಶದ ಪ್ರಥಮ ಕಾನೂನು ಸಚಿವರನ್ನಾಗಿಯೂ ನೇಮಿಸಲಾಗಿತ್ತು. ಬೆನಗಲ್ ನರಸಿಂಹ ರಾಯರು ಸಂವಿಧಾನ ಸಂರಚನಾ ¸ಭೆಯ ಕಾನೂನ್ ಸಲಹಾಗಾರರಾಗಿದ್ದರು. 

13 ಡಿಸೆಂಬರ್ 1946 ರಂದು ಜವಾಹರ್ಲಾಲ್ ನೆಹ್ರೂರವರು ಸಂವಿಧಾನ ಸಂರಚನಾ ಸಭೆಯಲ್ಲಿ ಉದ್ದಿಶ್ಯ ನಿರ್ಣಯವನ್ನು (ಒಬ್ಜೆಕ್ಟಿವ್ ರೆಜುಲೂಷನ್) ಮಂಡಿಸಿದರು. ಈ ನಿರ್ಣಯದಲ್ಲಿ ಅವರು ಭಾರತದ ಸಂವಿಧಾನದ ಗುರಿ ಮತ್ತು ಉದ್ದೇಶಗಳನ್ನು ಸ್ಪಷ್ಟಪಡಿಸುತ್ತಾರೆ. ‘ಸ್ವತಂತ್ರ ಭಾರತದ ಲಕ್ಷಾಂತರ ಹಸಿದವರಿಗೆ ಆಹಾರ, ವಸ್ತ್ರಹೀನರಿಗೆ ಬಟ್ಟೆ, ವಸತಿ ಹೀನರಿಗೆ ವಸತಿ ನೀಡುವ ಹಾಗೂ ಪ್ರತಿ ಭಾರತೀಯನಲ್ಲಿ ಅಡಗಿರುವ ಅಗಾಧ ಪ್ರತಿಭೆಯನುಸಾರ ಅವರೆಲ್ಲರ ಮತ್ತು ದೇಶದ ಒಟ್ಟಾರೆ ಪ್ರಗತಿಯನ್ನು ಸಾದಿಸುವ ಸಾದನವಾಗುವುದೇ ಭಾರತದ ಸಂವಿಧಾನದ ಪ್ರಥಮ ಲಕ್ಷ್ಯ ಆಗಬೇಕು’  ಎಂದು ಅವರು ಸ್ಪಷ್ಟಪಡಿಸುತ್ತಾರೆ. 

2 ವರ್ಷ 11 ತಿಂಗಳು 18 ದಿನಗಳ ನಿರÀಂತರ ಪರಿಶ್ರಮದ ಫಲವಾಗಿ ನಮ್ಮ ಸಂವಿಧಾನದ ಕರಡು ಸಿದ್ಧವಾಯ್ತು. ಆ ಕರಡಿನ ಮೇಲೆ ಸುಮಾರು 7560 ಕ್ಕೂ ಹೆಚ್ಚು ತಿದ್ದುಪಡಿಗಳು ಈ ಸಭೆಯಲ್ಲಿ ಮಂಡಿಸಲ್ಪಟ್ಟು ಈ ಪೈಕಿ ಸುಮಾರು 2500 ಕ್ಕೂ ಅಧಿಕ ತಿದ್ದುಪಡಿ ಪ್ರಸ್ತಾವಗಳು ಚರ್ಚೆಗೆ ಸ್ವೀಕರಿಸಲ್ಪಟ್ಟು ಚರ್ಚಿತವಾಗಿ ಕರಡನ್ನು ಅಗತ್ಯವಿದ್ದಲ್ಲಿ ಸುಧಾರಿಸಲಾಯ್ತು.  ಮಹಾತ್ಮ ಗಾಂಧೀಜಿಯವರು  ಈ ಸಭೆಯ ಸದಸ್ಯರಾಗಿರಲಿಲ್ಲವಾದರೂ ಅವರ ವಿಶೇಷ ಪ್ರಭಾವ ಈ ಸಭೆಯ ಮೇಲಿತ್ತು. ಹೆಚ್ಚಿನ ಸದಸ್ಯರು ಕಾಂಗ್ರಸ್ ಪಕ್ಷದವರಾಗಿದ್ದು ನಮ್ಮ ಸ್ವಾತಂತ್ರ್ಯ ಹೋರಾಟದ ಸಿದ್ಧಾಂತಗಳು ಕೂಡಾ ಈ ಸಭೆಯ ಮೇಲೆ ಪ್ರಭಾವ ಹಾಕಿದ್ದವು. ಡಾ. ಸಚ್ಚಿದಾನಂದ ಸಿನ್ಹಾ, ಬಾಬು ರಾಜೇಂದ್ರ ಪ್ರಸಾದ್, ಹರೇನ್ ಕುಮಾರ್ ಮುಖರ್ಜಿ, ಬಾಬಾಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್, ಜೆ ಬಿ. ಕೃಪಲಾನಿ, ಜವಹಾರ್ಲಾಲ್ ನೆಹ್ರೂ, ವಲ್ಲಬ್ಬಾಯ್ ಪಟೇಲ್, ಮೌಲಾನಾ ಅಬುಲ್ ಕಲಮ್ ಆಜಾದ್, ಕೆ. ಎಮ್ ಮುನ್ಶಿ, ಪಟ್ಟಾಭಿ ಸೀತರಾಮಯ್ಯ, ತಾರಾಚಂದ್, ಚಕ್ರವರ್ತಿ ರಾಜಗೋಪಾಲಾಚಾರಿ, ದುರ್ಗಾಬಾಯ್ ದೇಶ್ಮುಖ್, ರಫೀ ಅಹ್ಮದ್ ಕಿದ್ವಾಯ್, ಜಗಜೀವನ್ ರಾಮ್ ಇಂತಹ ಹಲವಾರು  ಶ್ರೇಷ್ಟ ಮಟ್ಟದ ಮಹಾನ್  ನಾಯಕರು ಹಾಗೂ ಪಂಡಿತರ ಸಾಮಥ್ರ್ಯ ಮತ್ತು ಶ್ರಮದ ಫಲವಾಗಿ ನಮ್ಮ ಸಂವಿಧಾನ ಸಿಧ್ಧವಾಯ್ತು. 26 ನವೆಂಬರ್ 1949 ರಂದು ಸಂವಿಧಾನ ಸಂರಚನಾ ಸಭೆ ಅದನ್ನು ಮಂಜೂರು ಮಾಡಿತು. ಆಗ ಸಂವಿಧಾನದ ಇಡೀ ಪ್ರತಿ 395 ವಿಧಿಗಳನ್ನು ಹೊಂದಿತ್ತು ಅವುಗಳನ್ನು 22 ಭಾಗಗಳಲ್ಲಿ ಹಂಚಿಕೆ ಮಾಡಲಾಗಿತ್ತು. ಹಾಗೂ ಅದು 8 ಅನುಸೂಚಿಗಳನ್ನು ಹೊಂದಿತ್ತು ಆ ಇಡಿ ದಾಖಲೆಯನ್ನು ಕೈ ಬರಹದಲ್ಲಿ ಪ್ರೇಮ್ ಬೆಹಾರಿ ನಾರಾಯಣ್ ರಾಯ್ಜ್ದಾ ಅವರು ಬರೆದರು ಆ ಪುಸ್ತಿಕೆಗೆ ಅಗತ್ಯ ಸೂಕ್ತ ಚಿತ್ರಗಳನ್ನು ನಂದಾಲಾಲ್ ಬೋಸರು ಬಿಡಿಸಿದರು. 24 ಹಾಗೂ 25  ಜನವರಿ 1950 ರಂದು ಸಂವಿಧಾನ ಸಂರಚನಾ ಸಭೆಯ ಸರ್ವ ಸದಸ್ಯರು ಆ ದಾಖಲೆಗೆ ಸಹಿ ಹಾಕಿದರು 26 ಜನವರಿ 1950 ರಿಂದ ಭಾರತ ಗಣತಂತ್ರದ ಸಂವಿಧಾನ ಕಾರ್ಯಾರುಪಕ್ಕೆ ಬಂದಿತು. 

ಸಂವಿಧಾನ ಸಂರಚನಾ ಸಭೆಯ ಅಧಿವೇಶನಗಳು

ಪ್ರಥಮ ಅಧಿವೇಶನ   9-23 ಡಿಸೆಂಬರ್ 1946,  -         

ಎರಡನೇ ಅಧಿವೇಶನ  20- 25 ಜನವರಿ 1947 - 

ಮೂರನೇ ಅಧಿವೇಶನ 28 ಎಪ್ರಿಲ್ – 2 ಮೇ 1947,            

ನಾಲ್ಕನೇ ಅಧಿವೇಶನ  14-31 ಜುಲಾಯ್ 1947- 

ಐದನೇ ಅಧಿವೇಶನ    14-30 ಅಗೋಸ್ತ್ 1947               

 ಆರನೇ ಅಧಿವೇಶನ    27 ಜನವರಿ 1948- 

ಏಳನೇ  ಅಧಿವೇಶನ   4 ನವೆಂಬರ್ 1948-8 ಜನವರಿ 1949     

ಎಂಟನೇ ಅಧಿವೇಶನ  16 ಮೇ – 16 ಜೂನ್ 1949

ಒಂಬತ್ತನೇ ಅಧಿವೇಶನ 30 ಜುಲಾಯ್ – 18 ಸಪ್ತೆಂಬರ್ 1949     

ಹತ್ತನೇ ಅಧಿವೇಶನ   6-17 ಅಕ್ತೋಬರ್ 1949- 

ಹನ್ನೊಂದನೇ ಅಧಿವೇಶನ 14-26 ನವೆಂಬರ್ 1949     

ಸಂವಿಧಾನ ಸಂಸ್ಥಾಪನೆಯ ಸಂಭ್ರಮದ ಅಂತಿಮ ಬೈಠಕ್ 26 ಜನವರಿ 1950

26 ಜನವರಿ ಯಾಕೆ ? ಅಗೋಸ್ತ್ 15 ನಮ್ಮ ಸ್ವಾತಂತ್ರ್ಯದ ದಿನ ನಿಜ ಆದರೆ ಆ ದಿನವನ್ನು ಬ್ರಿಟೀಷರು ಆಯ್ಕೆ ಮಾಡಿದಂತಹದು. 1929-30 ಲಾಹೋರ್ ಕಾಂಗ್ರೆಸ್ ಅಧಿವೇಶನದಲ್ಲಿ ಡಿಸೆಂಬರ್ 31 1929 ಮಧ್ಯರಾತ್ರಿ ಕಾಂಗ್ರಸ್ ಅಧ್ಯಕ್ಷರಾದ ಜವಾಹರ್ಲಾಲ್ ನೆಹ್ರೂ ಪೂರ್ಣ್ ಸ್ವರಾಜ್ಯ್ ಘೋµಣೆ ಮಾಡುತ್ತಾರೆ ಹಾಗೂ ಮುಂದಿನ ಪ್ರತಿ ವರ್ಷ ಜನವರಿ 26 ಭಾರತದ ಸ್ವಾತಂತ್ರ್ಯ ದಿನ ಆಚರಿಸಲು ಕರೆ ನೀಡುತ್ತಾರೆ. 1947 ರ ತನಕ ಕಾಂಗ್ರೆಸ್ ಆ ದಿನವನ್ನು ಭಾರತದ ಸ್ವಾತಂತ್ರ್ಯಾಚರಣೆ 26 ಜನವರಿಯಂದು ನಡೆದಿರುತ್ತದೆ ಆ ನೆನಪಿಗೆ ನಮ್ಮ ಗಣತಂತ್ರದ ಉದ್ಘಾಟನೆ 26 ಜನವರಿಯಂದು ಮಾಡಲಾಯ್ತು.

ಬಾಬಾಸಾಹೇಬ್ ಬಿ. ಆರ್. ಅಂಬೇಡ್ಕರ್ ಒಬ್ಬರೇ ಸಂವಿಧಾನದ ಕರಡು ಪ್ರತಿಯ ತಯಾರಕರಲ್ಲ ಎಂಬ ವಾದ ಇತ್ತೀಚಿನ ದಿನಗಳಲ್ಲಿ ಕೇಳಿ ಬರುತ್ತದೆ. ನಿಜ ಬಾಬಾಸಾಹೇಬರು ಸಂವಿಧಾನ ಕರಡು ಸಮತಿಯ ಅಧ್ಯಕ್ಷರು ಹಾಗೂ ಕರಡು ಸಮಿತಿಯೊಂದು ಇತ್ತು ನಿಜ. ಆದರೆ ಟಿ.ಟಿ. ಕೃಷ್ಣಮಾಚಾರಿಯವರು ಸಂವಿಧಾನ ಸಂರಚನಾ ಸಭೆಯಲ್ಲಿ ಆಡಿದ ಮಾತುಗಳು ಸತ್ಯಾಂಶವನ್ನು ತೆರೆದಿಡುತ್ತದೆ. 

‘ಮಾನ್ಯ ಅಧ್ಯಕ್ಷರೇ, ಈ ಸಭೆಯಲ್ಲಿ ಡಾ. ಅಂಬೇಡ್ಕರರ ಮಾತುಗಳನ್ನು ಗಮನವಿಟ್ಟು ಆಲಿಸಿದವರಲ್ಲಿ ನಾನೂ ಒಬ್ಬ, ಈ ಸಂವಿಧಾನದ ಕರಡು ರಚಿಸುವಲ್ಲಿ ಅವರು ಹಾಕಿರುವ ಶ್ರಮ ಮತ್ತು ಹೊಂದಿರುವ ಆಸಕ್ತಿಯ ಕುರಿತು ನಾನು ತಿಳಿದಿದ್ದೇನೆ. ಈ ಸದನಕ್ಕೂ ತಿಳಿದಿರುವಂತೆ ನೀವು ಏಳು ಸದಸ್ಯರನ್ನು ನಾಮಕರಣ ಮಾಡಿದ್ದಿರಿ. ಒಬ್ಬರು ನಿಧನ ಹೊಂದಿದರು ಹಾಗೂ ಅವರ ಬದಲಿಗೆ ನೇಮಕಾತಿ ಮಾಡಿಲ್ಲ. ಒಬ್ಬರು ಅಮೇರಿಕೆಯಲ್ಲಿದ್ದರು ಅವರ ಸ್ಥಾನವೂ ಖಾಲಿಯಾಗಿತ್ತು, ಇನ್ನೊಬ್ಬರು ರಾಜ್ಯಾಡಳಿತದ ವ್ಯವಹಾರದಲ್ಲಿ ವ್ಯಸ್ಥರಾಗಿದ್ದರು. ಒಂದಿಬ್ಬರು ಆರೋಗ್ಯದ ಕಾರಣದಿಂದ ದೆಹಲಿಯಿಂದ ದೂರ ಇದ್ದರು. ಆದುದರಿಂದ ಈ ಸಂವಿಧಾನದ ಕರಡು ರಚಿಸುವ ಸಂಪೂರ್ಣ ಜವಾಬ್ಧಾರಿ ಅಂಬೇಡ್ಕರ್ ಅವರ ಮೇಲೆ ಬಿತ್ತು ಮತ್ತು ನಿಸ್ಸಂಶಯವಾಗಿ ಸ್ತುತ್ಯಾರ್ಹ ರೀತಿಯಲ್ಲಿ ಈ ಜವಾಬ್ಧಾರಿಯನ್ನು ನಿಭಾಯಿಸಿದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ.

 

ಭಾರತೀಯ ಸಂವಿಧಾನದ  ಆಕರಗಳು

ಭಾರತೀಯ ಸಂವಿಧಾನದ ಇತಿಹಾಸವನ್ನು ನೋಡಿದರೆ ಬ್ರಿಟೀಷರ ವಿರುದ್ಧ ಹೋರಾಡುತ್ತಾ ನಮ್ಮ ಸ್ವಾತಂತ್ರ್ಯ ಸಂಪಾದಿಸುವ ಸಂದರ್ಭದಲ್ಲಿ ನಾವು ಲಿಖಿತ ಸಂವಿಧಾನವೊಂದನ್ನು ಪಡೆದೆವು ಎನ್ನುವಂತೆ ನಮಗೆ ಭಾಸವಾಗುತ್ತದೆ  ಒಂದು ವ್ಯವಸ್ಥಿತ ರೀತಿಯ ಸಂವಿಧಾನ ನಮಗೆ ಸಂವಿಧಾನ ಸಂರಚನಾ ಸಭೆಯ ಫಲವಾಗಿ ದೊರೆತದ್ದು ನಿಜವಾದರೂ ಭಾರತೀಯರಲ್ಲಿ ಸಂವಿಧಾನತ್ಮಕತೆಯು ಅನಾದಿ ಕಾಲದಿಂದಲೂ ಬೆಳೆದು ಬಂದಿದೆ ಎಂದರೆ ತಪ್ಪಾಗಲಾರದು. ಪ್ರಾಚೀನ ಕಾಲದಲ್ಲಿ ಅರ್ಥಶಾಸ್ತ್ರ, ಮಿತಾಕ್ಷರ ಸಂಹಿತಾ, ದಾಯಭಾಗ ಮುಂತಾದ ಕೃತಿಗಳು ಭಾರತೀಯರ ಸಾಂವಿಧಾನಿಕ ಮನೋಗತಿಯ ಪರಿಚಯ ನೀಡುತ್ತವೆ. ಮಧ್ಯಯುಗದಲ್ಲಿ ಇಸ್ಲಾಮಿಕ್ ರಾಜ್ಯಭಾರಗಳ ಸಂಸ್ಥಾಪನೆಯಾದಂತೆ ಶರೀಯತ್ತಿನ ಮುಂದೆ ಸರ್ವರೂ ಸಮಾನರು ಎಂಬ ಕಲ್ಪನೆ ಬೆಳೆದು ಬಂತು ಇದರಿಂದಾಗಿ ಆಡಳಿತಾತ್ಮಕ ಸಮಾನತೆಯ ಪರಿಸ್ಥಿತಿ ರೂಪುಗೊಂಡಿತು. ರಾಜತ್ವಕ್ಕೆ ಸಂಬಂಧಿಗಳಿಲ್ಲ ಎನ್ನುವ ಚಿಂತನೆ ಇಸ್ಲಾಮಿಕ್ ರಾಜರಿಂದ ಹಬ್ಬಲ್ಪಟ್ಟಿತು. ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪೆನಿಯ ಆಡಳಿತವು ಹಬ್ಬಿದ ಹಾಗೆ ಬ್ರಿಟೀಷ್ ಆಡಳಿತಾತ್ಮಕ ಕಾನೂನು ಮತ್ತು ಸಾಂವಿಧಾನಿಕ ಸಂರಚನೆಗಳು ಭಾರತದಲ್ಲಿಯೂ ಪಸರಿಸತೊಡಗಿದವು. 

ಭಾರತೀಯ ಸಂವಿಧಾನದ ಸಂರಚನೆಯಲ್ಲಿ ಆಕರಗಳಂತೆ ಬಳಕೆಯಾದ ಬ್ರಿಟೀಷ್ ಇಂಡಿಯಾದ ಕಾಯ್ದೆಗಳು

1772-1857 ರ ತನಕ (ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿಯ ಆಡಳಿತದ ಅಡಿಯಲ್ಲಿ

1. 1772-73 ರ  ರೆಗ್ಯುಲೇಟಿಂಗ್ ಕಾಯ್ದೆ,

2.1781 ರ ತಿದ್ದುಪಡಿ ಕಾಯ್ದೆ 

3. 1784 ರ ಪಿಟ್ಟನ ಇಂಡಿಯಾ ಕಾಯ್ದೆ

4.ಚಾರ್ಟರ್ ಕಾಯ್ದೆಗಳು 1793, 1813, 1833, 1853, 1854 ರ ಭಾರತ ಕಾಯ್ದೆ

1858 – 1947 ರ ತನಕ (ಬ್ರಿಟೀಷ್ ಸರ್ಕಾರದ ಆಡಳಿತದ ಅಡಿಯಲ್ಲಿ

5. ಮಹಾರಾಣಿಯ ಸನ್ನದ್ದು – ಅಥವಾ 1858 ರ ಭಾರತ ಸರ್ಕಾರ ಕಾಯ್ದೆ

6. ಭಾರತೀಯ ಪರಿಷತ್ತುಗಳ ಕಾಯ್ದೆಗಳು (ಇಂಡಿಯನ್ ಕೌನ್ಸಿಲ್ಸ್ ಎಕ್ಟ್) 1861 ಹಾಗೂ 1892

7.1909 ರ ಭಾರತ ಸರ್ಕಾರ ಕಾಯ್ದೆ (ಮಾರ್ಲೆ ಮಿಂಟೊ ಸುಧಾರಣೆಗಳು),

8.1919 ರ ಭಾರತ ಸರ್ಕಾರ ಕಾಯ್ದೆ (ಮೊಂತುಗು ಚೆಮ್ಸ್ಫರ್ಡ್ ಸುಧಾರಣೆ) 

9. 1935 ರ ಭಾರತ ಸರ್ಕಾರ ಕಾಯ್ದೆ

10. ಭಾರತದ ಸ್ವಾತಂತ್ರ್ಯ ಕಾಯ್ದೆ 1947 (ಇಂಡಿಯನ್ ಇಂಡಿಪೆಂಡೆನ್ಸ್ ಎಕ್ಟ್) 

ಬಾಬಾಸಾಹೇಬ್ ಬಿ. ಆರ್. ಅಂಬೇಡ್ಕರ್ ಅವರಿಗೆ ಅಪಾರ ಜ್ಞಾನದಾಹವಿತ್ತು ಮಾತ್ರವಲ್ಲ ತನ್ನ ಎಲ್ಲಾ ಕೆಲಸಗಳು ಉತ್ಕ್ರಷ್ಟವಾದದ್ದಾಗಿರಬೇಕು ಎಂಬ ಗಾಂಧೀಜಿಯವರ ಚಿಂತನೆಯಿಂದ ಅವರು ಪ್ರೇರೇಪಿತರಾಗಿದ್ದರು. ಆದುದರಿಂದ ಆ ತನಕ ಭಾರತದಲ್ಲಿ ಬೆಳೆದು ಬಂದಿದ್ದ ಎಲ್ಲಾ ಕಾನೂನುಗಳನ್ನು ಮಾತ್ರವಲ್ಲದೆ ವಿಶ್ವದ ಸುಮಾರು 60 ಸಂವಿಧಾನಗಳ ಆಳವಾದ ಮತ್ತು ತುಲನಾತ್ಮಕವಾದ ಅಧ್ಯಯನವನ್ನು ಮಾಡಿ ಭಾರತದ ಸಂವಿಧಾನದ ಕರಡನ್ನು ಅವರು ರಚಿಸಿದರು.

1935 ರ ಭಾರತ ಸರ್ಕಾರ ಕಾಯ್ದೆಯನ್ನು ನಮ್ಮ ಸಂವಿಧಾನದ ಬಹುಮುಖ್ಯ ಆಕರ ಎಂದು ತಜ್ಞರು ವಾದಿಸುತ್ತಾರೆ. ಸ್ವತಃ ಅಂಬೇಡ್ಕರ್ ಅವರು ಕೂಡಾ ಈ ಕಾಯ್ದೆಯ ಹೆಚ್ಚಿನ ಅಂಶಗಳ ಪ್ರಭಾವವು ಭಾರತದ ಸಂವಿಧಾನದ ಮೇಲೆ ಆಗಿದೆ ಎನ್ನುವ ಸತ್ಯಾಂಶವನ್ನು ಜಾಹೀರು ಪಡಿಸಿದ್ದಾರೆ. ನಮ್ಮ ಸಂವಿಧಾನದಲ್ಲಿರುವ ಭಾರತದ ಒಕ್ಕೂಟ ವ್ಯವಸ್ಥೆ, ರಾಜ್ಯಪಾಲರ ಹುದ್ದೆ, ನ್ಯಾಯಾಡಳಿತ ವ್ಯವಸ್ಥೆ, ಲೋಕಸೇವಾ ಆಯೋಗಗಳ ವ್ಯವಸ್ಥೆ, ತುರ್ತು ಪರಿಸ್ಥಿತಿಯ ಕುರಿತಾದ ವಿಧಿಗಳು ಆಡಳಿತಾತ್ಮಕ ಸಂರಚನೆ ಮುಂತಾದವುಗಳನ್ನು ಸಂರಚಿಸುವಲ್ಲಿ 1935 ರ ಭಾರತ ಸರ್ಕಾರ ಕಾಯ್ದೆಯ ಪ್ರಭಾವಗಳು ಅಪಾರವಾಗಿವೆ.

ಆಸ್ಟ್ರೇಲಿಯಾದ ಸಂವಿಧಾನದ ಪ್ರಭಾವದಿಂದ ನಾವು ಅನುವರ್ತಿ ಪಟ್ಟಿಯ ಚಿಂತನೆ, ವ್ಯಾಪಾರ ವ್ಯವಹಾರ ಮತ್ತು ಕೊಡುಕೊಳ್ಳುವಿಕೆಯ ಸ್ವಾತಂತ್ರ್ಯ, ಸಂಸತ್ತಿನ (ಕೇಂದ್ರ ಶಾಸಕಾಂಗದ) ಜಂಟಿ ಅಧಿವೇಶನಗಳ ಪರಿಕಲ್ಪನೆ ಮುಂತಾದವುಗಳನ್ನು ನಮ್ಮ ಸಂವಿಧಾನದಲ್ಲಿ ಸೇರಿಸಿಕೊಂಡಿದ್ದೇವೆ.  ಐರ್ಲ್ಯಾಂಡಿನ ಸಂವಿಧಾನದಿಂದ ನಾವು ರಾಜ್ಯಾಡಳಿತದ ನಿರ್ದೇಶಕ ಸೂತ್ರಗಳನ್ನು, ರಾಜ್ಯಸಭೆಗೆ ಸದಸ್ಯರನ್ನು ನಾಮಕರಣ  ಮಾಡುವ ಪದ್ಧತಿಯನ್ನು ಹಾಗೂ ರಾಷ್ಟ್ರಾಧ್ಯಕ್ಷರ ಪರೋಕ್ಷ ಮತದಾನದ ಪದ್ದತಿಯನ್ನು ಎರವಲು ಪಡೆದುಕೊಂಡಿದ್ದೇವೆ. 

ಕೆನಡಾದ ಸಂವಿಧಾನದಿಂದ ಬಲಿಷ್ಟ ಕೇಂದ್ರವುಳ್ಳ ಒಕ್ಕೂಟದ ವ್ಯವಸ್ಥೆಯನ್ನು, ಕೇಂದ್ರ ಸಕಾರಕ್ಕೆ ಇರುವ ಆಧೀಕ್ಯ ಶೇಷ (ಹೆಚ್ಚುವರಿ) ಅಧಿಕಾರ ವ್ಯಾಪ್ತಿಯ ಕಲ್ಪನೆಯನ್ನು ಕೇಂದ್ರ ಸರ್ಕಾರವು ರಾಜ್ಯಗಳ ರಾಜ್ಯಪಾಲರನ್ನು ನೇಮಿಸುವ ವಿಷಯವನ್ನು ಸರ್ವೋಚ್ಛ ನ್ಯಾಯಾಲಯದ ಸಲಹಾತ್ಮಕ ನ್ಯಾಯಾಡಳಿತ ವ್ಯಾಪ್ತಿಯನ್ನು ನಾವು ಅಳವಡಿಸಿಕೊಂಡಿದ್ದೇವೆ. ಭಾರತದ ಸಂವಿಧಾನದ ತಿದ್ದುಪಡಿಯ ವ್ಯವಸ್ಥೆಯು ವಿಶಿಷ್ಟವಾಗಿದ್ದು ಅದು ದಕ್ಷಿಣ ಆಫ್ರಿಕಾದ ಸಂವಿಧಾನದ ಬಳವಳಿಯಾಗಿದೆ, ಅದೇ ಸಂವಿಧಾನದಿಂದ ರಾಜ್ಯಸಭೆಗೆ ಸದಸ್ಯರನ್ನು ಆಯ್ಕೆ ಮಾಡುವ ಪದ್ಧತಿಯನ್ನು ಕೂಡಾ ನಾವು ಸ್ವೀಕರಿಸದ್ದೇವೆ.

ಜಪಾನಿನ ಸಂವಿಧಾನದಿಂದ ನಮ್ಮ ಸಂವಿಧಾನದಲ್ಲಿ ನ್ಯಾಯಾಡಳಿತ ಪ್ರಕ್ರಿಯೆಯ ಚಿಂತನೆ ಬಂದಿದೆಯಾದರೆ ಸೋವಿಯಟ್ ರಷ್ಯಾದ (ಈಗಿನ ರಷ್ಯಾ) ದ ಸಂವಿಧಾನದಿಂದ ಮೂಲಭೂತ ಕರ್ತವ್ಯಗಳ ಚಿಂತನೆ ಹಾಗೂ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯದ ಪರಿಕಲ್ಪನೆ ಬಂದು ಸೇರಿದೆ. ಜರ್ಮನಿಯ ವೀಮ್ಹರ್ ಗಣತಂತ್ರದ ಸಂವಿಧಾನದಿಂದ ತುರ್ತು ಪರಿಸ್ಥಿತಿಯ ಕಾಲದಲ್ಲಿ ಮೂಲಭೂತ ಹಕ್ಕುಗಳ ಅಮಾನತ್ತಿನ ಚಿಂತನೆಯನ್ನು ನಾವು ಪಡೆದಿದ್ದೇವೆ. ಫ್ರೆಂಚರ ಸಂವಿಧಾನದ ಮೂಲಕ ಗಣತಂತ್ರದ ಪರಿಕಲ್ಪನೆಯನ್ನು ಮತ್ತು ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವದ ಕಲ್ಪನೆಗಳನ್ನು ನಾವು ರೂಡಿಸಿಕೊಂಡಿದ್ದೇವೆ.

ಅದಾಗ್ಯೂ ನಮ್ಮ ಸಂವಿಧಾನದ ಹೆಚ್ಚಿನ ಅಂಶಗಳು ಇಂಗ್ಲೀಷ್ ಸಂವಿಧಾನದ ಮತ್ತು ಅಮೇರಿಕಾ ಸಂಯುಕ್ತ ಸಂಸ್ಥಾನದ ಸಂವಿಧಾನದಿಂದ ಪ್ರಭಾವಿತವಾಗಿವೆ. ಉಮಾಯ್ಟೆಡ್ ಕಿಂಗ್ಡಮ್ (ಇಂಗ್ಲೀಷ್) ಸಂವಿಧಾನದಿಂದ ಪಾರ್ಲಿಮೆಂಟರಿ ಸಕಾರದ ವ್ಯವಸ್ಥೆ, ಕಾನೂನಿನ ಆಡಳಿತದ ವ್ಯವಸ್ಥೆ, ಶಾಸಕೀಯ ಪ್ರಕ್ರಿಯೆ, ಏಕ ನಾಗರೀಕತ್ವದ ಕಲ್ಪನೆ, ಕ್ಯಾಬಿನೆಟ್ ಸರ್ಕಾರದ ವ್ಯವಸ್ಥೆ, ಅಭಿರಕ್ಷಾ ರಿಟ್ಗಳು, ಸಂಸದೀಯ ವಿಶೇಷಾಧಿಕಾರಗಳು ಮತ್ತು ಶಾಸಕಾಂಗಗಳ ದ್ವಿಸದನ ಪದ್ದತಿಯನ್ನು ನಾವು ಬಳವಳಿಯಾಗಿ ಪಡೆದಿದ್ದೇವೆ.  ಅಮೇರಿಕೆಯ ಸಂಯುಕ್ತ ಸಂಸ್ಥಾನದಿಂದ ಮೂಲಭೂತ ಹಕ್ಕುಗಳ ಕಲ್ಪನೆ, ನ್ಯಾಯಾಂಗದ ಸ್ವಾತಂತ್ರ್ಯ, ನ್ಯಾಯಿಕ ಪರಾಮರ್ಶೆ, ರಾಷ್ಟ್ರಾಧ್ಯಕ್ಷರ ಮಹಾಅಭಿಯೋಗ, ಉಪ ರಾಷ್ಟ್ರಾಧ್ಯಕ್ಷರ ಹುದ್ದೆ, ಸರ್ವೋಚ್ಛ ನ್ಯಾಯಾಲದ ಮತ್ತು ಉಚ್ಛನ್ಯಾಯಾಲಯಗಳ ನ್ಯಾಯಾಧೀಶರನ್ನು ಅವರ ಹುದ್ದೆಗಳಿಂದ ತೆಗೆದು ಹಾಕುವ ವ್ಯವಸ್ಥೆ ಮುಂತಾದವನ್ನು ನಾವು ತೆಗೆದುಕೊಂಡಿದ್ದೇವೆ.

ನಮ್ಮ ಸಂವಿಧಾನವನ್ನು ಹಲವು ಕಾನೂನುಗಳು ಮತ್ತು ಸಂವಿಧಾನಗಳ ನೆಲೆಗಟ್ಟಿನ ಮೇಲೆ ರೂಪಿಸಿರುವುದು ನಿಜವಾದರೂ ಅದು ಎಲ್ಲಾ ವಿವಿಧ ಅಂಶಗಳನ್ನು ರಾಶಿ ಹಾಕಿಕೊಂಡಿರುವ ಸಂಗ್ರಹ ಚೀಲದಂತಲ್ಲ ಹೊರತಾಗಿ ಅದು ತನ್ನದೇ ವಿಶಿಷ್ಟತೆ ಮತ್ತು ವಿಶೇಷ ಗುಣಲಕ್ಷಣಗಳನ್ನು ಹೊಂದಿಕೊಂಡಿದೆ.

ಯಾಕೆಂದರೆ  

1. ಬೇರೆ ಬೇರೆ ಕಾನೂನುಗಳನ್ನು ಮತ್ತು ಸಂವಿಧಾನಗಳನ್ನು ತಿಳಿದುಕೊಂಡು ಅವುಗಳಿಂದ ಸ್ವೀಕರಿಸಿರುವ ಭಾಗಗಳನ್ನು ಭಾರತದ ವಿಶಿಷ್ಟ ಚಾರಿತ್ರಿಕ ಮತ್ತು ಸಾಂಸ್ಕøತಿಕ ಹಿನ್ನಲೆಗೆ ಸರಿಯಾಗಿ ಅಳವಡಿಸಿಕೊಳ್ಳಲಾಗಿದೆ. ಯಾವ ಅಂಶಗಳನ್ನು ರೂಪಾಂತರಗೊಳಿಸಲಾಗಿದೆಯೋ ಅವುಗಳು ನಮ್ಮ ಅಗತ್ಯಕ್ಕೆ ತಕ್ಕಂತೆ ಮಾರ್ಪಾಡುಗೊಳ್ಳುವಲ್ಲಿ ಯಾವುದೇ ಜಟಿಲತೆ ಉಂಟಾಗದಂತೆ ಅವುಗಳ ಸ್ವರೂಪ ಬದಲಾವಣೆ ಮಾಡಲಾಗಿದೆ.

2. ಭಾರತದ ಸಂವಿಧಾನದ ಸಾರ ಮತ್ತು ವಿವರಗಳು ವಿಶೀಷ್ವಾಗಿ ಉಳಿಯುವಂತೆ ಕ್ರಮ ಕೈಗೊಳ್ಳಲಾಗಿದೆ.

3. ಭಾರತದ ಅನಕ್ಷರಸ್ಥ ಜನಸಂಖ್ಯೆಯನ್ನು ಗಮನದಲ್ಲಿಟ್ಟು ಅದನ್ನು ವಿಶ್ವದ ವಿಸ್ತ್ರತ ಸಂವಿಧಾನವನ್ನಾಗಿ ರೂಪಿಸಲು ಎಲ್ಲಾ ಕ್ರಮ ಕೈಗೊಳ್ಳಲಾಗಿದೆ.

4. ಭಾರತದ ವಿವಿಧತೆಯನ್ನು ಮತ್ತು ಸಾಂಸ್ಕøತಿಕ ಬಹುತ್ವವನ್ನು ಗಮನದಲ್ಲಿಟ್ಟು ಎಲ್ಲಾ ವರ್ಗದವರ ಹಿತಾಸಕ್ತಿಯನ್ನು ಸಮಾನವಾಗಿ ಕಾಯುವ ಸಂವಿಧಾನವನ್ನಾಗಿ ಅದನ್ನು ರೂಪಿಸಲಾಗಿದೆ.

5. ಅಧಿಕಾರಸ್ಥರ ಕೈಯಲ್ಲಿ ದಮನಕ್ಕೆ ಒಳಗಾದ ದಲಿತರ, ಹಿಂದುಳಿದ ವರ್ಗದವರ ಹಿತಾಸಕ್ತಿಯನ್ನು ಕಾಯುವ ದಾಖಲೆಯಾಗಿ ಇದು ಸಂರಚಿಸಲ್ಪಟ್ಟಿದೆ.

6. ಭಾರತೀಯ ರಾಷ್ಟ್ರೀಯ ಸಂಘರ್ಷದ ಉದಾತ್ತ ಮೌಲ್ಯಗಳು, ರಾಷ್ಟ್ರಪಿತನ ಕನಸಿನ ಭಾರತದ ಕಲ್ಪನೆ ಹಾಗೂ ಸಮಾಜವಾದಿ ಮೌಲ್ಯಗಳ ನೆಲೆಗಟ್ಟಿನ ಮೇಲೆ ಈ ಸಂವಿಧಾನ ರೂಪುಗೊಂಡಿದೆ.

ಈ ಎಲ್ಲಾ ಕಾರಣಗಳಿಂದ ನಮ್ಮ ಸಂವಿಧಾನ ಬರೇ ಬೇರೆ ಬೇರೆ ಸಂವಿಧಾನಗಳ ಹಾಗೂ ಕಾನೂನುಗಳ ಸಮ್ಮಿಶ್ರಣ ಎನ್ನುವುದು ಸರಿಯಾಗಲಿಕ್ಕಿಲ್ಲ ಹೊರತಾಗಿ ಅದು ನಮ್ಮ ದೇಶಕ್ಕಾಗಿ ಸಂರಚಿತವಾದ ವಿಶಿಷ್ಟ ಮತ್ತು ವಿಶೇಷ ಸಂವಿಧಾನ ಎನ್ನಬಹುದಾಗಿದೆ.

ನಿರಂತರ ಉಚಿತ ವ್ರತ್ತಿ ಮಾರ್ಗಗದರ್ಶನಕ್ಕಾಗಿ ಸಂಪರ್ಕಿಸಿರಿ - 9480761017