ಧನಾತ್ಮಕ ಚಿಂತನೆ -ಬದುಕು ದರ್ಶನ

Thumbnail

ಧನಾತ್ಮಕ ಚಿಂತನೆ
ಸ್ಟೀವನ್ ಕ್ವಾಡ್ರಸ್ ಪೆರ್ಮುದೆ, 9480761017
ಹಳೆಯ ಕಥೆಯೊಂದು ನಮ್ಮ ನಡುವೆ ಪ್ರಚಲಿತದಲ್ಲಿದೆ. ಒಬ್ಬ ಪ್ರೊಫೆಸರರು ಸುಂದರವಾದ ಬಿಳಿ ಹಾಳೆಯೊಂದರ ಮೇಲೆ ಕಪ್ಪು ಚುಕ್ಕೆಯೊಂದನ್ನು ಬಿಡಿಸಿ ಈಗ ಈ ಹಾಳೆಯ ಕುರಿತು ಪ್ರಬಂಧವೊಂದನ್ನು ಬರೆಯಿರಿ ಎಂದು ವಿದ್ಯಾರ್ಥಿಗಳಿಗೆ ಸೂಚಿಸಿದರಂತೆ. ತರಗತಿಯ ಎಲ್ಲಾ ವಿದ್ಯಾರ್ಥಿಗಳು ಆ ಬಿಳಿ ಹಾಳೆಯ ಮೇಲಿನ ಕಪ್ಪು ಚುಕ್ಕೆಯ ಕುರಿತು ವಿಸ್ತೃತ ಪ್ರಬಂಧ ಬರೆದರಂತೆ. ಯಾರೊಬ್ಬರು ಆ ಸುಂದರ ಬಿಳಿ ಹಾಳೆಯ ಕುರಿತು ಅದರ ಸೊಬಗಿನ, ವಿಶಾಲತೆಯ ಕುರಿತು ತಲೆ ಕೆಡಿಸಿಕೊಳ್ಳಲೇ ಇಲ್ಲ. 
ಮನಃಶಾಸ್ತ್ರಜ್ಞರು ವ್ಯಕ್ತಿಗಳಲ್ಲಿ ಮೂರು ರೀತಿಯ ಪ್ರವೃತ್ತಿಯನ್ನು ಕಾಣುತ್ತಾರೆ ಮೊದಲನೆಯದಾಗಿ ಎಲ್ಲರಲ್ಲೂ ಎಲ್ಲದರಲ್ಲೂ ಒಳ್ಳೆಯದನ್ನು ಕಾಣುವ ಧನಾತ್ಮಕ ಚಿಂತನೆಯವರು, ಎರಡನೆಯದಾಗಿ ಎಲ್ಲರಲ್ಲೂ ಎಲ್ಲದರಲ್ಲೂ ಕೆಟ್ಟದನ್ನು ಕಾಣುವ ಋಣಾತ್ಮಕ ಚಿಂತನೆಯವರು ಹಾಗೂ ಮೂರನೆಯದಾಗಿ ಸರಿ ತಪ್ಪನ್ನು ಹೊಂದಿಸಿಕೊಂಡು ನೋಡುವ ಸಮದೃಷ್ಟಿಯವರು ಆದರೆ ಈ ಮೂರು ವರ್ಗದ ಪೈಕಿ ಎಲ್ಲದರಲ್ಲೂ ಒಳ್ಳೆಯದನ್ನು ಕಾಣುವ ಧನಾತ್ಮಕ ಚಿಂತನೆಯವರು ಸಮಾಜಕ್ಕೆ ತೀರಾ ಮಹತ್ವದವರೆನ್ನಬಹುದು ಯಾಕೆಂದರೆ ಅವರಿಂದ ಸ್ವಂತದ ಆರೋಗ್ಯ ಒಳ್ಳೆಯದಾಗುತ್ತದೆ ಮಾತ್ರವಲ್ಲ ತನ್ನ ಪರಿಸರದ ಹಾಗೂ ಒಟ್ಟಾರೆ ಸಮಾಜದ ಆರೋಗ್ಯ ಉತ್ತಮಗೊಳ್ಳುತ್ತದೆ. 
ಒಂದು ಸುಂದರ ಕಾರ್ಯಕ್ರಮಕ್ಕೆ ನಾವು ಹೋಗುತ್ತೇವೆ. ಆ ಕಾರ್ಯಕ್ರಮದ ಆಯೋಜನೆಯಲ್ಲಿ ಸಂಘಟಕರು ಅಪಾರ ಶ್ರಮವಹಿಸಿ ಎಲ್ಲಾ ಕೆಲಸಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿರುತ್ತಾರೆ. ಯಾವುದೋ ಒಂದು ವಿಷಯದಲ್ಲಿ ಏನೋ ಒಂದು ಊನ ಆಯ್ತು ಎಂದಾದರೆ ನಾವೆಲ್ಲರೂ ಸಾಮಾನ್ಯವಾಗಿ ಆ ಒಂದು ಊನದ ಕುರಿತೇ ಚರ್ಚಿಸುತ್ತೇವೆ ಇಡೀ ಕಾರ್ಯಕ್ರಮವನ್ನು ಆ ಒಂದು ಕುಂದಿನ ನೆಲೆಯಿಂದ ಮೌಲ್ಯಮಾಪನ ಮಾಡುತ್ತೇವೆ. 
ಒಬ್ಬ ವ್ಯಕ್ತಿಯಲ್ಲಿ ಸಾವಿರ ಉತ್ತಮ ವಿಷಯಗಳಿದ್ದರೂ ನಮ್ಮ ಗಮನ ಹೋಗುವುದು ಆ ವ್ಯಕ್ತಿಯಲ್ಲಿರುವ ಒಂದು ಕೊರತೆಯ ಕುರಿತು. ಆ ಒಂದು ಕೆಡುಕನ್ನು ಹಿಡಿದು ಅವನ ವ್ಯಕ್ತಿತ್ವದ ಮೌಲ್ಯಮಾಪನ ಮಾಡುತ್ತೇವೆ. ನಮಗೇಕೆ ಬೇರೆಯವರ ಕುರಿತು ಒಳ್ಳೆಯದು ಕಾಣುವುದಿಲ್ಲ? ಬೇರೆ ವಸ್ತು ವಿಷಯಗಳ ಕುರಿತು ಒಳ್ಳೆಯದು ಕಾಣಬೇಕಾದರೆ ನಮ್ಮಲ್ಲಿ ಆ ಧನಾತ್ಮಕ ದೃಷ್ಟಿ ಮೂಡಿರಬೇಕಲ್ಲವೇ? ಅದಕ್ಕೆ ಪುರಕವಾದ ಮನೋಸ್ಥಿತಿ ನಮ್ಮ ವ್ಯಕ್ತಿತ್ವದಲ್ಲಿರಬೇಕಲ್ಲವೆ? 
ಇಬ್ಬರು ಏಕಕಾಲಕ್ಕೆ ಕಿಟಕಿಯಿಂದ ಹೊರ ನೋಡಿದರು ಒಬ್ಬನ ಗಮನ ನೇರವಾಗಿ ರಸ್ತೆಯ ಮೇಲಿದ್ದ ಕೆಸರು ಕೊಚ್ಚೆಯತ್ತ ಹೋಯ್ತು ಇನ್ನೊಬ್ಬನ ಗಮನ ಪಕ್ಕದಲ್ಲಿದ್ದ ಹೂವಿನ ಗಿಡದ ಮೇಲಿನ ಸುಂದರ ಹೂವಿನ ರಾಶಿಯ ಮೇಲೆ ಹರಿಯಿತು. ಈ ಗಮನ ಹರಿಯುವಿಕೆಯ ಹಿಂದಿರುವ ಆಯ್ಕೆಯ ಮನಸ್ಸು ಮತ್ತು ಮನೋಸ್ಥಿತಿ ಪ್ರಮುಖವಾದುದು. ನಾವು ಧನಾತ್ಮಕ ಚಿಂತನೆಯನ್ನು ಬೆಳೆಸಿಕೊಂಡಾಗ ಅನ್ಯರ ಕುರಿತು ಒಳ್ಳೆಯದನ್ನೇ ಕಾಣಲು ಸಾಧ್ಯವಾಗುತ್ತದೆ. ಅನ್ಯರ ಕುರಿತು ಒಳ್ಳೆಯ ಮಾತುಗಳನ್ನು ಹೇಳುತ್ತಾ ಒಳ್ಳೆಯ ಚಿಂತನೆ ಬೆಳೆಯುತ್ತದೆ. ಬೇರೆಯವರ ಕುರಿತು ಒಳ್ಳೆಯ ಚಿಂತನೆ ಸಾಧ್ಯವಾದಾಗ ನಮ್ಮ ಕರಿತು ಉತ್ತಮ ಚಿಂತನೆ ತನ್ನಿಂದ ತಾನಾಗಿ ಬೆಳೆದು ಬರುತ್ತದೆ. ಋಣಾತ್ಮಕ ಚಿಂತನೆ ನಮ್ಮಲ್ಲಿ ಪೂರ್ವಾಗ್ರಹ ಪೀಡಿತ ಮನಸ್ಸನ್ನು ನೆಳೆಸುತ್ತದೆ ಧನಾತ್ಮಕ ಚಿಂತನೆ ನಮ್ಮಲ್ಲಿ ಮನಸ್ಸಿನ ಹಾಗೂ ಹೃದಯದ ವೈಶಾಲ್ಯತೆಯನ್ನು ಬೆಳೆಸುತ್ತದೆ. 
ಧನಾತ್ಮಕ ಮನೋಸ್ಥಿತಿ ನಮ್ಮಲ್ಲಿ ಬೆಳೆಯದಿದ್ದಲ್ಲಿ ನಮ್ಮ ಮಾನಸಿಕ ಆರೋಗ್ಯವೇ ಕೆಡುತ್ತಾ ಹೋಗುತ್ತದೆ. ಅದರ ಪರಿಣಾಮವಾಗಿ ಅಂತಿಮವಾಗಿ ಬದುಕಿನ ವಿನಾಶವೇ ಉಂಟಾಗಬಹುದು. ಅದಕ್ಕಾಗಿ ನಾವು ನಿರ್ಧಿಷ್ಟತೆಯಿಂದ ಧನಾತ್ಮಕವಾಗಿ ಚಿಂತಿಸಲು ಹಾಗೂ ಧನಾತ್ಮಕವಾದ ಮಾತುಗಳನ್ನೇ ಬಳಸಲು ಪ್ರಯತ್ನಿಸಬೇಕು. ಕೆಲವೊಮ್ಮೆ ನಮ್ಮ ಸಂವಹನದಲ್ಲಿ ಧನಾತ್ಮಕ ಪ್ರತಿಕ್ರಿಯೆಗಳನ್ನು ನೀಡಲು ತುಂಬಾ ಕಷ್ಟವಾಗಬಹುದು ಆದರೂ, ಕೆಲವೊಮ್ಮೆ ಕೃತಕ ಎನ್ನುವಂತೆ ಕಂಡರೂ ಕೂಡಾ ನಾವು ಇನ್ನೊಬ್ಬರಲ್ಲಿನ ಉತ್ತಮ ಅಂಶಗಳನ್ನು ಎತ್ತಿ ಹಿಡಿಯುತ್ತಾ ಹೋದರೆ ಖಂಡಿತವಾಗಿಯೂ ಕ್ರಮೇಣ ನಾವು ಧನಾತ್ಮಕ ವ್ಯಕ್ತಿಗಳಾಗಿ ಬೆಳೆಯುವುದು ಸಾಧ್ಯ. ಧನಾತ್ಮಕ ವ್ಯಕ್ತಿತ್ವ ನಿಜವಾಗಿಯೂ ಆ ವ್ಯಕ್ತಿಗೆ ಮಾತ್ರವಲ್ಲ ಇಡೀ ಸಮಾಜಕ್ಕೆ ಆಶೀರ್ವಾದವೇ ಆಗಿದೆ. ಸುಂದರ ಹೂ ತೋಟವನ್ನೇ ನೋಡೋಣ ಎಲ್ಲಾ ಗಿಡಗಳಲ್ಲಿ ಬರೇ ಸುಂದರ ಹೂವು ಮಾತ್ರ ಕಾಣುತ್ತದೆಯೇ? ಅಲ್ಲಿ ಮುಳ್ಳಿದೆ, ನೆಲದಲ್ಲಿ ಕಲ್ಲಿದೆ. ನಾವು ಹೂ ತೋಟದಲ್ಲಿ ನೋಡಬೇಕಾದುದು ಏನನ್ನು?
ಇನ್ನೊಬ್ಬ ವ್ಯಕ್ತಿ ಒಳ್ಳೆಯ ಬಟ್ಟೆ ಉಟ್ಟಾಗ, ಯಾವುದೇ ಸಣ್ಣದಾದರೂ ಉತ್ತಮ ಉಪಯುಕ್ತ ಕೆಲಸ ಅಥವಾ ಸಾದನೆ ಮಾಡಿದಾಗ ಅದನ್ನು ತಿಳಿಸಿ ಅಭಿನಂದನೆ ಸಲ್ಲಿಸುವುದು ತೀರಾ ಸಲೀಸಾದ ಅಥವಾ ಕ್ಷುಲ್ಲಕ ವಿಷಯ ಎನ್ನುವಂತೆ ಕಾಣುವುದಾದರೂ  ನಮ್ಮಲ್ಲಿ ಧನಾತ್ಮಕ ಮನಸ್ಸು ಬೆಳೆಯುವಲ್ಲಿ ಮೊದಲ ಮೆಟ್ಟಿಲಾಗಬಹುದು. ಇದೇ ಅಂತಿಮವಾಗಿ ಇಡೀ ರಾಷ್ಟ್ರದ ಒಟ್ಟಾರೆ ಧನಾತ್ಮಕ ಪ್ರಗತಿಗೆ ಪೂರಕವಾಗಬಹುದು.


ಬದುಕು ದರ್ಶನ
ಸ್ಟೀವನ್ ಕ್ವಾಡ್ರಸ್ ಪೆರ್ಮುದೆ, 9480761017
ಬದುಕಿನ ಬಗ್ಗೆ ನೂರಾರು ಪ್ರಾಜ್ಞರು ತಮ್ಮದೇ ಆದ ಅರ್ಥಪೂರ್ಣ ಚಿಂತನೆಗಳನ್ನು ನೀಡಿದ್ದಾರೆ. ಮಂಕುತಿಮ್ಮನ ಕಗ್ಗ ಎಂಬ ತಮ್ಮ ಲೋಕೋತ್ತಮ ಕೃತಿಯಲ್ಲಿ ಡಿ ವಿ ಗುಂಡಪ್ಪನವರು ಬದುಕಿನ ಕುರಿತು ನೀಡಿರುವ ವ್ಯಾಖ್ಯೆ ನನಗೆ ತುಂಬಾ ಆಕರ್ಷಿಸಿದೆ. ಅವರು ಬದುಕು ಜಟಕಾಬಂಡಿ, ವಿಧಿ ಅದರ ಸಾಹೇಬ, ಮದುವೆಗೋ ಮಸಣಕೊ ಕರೆದತ್ತ ಪಯಣ ಎನ್ನುವ ಸಮಷ್ಟೀಭಾವ ನಿಜವಾಗಿಯು ಅರ್ಥಪೂರ್ಣ. 
ಬದುಕು ಭಗವಂತನು ಮನುಕುಲಕ್ಕೆ ನೀಡಿದ ಮಹತ್ವದ ಕೊಡುಗೆ ಅದು ಸದಾ ನಿತ್ಯನೂತನ ಹಾಗೂ ನವನವೋನ್ಮೇಷಶಾಲಿನಿ. ಜನಿಸಿದ ಪ್ರತಿ ಶಿಶು ದೇವರ ಪ್ರೀತಿಯ ಸಂದೇಶವನ್ನು ಹೊತ್ತು ಬರುವುದಂತೆ. ಲೋಕಕ್ಕೆ ಹೊಸ ಸಲಿಲ ಹೊಸ ಬದುಕಿನೊಂದಿಗೆ ಬರುವುದಂತೆ. ಬಂದವರು ನಿಯತಿಯು ವಿಧಿಸಿದಷ್ಟು ಕಾಲ ಇಲ್ಲಿಯೇ ಇರಬೇಕು. ಇಚ್ಛೆಯನುಸಾರ ಹಿಂದಕ್ಕೆ ಹೋಗಲು ಅವಕಾಶವಿಲ್ಲ. ಒಮ್ಮೆ ವ್ಯವಹಾರ ಮುಗಿಸಿ ಹಿಂದಿರುಗಿದರೆ ಮತ್ತೆ ಪುನಃ ಬರಲು ಅವಕಾಶವೂ ಇಲ್ಲ. ಈಸಬೇಕು ಇದ್ದು ಜೈಸಬೇಕು ಎಂದು ದಾಸರು ನೀಡಿದ ಕರೆ ಎಲ್ಲರಿಗೂ ಅನ್ವಯವಾಗುತ್ತದೆ. ಕೊಟ್ಟ ಕುದುರೆಯನ್ನು ಏರಲಾಗದೆ ಬೇರೆ ಕುದುರೆಯನ್ನು ಕೇಳುವವನು ವೀರನೂ ಅಲ್ಲ ಶೂರನೂ ಅಲ್ಲ. 
ಬದುಕನ್ನು ಚಿತ್ರಿಸುವಾಗ ಕೆಲವರು ಅದನ್ನು ಸ್ಪರ್ದೆ ಎಂದೂ ಈ ಸ್ಪರ್ದೆಯಲ್ಲಿ ಯಶಸ್ವಿ ರೀತಿಯಲ್ಲಿ ಪಾಲುಗಾರನಾಗಿ ಗೆಲ್ಲುವುದೇ ಮಹತ್ವದ ವಿಷಯ ಎಂದೂ ತಿಳಿಸಿದ್ದಾರೆ. ಇನ್ನು ಕೆಲವರು ಇದೊಂದು ಪಂದ್ಯವೆಂದೂ ಉತ್ತಮ ರೀತಿಯಲ್ಲಿ ಆಡಿ ಗೆಲುವು ಸಂಪಾದಿಸುವುದೇ ಮಹತ್ವದ್ದೆಂದೂ ಹೇಳಿದ್ದಾರೆ. ಇತ್ತೀಚೆಗೆ ಒಬ್ಬ ಪಂಡಿತರ ವ್ಯಾಖ್ಯಾನವನ್ನು ನಾನು ಓದಿದೆ. ಬದುಕನ್ನು ಬದುಕಲು ಬಿಡು ಪಂಥಕ್ಕೆ ಬಿಟ್ಟ ಇಲಿಯಂತಾಗಬೇಡ ಯಾಕೆಂದರೆ ಇಲಿಯ ಓಟದಲ್ಲಿ ಗೆದ್ದಾಗಲೂ ನೀನು ಇಲಿಯಷ್ಟೇ ಆಗಿರುತ್ತೀಯಾ ಎಂದು ಅವರು ಹೇಳಿದ್ದರು. 
ಬದುಕಿನಲ್ಲಿ ಸುಖವಾಗಿರುವುದೇ ಬದುಕುವುದರ ಉದ್ದೇಶ ಎನ್ನುವ ಪರಮ ಸತ್ಯ ತಿಳಿದಿರದ ಏಕೈಕ ಪ್ರಾಣಿ ಮಾನವ ಮಾತ್ರ ಎಂಬ ಒಂದು ವಾಕ್ಪುಂಜವನ್ನು ನಾನು ಓದಿ ಅದರಿಂದ ಆಕರ್ಷಿತನಾಗಿದ್ದೇನೆ. ನನ್ನ ಬದುಕಷ್ಟೇ ಸುಖವಾಗಿದ್ದರೆ ಸಾಕೆ ಅಷ್ಟು ಮಾತ್ರದಿಂದಲೇ ಮಾನವ ಕು ತಾನೊಂದೇ ವಲಂ  ಎಂಬ ಪಂಪನ ಮಾತು ಸತ್ಯವಾಗುವುದೇ. ಈ ಬಾಳಿನಲ್ಲಿ ಬಂದ ಮೇಲೆ ಅನ್ಯರ ನೋವು ನಲಿವುಗಳಲ್ಲಿ ಭಾಗಿಯಾಗದಿದ್ದರೆ ಹೇಗೆ? ಮದರ್ ತೆರೇಸಾರವರ ಶ್ರೇಷ್ಠ ನುಡಿಗಳು ಈ ದಿಸೆಯಲ್ಲಿ ಹೆಚ್ಚು ಅರ್ಥಪೂರ್ಣವಾಗಿವೆ.  ಪ್ರಾರ್ಥನೆಗಾಗಿ ಜೋಡಿಸಿದ ಕರಗಳಿಗಿಂತ ದೀನರ ಸೇವೆಗಾಗಿ ತೆರೆದ ಕೈಗಳೇ ಹೆಚ್ಚು ಪಾವನ ಎಂದು ಅವರು ಹೇಳಿದ್ದಾರೆ.
ನಾವು ಎಲ್ಲವನ್ನೂ ನಿಯಂತ್ರಿಸುತ್ತೇವೆ ಎಂದು ತಿಳಿದುಕೊಂಡಿದ್ದೇವೆ ವಾಸ್ತವವಾಗಿ ಘಟನೆಗಳನ್ನು ನಾವು ನಿಯಂತ್ರಿಸುತ್ತಿಲ್ಲ ಆದರೆ ಘಟನೆಗಳೇ ನಮ್ಮನ್ನು ನಿಯಂತ್ರಿಸುತ್ತಿವೆ. ಬದುಕಿನ ವಿಚಿತ್ರವೆಂದರೆ ಆ ನಿಯಂತ್ರಣಗಳ ನಡುವೆಯೂ ನಾವೇ ಸಕಲದರ ಒಡೆಯರು ಎನ್ನುವ ಚಿಂತನೆ ಹೊಂದಿ ಸುಖವಾಗಿರುವುದು. ಈ ಸುಖ ಇನ್ನಷ್ಟು ಅರ್ಥಪೂರ್ಣವಾಗಬೇಕಾದರೆ ನಮ್ಮನ್ನು ನಿಯಂತ್ರಿಸುತ್ತಿರುವ ಎಲ್ಲಾ ವ್ಯವಸ್ಥೆಗಳೊಂದಿಗೆ ಅರ್ಥಪೂರ್ಣ ರೀತಿಯಲ್ಲಿ ಹೊಂದಿಕೊಳ್ಳಲು ಪ್ರಯತ್ನಿಸುವುದು.
ಜೀವನದ ಯಶಸ್ಸಿಗೆ ಧೈರ್ಯ ಹಾಗೂ ಸಹನೆಗಳೆಂಬ ಎರಡು ಬಲಶಾಲಿ ಸಂಗಾತಿಗಳ ಅಗತ್ಯವಿದೆ. ಹೇಡಿಗಳು ದೇವರೆ ನನಗೆ ಕಷ್ಟ ಬೇಡ  ಎಂದು ಮೊರೆಯಿಡುತ್ತಾರೆ. ಕಷ್ಟ ಬರಲಿ ಅದನ್ನು ಸಹಿಸಿ ಯಶಸ್ವಿಯಾಗುವ ಛಾತಿ ಕೊಡು ಎಂದು ಬೇಡಿದಾಗ ಜೀವನ ರ್ದಷ್ಟಿಕೋನವೇ ಬದಲಾಗುತ್ತದೆ. ಮಾಮರದಲ್ಲಿ ಎಲೆಗಳೇ ತುಂಬಿರುವಾಗ ಅದಕ್ಕೆ ಕಲ್ಲು ಹೊಡೆಯುವವರೇ ಇಲ್ಲ. ಮರದ ತುಂಬಾ ಹಣ್ಣಾದಾಗ ತುಂಟ ಹುಡುಗರಿಂದ ಹಿಡಿದು ಹಿರಿಯರೂ ಕೂಡಾ ಕಲ್ಲು ಬಿಸಾಡುತ್ತಾರೆ. ಅಂಗಾರಕದ ಮರಕ್ಕಂತೂ ಕಲ್ಲು ಹೊಡೆಯುವವರೇ ಇಲ್ಲ. ಆದ್ದರಿಂದ ಲೋಕದಲ್ಲಿ ನಮತ್ತ ಬರುವ ಕಲ್ಲುಗಳನ್ನೆಲ್ಲ ನಗುನಗುತ್ತಾ ಸ್ವೀಕರಿಸಿ ನಮಗಾಗಿ ಸುಂದರ ಮಹಲೊಂದನ್ನು ಕಟ್ಟಿಕೊಳ್ಳುವ ಬುದ್ದಿವಂತಿಕೆ ಉಳ್ಳವನಿಗೆ ನಷ್ಟವೆಂಬುದೇ ಇಲ್ಲ.
ಪ್ರಿಯರೇ ಬಾಳೆಗೊಂದೆ ಗೊನೆ, ಬಾಳಿಗೊಂದೆ ಗುರಿ, ನಮ್ಮ ಬಾಳಿನ ಗುರಿಯನ್ನು ನಿರ್ಧರಿಸುವ ಪರಮಾಧಿಕಾರ ನಮ್ಮದೇ ಆದರೆ ನಮ್ಮ ಬಾಳಿನ ಗುರಿಯು ನಮ್ಮ ಸ್ವಂತ ಸುಖದ ಉದ್ದೇಶಗಳ ಸುತ್ತ ಮಾತ್ರವಲ್ಲದೆ ಸಮಷ್ಟಿಯ ಸುಖದ ಚಿಂತನೆಯನ್ನೂ ಹೊಂದಿಕೊಂಡಿದ್ದರೆ ಸುಂದರವಲ್ಲವೇ? ಈ ಬಾಳುಯ ನೂರು ಬಾಳಾಗಲು ಇರುವ ಒಂದೇ ದಾರಿ ಈ ಒಂದು ಬಾಳಿನಲ್ಲಿಯೇ ನೂರಾರು ಜನರಿಗೆ ಉಪಯುಕ್ತನಾಗುವುದು. ನೆಲ್ಸನ್ ಮಂಡೇಲಾ, ಮಹಾತ್ಮ ಗಾಂಧೀ, ಮದರ್ ತೆರೇಸಾ ಅವರಿಗೆ ದೊರೆತದ್ದು ಒಂದೇ ಬಾಳು ಆದರೆ ನೂರಾರು ಕಾಳವೂ ಅಮರವಾಗಿ ಉಳಿಯುವ ಒಂದು ಅರ್ಥಪೂರ್ಣ ಬಾಳನ್ನು ಅವರು ಬದುಕಿದರು. ತನ್ನ ಬಾಳನ್ನು ಅನ್ಯರ ಬಾಳಿಗೆ ಬೆಳಕಾಗುವಂತೆ ಮಾಡಿದರು. ಸರ್ವೇ ಜನಃ ಸುಖಿನೋ ಭವಂತು ಅನ್ನುವಾಗ ಸಹಜವಾಗಿ ನಮ್ಮ ಬಾಳೂ ಸುಖಮಯವಾಗುತ್ತದೆ. ಅರ್ಥಪೂರ್ಣವಾಗುತ್ತದೆ.