ಯುವಜನರೇ ಧೈರ್ಯವಾಗಿರಿ

Thumbnail

ಯುವಜನರೇ ದೈರ್ಯವಾಗಿರಿ. 
ಒಬ್ಬ ಉತ್ತಮ ಓದುಗ ಯಾರು? ಉತ್ತಮ ಶಿಲ್ಪಿ ಯಾರು ಎನ್ನುವ ಪ್ರಶ್ನೆಗೆ ನಮಗೆ ಸಲೀಸಾಗಿ ಉತ್ತರ ಸಿಗಬಹುದೇನೋ ಆದರೆ ಉತ್ತಮ ಯುವಕ ಯಾರು? ಉತ್ತಮ ವಿದ್ಯಾರ್ಥಿ ಯಾರು ಎನ್ನುವ ಪ್ರಶ್ನೆಗೆ ತ್ರಪ್ತಿಕರ ಉತ್ತರದ ಹುಡುಕಾಟ ತುಂಬಾ ಕಷ್ಟ ಈ ಪ್ರಶ್ನೆಯ ಉತ್ತರ ಹುಡುಕಲು ನಾವು ಬಳಸುತ್ತಿರುವ ಮಾನದಂಡ ಯಾವುದು? ಸಾಮಾನ್ಯವಾಗಿ ಕಲಿಕೆ ಅದರಲ್ಲಿಯೂ ಬಾಯ್ದೆರೆಯ ಕಲಿಕೆಯ ಯಶಸ್ಸಿನ ಮೇಲೆ ಹೊಂದಿಕೊಂಡು ನಾವು ಬದುಕಿನ ಉತ್ತಮಿಕೆಯನ್ನು ಅಳೆಯುವುದಿದೆ. 
ಉತ್ತಮ ವಿದ್ಯಾರ್ಥಿಯನ್ನು ಉತ್ತಮ ಯುವಕನನ್ನು ಗುರುತಿಸುವಾಗ ಬರೇ ಕಲಿಕೆಯ ಯಶಸ್ಸು ಮಾತ್ರ  ನಮ್ಮ ಮೌಲ್ಯಮಾಪನದಲ್ಲಿ ಅದೊಂದು ಮುಖ್ಯ ವಿಷಯ ಆಗಬಹುದು. ಆದರೆ ಅದರೊಂದಿಗೆ ಆತನ ನಿತ್ಯ ಜೀವನದ ಕ್ರಿಯಾಶೀಲತೆಯ ಮೌಲ್ಯಮಾಪನ ಅಷ್ಟೇ ಮುಖ್ಯವಾಗಿದೆ.  ಬದುಕಿನ ಎಲ್ಲಾ ಚಟುವಟಿಕೆಗಳಲ್ಲಿ  ಸಂಪೂರ್ಣವಾಗಿ ತೊಡಗಿಸಿಕೊಳ್ಳುವಿಕೆ ಮುಖ್ಯ ವಿಷಯವಲ್ಲವೇ? ತನ್ನ ಬದುಕಿನ ಯಶಸ್ಸಿಗಾಗಿ ಕ್ರಿಯಾಯೋಜನೆ ಹಾಕಿಕೊಂಡು ಅದರ ಯಶಸ್ಸಿಗಾಗಿ ಸಂಪೂರ್ಣ ಶ್ರದ್ಧೆ ಮತ್ತು ದ್ರಢತೆಯಿಂದ ನಿರಂತರ ಶ್ರಮಿಸುವುದು ಕಲಿಕೆಯಷ್ಟೇ ಮುಖ್ಯವಲ್ಲವೇ? 
ಯುವಜನರ ಜೀವನದ ಯಶಸ್ಸಿಗೆ ನಂಬಿಕೆ ಮಹತ್ವದ ಅಂಶವಾಗಿದೆ. ಈ ಲೋಕಕ್ಕೆ ಬಂದ ಬಳಿಕ ನಾವು ನಂಬಬೇಕಾದುದು ಅನಿವಾರ್ಯತೆ. ಮೊತ್ತಮೊದಲಿಗೆ ನಮ್ಮನ್ನೇ ನಾವು ನಂಬಲು ಕಲಿಯಬೇಕು. ಅಮೇರಿಕಾದ ಖ್ಯಾತ ಸಂಶೋಧಕರಾದ ಚಾರ್ಲ್ಸ್ ಎಫ್ ಕೆಟೆರಿಂಗ್ ‘ ನನಗೆ ನನ್ನ ಮೇಲೆ ಹಾಗೂ ನನ್ನ ಕಲ್ಪನಾಶಕ್ತಿಯ ಮೇಲೆ ನಂಬಿಕೆ ಇದ್ದಾಗ ಮಾತ್ರ ನಾನು ಯಶಸ್ಸಿನ ನಿರಂತರತೆಯನ್ನು ತಲುಪುವುದು ಸಾಧ್ಯ.’ ಎನ್ನುತ್ತಾರೆ.  ಮಾನವನಾದ ಪ್ರತಿಯೊಬ್ಬರಿಗೂ ಅವರದೇ ಆದ ಒಂದೆರಡು ಅಥವಾ ಹಲವಾರು ಸಮಸ್ಯೆಗಳಿದ್ಧೇ ಇರುತ್ತವೆ. ಆದರೆ ನಮ್ಮಲ್ಲಿ ಅಪಾರ ಸಾಮರ್ಥ್ಯವಿದೆ, ಆ ಸಮಸ್ಯೆಗಳನ್ನು ಖಂಡಿತ ನಾವು ಎದುರಿಸುತ್ತವೆ ಎನ್ನುವ ಸ್ವವಿಶ್ವಾಸವಿದ್ದಾಗ ಸಲೀಸಾಗಿ ನಾವು ಸಮಸ್ಯೆಗಳನ್ನು ಎದುರಿಸಿ ಯಶಸ್ವಿಯಾಗುತ್ತೇವೆ. ಸ್ವವಿಶ್ವಾಸದಿಂದ ಸ್ವಗೌರವ, ಸ್ವಾಭಿಮಾನ ಬೆಳೆಯುತ್ತದೆ. ಸ್ವಾಭಿಮಾನವನ್ನು ಬೆಳೆಸಿಕೊಳ್ಳಲು ಸಾಧ್ಯವಾಗದ ಶಿಕ್ಷಣದಿಂದ ವ್ಯಕ್ತಿಗಳಿಗೆ ಹೆಚ್ಚೇನೂ ಉಪಯೋಗವಿಲ್ಲ. 
ಹಲವಾರು ಸಂದರ್ಭಗಳಲ್ಲಿ ನಾವು ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳುವುದಿಲ್ಲ. ಮುಖ್ಯವಾಗಿ ಪ್ರಕ್ರತಿ, ಪರಿಸರದ ವಿಷಯಗಳಲ್ಲಿ ಯುವಜನರು ನಿರ್ಲಕ್ಷ್ಯ ತೋರುತ್ತಿರುವುದು  ಕಂಡುಬರುತ್ತಿದೆ. ಅದೇ ರೀತಿ ಅನ್ಯರ ಬದುಕಿನ ನೋವು ನಲಿವುಗಳ ಕುರಿತು ಇಂದಿನ ಯುವಕರು ಅನ್ಯಮನಸ್ಕರಾಗಿದ್ದಾರೆ. ಅಂತರ್ ಜಾಲದ ಜಾಲಗಳಲ್ಲಿ ಅವರು ಅತಿಯಾಗಿ ಸಿಲುಕಿ ಹೋಗಿರುವುದರಿಂದ ವಾಸ್ತವಿಕ ಬದುಕಿನಿಂದ ಅವರು ದೂರವಾಗುತ್ತಾಯಿದ್ದಾರೆ. ಇದರಿಂದ  ಇಂದಿನ ಯುವಜನರ ಬದುಕು ಶುಷ್ಕವಾಗುತ್ತಾ ಇದೆ.  ವಿಲ್ಲಿಯಮ್ ಷೇಕ್ಸ್ ಪಿಯರ್ ಹೇಳುವಂತೆ ಬದುಕು ನಿಜವಾಗಿ ನೀರ್ಗುಳ್ಳೆ ನೊರೆ ಬುರುಗು ಆದರೆ ನಮ್ಮ ಕಷ್ಟದಲ್ಲಿ ಧೈರ್ಯವುಳ್ಳವರಾಗಿರುವುದು ಹಾಗೂ ಅನ್ಯರ ನೋವಿನಲ್ಲಿ ಅಂತಃಕರಣವುಳ್ಳವರಾಗಿರುವುದು ಜೀವನಕ್ಕೆ ಅರ್ಥ ತುಂಬಬಹುದಾಗಿದೆ. 
ಆಸಕ್ತಿ ಬರೇ ಪದವಿ ಪಡೆಯುವ ಶಿಕ್ಷಣದಲ್ಲಿ ಮಾತ್ರವಲ್ಲ ನಾವು ಹೊಂದಿರುವ ವ್ರತ್ತಿ-ಉದ್ಯೋಗದಲ್ಲಿ ಮಾತ್ರವಲ್ಲ ಜೀವನದ ವಿವಿದ ಆಯಾಮಗಳಲ್ಲಿ ಮುಕ್ತ ಮನಸ್ಸಿನ, ಮುಗ್ಧ ಮನಸ್ಸಿನ ಆತುರತೆ, ಆಸಕ್ತಿ ಬೆಳೆಸಿಕೊಂಡರೆ  ನಮ್ಮ ಬದುಕು ಸುಂದರವಾಗುತ್ತಾ ಹೋಗುವುದರಲ್ಲಿ ಸಂಶಯವಿಲ್ಲ. ಓದುವ ವಿಷಯಕ್ಕೆ ಬಂದರೆ ನಮ್ಮ ಕಲಿಕೆಗೆ ಸಂಬಂಧಿಸಿದ ಪಠ್ಯಪುಸ್ತಕಗಳ ಓದಿಗೆ ಮಾತ್ರ ನಾವು ಸೀಮಿತವಾಗಿರಬೇಕಾಗಿಲ್ಲ ನಮ್ಮ ಮನೆಯೊಳಗೆ ನಡೆಯುವ ವಿಷಯಗಳಿಗೆ ಸೀಮಿತವಾಗದೆ ನಮ್ಮ ಸುತ್ತಮುತ್ತ  ನಡೆಯುತ್ತಿರುವ ಸುಂದರ ಘಟನೆಗಳತ್ತವೂ ನಮ್ಮ ಮನಸ್ಸನ್ನು ಬೆಳೆಸಬಹುದಾಗಿದೆ.
ಇಂದಿನ ದೊಡ್ಡ ಅಪಾಯವೆಂದರೆ ತುಂಬಾ ಶಿಕ್ಷಣ ಪಡೆದವರು ಬದುಕಿನಲ್ಲಿ ಸಣ್ಣ ಸಮಸ್ಯೆ ಎದುರಾದಾಗ ಆ ಸಮಸ್ಯೆಯನ್ನು ಎದುರಿಸಲಾಗದೆ  ಕುಗ್ಗಿಹೋಗುವುದು.  ಈ ಲೋಕದಲ್ಲಿ ವರ್ಷಕ್ಕೆ ಎಂಟು ಲಕ್ಷಕ್ಕೂ ಅಧಿಕ ಆತ್ಮಹತ್ಯೆಗಳಾಗುತ್ತಿವೆ. ಆತ್ಮಹತ್ಯೆ ಲೋಕದಲ್ಲಿ ಸಾವಿಗೆ ಕಾರಣದಲ್ಲಿ ಎರಡನೆ ಸ್ಥಾನದಲ್ಲಿದೆ. ಆದ್ರಷ್ಟವಶಾತ್  ಪ್ರತಿ 20 ಪ್ರಯತ್ನಗಳಲ್ಲಿ ಒಂದು ಪ್ರಯತ್ನವಷ್ಟೇ ಯಶಸ್ವಿಯಾಗುತ್ತದೆ ಎಂದು ಸಂಶೋಧನೆಯಿಂದ ನಾವು ತಿಳಿದುಕೊಳ್ಳುತ್ತೇವೆ. ಯುವಜನರ  ಈ  ರೀತಿಯ ಆತ್ಮಹತ್ಯಾ  ಪ್ರಯತ್ನದ ಗೀಳಿಗೆ ಮುಖ್ಯ ಕಾರಣ  ಅವರು ತಮ್ಮನ್ನು ತಾವೇ, ತಮ್ಮ ಸಾಮರ್ಥ್ಯಗಳನ್ನು, ಪ್ರತಿಭೆಗಳನ್ನು, ಕೌಶಲ್ಯಗಳನ್ನು ತಿಳಿದುಕೊಳ್ಳಲು ಅಸಾಧ್ಯವಾಗಿರುವುದು. 
ಈ ಸ್ರಷ್ಟಿಯ ಅತ್ಯುತ್ತಮ ಕೊಡುಗೆಯಾದ ಮಾನವ, ವಿಚಾರಶಕ್ತಿಯುಳ್ಳ, ಸ್ಪಷ್ಟ ಸಂವಹನ ಸಾಮರ್ಥ್ಯವುಳ್ಳ ಮಾನವ  ಈ ರೀತಿ ಸ್ವವಿನಾಶದ ಮನೋಸ್ಥಿತಿಗೆ ಇಳಿದರೆ, ನಿಜಕ್ಕೂ ಮಾನವ ಕುಲ ಅಪಾಯದ ದಾರಿಯಲ್ಲಿದೆ ಎನ್ನಬಹುದು.  ಇಲ್ಲಿ ನಾವು ಗಮನಿಸಬೇಕಾದ ಮುಖ್ಯ ವಿಷಯವೆಂದರೆ ಸಮಾಜದಲ್ಲಿ ಉನ್ನತ ಸ್ಥರದಲ್ಲಿರುವ ಕೆಲವು ಧಾರ್ಮಿಕ, ರಾಜಕೀಯ, ಕಲಾರಂಗದ ಇತ್ಯಾದಿ ಪ್ರಮುಖರು  ತಮ್ಮ ವಿಫಲತೆಗಳ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಾಗ ಕೆಲವು ಮಾಧ್ಯಮಗಳು ತಮ್ಮ ಅಗತ್ಯಗಳಿಗಾಗಿ ಆ ಪ್ರಕರಣಗಳನ್ನು ವೈಭವೀಕರಿಸುತ್ತವೆ, ಅದು ಇನ್ನಷ್ಟು ಅಪಾಯಕ್ಕೆ ಕಾರಣವಾಗುತ್ತದೆ. ದಾಸರು ಹೇಳಿದಂತೆ ನಾವು ‘ಈಸಬೆಕು ಇದ್ದು ಜೈಸಬೇಕು’ ವಚನಕಾರರು ಇದರ ಕುರಿತಾಗಿಯೇ ‘ಕೊಟ್ಟ ಕುದುರೆಯನ್ನು ಏರಲಾಗದವರು ವೀರರೂ ಅಲ್ಲ ಧೀರರೂ ಅಲ್ಲ’ ಎಂದು ಸುಂದರವಾಗಿ  ಸ್ಪಷ್ಟವಾಗಿ ಹೇಳಿದ್ದಾರೆ. 
ಈ ಲೋಕಕ್ಕೆ ಬಂದ ಮೇಲೆ ನಾವು ಧೈರ್ಯವಾಗಿರುವುದು, ಬದುಕಿನ ನಿತ್ಯ ಜಂಜಾಟಗಳನ್ನು ನಗುಮುಖದಿಂದ  ಎದುರಿಸುವುದು ಅಗತ್ಯ ಮಾತ್ರವಲ್ಲ ಅನಿವಾರ್ಯವೂ ಆಗಿದೆ.  ಅನ್ಯರ ಬಗ್ಗೆ ಅಭಿಮಾನ ಬೆಳೆಸಿಕೊಂಡಾಗ ತನ್ನಿಂದ ತಾನಾಗಿಯೇ ನಮ್ಮ ಬಗೆ ನಮ್ಮಲ್ಲಿ ಅಭಿಮಾನ ಗೌರವ ಬೆಳೆಯುತ್ತದೆ, ಬದುಕನ್ನು ಗೌರವಾತ್ಮಕವಾಗಿ ಕಾಣಲು ಸಲೀಸಾಗುತ್ತದೆ. ಅದೇ ನಿಜವಾದ ಶಿಕ್ಷಣ.
ಇಂದಿನ ಯುವಜನತೆಗೆ ದೊಡ್ಡ ಸಮಸ್ಯೆಯಾಗಿರುವುದು ಏಕಾಗ್ರತೆಯ ಸಾಧನೆಗೆ ಇರುವ ಅಡೆತಡೆಗಳು, ಮಾಧ್ಯಮಗಳ, ಸಾಮಾಜಿಕ ಜಾಲತಾಣಗಳ, ಕೊಳ್ಳುಬಾಕ ಸಂಸ್ಕ್ರತಿಯ, ಅನಗತ್ಯ ಹಾಗೂ ಮಿತಿಮೀರಿದ ಆಧುನೀಕತೆಯ ಬಲೆಗೆ  ಯುವಜನರು ಸಿಲುಕಿ ಹಾಕಿಕೊಂಡಿದ್ದಾರೆ. ಇದರ ಪರಿಣಾಮವಾಗಿ ಹೊರ ಜಗತ್ತಿನ ಸದ್ದು ಸಡಗರ ನಮ್ಮನ್ನು ತುಂಬಿಕೊಳ್ಳುತ್ತಾ ಇದೆ. ನಮ್ಮೊಳಗಿನ ಧ್ವನಿಗೆ ಕಿವಿಕೊಡಲು ಅನಿವಾರ್ಯವಾದ ಏಕಾಗ್ರತೆ ನಮ್ಮಿಂದ ದೂರ ಹೋಗಿದೆ. ದಿನದ ಸ್ವಲ್ಪ ಸಮಯವಾದರೂ ನಮ್ಮ ಮನಸ್ಸನ್ನು ನಿಗ್ರಹಕ್ಕೆ ತಂದುಕೊಂಡು ನಮ್ಮನ್ನು ನಾವೇ ಮೌಲ್ಯಮಾಪನ ಮಾಡಿದಾಗ ಹಿಂದಿರುಗಿ ನೋಡಿದಾಗ ನಮ್ಮ ತಪ್ಪು ಒಪ್ಪುಗಳ ಪರಿಚಯ ನಮಗಾಗುತ್ತದೆ ಮುಂದಿನ ದಾರಿ ಇನ್ನಷ್ಟು ಸ್ಪಷ್ಟವಾಗುತ್ತದೆ. 
ಹಲವಾರು ಬಾರಿ ನಮಗೆ ಉತ್ತಮ ವಾತಾವರಣ ಬೇಕು ಎಂದು ಆಶಿಸಿ ನಮಗೆ ಬೇಕಾದಂತೆ ಪರಿಸ್ಥಿತಿ ಇಲ್ಲದಿದ್ದಾಗ ನಮ್ಮನ್ನೇ ನಾವು ದೂರುವುದಿದೆ  ವಾತಾವರಣ, ಪರಿಸರ, ಪರಿಸ್ಥಿತಿ ಇವುಗಳೆಲ್ಲದರ ಕೇಂದ್ರಬಿಂದು ಮಾನವರಾದ ನಾವು. ನಮ್ಮನ್ನೇ ನಾವು ಸುಧಾರಿಸಿಕೊಳ್ಳುತ್ತಾ ಹೋದರೆ ಪರಿಸ್ಥಿತಿ ತನ್ನಿಂದತಾನೇ ಸರಿಯಾಗುತ್ತಾ ಹೋಗುತ್ತದೆ. ಬದಲಾವಣೆ ತರಲು ನಾವೆಲ್ಲರೂ ಕ್ರಾಂತಿ, ಚಳುವಳಿ ಮಾಡುತ್ತಾ ಇರಬೇಕಾಗಿಲ್ಲ ಹೊರತಾಗಿ ಅಪಾರ ಸಾಮರ್ಥ್ಯವುಳ್ಳ ಯುವಜನರಾದ ನಾವು ಧೈರ್ಯದಿಂದ ನಮ್ಮನ್ನು ನಾವೇ ಸುಧಾರಿಸುತ್ತಾ ಹೋದರೆ ಸಾಕು ವಿಸ್ತ್ರತ ಮಟ್ಟದ ಪರಿವರ್ತನೆ ತನ್ನಿಂದ ತಾನೇ ಉಂಟಾಗುತ್ತದೆ.