ನಾವೆಣಿಸಿದ ಸಮಸ್ಯೆಗಳು ಸಮಸ್ಯೆಗಳೇ ಅಲ್ಲ!

Thumbnail

ನಾವೆಣಿಸಿದ ಸಮಸ್ಯೆಗಳು ಸಮಸ್ಯೆಗಳೇ ಅಲ್ಲ!
ಸಮಸ್ಯೆಗಳು ನೀರಿನ ಮೇಲೆ ತೇಲುವ ಹುಲ್ಲಿನ ಹಾಗೆ. ಪರಿಹಾರಗಳು ನೀರಿನೊಳಗಿರುವ ಮುತ್ತುಗಳ ಹಾಗೆ. ಮುತ್ತುಗಳನ್ನು ಹೆಕ್ಕಬೇಕೆಂದವರು ಒಳಗೆ ಹೋಗಲೇಬೇಕು. ಅಂದರೆ… ಪರಿಹಾರ ಕಂಡುಕೊಳ್ಳಲು ಪರಿಶ್ರಮದ ಅಗತ್ಯವಿದೆ. ಪ್ರತೀ ಸಮಸ್ಯೆಗಳಿಗೂ ಪರಿಹಾರ ಹುಡುಕಬೇಕಾದರೆ ಮನಸ್ಸು ನಿರ್ಮಲವಾಗಿರಬೇಕು. ಪ್ರಕ್ಷುಬ್ಧವಾದ ಮನಸ್ಸು ಕೆಲಸ ಮಾಡಲಾರದು. ಒಂದು ಸಮಸ್ಯೆ 'ಪರಿಹಾರ’ ಕಾಣುವಾಗ ಮತ್ತೊಂದು ಸಮಸ್ಯೆ ಕಡಲ ತೆರೆಯೋಪಾಧಿಯಲ್ಲಿ ಬರುತ್ತಿರುತ್ತದೆ. ಭಯ ಬೀಳದೆ ಒಂದು ಕ್ಷಣ “ ಯಾವ ರೀತಿ ಇದರಿಂದ ಬಿಡುಗಡೆ”ಎಂಬ ಮನೋ ವಿಶ್ಲೇಷಣೆಗೊಳಪಡಿಸಿದರೆ ಅಪಾಯದಿಂದ ಪಾರಾಗಬಹುದು.
ಸಮಸ್ಯೆಯನ್ನು ದೂರದಿಂದಲೇ ದಿಟ್ಟಿಸಿ ‘ ಅಯ್ಯೋ, ನನ್ನಿಂದ ಸಾಧ್ಯವಿಲ್ಲವೆಂದು ತಲೆಗೆ ಕೈಯಿರಿಸಕೊಳ್ಳುವವರು ಕೀಳರಿಮೆ ಉಳ್ಳವರು.  ಹಾಗೆಯೇ…ಸಮಸ್ಯೆ ಕಂಡೊಡನೆಯೇ ಆಲೋಚಿಸದೆ ಜಿಗಿಯುವವರು  ಮೇಲರಿಮೆಯವರು. ಹೀಗೆ ತಕ್ಷಣ ಆಲೋಚಿಸದೆ ಜಿಗಿಯುವುದರಿಂದಲೂ ಕೆಲಸ ಕೆಡುತ್ತದೆ. ‘ ಕೀಳರಿಮೆ ‘ ತನ್ನಲ್ಲಿ ತನಗೆ ವಿಶ್ವಾಸವಿಲ್ಲದಂತೆ ಮಾಡಿದರೆ,ಮೇಲರಿಮೆ‘ ಅಹಂ ‘ ನಿಂದಾಗಿ ಸೋಲನುಭವಿಸುತ್ತದೆ. ಇವೆರಡರ ಮಧ್ಯದ ಸ್ಥಿತಿಯೇ ಆತ್ಮವಿಶ್ವಾಸ. ಆತ್ಮವಿಶ್ವಾಸವಿರುವವರಿಗೆ ಎಲ್ಲಾ ಬಾಗಿಲುಗಳಲ್ಲಿ ಸ್ವಾಗತ ಖಂಡಿತ ಇದೆ. ಅದು ಹಿಡಿದ ಕೆಲಸ ಸಾಧಿಸುವವರೆಗೆ ಶಾಂತವಾಗಲಾರದು.
ಮುಖ್ಯವಾಗಿ ಗಮನಿಸಬೇಕಾದುದಿಷ್ಟೆ; ಇಂದಿರುವ ಸಮಸ್ಯೆ ನಾಳೆ ಇರಲಾರದು. ನಾಳೆ ಬೇರೆಯೇ ಸಮಸ್ಯೆ ತಲೆದೋರಲೂಬಹುದು. ಸಮಸ್ಯೆಗಳಿಂದ ಕಳೆದುಕೊಳ್ಳುವುದಕ್ಕಿಂತಲೂ ಪಡೆಯುವುದೇ ಹೆಚ್ಚು. ಸಮಸ್ಯೆಯಿಂದ  ಪ್ರಥಮವಾಗಿ ನಷ್ಟ ಸಂಭವಿಸಿದರೂ ಅದರಿಂದ ಸಿಗುವ ಅನುಭವ ದೊಡ್ಡ ಲಾಭ ತಾನೇ?
ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದರಿಂದ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬಹುದು. ಧೃತಿಗೆಡುವ ಸಂದರ್ಭದಲ್ಲೂ ಆಸಕ್ತಿಯ ಕ್ಷೇತ್ರ ಬದುಕಿನಲ್ಲಿ ನಿಸ್ಸಾರ ಭಾವ ಮೂಡದಂತೆ ಕಾಪಾಡಬಲ್ಲುದು. ಆಶಾವಾದಿ ಮುಳ್ಳಿನ ಹಾಸಿಗೆಯನ್ನು ಹೂವಿನ ಹಾಸುಗೆಯಾಗಿ ಪರಿವರ್ತಿಸಬಲ್ಲ. ಸಮಸ್ಯೆಯನ್ನು ತಣ್ಣಗಿನ ನೀರಿಗೆ ಹೋಲಿಸಬಹುದು. ಮೊದಲ ಬಾರಿ ಮುಳುಗಿದಾಗ ಚಳಿ ತಾಳಲಾರದರೂ ನೀರಿನಲ್ಲೇ ಮುಳುಗಿದ್ದವರಿಗೆ  ಚಳಿ ಎಲ್ಲಿ ?
ಸಮಸ್ಯೆಗಳನ್ನು  ಕಂಡು ಬೆನ್ನು ಹಾಕಿ ಓಡಿದರೆ  ಅದು ಮಣ್ಣು ಮುಕ್ಕಿಸಿ ಬಿಡುತ್ತದೆ. ನಮ್ಮಲ್ಲಿರಬೇಕಾದುದಿಷ್ಟೆ. ಕೆಚ್ಚೆದೆ, ಛಲ, ತಾಳ್ಮೆ, ಸಮಯ ಪ್ರಜ್ಞೆ, ಪರಿಸ್ಥಿತಿಗೆ ಹೊಂದಿಕೊಳ್ಳುವ ಗುಣ.
ಬೋನನ್ನು ಪ್ರವೇಶಿಸುವ ಇಲಿ ಆಹಾರವನ್ನು  ಗಮನಿಸುವುದೇ ಹೊರತು  ತನ್ನ  ಬಂಧನವನ್ನಲ್ಲ. ಕ್ಷಣಿಕ ಅಭಿಲಾಷೆಗಳಿಗೆ ಬಲಿ ಬೀಳುವ ಮಾನವ ಸಮಸ್ಯೆಯೊಳಗೆ ಸಿಲುಕುವುದಿದೆ. ಎಲ್ಲಾ ದುರಂತಗಳಿಗೆ ಮೂಲ ಕಾರಣ ಹಿಡಿತವಿಲ್ಲದ ಮನಸ್ಸು. ಮನಸ್ಸು ಹೆಚ್ಚು ಶುದ್ಧವಾದಂತೆ ಅದನ್ನು ಹತೋಟಿಯಲ್ಲಿಡುವುದು ಸುಲಭವಾಗುತ್ತದೆ. ಶುದ್ಧ ಸುರಕ್ಷಿತ ಮನಸ್ಸು ದೇವರನ್ನು (Almighty)  ಸೇರುವ ದಾರಿಯನ್ನು ತಾನಾಗಿ ಕಂಡುಕೊಳ್ಳುತ್ತದೆ.ಸಮಸ್ಯೆಗಳಿಂದ ಪಾರಾಗುತ್ತದೆ.
ಹೆಚ್ಚಿನ ಜನರಿಗೆ ತಮ್ಮನ್ನು ಯಾರೂ ಅರ್ಥ ಮಾಡಿಕೊಳ್ಳುವುದಿಲ್ಲ ಎಂಬ ಸಮಸ್ಯೆ ತಲೆದೋರುತ್ತದೆ.ನಾವು ನಮಗೆ ಅರ್ಥವಾಗದಿರುವುದೇ ಬೇರೆಯವರಿಗೆ ಅರ್ಥವಾಗದಿರಲು ಕಾರಣ.ಆದರೆ ಒಬ್ಬರನ್ನು ಅರ್ಥ ಮಾಡಿಕೊಳ್ಳಲು ಅವರೊಂದಿಗೆ ಕೆಲವು ದಿನಗಳಾದರೂ ಬೆರೆಯಬೇಕು. ಒಂದು ಮಾತಿದೆ, ಒಬ್ಬ ಬುದ್ಧಿವಂತನನ್ನು ಮೂರ್ಖನಿಂದ ಅರ್ಥ ಮಾಡಿಕೊಳ್ಳಲು ಸಾದ್ಯವಿಲ್ಲ. ಒಬ್ಬ ಮೂರ್ಖನನ್ನು ಬುದ್ಧಿವಂತ ನಿಖರವಾಗಿ ಅರ್ಥೈಸಬಲ್ಲ. ಕಾರಣವಿಷ್ಟೇ ಬುದ್ಧಿವಂತ ಮುಂಚೆ ಮೂರ್ಖನಾಗಿದ್ದ !
ನಮ್ಮೊಳಗೆ ಮೂಡಿದ ಅರಿವಿನಿಂದ ನಾವು ಸುಖಪಡುವುದಾದರೆ, ಉಳಿದವರನ್ನು ಸುಖ ಪಡುವಂತೆ ಮಾಡುವುದು ನಮ್ಮ ಸದ್ಗುಣ. ಸದ್ಗುಣ ಬೆಲೆ ಕಟ್ಟಲಾಗದ ಐಶ್ವರ್ಯ. ಅದರಿಂದಲೇ ಅದು ಎಲ್ಲರಲ್ಲೂ ಕಂಡು ಬರಲಾರದು. ಜೀವನದಲ್ಲಿ ನಮಗೆ ಸಿಕ್ಕಿರುವುದನ್ನು, ನಮ್ಮ ವ್ಯಾಪ್ತಿಯನ್ನು ಒಪ್ಪಿಕೊಂಡು ನಡೆದರೆ ಜೀವನಕ್ಕೆ ಅರ್ಥ ಬರುವುದು, ತೃಪ್ತಿ ಮೂಡುವುದು.
ಇತರರ ಮನ ಅರಿಯುತ್ತೇನೆ ಎಂಬುದು ಗೊಡ್ಡು ನಂಬಿಕೆಯಾದರೆ ತನ್ನನ್ನು ಇತರರು ಚೆನ್ನಾಗಿ ಬಲ್ಲರು ಎಂಬುದು ಮೂರ್ಖತನ . 
ಮೈಯನ್ನು ಉಡುಪಿನಿಂದ  ಮುಚ್ಚಿಕೊಳ್ಳುಬಹುದು. ಮನಸನ್ನು ಯಾವುದರಿಂದಲೂ  ಬಚ್ಚಿಡಲಾಗದು. ಅದು ಯಾವುದಾದರೊಂದು ರೂಪದಲ್ಲಿ ಹೊರ ಬೀಳುತ್ತದೆ. ಮನಸ್ಸು  ನಿರ್ಮಲವಾಗಿದ್ದರೆ ಬಿಚ್ಚಿಕೊಂಡರೂ ಭಯವಿಲ್ಲ ತಾನೇ?
ತಡಯಾಕೆ ? ನಾವೂ… ಸಮಸ್ಯೆಗಳಿಗೆ ಸಡ್ಡುಹೊಡೆಯಲು ತಯಾರಾಗೋಣ .

ಉಮ್ಮರ್ ಫಾರೂಕ್ ಎ