ನಮ್ಮ ಮನೋಸ್ಥೈರ್ಯ ಬೆಳೆಸಿಕೊಳ್ಳೋಣ ಬನ್ನಿ 

Thumbnail

ನಮ್ಮ ಮನೋಸ್ಥೈರ್ಯ ಬೆಳೆಸಿಕೊಳ್ಳೋಣ ಬನ್ನಿ 
ಸಾಮಾನ್ಯವಾಗಿ ಮಾನವರೆಲ್ಲರೂ ಋಣಾತ್ಮಕ ಚಿಂತನೆಯುಳ್ಳವರು ಎಂದು ತಜ್ಞರ ಅಭಿಪ್ರಾಯ. ಋಣಾತ್ಮಕ ಚಿಂತನೆಯೆಂದರೆ ಯಾರು ಕೂಡ ಸುಲಭವಾಗಿ ಅನ್ಯರ ಹಾಗೂ ತಮ್ಮ ಆತ್ಮಸ್ಥೈರ್ಯವನ್ನು ತಗ್ಗಿಸಲು ಸಾಧ್ಯವಿರುವ ಗುಣದವರು. ಸಮಾಜದಲ್ಲಿ ಇಂದು ಜಯಶಾಲಿಯಾದ ವ್ಯಕ್ತಿಗಳು ಋಣಾತ್ಮಕ ಚಿಂತನೆಯನ್ನು ಹಿಮ್ಮೆಟ್ಟಿಸಿ ಧನಾತ್ಮಕ ಚಿಂತನೆಯನ್ನು ಅಳವಡಿಸಿಕೊಂಡವರು. ನಮ್ಮ ಚಿಂತನೆ ಋಣಾತ್ಮಕವಾಗುವುದು ನಾವು ಇನ್ನೊಬ್ಬರ ಅಬಿಪ್ರಾಯದ ಮೇಲೆ ಬದುಕಿದಾಗ ಮತ್ತು ನಮ್ಮದೇ ಸ್ವಂತ ಅಬಿಪ್ರಾಯವನ್ನು ಬೆಳೆಸಿಕೊಳ್ಳದೆ ಇದ್ದಾಗ ಎನ್ನುವುದನ್ನು ಅರಿತುಕೊಳ್ಳಬೇಕು. ನಾನು ನನ್ನನ್ನೇ ನಂಬದೆ ಇನ್ನೊಬ್ಬರು ಹೇಳಿದಂತೆ ನಡೆಯುವವನಾದರೆ ನನ್ನ ಜೀವನ ಇನ್ನೊಬ್ಬರ ಮೇಲೆ ಅವಲಂಬಿತವಾಗುವುದು. ಯಾವಾಗ ನನ್ನ ಜೀವನ ಮತ್ತು ಚಿಂತನೆ ಇನ್ನೊಬ್ಬರ ಅಬಿಪ್ರಾಯದ ಮೇಲೆ ಕೇಂದ್ರಿಕ್ರತವಾಗಿರುತ್ತದೆಯೋ ಆಗ ನಾನು ಚಂಚಲ ವ್ಯಕ್ತಿಯಾಗುತ್ತೇನೆ. 
ನಾವೆಲ್ಲಾ ಕತ್ತೆ ಮತ್ತುಅದರ ಮಾಲಿಕನ ಕಥೆಯನ್ನು ಕೇಳಿದ್ದೇವೆ. ಒಮ್ಮೆ ಕತ್ತೆಯ ಮಾಲಿಕ ತನ್ನ ಕತ್ತೆಯೊಂದಿಗೆ ನಡೆದುಕೊಂಡು ಹೋಗುತ್ತಾನೆ. ಅವನು ಸ್ವಲ್ಪ ದೂರ ಕ್ರಮಿಸಿದಾಗ ಅವನಿಗೆ ಸಿಕ್ಕಂತಹ ದಾರಿಹೋಕನೊಬ್ಬ ಅವನಲ್ಲಿ ಪ್ರಶ್ನಿಸಿ, ನೀನೊಬ್ಬ ಹುಚ್ಚ, ಕತ್ತೆಯನ್ನು ನಡೆಸಿಕೊಂಡು  ಹೋಗುವ ಬದಲು ಕತ್ತೆಯ ಮೇಲೆ ಕುಳಿತುಕೊಂಡು ಹೋಗಬಹುದಲ್ಲಎನ್ನುತ್ತಾನೆ. ಅವನ ಮಾತು ಕೇಳಿದ ವ್ಯಕ್ತಿ ಸರಿಯೆಂದು ಕತ್ತೆಯ ಮೇಲೆ ಕುಳಿತುಕೊಂಡು ಪ್ರಯಾಣಿಸುತ್ತಾನೆ. ಸ್ವಲ್ಪದೂರ ಕ್ರಮಿಸಿದಾಗ ಇನ್ನೊಬ್ಬ ದಾರಿಹೋಕ ಅವನ್ನನ್ನು ಉದ್ದೇಶಿಸಿ, ಕತ್ತೆಯ ಮೇಲೆ ಕುಳಿತು ಕತ್ತೆಯನ್ನೇ ಕಷ್ಟಕ್ಕೆ ಗುರಿಪಡಿಸುವ ಕ್ರೂರ ವ್ಯಕ್ತಿ ನೀನು ಎಂದಾಗ ಏನು ಮಾಡುವುದೆಂದು ತೋಚದವನಾಗುತ್ತನೆ. ಹೀಗೆ ಈ ಕತೆ ಮುಂದುವರಿಯುತ್ತದೆ ಮತ್ತು ಆ ವ್ಯಕ್ತಿ ತಾನು ಮಾಡಿದ್ದೆಲ್ಲಾ ಸರಿಯಾಗಿದೆಯೇ ಅಥವಾ ತಪ್ಪೆ ಎನ್ನುವುದನ್ನು ಇನ್ನೊಬ್ಬರ ಅಬಿಪ್ರಾಯದ ಮೇಲೆ ಹೊಂದಿಕೊಂಡು ಪರಿಶೀಲಿಸುತ್ತಾನೆ.  ಕೊನೆಯಲ್ಲಿ ಯಾವುದು ಸರಿ ಯಾವುದು ತಪ್ಪು ಎನ್ನುವುದನ್ನು ಗ್ರಹಿಸಿಕೊಳ್ಳದವನಾಗಿ ಹುಚ್ಚನಂತಾಗುತ್ತನೆ. 
ಮನೋಸ್ಥೈರ್ಯ ಬೆಳೆಸುವಿಕೆ:
ಈ ಕಥೆಯಂತೆ ಹಲವಾರು ಬಾರಿ ನಮ್ಮ ಅತ್ಮಸ್ಥೈರ್ಯದ ಮೇಲೆ ಅಪನಂಬಿಕೆಯಿಂದ ಇನ್ನೊಬ್ಬರ ಮಾತಿನ ನಂಬಿಕೆಯ ಮೇಲೆ ನಮ್ಮ ಜೀವನ ಶೈಲಿಯನ್ನು ಇಟ್ಟುಕೊಂಡಿರುತ್ತೆವೆ. ಎಷ್ಟೊ ಬಾರಿ ನಾವು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವವರೊಂದಿಗೆ ಸೆಲ್ಫಿ ತೆಗೆದುಕೊಂಡು ನಮ್ಮ ವಾಟ್ಸಾಪ್, ಫೇಸ್ಬುಕ್ ಅಥವಾ ಇತರ ಸಮಾಜಿಕ ಜಾಲಾತಾಣಗಳಲ್ಲಿ ಹಾಕಿಕೊಂಡು ಸಂತೋಷಪಡುತ್ತೇವೆ. ಅದನ್ನು ಮಾಡುವ ಬದಲು ನಮ್ಮ ಜೀವನದಲ್ಲಿ ನಮ್ಮ ಆತ್ಮಶಕ್ತಿಯ ಮೇಲೆ ನಂಬಿಕೆ ಇಟ್ಟು, ನಾವೇ ಸಮಾಜದ ಉನ್ನತ ವ್ಯಕ್ತಿಯಾಗಿ ಇತರರು ನಮ್ಮೊಂದಿಗೆ ಸೆಲ್ಫಿ ತೆಗೆದುಕೊಳ್ಳುವಂತೆ ಮಾಡುವ ಆತ್ಮಬಲ ನಮ್ಮಲ್ಲಿರೂಪಿಸುವ ನೆಲೆಯಲ್ಲಿ ಪ್ರಯತ್ನವನ್ನು ನಾವೇಕೆ ಮಾಡಬಾರದು ಎನ್ನುವ ಧನಾತ್ಮಕ ಚಿಂತನೆ ಮಾಡುವುದಿಲ್ಲ. ಧನಾತ್ಮಕ ಚಿಂತನೆ ನಮ್ಮಲ್ಲಿ ರೂಪಿಸಲು ನಾವು ನಮ್ಮ ಒಳ್ಳೆಯ/ಧನಾತ್ಮಕ ಗುಣಗಳ ಬಗ್ಗೆ ಅರಿತುಕೊಳ್ಳಬೇಕು. ನಮ್ಮಲ್ಲಿರುವ ಅಗೋಚರ ಶಕ್ತಿಯನ್ನು ತಿಳಿದುಕೊಳ್ಳಬೇಕು. ಈ ಅಗೋಚರ ಶಕ್ತಿಯನ್ನು ನಮ್ಮಲ್ಲಿ ಹುಡುಕಲು ಕೆಲವೊಂದು ಸಂದರ್ಭಗಳಲ್ಲಿ ಸಾಮಾನ್ಯವಾದ ಅಪಾಯಗಳನ್ನು ಎದುರಿಸಬೇಕು. ಒಬ್ಬ ಪೈಲೆಟ್ ಅಗಬೇಕೆನ್ನುವವನು ಗಗನದಲ್ಲಿ ಹಾರಲು ಮತ್ತು ಅದಕ್ಕೆ ಸಂಬಂಧಿಸಿದ ಅಪಾಯಗಳನ್ನು ಎದುರಿಸಲು ಸನ್ನದ್ಧನಾಗಿರಬೇಕು. ಈ ಅಪಾಯಗಳನ್ನು ಎದುರಿಸಲು ಸನ್ನದ್ಧನಾಗಬೇಕಾದರೆ, ನಮ್ಮ ಮನೋಸ್ಥಿತಿ ಹರಿತಗೊಳಿಸಬೇಕು. ಮನೋಸ್ಥಿತಿಯನ್ನು ಹರಿತಗೋಳಿಸಲು ಮನೋಸ್ಥೈರ್ಯವಿರಬೇಕು. ಮನೋಸ್ತೈರ್ಯವನ್ನು ತಯಾರುಗೊಳಿಸಲು ಇಚ್ಚೆಯಿರಬೇಕು. ಇಚ್ಚೆಯನ್ನು ನಮ್ಮಲ್ಲೆ ನಾವು ತಯಾರುಗೊಳಿಸಬೇಕು. ಈ ಇಚ್ಚೆಯನ್ನು ನಮ್ಮಲ್ಲಿ ತಯಾರುಗೊಳಿಸಲು ನಮ್ಮ ಬಗ್ಗೆ ಧನಾತ್ಮಕ ಚಿಂತನೆಯನ್ನು ಬೆಳೆಸಿಕೊಳ್ಳಬೇಕು. 
ಮನೋಸ್ಥೈರ್ಯ ಬೆಳೆಸುವಲ್ಲಿ ತಂದೆತಾಯಿ/ಹಿರಿಯರ ಪಾತ್ರ:
ಮಕ್ಕಳಲ್ಲಿ ಧನಾತ್ಮಕ ಚಿಂತನೆ ರೂಪಿಸುವ ಮನೋಸ್ಥೈರ್ಯವನ್ನು ಬೆಳೆಸಲು ತಂದೆತಾಯಿ/ಹಿರಿಯರು ಮಕ್ಕಳನ್ನು ಬೆಳೆಸುವ ರೀತಿಯಲ್ಲಿ ಕಾಣಸಿಗುತ್ತದೆ. ನಮ್ಮ ತಂದೆತಾಯಿಗಳಲ್ಲಿ ಮತ್ತು ಹಿರಿಯರಲ್ಲಿ ಒಂದು ಕೆಟ್ಟ ಅಭ್ಯಾಸವಿದೆ. ಅದೇನೆಂದರೆ, ನಮ್ಮ ಮಕ್ಕಳನ್ನು ಇತರ ಮಕ್ಕಳೊಂದಿಗೆ ತುಲನೆ/ಹೋಲಿಕೆ ಮಾಡಿ ನಮ್ಮ ಮಕ್ಕಳನ್ನು ಹೀಯಾಳಿಸುವುದು ಅಥವಾ ಅವರಲ್ಲಿ ಸ್ವತಃದ ಕುರಿತು ಅಪನಂಬಿಕೆ ಬರುವಂತೆ ಮಾಡುವುದು. ಉದಾಹರಣೆಗೆ, ನಮ್ಮ ಮಗು ಉತ್ತಮವಾಗಿ ಕಲಿಯದಿದ್ದಲ್ಲಿ ಅಥವಾ ಉತ್ತಮವಾಗಿ ಯಾವುದೇ ಕೆಲಸ ಮಾಡದಿದ್ದಲ್ಲಿ ಆ ಮಗುವನ್ನು ಸರಿಪಡಿಸುವ ಅಥವಾ ಮನೋಸ್ಥೈರ್ಯ ತುಂಬಿ ಬಲಶಾಲಿ ಮಾಡುವ ಬದಲು, ನಮ್ಮ ನೆರೆಹೊರೆಯ ಮಕ್ಕಳೊಂದಿಗೆ  ಅಥವಾ ನಮ್ಮದೇ ಇನ್ನೊಂದು ಮಗುವಿನೊಂದಿಗೆ ತುಲನೆ ಮಾಡಿ, ನೋಡು, ನೀನು ದಡ್ಡ/ದಡ್ಡಿ....... ಅವನು/ಅವಳು ನೋಡು ಎಷ್ಟು ಚೆನ್ನಾಗಿ ಓದುತ್ತಾನೆ/ಳೆ........ ನೀನು ಯಾವುದಕ್ಕೂ ಸಲ್ಲುವವನಲ್ಲ/ಳಲ್ಲ......... ಎನ್ನುವ ಮಾತಿನೊಂದಿಗೆ ಹಿಯಾಳಿಸುತ್ತೇವೆ. ಈ ಮಾತುಗಳಿಂದ ಆ ಚಿಕ್ಕ ಮಗುವಿನ ಮನೋಸ್ಥೈರ್ಯದ ಮೇಲೆ ಯಾವ ರೀತಿಯ ಅಡ್ಡ/ಕೆಟ್ಟ ಪರಿಣಾಮ ಬೀರುತ್ತದೆ ಎನ್ನುವ ಕಿಂಚಿತ್ತು ಕಾಳಜಿಯಿಲ್ಲದೆ ಇಂತಹ ಮಾತುಗಳನ್ನು ಆಡುತ್ತೇವೆ. ನಮ್ಮ ಮಗು ಕೆಲವೊಂದು ಸಂದರ್ಭಗಳಲ್ಲಿ ತಪ್ಪು ಮಾಡಿದಾಗ ಅಥವಾ ಯಾವುದೇ ವಿಷಯದಲ್ಲಿ ಅಭಿರುಚಿ ತೋರಿಸದಿದ್ದಲ್ಲಿ ಆ ಮಗುವನ್ನು ಹೀಯಾಳಿಸುವ ಬದಲು, ನೀನು ಮಾಡಲು ಸಕ್ತನಾಗಿದ್ದಿಯಾ, ನಿನ್ನಿಂದ ಇದು ಸಾಧ್ಯವಿದೆ, ನಾನು/ನಾವು ನಿನ್ನೊಂದಿಗಿದ್ದೇನೆ/ವೆ.......... ಎನ್ನುವ ಪ್ರೋತ್ಸಾಹದಾಯಕ ಮಾತುಗಳನ್ನು ಚಿಕ್ಕಂದಿನಿಂದ ಆ ಮಗುವಿನ ತಲೆಯಲ್ಲಿ ಹಾಕಿದಾಗ ಆ ಮಗು ಒಬ್ಬ ಸದೃಢ, ಸಂಪನ್ಮೂಲಭರಿತ ವ್ಯಕ್ತಿಯಾಗಿ ಬೆಳೆಯಲು ಸಾಧ್ಯವಿದೆ. ಆ ಮಗುವಿನ ಬಗ್ಗೆ ಪ್ರೋತ್ಸಾಹದಾಯಕ ಮಾತುಗಳನ್ನು ಅಡಿದಲ್ಲಿ, ಆ ಮಗು ತನ್ನಲ್ಲಿ ಹುದುಗಿರುವ ಅಗೋಚರವಾದ ಶಕ್ತಿಯನ್ನು ಬೆಳಕಿಗೆ ತರಲು ಮತ್ತು ಒಬ್ಬ ಪ್ರತಿಭಾವಂತ ವ್ಯಕ್ತಿಯಾಗಿ ತನ್ನನ್ನೆ ತಾನು ರೂಪಿಸಿಕೊಳ್ಳಲು ಶಕ್ತನಾಗುತ್ತಾನೆ/ಳೆ. ಆದುದರಿಂದ ಮಕ್ಕಳಲ್ಲಿ ಅತ್ಮಸ್ಥೈರ್ಯ ತುಂಬಿಸುವುದು ನಮ್ಮ ಹಿರಿಯರ ಮತ್ತು ತಂದೆತಾಯಿಗಳಾದ ನಮ್ಮ ಕರ್ತವ್ಯ.
ಹಾಗೆಯೇ, ನಾವು ಯುವಜನರು ನಮ್ಮಲ್ಲಿರುವ ಮನೋಸ್ಥೈರ್ಯವನ್ನು ಬೆಳೆಸಿಕೊಳ್ಳಲು ಮತ್ತು ಅದಕ್ಕೆ ಸಂಬಂಧಿಸಿದ ಗುಣಲಕ್ಷಣಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳಲು ನಿರಂತರ ಪ್ರಯತ್ನಪಡಬೇಕು. ಆ ಸಂದರ್ಭಗಳಲ್ಲಿ ಮಾತ್ರ ನಾವು ನಮ್ಮಲ್ಲಿರುವ ಹಿರಿಮೆಯನ್ನು ತಿಳಿದುಕೊಂಡು ನಮ್ಮ ಸ್ವಂತ ಶಕ್ತಿ ಮತ್ತು ಅಬಿಪ್ರಾಯದ ಮೇಲೆ ನಂಬಿಕೆಯಿಟ್ಟು, ದೇವರ ಅಶೀರ್ವಾದದೊಂದಿಗೆ ಉತ್ತಮ ವ್ಯಕ್ತಿಗಳಾಗಿ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಿದೆ.