ಸಮಾಜಮುಖಿ ಯುವಜನಾಂಗ

Thumbnail

 

 ಬದುಕಿ ಬಾಳಲು ಬೇಕೆನಗೆ ಸಮಾಜ 

ಹುಸಿಕಾರಣವ ನುಡಿದು ದೂರಲಾರೆ!

ತಾಳ್ಮೆ ಕರುಣೆ ಮಮತೆ ಇರಲಿ ಮನುಜ 

ಅಹಂಕಾರದಿ ಕಾಲಹರಣ ಮಾಡಲಾರೆ!!

 

ಸಮಾಜವೆಂದರೆ ಮನುಜ ಸಂಕುಲದ ಜೊತೆಗೆ ಬಾಳುವ ಎಲ್ಲಾ ಜೀವರಾಶಿಗಳ ಸಮೂಹ. ಯುವಕರಾದ ನಾವು ಕಲಿಯುದರ ಜೊತೆಗೆ ಸಮಾಜಮುಖಿ ಕಾರ್ಯಗಳನ್ನು ಮಾಡಿ ಬೆಳೆದರೆ ಉತ್ತಮ ಸಮಾಜ ನಿರ್ಮಾಣ ಖಚಿತ. ಕೊರೊನ ಮಹಾಮಾರಿಯ ಹೊಡೆತಕ್ಕೆ ಗೃಹಬಂಧಿಯಾಗಿರಲು ನಾವು ಟಿವಿ ಮೊಬೈಲ್ ದಾಸರಾಗಿದ್ದೇವೆ. ಇದು  ಸಮಾಜಮುಖಿ ಕಾರ್ಯಕ್ಕೆ ಉತ್ತಮ ಸಮಯ. ವಿದ್ಯಾವಂತರು ನಾವು  ಮನೆಯಲ್ಲಿಯೇ ಹಿರಿಯರಿಗೆ ಕಿರಿಯರಿಗೆ ಅರೋಗ್ಯ ರಕ್ಷಣೆ ಮಾಹಿತಿ ನೀಡಿದರೆ ಅದೇ ಸಮಾಜಮುಖಿ ಕಾರ್ಯ. ನನ್ನನ್ನು ಸೇರಿಸಿ ಎಷ್ಟೋ ಯುವಕರು ತಮ್ಮವರ ಜೊತೆ ಸೇರಿ ಬಡವರಿಗೆ ಆಹಾರ ಒದಗಿಸುವ ಪುಣ್ಯದ ಕೆಲಸ ಮಾಡುವರು. 

 

ನಮಗೆ ಬದುಕಲು ದೇವರು ಎಂಬ ಶಕ್ತಿ ಉತ್ತಮ ಪ್ರಕೃತಿಯ ನೀಡಿದ್ದಾರೆ. ಪ್ರಕೃತಿಯ ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ದಿನಕ್ಕೊಂದು ಗಿಡ ನೆಟ್ಟು ಪೋಷಿಸಲು ಮುಂದೊಂದು ದಿನ ಶುದ್ಧ ಗಾಳಿಯ ಮರಗಳು ನೀಡುತ್ತಾ ನಮ್ಮನ್ನು ಕಾಪಾಡುತ್ತದೆ. ಎಲ್ಲಾ ರೀತಿಯಲ್ಲಿ ಬದುಕಲು ಸಮಾಜ ನಮಗೆ ಬೇಕು, ಒಬ್ಬರಿಗೊಬ್ಬರು ಸಹಾಯ ಮಾಡಿದರೆ ಕಷ್ಟ ಎಂಬ ಮಾತು ಮರೆಯಾಗಬಹುದು .  "ಜಗದ ಡೊಂಕ ನಾ ತಿದ್ದಲಾರೆ " ಎಂಬುದು ಹಿತನುಡಿ.  ಆದರೆ ನಮಗೆ ಸಾಧ್ಯವಾದಷ್ಟು ಸಹಾಯ ಮಾಡಿ ಪ್ರತಿಫಲದ ಚಿಂತನೆ ಬಿಟ್ಟರೆ ಖಂಡಿತ ದೇವರು ನಮ್ಮ ಕೈ ಬಿಡಲಾರ ಎಂಬುದು ನನ್ನ ಅಚಲ ನಂಬಿಕೆ. 

 

ಇತ್ತೀಚೆಗೆ ನಮ್ಮ ಯುವ ಜನರಲ್ಲಿ ಬದುಕುವ ಛಲ ಕಡಿಮೆಯಾಗಿದೆ ಎನ್ನುವಂತೆ ಕಂಡುಬರುತ್ತದೆ.  ಸಣ್ಣಪುಟ್ಟ ಕಾರಣಗಳನ್ನು ಮುಂದಿಟ್ಟು ಸುಂದರ ಬದುಕನ್ನು ಕೊನೆಗೊಳಿಸುತ್ತಿರುವುದು ನೀವು ಕೇಳಿರಬಹುದು ಯುವಜನಾಂಗದ  ಆತ್ಮಹತ್ಯೆ ಪ್ರಕರಣಗಳು, ಮಾನಸಿಕ ಒತ್ತಡ ಎನ್ನುವ ಕಾರಣ ನೀಡಿ ಅಪರಾಧಿ ಪ್ರಕರಣಗಳು  ಜಾಸ್ತಿಯಾಗುತ್ತಾ ಇವೆ. ಇದಕ್ಕೆಲ್ಲಾ ಮುಖ್ಯ ಕಾರಣ ವ್ಯಕ್ತಿಗಳಿಗೆ ತಮ್ಮ ಮೇಲೆ ಸ್ವಾಭಿಮಾನ, ಸ್ವ ಗೌರವ ಇಲ್ಲದಿರುವುದು ಆಗಿರಬಹುದೇ? ನಮ್ಮೆಲ್ಲರಲ್ಲಿಯೂ ಅಪಾರವಾದ ಸಾಮರ್ಥ್ಯಗಳಿವೆ, ಪ್ರತಿಭೆಯಿದೆ. ಕೌಶಲ್ಯಗಳಿವೆ ಅವುಗಳನ್ನು ಒಪ್ಪಿಕೊಂಡು ಗೌರವಿಸಿದಾಗ ನಾವು ಉತ್ತಮ ನಾಗರೀಕರಾಗುತ್ತಾ ಹೋಗುತ್ತೇವೆ. ನಾವು ನಮ್ಮನ್ನೇ ಇತರರೊಡನೆ ತುಲನೆ ಮಾಡಿಕೊಳ್ಳುವುದು ತಪ್ಪು ಯಾಕೆಂದರೆ ಪ್ರತಿ ವ್ಯಕ್ತಿಯೂ ವಿಶಿಷ್ಟನಾಗಿದ್ದಾನೆ.

 

ಇನ್ನೊಂದು ಮುಖ್ಯ ವಿಷಯವೆಂದರೆ ಇಂದಿನ ನಮ್ಮ ಯುವ ಸಹೋದರ ಸಹೋದರಿಯರು ತಮ್ಮನ್ನು ನಿಜವಾಗಿ ಗೌರವಿಸಲು ಸಾಧ್ಯವಾಗುತ್ತಿಲ್ಲ  ಅದರ ಪರಿಣಾಮವಾಗಿ ಅನ್ಯರನ್ನು ಗೌರವಿಸುವುದೂ ಕಷ್ಟವಾಗುತ್ತಿದೆ. ಇದರಿಂದಾಗಿ  ಜನರಲ್ಲಿ ಉತ್ತಮ ಸಂಬಂಧಗಳು ಬೆಳೆಯುತ್ತಿಲ್ಲ ಜನರು ಹೆಚ್ಚು ಹೆಚ್ಚು ಏಕಾಂಗಿಯಾಗಿ ಬದುಕುವುದರಿಂದ ಸಮಸ್ಯೆಗಳಿಗೆ ಪರಿಹಾರ ಸಿಗದೇ ಜೀವನ ಅಂತ್ಯ ಮಾಡುತ್ತಿದ್ದಾರೆ. ನಮ್ಮ ಮನಸ್ಸಿನಲ್ಲಿ ಏನೇ ಸಮಸ್ಯೆಯಿದ್ದರೆ ನಮ್ಮವರಲ್ಲಿ ಹೇಳಿಕೊಂಡರೆ ಖಂಡಿತ ಪರಿಹಾರ ಸಿಗುವುದು.  ಆದ್ದರಿಂದ ನಂಬಿಕೆ ಎನ್ನುವುದು ಪ್ರತಿ ಮನುಜನಿಗೆ ಅಮೃತವಿದ್ದಂತೆ.

ಇಂದಿನ ಯುವಕರು ಹೆಚ್ಚು ಹೆಚ್ಚು ತಮ್ಮ ಅಗತ್ಯಗಳ ಕುರಿತು ಮಾತ್ರ ಯೋಚಿಸುತ್ತಿದ್ದಾರೆ. ಇದು ಅತ್ಋಪ್ತಿಯ ಕಾರಣವಾಗುವ ಸಾಧ್ಯತೆಯಿದೆ. ನನ್ನ ಸುಖ ಸಂತೋಷಕ್ಕಾಗಿ ಇನ್ನೊಬ್ಬರನ್ನು ಹಿಂಸಿಸುವ ಪ್ರವ್ರತ್ತಿಯೂ ಇದರಿಂದ ಬೆಳೆಯಬಹುದು ಅದರ ಹೊರತಾಗಿ ಯುವಜನರು ಸಮಾಜಮುಖಿಯಾಗಿ ಬೆಳೆದರೆ, ನಮಗಿಂತ ಕಷ್ಟದಲ್ಲಿರುವವರ ಅಗತ್ಯಗಳಿಗೆ ಸ್ಪಂದಿಸುತ್ತಾ ಮುಂದುವರೆದರೆ ಖಂಡಿತ ನಮ್ಮಲ್ಲಿ ಆತ್ಮವಿಶ್ವಾಸದ, ಅನ್ಯರ ಮೇಲೆ ನಂಬಿಕೆಯ ನೆಲೆ ಗಟ್ಟಿಗೊಳ್ಳುತ್ತಾ ಹೋಗುತ್ತದೆ ಆಗ ಆತ್ಮಹತ್ಯೆಯಂತಹ   ತಪ್ಪು ನಿರ್ಧಾರ ಯಾರೂ ಮಾಡಲಾರರು.  ವಿಲ್ಲಿಯಮ್ ಷೇಕ್ಸ್ ಪಿಯರ್  ಜ್ಯೂಲಿಯಸ್ ಸೀಝರ್ ನಾಟಕದಲ್ಲಿ ಹೇಳುವ, ‘ಬದುಕೆಂದರೆ ನೊರೆ ನೀರ್ಗುಳ್ಳೆ,

ಅನ್ಯರ ನೋವಿನಲ್ಲಿ ಕರುಣಾಂತ:ಕರಣ,

ತನ್ನ ನೋವಿನಲ್ಲಿ ಧೈರ್ಯ’ ಎಂಬ

ಎರಡು ಸಂಗತಿಗಳು ಮಾತ್ರ ಬಂಡೆಯಂತೆ,

ಎನ್ನುವ ಮಾತಿನೊಂದಿಗೆ ಈ ಲೇಖನ ಸಮಾಪ್ತಿಗೊಳಿಸುವುದು ಸೂಕ್ತ ಎಂದು ನನ್ನ ಅಭಿಪ್ರಾಯ.