ಭಾರತೀಯ ಸಂವಿಧಾನ – ಭಾಗ 2

Thumbnail

ಭಾರತೀಯ ಸಂವಿಧಾನ – ಭಾಗ 2

ಭಾರತೀಯ ಸಂವಿಧಾನದ ವಿಶಿಷ್ಟ ಲಕ್ಷಣಗಳು

ಸಮಕಾಲೀನ ವಿಶ್ವದಲ್ಲಿ ಶೈಕ್ಷಣಿಕವಾಗಿ ಹಿಂದುಳಿದ ಜನರಿಗಾಗಿ ಮಹಾನ್ ಸಂವಿಧಾನವೊಂದನ್ನು ಬಾಬಾಸಾಹೇಬ್ ಬಿ ಆರ್ ಅಂಬೇಡ್ಕರ್ ಅವರ ನಾಯಕತ್ವದಲ್ಲಿ ರಚಿಸಲಾಯ್ತು. ಈ ಸಂವಿಧಾನ ಹಲವಾರು ವಿಶೇಷ ಹಾಗೂ ವಿಶಿಷ್ಟ  ಲಕ್ಷಣಗಳನ್ನು ಹೊಂದಿದೆ.

1. ಇದು ಲಿಖಿತ ಸಂವಿಧಾನವಾಗಿದೆ ಹಾಗೂ ಒಂದೇ ಕೋಶದಲ್ಲಿನ ದಾಖಲೆಯಾಗಿದೆ : ಭಾರತದ ಸಂವಿಧಾನವು ಬರೆದಿರಿಸಲಾದ ದಾಖಲೆಯಾಗಿದೆ ಹಾಗೂ ಯಾವುದೇ ಸಂದರ್ಭದಲ್ಲಿಯೂ ಸುಲಭವಾಗಿ ಬಳಸಲು ಲಭ್ಯವಾಗಿದೆ. ಭಾರತ ಸರ್ಕಾರವು ತನ್ನ ಕಾನೂನು ಮತ್ತು ಸಂಸದೀಯ ವ್ಯವಹಾರ ಖಾತೆಯ ಮೂಲಕ ಇದರ ಪ್ರತಿಗಳನ್ನು ಪರಿಷ್ಕರಿಸಿ ಮುದ್ರಿಸುತ್ತದೆ. ಜನಸಾಮಾನ್ಯರಿಗೆ ಕನಿಷ್ಟ ವೆಚ್ಚದಲ್ಲಿ ಈ ಗ್ರಂಥವು ಲಭಿಸುತ್ತದೆ.

2. ಇದು ಸಂವಿಧಾನ ಸಂರಚನೆಯ ಉದ್ದೇಶಕ್ಕಾಗಿಯೇ ಸಂರಚಿಸಲಾದ ಸದನವೊಂದರಿಂದ ರೂಪುಗೊಂಡ ಸಂವಿಧಾನವಾಗಿದೆ: ಭಾರತದ ಸಂವಿಧಾನವನ್ನು ರಚಿಸುವ ಉದ್ದೇಶದಿಂದಲೇ ಸಂವಿಧಾನ ಸಂರಚನಾ ಸಭೆಯನ್ನು ರೂಪಿಸಲಾಗಿತ್ತು ಹಾಗೂ ಸಂವಿಧಾನ ಸಂರಚನಾ ಕಾರ್ಯ ಪೂರೈಸಿದ ನಂತರ ಈ ಸದನವನ್ನು ಬರ್ಖಾಸ್ತುಗೊಳಿಸಲಾಗಿತ್ತು. 

3. ಇದು ವಿಶ್ವದ ವಿಸ್ತøತ ಸಂವಿಧಾನವಾಗಿದೆ: ಭಾರತದ ಸಂವಿಧಾನವು ವಿಶ್ವದ ಅತಿ ವಿಸ್ತøತ ಸಂವಿಧಾನವಾಗಿದೆ:  ಆನೆ ಸಂವಿಧಾನ ಸಂರಚನಾ ಸಭೆಯ ಸಂಕೇತವಾಗಿತ್ತು.  ಈ ಸಂಕೇತದಂತೆ ಭಾರತದ ಸಂವಿಧಾನವು 22 ಭಾಗಗಳಲ್ಲಿ ಹಂಚಿಕೆ ಮಾಡಲಾದ 395 ವಿಧಿಗಳನ್ನು ಹೊಂದಿತ್ತು ಹಾಗೂ ಅದು 8 ಅನುಸೂಚಿಗಳನ್ನು ಹೊಂದಿತ್ತು. ಈ ರೀತಿ ವಿಸ್ತøತ ಸಂವಿಧಾನವು ನಮಗೆ ಅನಿವಾರ್ಯವಾಗಿತ್ತು ಯಾಕೆಂದರೆ ಭಾರತದ ಬಹುಪಾಲು ಜನರು ಅನಕ್ಷರಸ್ಥರಾಗಿದ್ದು ಎಲ್ಲಾ ವ್ಯವಸ್ಥೆಗಳನ್ನು ವಿಸ್ತøತವಾಗಿ ವಿವರಿಸುವ ಅನಿವಾರ್ಯತೆ ಇತ್ತು.

ಇವತ್ತು (2020) ಭಾರತದ ಸಂವಿಧಾನದಲ್ಲಿ  25 ಭಾಗಗಳಲ್ಲಿ ಹಂಚಿಕೆಯಾಗಿರುವ 448 ವಿಧಿಗಳಿವೆ (ಸಂಖ್ಯೆ ಮಾತ್ರ 395 ಎಂದೇ ಇರಿಸಲಾಗಿದೆ) ಹಾಗೂ 12 ಪರಿಶಿಷ್ಟಗಳಿವೆ ಮತ್ತು 5 ಪುರವಣಿಗಳಿವೆ. ಭಾರತದ ಸಂವಿಧಾನಕ್ಕೆ ಈಗಾಗಲೇ 104 ತಿದ್ದುಪಡಿಗಳಾಗಿವೆ. 

ಅಮೆರಿಕೆಯ ಸಂಯುಕ್ತ ಸಂಸ್ಥಾನದ ಸಂವಿಧಾನವು ಬರೇ ನಾಲ್ಕು ಉದ್ದ ಪುಟಗಳಲ್ಲಿ ಬರೆಯಲಾದ 4543 ಶಬ್ಧಗಳಲ್ಲಿರುವ ಬರೇ 7 ವಿಧಿಗಳನ್ನು ಹೊಂದಿರುವ ವಿಶ್ವದ ಅತಿ ಚುಟುಕಾದ ಸಂವಿಧಾನವಾಗಿದೆ. ಕಳೆದ 232 ವರ್ಷಗಳಲ್ಲಿ (1788-2020) ಅದು ಬರೇ 27 ಬಾರಿ ತಿದ್ದುಪಾಟಾಗಿದೆ.

4. ಇದು ನಮ್ಯತೆ ಹಾಗೂ ಸಂಕೀರ್ಣತೆಯ ಸಂಗಮವಾಗಿರುವ ಸಂವಿಧಾನವಾಗಿದೆ: ಭಾರತದ ಸಂವಿಧಾನದ ತಿದ್ದುಪಡಿ ಪ್ರಕ್ರಿಯೆಯು ನಮ್ಯತೆ, ಸಾಮಾನ್ಯತೆ ಹಾಗೂ ಜಟಿಲತೆ ಈ ಮೂರು ರೀತಿಯದಾಗಿದ್ದು ನಮ್ಯತೆ ಮತ್ತು ಸಂಕೀರ್ಣತೆಯ ಸಂಗಮದಂತಿರುವ ಸಂವಿಧಾನವಾಗಿದೆ. 

ಭಾರತದ ಸಂವಿಧಾನದ ಕೆಲವು ಭಾಗಗಳನ್ನು ಸಂಸತ್ತಿನ ಎರಡೂ ಸದನಗಳ ಹಾಜರಿರುವ ಸದಸ್ಯರ ಸರಳ ಬಹುಮತದ ಮೂಲಕ ತಿದ್ದುಪಡಿ ಮಾಡಬಹುದಾಗಿದೆ. ಕೆಲವು ಭಾಗಗಳನ್ನು ಸಂಸತ್ತಿನ ಎರಡೂ ಸದನಗಳ ಮೂರನೇ ಎರಡರಷ್ಟು ಬಹುಮತದ ಮೂಲಕ ಮಾತ್ರ ತಿದ್ದುಪಡಿ ಮಾಡಬಹುದಾಗಿದೆ. ಸಂವಿಧಾನದ ಮೂಲ ಸ್ವರೂಪದಂತಿರುವ ಕೆಲವು ಭಾಗಗಳನ್ನು ಸಂಸತ್ತಿನ ಎರಡೂ ಸದನಗಳ ಮೂರನೇ ಎರಡರಷ್ಟು ಬಹುಮತ ಹಾಗೂ ದೇಶದಲ್ಲಿರುವ ಒಟ್ಟು ರಾಜ್ಯಗಳ ಪೈಕಿ 50% ಕ್ಕಿಂತ ಹೆಚ್ಚು ರಾಜ್ಯಗಳ ಶಾಸನಸಭೆಗಳ ಬಹುಮತದಿಂದ ಮಂಜೂರಾಗುವ ಮೂಲಕ ಮಾತ್ರ ತಿದ್ದಬಹುದಾಗಿದೆ. 

5. ಸಂಸದೀಯ ವ್ಯವಸ್ಥೆಯನ್ನು ಎತ್ತಿಹಿಡಿಯುತ್ತದೆ: ಭಾರತದ ಸಂವಿಧಾನದ ಅಡಿಯಲ್ಲಿ ರಾಜ್ಯಾಡಳಿತವು ಸಂಸದೀಯ ನೆಲೆಯಲ್ಲಿ ನಡೆಯುತ್ತದೆ ಹಾಗೂ ರಾಜ್ಯಾಧಿಕಾರದ ಪಾರಮ್ಯವು ಜನರ ಪರವಾಗಿ ಸಂಸತ್ತಿನಿಂದ ನಿರ್ವಹಿಸಲ್ಪಡುತ್ತದೆ. ಭಾರತದ ರಾಷ್ಟ್ರಪತಿಗಳು ಸಾಂವಿಧಾನಿಕ ಮುಖ್ಯಸ್ಥರಾಗಿದ್ದು ನಾಮಮಾತ್ರದ ಕಾರ್ಯಾಧಿಕಾರಿಗಳಾಗಿರುತ್ತಾರೆ ಅವರು ರಾಷ್ಟ್ರದ ಮುಖ್ಯಸ್ಥರೂ ಆಗಿರುತ್ತಾರೆ ಆದರೆ ವಾಸ್ತವಿಕ ಕಾರ್ಯಾಧಿಕಾರ ಮತ್ತು ಸರ್ಕಾರದ ನಾಯಕತ್ವವು ಪ್ರಧಾನಮಂತ್ರಿ ಹಾಗೂ ಸಂಪುಟದ ಕೈಯಲ್ಲಿರುತ್ತದೆ. ಈ ಸಂಪುಟವು ಸಂಸತ್ತಿಗೆ ಉತ್ತರದಾಯಿ ಆಗಿರುತ್ತದೆ. ಭಾರತದಲ್ಲಿ ಕೇಂದ್ರ, ರಾಜ್ಯ ಹಾಗೂ ಸ್ಥಳೀಯ ಮಟ್ಟದಲ್ಲಿ ಶಾಸಕೀಯ ವ್ಯವಸ್ಥೆಗಳು ಸಂವಿಧಾನಾನುಸಾರ ರಾಷ್ಟ್ರದ ಅಭಿವೃದ್ಧಿಯುತ ಬೆಳವಣಿಗೆಗೆ ಹಾಗೂ ಪ್ರಜಾಸತ್ತೆಯ ಉಳಿವಿಗೆ ತುಂಬಾ ಅಗತ್ಯವಾಗಿವೆ. 

5 (ಅ) ವಯಸ್ಕ ಮತದಾನ ಪದ್ಧತಿ: ಭಾರತೀಯ ಸಂವಿಧಾನ ಕೊಡಮಾಡಿರುವ ಪ್ರಜಾಸತ್ತೆಯ ಸಂರಕ್ಷಣೆಗಾಗಿ ಭಾರತದ ಎಲ್ಲಾ ಪ್ರಜೆಗಳ ಅಭಿಮತವನ್ನು ಪಡೆಯುವುದಕ್ಕಾಗಿ ವಯಸ್ಕ ಮತದಾನ ಪದ್ಧತಿ ಕ್ರಮಬದ್ಧಗೊಳಿಸಲಾಗಿದೆ. 21 ವರ್ಷ ಮೀರಿದ ಎಲ್ಲಾ ಪ್ರಜೆಗಳು ಮತ ಹಾಕಲು ಅರ್ಹತೆ ಹೊಂದಿದ್ದಾರೆ. (ಶ್ರೀಯುತ ರಾಜೀವ್ ಗಾಂಧೀಜಿಯವರ ಪ್ರಧಾನಮಂತ್ರಿತ್ವದಲ್ಲಿ ಸಂವಿಧಾನದ 61 ನೇ ತಿದ್ದುಪಡಿಯನುಸಾರ ಈ ವಯಸ್ಸನ್ನು 18 ವರ್ಷಕ್ಕೆ ಇಳಿಸಲಾಗಿದೆ 

ಸಂಸದೀಯ ವ್ಯವಸ್ಥೆ ಎನ್ನುವ ನೆಲೆಯಲ್ಲಿ ಕೇಂದ್ರ ಶಾಸಕಾಂಗ ದ್ವಿಸದನವಾಗಿದೆ. ಇದರಲ್ಲಿ ಲೋಕಸಭೆ ಎಂಬ ಕೆಳಮನೆಯಿದೆ ಹಾಗೂ ರಾಜ್ಯಸಭೆ ಎಂಬ ಮೇಲ್ಮನೆ ಇದೆ. ಎಲ್ಲಾ ರಾಜ್ಯಗಳ ಶಾಸಕಾಂಗದಲ್ಲಿ ವಿಧಾನಸಭೆ ಎಂಬ ಕೆಳಮನೆಯಿದೆ ಆದರೆ ಕೆಲವೇ (ಕರ್ನಾಟಕ, ಆಂದ್ರಪ್ರದೇಶ, ತೆಲಂಗಾಣ, ಬಿಹಾರ, ಮಹಾರಾಷ್ಟ್ರ, ಉತ್ತರ ಪ್ರದೇಶ) ರಾಜ್ಯಗಳಲ್ಲಿ ವಿಧಾನ ಪರಿಷತ್ತು ಎಂಬ ಮೇಲ್ಮನೆಯೂ ಇದೆ. ನಗರ ಮಟ್ಟದಲ್ಲಿ ಜನಸಂಖ್ಯಾನುಸಾರ ಒಂದೇ ಹಂತದ ಬ್ರಹನ್ಮಹಾನಗರಪಾಲಿಕೆಗಳು, ಮಹಾನಗರಪಾಲಿಕೆಗಳು, ನಗರ ಪಾಲಿಕೆಗಳು, ಪುರಸಭೆಗಳು, ಪಟ್ಟಣ ಪಂಚಾಯತ್ಗಳು ಇವೆ. ಆದರೆ ಗ್ರಾಮೀಣ ಹಂತದಲ್ಲಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ಗಳು ಹಾಗೂ ಗ್ರಾಮ ಪಂಚಾಯತ್ಗಳು ಇವೆ.  

6. ಭಾರತದ ಸಂವಿಧಾನವು ತನ್ನ ಪ್ರಜೆಗಳಿಗೆ ಮೂಲಭೂತ ಹಕ್ಕುಗಳನ್ನು ಹಾಗೂ ಮೂಲಭೂತ ಕರ್ತವ್ಯಗಳನ್ನು ಸ್ಪಷ್ಟಪಡಿಸುತ್ತದೆ: ನಮ್ಮ ಸಂವಿಧಾನದಲ್ಲಿ ಭಾರತೀಯರ ಮೂಲಭೂತ ಹಕ್ಕುಗಳನ್ನು sಸ್ಪಷ್ಟವಾಗಿ ಹಾಗೂ ಸರಳವಾಗಿ ತಿಳಿಯಪಡಿಸಲಾಗಿದೆ. ಅದೇ ರೀತಿ ಭಾರತೀಯರ ಮೂಲಭೂತ ಕರ್ತವ್ಯಗಳನ್ನು ಕೂಡಾ ವಿವರಿಸಲಾಗಿದೆ. ಭಾರತೀಯರ ಮೂಲಭೂತ ಹಕ್ಕುಗಳಿಗೆ ದಕ್ಕೆಯಾದಾಗ ನ್ಯಾಯಾಲಯದ ಮೂಲಕ ಅಭಿರಕ್ಷೆ ಪಡೆಯುವ ವ್ಯವಸ್ಥೆ ಮಾಡಲಾಗಿದೆ.

ಭಾರತೀಯರ ಮೂಲಭೂತ ಹಕ್ಕುಗಳು

1.ಸಮಾನತೆಯ ಹಕ್ಕು –(ಭಾಗ -3 ವಿಧಿ 14 ರಿಂದ 18)        

2. ಸ್ವಾತಂತ್ರ್ಯದ ಹಕ್ಕು  (ಭಾಗ -3 ವಿಧಿ 19 ರಿಂದ 22)

3.ಶೋಷಣೆಯ ವಿರುದ್ಧ ಹಕ್ಕು –(ಭಾಗ -3 ವಿಧಿ 23,24)       

4. ಧಾರ್ಮಿಕ ಹಕ್ಕು –(ಭಾಗ -3 ವಿಧಿ 125 – 28)

5 ಸಾಂಸ್ಕøತಿಕ ಹಾಗೂ ಶೈಕ್ಷಣಿಕ ಹಕ್ಕು (ಭಾಗ -3 ವಿಧಿ 129-31) 

6. ಸಾಂವಿಧಾನಿಕ ಸಂರಕ್ಷಣೆಯ ಹಕ್ಕು –(ಭಾಗ -3 ವಿಧಿ 32 ರಿಂದ 35)

7. ಭಾರತದ ಸಂವಿಧಾನವು ಏಕಕಾಲಕ್ಕೆ ಸಂಯುಕ್ತ (ಎಕೀಕೃತ) ಹಾಗೂ ಒಕ್ಕೂಟದ (ಫೆಡರಲ್)ಗುಣಲಕ್ಷಣಗಳನ್ನು ಹೊಂದಿದೆ. ನಮ್ಮ ಸಂವಿಧಾನವನ್ನು ಒಕ್ಕೂಟ ಸ್ವರೂಪದ್ದಾಗಿ ಕಂಡರೂ ಎಕೀಕೃತ ಅಂತಃಸತ್ವ ಹೊಂದಿರುವ ಸಂವಿಧಾನ ಎನ್ನಲಾಗುತ್ತದೆ. ಸಾಂಸ್ಕøತಿಕ ಬಹುತ್ವವನ್ನು ಹೊಂದಿರುವ ಭಾರತದ ಐಕ್ಯಮತವನ್ನು ಕಾಯುವುದಕ್ಕಾಗಿ ಹಾಗೂ ವಿವಿಧತೆಯಲ್ಲಿ ಏಕತೆಯ ಚಿಂತನೆಯನ್ನು ಬಲಪಡಿಸುವುದಕ್ಕಾಗಿ ರಾಜ್ಯಗಳ ವಿಶಿಷ್ಟತೆಯನ್ನು ಮತ್ತು ಅಧಿಕಾರಗಳನ್ನು ಈ ಸಂವಿಧಾನವು ಎತ್ತಿ ಹಿಡಿಯುತ್ತದೆ ಆದರೆ ಭಾರತವನ್ನು ಒಂದು ಬಲಿಷ್ಟ ಮತ್ತು ಐಕ್ಯತೆಯುಳ್ಳ ರಾಷ್ಟ್ರವಾಗಿ ಉಳಿಸುವುದಕ್ಕಾಗಿ ಒಕ್ಕೂಟ ಸರ್ಕಾರದ ಬಲ ಹೆಚ್ಚಿಸುವ ಹಾಗೂ ವಿಶೇಷಾಧಿಕರಗಳನ್ನು ಸುನಿಶ್ಚಿತಗೊಳಿಸುವ ಅಂಶಗಳೂ ಈ ಸಂವಿಧಾನದಲ್ಲಿವೆ.

ಒಂದೇ ರೈಲ್ವೇ ವ್ಯವಸ್ಥೆ, ಒಂದೇ ಹಣಕಾಸು ವ್ಯವಸ್ಥೆ, ಒಂದೇ ರಿಜರ್ವ್ ಬ್ಯಾಂಕ್, ಒಂದೇ ಸರ್ವೋಚ್ಛ ನ್ಯಾಯಾಲಯ ಹಾಗೂ ಕೇಂದ್ರ ಸರ್ಕಾರದ ಮೂಲಕ ನೇಮಕಗೊಳ್ಳುವ ರಾಜ್ಯಗಳ ರಾಜ್ಯಪಾಲgರು, ಕೇಂದ್ರ ಲೋಕಸೇವಾ ಆಯೋಗ ಮುಂತಾದ ಅಂಶಗಳು ಬಲಿಷ್ಟ ಕೇಂದ್ರ ಸರ್ಕಾರದ ಲಕ್ಷಣಗಳಾಗಿವೆ.

8. ಭಾರತದ ಸಂವಿಧಾನವು ಪ್ರಜಾಸತ್ತಾತ್ಮಕ ಗಣತಂತ್ರವನ್ನು ರೂಪಿಸುವುದಾಗಿದೆ : 

ನಮ್ಮ ಸಂವಿಧಾನದ ಪ್ರಕಾರ ರಾಜ್ಯಾಧಿಕಾರವು ಜನರ ಕೈಯಲ್ಲಿದ್ದು ಅದು ಪ್ರಜಾಸತ್ತಾತ್ಮಕ ವಿಧಾನಗಳಿಂದ ಜನಪ್ರತಿನಿಧಿಗಳಿಗೆ ನೀಡಲ್ಪಡುತ್ತದೆ. ಆನರಿಂದ, ಜನರಿಗಾಗಿ, ಜನರೇ ಆಯ್ಕೆ ಮಾಡುವ ಸರ್ಕಾರವು ಪ್ರಜಾತಾಂತ್ರಿಕ ಸಂಸ್ಥೆಗಳಿಗೆ ಉತ್ತರದಾಯಿಯಾಗಿ ನಡೆಯುತ್ತದೆ. ವಯಸ್ಕ ಮತದಾನ ಪದ್ಧತಿಯು ಚಾಲ್ತಿಯಲ್ಲಿದ್ದು ಕಾಲಕಾಲಕ್ಕೆ ನಡೆಯುವ ಮುಕ್ತ ಚುನಾವಣೆಗಳ ಮೂಲಕ ಸರ್ಕಾರಗಳು ರೂಪುಗೊಳ್ಳುತ್ತವೆ ಅಥವಾ ಉರುಳಿಸಲ್ಪಡುತ್ತವೆ. ಎಲ್ಲರ ಮತಕ್ಕೂ ಒಂದೇ ಬೆಲೆಯಿರುತ್ತದೆ. 

ಅದೇ ರೀತಿ ಭಾರತವು ಗಣತಂತ್ರವಾಗಿದ್ದು ಇಲ್ಲಿ ವಂಶಪಾರಪರ್ಯ ರಾಜಾಧಿಕಾರ ಇರುವುದಿಲ್ಲ. ಎಲ್ಲಾ ಪ್ರಜೆಗಳು ಪ್ರಥಮ ಪ್ರಜೆಯಾಗಿ ರಾಷ್ಟ್ರದ ಮುಖ್ಯಸ್ಥರಾಗುವ ಅವಕಾಶ ಇರುತ್ತದೆ. 

ಅಬ್ರಹಮ್ ಲಿಂಕನ್ನನ ಗಟ್ಟಿಸ್ಭರ್ಗ್ ಭಾಷಣದ ಭಾಗ ‘ಇಲ್ಲಿ ತಮ್ಮ ಜೀವ ಸಮರ್ಪಣೆಮಾಡಿದವರ ಆ ಮಹಾನ್ ಸಮರ್ಪಣೆ ವ್ಯರ್ಥವಾಗಬಾರದೆಂದಾದರೆ ದೇವರ ಇಚ್ಛೆಯ ಅಡಿಯಲ್ಲಿ ಸಂಸ್ಥಾಪಿತವಾಗಿರುವ ಈ ಜನರ, ಜನರಿಗಾಗಿ ಜನರಿಂದಾಗುವ ಸರ್ಕಾರ ಪ್ರಥ್ವಿಯ ಮುಖದಿಂದ ಮರೆಯಾಗಬಾರದೆಂದು ನಾವು ಇಲ್ಲಿ ದೃಢವಾದ ನಿರ್ಧಾರ ಮಾಡಬೇಕಾಗಿದೆ’.  

9. ಭಾರತದ ಸಂವಿಧಾನವು ಏಕ ನಾಗರೀಕತ್ವವನ್ನು ಎತ್ತಿಹಿಡಿಯುತ್ತದೆ. ಭಾರತೀಯರು ಅದರ ಯಾವುದೇ ರಾಜ್ಯ ಅಥವಾ ಭಾರತದೊಳಗಿನ ಆಡಳಿತ ಸೀಮೆಗೆ ಸೇರಿದವರಾಗಿರಲಿ ಅವರು ಇಡೀ ಭಾರತದ ನಾಗರೀಕರಾಗಿರುತ್ತಾರೆ 

10. ಭಾರತದ ಸಂವಿಧಾನವು ನ್ಯಾಯದ ಆಡಳಿತವನ್ನು ಹಾಗೂ ಸ್ವತಂತ್ರ ನ್ಯಾಯಾಡಳಿತ ವ್ಯವಸ್ಥೆಯನ್ನು ಸುನಿಶ್ಚಿತಗೊಳಿಸುತ್ತದೆ: ಸಂವಿಧಾನದ ಪಿತೃಗಳು ಸ್ವತಂತ್ರ ಮತ್ತು ಸುದೃಡ ನ್ಯಾಯ ವ್ಯವಸ್ಥೆಯಿಂದ ಮಾತ್ರ ಭಾರತದಂತಹ ರಾಷ್ಟ್ರವನ್ನು ಯಾವುದೇ ರೀತಿಯ ವ್ಯಕ್ತಿಯಾಧಾರಿತ ಅಥವಾ ಪಕ್ಷಾಧಾರಿತ ಸರ್ವಾಧಿಕಾರದಿಂದ ಮುಕ್ತವಾಗಿಡಬಹುದಾಗಿದೆ ಎಂಬ ಚಿಂತನೆಯನ್ನು ಹೊಂದಿದ್ದು ಅದನ್ನು ಸೂಕ್ತ ರೀತಿಯಲ್ಲಿ ಕ್ರಮಕ್ಕೆ ಹಾಕಿರುವುದನ್ನು ನಾವು ಕಾಣುತ್ತೇವೆ. ಭಾರತದ ನ್ಯಾಯಾಡಳಿತ ವ್ಯವಸ್ಥೆಯನ್ನು ಕಾರ್ಯಾಂಗದ ನಿಯಂತ್ರಣದಿಂದ ಮುಕ್ತವಾಗಿಡಲಾಗಿದೆ. ಸಂಯುಕ್ತ ನ್ಯಾಯಾಡಳಿತದ ಸರ್ವೋಚ್ಛ ಸ್ಥರದಲ್ಲಿರುವ ಸುಪ್ರೀಮ್ ಕೋರ್ಟ್ ತಾನೇ ಒಕ್ಕೂಟದ (ಫೆಡರಲ್) ಸರ್ವೋಚ್ಛ ನ್ಯಾಯ ವ್ಯವಸ್ಥೆಯಾಗಿ ಶ್ರಮಿಸುತ್ತದೆ. ಸುಪ್ರೀಮ್ ಕೋರ್ಟ್ ನ್ಯಾಯಿಕ ಪರಾಮರ್ಶೆಯ ಅಧಿಕಾರವನ್ನೂ ಹೊಂದಿದೆ.  ಪ್ರಜೆಗಳ ಸಂವಿಧಾನದತ್ತ ಹಕ್ಕುಗಳ ಉಲ್ಲಂಘನೆಯಾದಾಗ ರಿಟ್ಗಳ ಮೂಲಕ ಉಚ್ಛ ನ್ಯಾಯಾಲಯಗಳು ಮತ್ತು ಸರ್ವೋಚ್ಛ ನ್ಯಾಯಾಲಯ ಕೂಡಾ ಹಸ್ತಕ್ಷೇಪಮಾಡಿ ಆಡಳಿತಾತ್ಮಕ ನಿಯಂತ್ರಣಶೀಲತೆಯಿಂದ ಪ್ರಜೆಗಳಿಗೆ ಸುರಕ್ಷೆ ನೀಡುತ್ತದೆ. ಉನ್ನತ ನ್ಯಾಯಾಲಯಗಳ ಆಡಳಿತಾತ್ಮಕ ನಿಯಂತ್ರಣವು ಸರ್ವೋಚ್ಛ ನ್ಯಾಯಾಲಯದ ಕೈಯಲ್ಲಿರುವುದರಿಂದ ಭಾರತೀಯ ನ್ಯಾಯಾಡಳಿತ ವ್ಯವಸ್ಥೆಯಲ್ಲಿ ಹೆಚ್ಚಿನ ಸ್ವಾತಂತ್ರ್ಯವನ್ನು ಕಾಣಬಹುದಾಗಿದೆ.

ಸುಪ್ರೀಮ್ ಕೋರ್ಟ್ ತನ್ನ ನ್ಯಾಯಿಕ ಪರಾಮರ್ಶೆಯ ಅಧಿಕಾರವನ್ನು ಸಮರ್ಥವಾಗಿ ಬಳಸಿದ ಪ್ರಮುಖ ಪ್ರಕರಣಗಳು 

1.ಗೋಲಖನಾಥ ಪ್ರಕರಣ, 2.ಬ್ಯಾಂಕ್ ರಾಷ್ಟ್ರೀಕರಣ ಪ್ರಕರಣ, 3. ರಾಜಧನ ರದ್ಧತಿ ಪ್ರಕರಣ

ಉಚ್ಛನ್ಯಾಯಾಲಯ ಮತ್ತು ಸರ್ವೋಚ್ಛ ನ್ಯಾಯಾಲಯಗಳು ನೀಡುವ ರಿಟ್ಗಳು

1. ಕೋ ವಾರಂತೊ (ಯಾವ ಅಧಿಕಾರದಿಂದ – ಯಾವುದಾದರೂ ಪ್ರಾಧಿಕಾರ ತನ್ನ ಸಕ್ಷಮ ಅಧಿಕಾರ ವ್ಯಾಪ್ತಿಯನ್ನು ಮೀರಿ ಕ್ರಮ ಕೈಗೊಂಡಾಗ – ಯಾವ ಅಧಿಕಾರ ಬಳಸಿ ಆ ಕ್ರಮ ಕೈಗೊಳ್ಳಲಾಗಿದೆ ಎಂದು ನ್ಯಾಯಾಲಯ ಪ್ರಶ್ನಿಸುತ್ತದೆ), 

2. ಹೇಬಿಯಸ್ ಕೋರ್ಪುಸ್ (ದೇಹ ಸಮೇತ ಹಾಜರುಪಡಿಸಿರಿ/ ನೀವು ದೇಹವನ್ನು ಪಡೆಯಬಹುದು- ಯಾವುದಾದರೂ ವ್ಯಕ್ತಿಯನ್ನು ಸರ್ಕಾರದ ಪ್ರಾಧಿಕಾರಗಳು ದಿಗ್ಬಂಧನದಲ್ಲಿ ಇಟ್ಟಿರುವಾಗ ಅಥವಾ ಇನ್ನ್ಯಾವುದೇ ಕಾರಣದಲ್ಲಿ ಆ ವ್ಯಕ್ತಿ ಕಾಣದಾದಾಗ ಆ ವ್ಯಕ್ತಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಸೂಚಿಸುವ ರಿಟ್), 

3. ಮಂದಾಮುಸ್ (ನಾವು ಆದೇಶಿಸುತ್ತಿದ್ದೇವೆ - ನ್ಯಾಯಾಲಯವು ಆಧೀನ ನ್ಯಾಯಾಲಯಗಳು ಅಥವಾ ಯಾವುದೇ ಸಾರ್ವಜನಿಕ ಪ್ರಾಧಿಕಾರ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂದು ನೀಡುವ ಆದೇಶ)

4. ಸರ್ಶುರಿಯಾರಿ (ನಿಮಗೆ ತಿಳಿದಿರಲಿ- ಆಧೀನ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ತಾನು ಕೈಗೆತ್ತಿಕೊಂಡು ತೀರ್ಪು ನೀಡುವುದಾದರೆ ಆ ಆಧೀನ ನ್ಯಾಯಾಲಯಗಳಿಗೆ ನೀಡುವ ತಿಳುವಳಿಕೆ)

5. ಪ್ರೊಹಿಬೀಷನ್ (ತಡೆಯಾಜ್ಞೆ)

11. ಭಾರತದ ಸಂವಿಧಾನವು ಸರ್ವಧರ್ಮ ಸಮಭಾವದ ವ್ಯವಸ್ಥೆಯನ್ನು ರಚಿಸಿದೆ: ಭಾರತೀಯ ಸಂವಿಧಾನದಲ್ಲಿ ಜಾತ್ಯಾತೀತತೆಯ ಕಲ್ಪನೆಗಳನ್ನು ಬಲವಾಗಿ ಬೇರೂರಿಸಲಾಗಿದೆ. ಆದರೆ ಭಾರತೀಯ ಜಾತ್ಯಾತೀತತೆ ಅಥವಾ ಧರ್ಮ ನಿರಪೇಕ್ಷತೆಯ ಕಲ್ಪನೆ ಧರ್ಮ ವಿರೋಧಿ ಅಥವಾ ಧರ್ಮ ರಹಿತವಾದುದಲ್ಲ. ಅದೇ ರೀತಿ ಯಾವುದಾದರೂ ಒಂದು ಧರ್ಮಕ್ಕೆ ರಾಷ್ಟ್ರ ವಿಶೇಷವಾದ ಮಾನ್ಯತೆ ನೀಡುವುದಿಲ್ಲ ಹೊರತಾಗಿ ಎಲ್ಲಾ ಧರ್ಮಗಳನ್ನು ರಾಷ್ಟ್ರವು ಸಮಾನವಾಗಿ ಪರಿಗಣಿಸುತ್ತದೆ ಎನ್ನುವುದಾಗಿದೆ. ಸರ್ವಧರ್ಮ ಸಮಭಾವದ ಕಲ್ಪನೆಯನ್ನು ಇಲ್ಲಿ ಮುಂದಿಡಲಾಗಿದೆ.

12. ಭಾರತದ ಸಂವಿಧಾನವು ಆಡಳಿತ ನಡೆಸುವ ಸರ್ಕಾರಗಳು ಪ್ರಜಾಹಿತಕ್ಕೆ ನಡೆಸಬೇಕಾದ ಕಾರ್ಯಕ್ರಮಗಳನ್ನು ತಿಳಿಸುತ್ತದೆ: ಭಾರತೀಯ ಸಂವಿಧಾನದಲ್ಲಿರುವ ಇನ್ನೊಂದು ವಿಶೇಷ ಲಕ್ಷಣವೇನೆಂದರೆ ಅದು ಆಡಳಿತ ನಡೆಸುವ ಸರ್ಕಾರಗಳು ಪ್ರಜಾಕಲ್ಯಾಣಕ್ಕಾಗಿ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವುದಕ್ಕೆ ರಾಜ್ಯಾಡಳಿತ ನೀತಿಯ ನಿರ್ದೇಶಕ ಸೂತ್ರಗಳನ್ನು (ಡೈರೆಕ್ಟಿವ್ ಪ್ರಿನ್ಸಿಪಲ್ಸ್ ಆಫ್ ಸ್ಟೇಟ್ ಪಾಲಿಸಿ) ಮಂಡಿಸುತ್ತದೆ. 

13. ಭಾರತದ ಸಂವಿಧಾನವು ದಲಿತ, ಧ್ವನಿರಹಿತ, ಹಿಂದುಳಿದ ವರ್ಗಗಳ ಹಿತಾಸಕ್ತಿಯನ್ನು ಸಂರಕ್ಷಿಸಲು ಪ್ರಯತ್ನಿಸುತ್ತದೆ: ಭಾರತೀಯ ಸಂವಿಧಾನದ ಸಂರಚನಾಕಾರರ ಮೇಲೆ ಮಹಾತ್ಮ ಗಾಂಧೀಜಿಯವರ ಪ್ರಭಾವ ವಿಶೇಷವಾಗಿತ್ತು. ಆದುದರಿಂದ ಭಾರತದ ಸಂವಿಧಾನ ಬರೇ ಕಾನೂನು ದಾಖಲೆಗಯಾಗಿ ಉಳಿಯಬಾರದು ಹೊರತಾಗಿ ಶತಶತಮಾನಗಳಿಂದ ಶೋಷಣೆಗೆ ಒಳಗಾಗಿ ಹಾಗೂ ಸಾಮಾಜಿಕವಾಗಿ ದಮನಕ್ಕೆ ಒಳಗಾದ ವರ್ಗದವರ ಬದುಕಿನಲ್ಲಿ ಹೊಸ ಆಶಾಕಿರಣ ಹುಟ್ಟಿಸುವ ಸಾಧನ ಇದಾಗಬೇಕು ಎನ್ನುವ ಆಶಯ ಇಲ್ಲಿ ಕಂಡುಬರುತ್ತದೆ. ಅದೇ ರೀತಿ ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾದ ಡಾ. ಬಿ ಆರ್ ಅಂಬೇಡ್ಕರ್ ಅವರಲ್ಲಿ ಶೋಷಿತ ವರ್ಗದ ಎಲ್ಲಾ ನೋವುಗಳು ತಿಳಿದಿದ್ದವು ಆದುದರಿಂದ ಅವರು ಸಂವಿಧಾನದಲ್ಲಿ ಈ ಕುರಿತು ವಿಶೇಷ ಸಂರಕ್ಷಣಾತ್ಮಕ ಕ್ರಮಗಳನ್ನು ಸೇರಿಸಿದ್ದಾರೆ.

14. ಭಾರತದ ಸಂವಿಧಾನವು ತುರ್ತು ಪರಿಸ್ಥಿತಿಯ (ಅಣಿಬಣಿ) ನಿಭಾವಣೆಗೆ ಬೇಕಾದ ಅನುಬಂಧಗಳನ್ನು ಹೊಂದಿಕೊಂಡಿದೆ: ಭಾರತೀಯ ಸಂವಿಧಾನದ ಸಂರಚನಾಕಾರರು ಇಡೀ ಭಾರತಕ್ಕೆ, ಅದರ ಯಾವುದಾದರೂ ಒಂದು ಭಾಗಕ್ಕೆ ಹಾಗೂ ಭಾರತದ ಆರ್ಥಿಕ ಸ್ಥಿತಿಗೆ ವಿಪರೀತ ಸಮಸ್ಯೆಗಳು ಉಂಟಾದಾಗ ಅವುಗಳನ್ನು ನಿಭಾಯಿಸಲು ಬೇಕಾದ ಅನುಬಂಧಗಳನ್ನು ಸಂವಿಧಾನದಲ್ಲಿ ದಾಖಲಿಸಿದ್ದಾರೆ.

ಭಾಗ 18 – ತುರ್ತು ಪರಿಸ್ಥಿತಿ ಸಂಬಂಧ ಉಪಬಂಧಗಳು

ವಿಧಿ 352 – ತುರ್ತು ಪರಿಸ್ಥಿತಿಯ ಘೋಷಣೆ-ಯುದ್ಧ, ಬಾಹ್ಯ ಜುಲುಮೆ, ಶಸ್ತ್ರ ಸನ್ನದ್ಧ ದಂಗೆಯ ಕಾರಣದಿಂದ

ವಿಧಿ 353 – ತುರ್ತು ಪರಿಸ್ಥಿತಿಯ ಘೋಷಣೆಯ ಪರಿಣಾಮಗಳು

ವಿಧಿ 354 – ತುರ್ತು ಪರಿಸ್ಥಿತಿಯ ಕಾಲದಲ್ಲಿ ಕಂದಾಯ ಮರು ಹಂಚಿಕೆಯ ಕುರಿತು ಉಪಬಂಧಗಳು

ವಿಧಿ 355 – ಬಾಹ್ಯ ಜುಲುಮೆ, ಆಂತರಿಕ ಗೊಂದಲದ ಕಾಲದಲ್ಲಿ ರಾಜ್ಯಗಳನ್ನು ಕಾಪಾಡಲು ಕೇಂದ್ರ ಸರ್ಕಾರದ ಜವಾಬ್ಧಾರಿ

ವಿಧಿ 356 – ರಾಜ್ಯಗಳಲ್ಲಿ ಸಾಂವಿಧಾನಿಕ ವ್ಯವಸ್ಥೆ ವಿಫಲವಾದ ಕಾಲದ ಉಪಬಂಧಗಳು 

ವಿಧಿ 357 –ವಿಧಿ 356 ರಂತೆ ರಾಜ್ಯಗಳಲ್ಲಿ ತುರ್ತುಪರಿಸ್ಥಿತಿ ನಿರ್ಮಾಣವಾದಾಗ ವಿಧೇಯಕ ಅಧಿಕಾರ

ವಿಧಿ 358 –ತುರ್ತು ಪರಿಸ್ಥಿತಿಯ ಕಾಲದಲ್ಲಿ ವಿಧಿ 19 ರ ಉಪಬಂಧಗಳ ನಿಲಂಬನೆ

ವಿಧಿ 359 – ತುರ್ತು ಪರಿಸ್ಥಿತಿಯ ಕಾಲದಲ್ಲಿ ಭಾಗ – 3 ರಲ್ಲಿನ ಅಧಿಕಾರಗಳ ನಿಲಂಬನೆ

ವಿಧಿ 359(ಅ) – ಪಂಜಾಬಿಗೆ ಸಂಬಂಧಿ ಈ ಭಾಗದ ಅನ್ವಯೀಕರಣ

ವಿಧಿ 360– ಆರ್ಥಿಕ ತುರ್ತು ಪರಿಸ್ಥಿತಿ ಸಂಬಂಧ ಉಪಬಂಧಗಳು

15. ಭಾರತದ ಸಂವಿಧಾನವು ಸ್ಥಳೀಯ ಸರ್ಕಾರ ವ್ಯವಸ್ಥೆಗಳನ್ನು ಎತ್ತಿ ಹಿಡಿಯುತ್ತದೆ: ಭಾರತೀಯ ಸಂವಿಧಾನದಲ್ಲಿ ತಳಮಟ್ಟದ ಪ್ರಜಾತಂತ್ರವನ್ನು ಬಲಪಡಿಸಲು ನಗರ ಮತ್ತು ಗ್ರಾಮೀಣ ಸ್ಥಳೀಯ ಸಕಾರ ವ್ಯವಸ್ಥೆಗಳನ್ನು ರೂಪಿಸಲಾಗಿದೆ. ಗ್ರಾಮೀಣ ಮಟ್ಟದಲ್ಲಿ ತ್ರಿಸ್ಥರ ಸ್ಥಳೀಯ ಸರ್ಕಾರವನ್ನು ರೂಪಿಸಿ ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಚಿಂತನೆಗೆ ಬಲ ತುಂಬಲಾಗಿದೆ. 1992 ರ 73 ನೇ ಹಾಗೂ 74 ನೇ ತಿದ್ದುಪಡಿಗಳು ಈ ಕುರಿತು ಉಪಬಂಧಗಳನ್ನು ರೂಪಿಸಿವೆ. 

16. ಭಾರತದ ಸಂವಿಧಾನವು ಅಗತ್ಯ ಸ್ವಾಯುತ್ತ ವ್ಯವಸ್ಥೆಗಳನ್ನು ಹೊಂದಿಕೊಂಡಿದೆ: ಭಾರತೀಯ ಸಂವಿಧಾನದಲ್ಲಿ ಆಡಳಿತದಲ್ಲಿ  ರಾಜಕೀಯ ಪಕ್ಷ ಅಥವಾ ಆಡಳಿತ ಸರ್ಕಾರದ ನಿಯಂತ್ರಭಣಕ್ಕೆ ಸಿಲುಕದೆ ಸ್ವತಂತ್ರವಾಗಿ ಕಾನೂನಿನ ಪ್ರಕ್ರಿಯೆಯನುಸಾರ ಹಾಗೂ ಸಂವಿಧಾನದ ಉದ್ದೇಶಗಳನುಸಾರ ದುಡಿಯಲು ಬೇಕಾದ ಸ್ವಾಯುತ್ತ ವ್ಯವಸ್ಥೆಗಳನ್ನು ರೂಪಿಸಲಾಗಿದೆ. ಭಾರತೀಯ ರಿಜರ್ವ್ ಬ್ಯಾಂಕ್, ಭಾರತೀಯ ಚುನಾವಣಾ ಆಯೋಗ, ವಿತ್ತೀಯ ಆಯೋಗ, ಒಕ್ಕೂಟ ಮತ್ತು ರಾಜ್ಯ ಲೋಕಸೇವಾ ಆಯೋಗಗಳು, ಒಕ್ಕೂಟ ಸರ್ಕಾರದ ನಿಯಂತ್ರಕ ಹಾಗೂ ಮಹಾ ಲೆಕ್ಕ ಪರೀಕ್ಷಕರು ಮುಂತಾದ ವ್ಯವಸ್ಥೆಗಳು ಸ್ವಾಯುತ್ತ ವ್ಯವಸ್ಥೆಗಳಾಗಿವೆ.

17. ಭಾರತದ ಸಂವಿಧಾನವು ತನ್ನ ಗುರಿ ಮತ್ತು ಉದ್ದೇಶಗಳನ್ನು ಸಾರುವ ಪ್ರಸ್ತಾವನೆಯನ್ನು ಹೊಂದಿದೆ: ಸಂವಿಧಾನ ಸಂರಚನಾ ಸಭೆಯ ಪಿತೃಗಳು ಈ ಸಂವಿಧಾನವು ಸಕಲ ಭಾರತೀಯರ ಅಭಿವ್ಯಕ್ತಿಯಾಗಬೇಕೆಂದು ಆಶಿಸಿದ್ದರು. ಆದುದರಿಂದ ಭಾರತದ ಸಂವಿಧಾನದ ಪ್ರಸ್ತಾವನೆಯು ‘ನಾವು ಭಾರತೀಯರು... ಎಂದು ಆರಂಭವಾಗುತ್ತದೆ. ಪ್ರಸ್ತಾವನÉಯು ಸಂವಿಧಾನದ ಮುಖ್ಯ ಪಠ್ಯದ ಭಾಗವಾಗದಿದ್ದರೂ ಅದು ಸಂವಿಧಾನದ ಮುಕುಟದಂತಿದೆ. ಭಾರತವನ್ನು ಏನಾಗಿ ಸಂರಚಿಸಲಾಗಿದೆಯೆಂದು ಹಾಗೂ ಭಾರತೀಯರಿಗೆ ಅದರ ಮೂಲಕ ಏನನ್ನು ಕೊಡಮಾಡಲಾಗುತ್ತದೆ ಎಂದು ಇಲ್ಲಿ ಸ್ಪಷ್ಟಗೊಳಿಸಲಾಗಿದೆ.

ಭಾರತದ ಸಂವಿಧಾನದ ಪ್ರಸ್ತಾವನೆ

ಭಾರತದ ಜನಗಳಾದ ನಾವು ಭಾರತವನ್ನು ಒಂದು ಸಾರ್ವಭೌಮ, ಸಮಾಜವಾದಿ, ಸರ್ವಧರ್ಮ ಸಮಭಾವದ ಪ್ರಜಾತಾಂತ್ರಿಕ ಗಣತಂತ್ರವನ್ನಾಗಿ ರಚಿಸಲು ಮತ್ತು ಅದರ ಸಮಸ್ತ ನಾಗರೀಕರಿಗೆ; ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ; ವಿಚಾರ, ಅಭಿವ್ಯಕ್ತಿ, ಧರ್ಮಶೃದ್ಧೆ, ಮತ್ತು ಉಪಾಸನಾ ಸ್ವಾತಂತ್ರ್ಯ ; ಸ್ಥಾನಮಾನ ಹಾಗೂ ಅವಕಾಶ ಸಮಾನತೆ;ದೊರೆಯುವಂತೆ ಮಾಡಲು ಹಾಗೂ ವ್ಯಕ್ತಿ ಗೌರವವನ್ನು, ರಾಷ್ಟ್ರದ ಏಕತೆಯನ್ನು ಮತ್ತು ಅಖಂಡತೆಯನ್ನು ಸುನಿಶ್ಚಿತಗೊಳಿಸಿ ಅವರಲ್ಲಿ ಭ್ರಾತೃಭಾವನೆಯನ್ನು ವೃದ್ಧಿಗೊಳಿಸಲು ಶೃದ್ಧಾಪೂರ್ವಕ ಸಂಕಲ್ಪ ಮಾಡಿದವರಾಗಿ ನಮ್ಮ ಸಂವಿಧಾನ ಸಭೆಯಲ್ಲಿ 1949 ನೇ ಇಸವಿ ನವೆಂಬರ್ ತಿಂಗಳ 26 ನೇ ದಿನಾಂಕವಾದ ಇಂದು ಈ ಮೂಲಕ ಈ ಸಂವಿಧಾನವನ್ನು ಅಂಗೀಕರಿಸಿ, ಅಧಿನಿಯಮಿಸಿ ಆದ್ಯಾರ್ಪಣೆ ಮಾಡಿಕೊಂಡಿದ್ದೇವೆ. 

 

ಹಲವಾರು ಪಂಡಿತರು ‘ಇಷ್ಟೊಂದು ವಿಭಿನ್ನತೆಯುಳ್ಳ ಮತ್ತು ಶಿಕ್ಷಣದ ಕೊರತೆಯುಳ್ಳ ಬಡ ದೇಶದಲ್ಲಿ ಈ ಸಂವಿಧಾನವು ದೀರ್ಘಕಾಲ ಉಳಿದೀತೆ?’ ಎನ್ನುವ ಸಂಶಯದಿಂದ ನಕಾರಾತ್ಮಕ ಟೀಕೆಗಳನ್ನು ಬಾಬಾಸಾಹೇಬರ ಕುರಿತು ಮಾಡಿದ್ದರು. ಆದರೆ ಕಳೆದ 70 ವರ್ಷಗಳ ಇತಿಹಾಸವನ್ನು ನೋಡಿದಾಗ ಹಲವಾರು ಪಂಥಾಹ್ವಾನಗಳನ್ನು ಎದುರಿಸಿ ನಮ್ಮ ಸಂವಿಧಾನ ಅಭಿವೃದ್ಧಿ ಪಥದಲ್ಲಿ ಮುಂದುವರೆದಿರುವುದನ್ನು ನಾವು ಗಮನಿಸುತ್ತೇವೆ. ‘ಸಂವಿಧಾನ ಉತ್ತಮವಾಗಿರುವುದು ಮುಖ್ಯವಲ್ಲ ಸಂವಿಧಾನವನ್ನು ಕಾರ್ಯರೂಪಕ್ಕೆ ಹಾಕುವ ಕೈಗಳು ಉತ್ತಮವೂ ಸಮರ್ಥವೂ ಆಗಿದ್ದರೆ ಎಂತಾಹ ಸಂವಿಧಾನ ಕೂಡಾ ಪ್ರಜೆಗಳ ಬದುಕನ್ನು ಉತ್ತಮಗೊಳಿಸುವುದು ಸಾಧ್ಯ’ ಎಂಬ ಬಾಬಾಸಾಹೇಬರ ಮಾತುಗಳು ಈ ಸಂದರ್ಭದಲ್ಲಿ ತೀರಾ ಪ್ರಸ್ತುತವಾಗಿವೆ. ಅದೇ ರೀತಿ ನಮ್ಮ ಸಂವಿಧಾನವು ನಮ್ಮನ್ನು ರಕ್ಷಿಸಬೇಕಾದರೆ ನಾವು ಅದರ ರಕ್ಷಣೆ ಮಡಬೇಕಾಗಿರುವುದು ಅನಿವಾರ್ಯ. ಸಂವಿಧಾನದ ಆಶಯಗಳನ್ನು ಅರ್ಥೈಸಿಕೊಂಡು ಗೌರವಿಸುವುದು ಹಾಗೂ ಅದರ ವ್ಯವಸ್ಥೆಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು.

ನಿರಂತರ ಉಚಿತ ವ್ರತ್ತಿ ಮಾರ್ಗಗದರ್ಶನಕ್ಕಾಗಿ ಸಂಪರ್ಕಿಸಿರಿ - 9480761017