ಈ ಸಮಯ ಕಳೆದುಹೋಗುತ್ತದೆ

Thumbnail

ಈ ವಾಕ್ಯವನ್ನು ನಾವೆಲ್ಲಾ ಕೇಳಿದ್ದೇವೆ. ಕೃಷ್ಣ ಅರ್ಜುನನಿಗೆ ‘ಒಂದು ವಾಕ್ಯ ಬರೆ, ಅದನ್ನು ಓದಿದರೆ ಸಂತೋಷದಲ್ಲಿದ್ದವರಿಗೆ ದುಃಖವಾಗಬೇಕು ,ದುಃಖದಲ್ಲಿದ್ದವರಿಗೆ ಸಂತೋಷವಾಗಬೇಕು” ಎಂದು ಹೇಳಿದಾಗ ಅರ್ಜುನ ಈ ವಾಕ್ಯವನ್ನು ಬರೆದನಂತೆ . ಈ ಮಾತನ್ನು ನಾವು ಎಷ್ಟು ಸಲ ಕೇಳಿಲ್ಲಾ ಆದರೂ ಕಷ್ಟ ಬಂದಾಗ ಅದು ಯಾವಾಗಲೂ ಇರುತ್ತೇನೋ ಎನ್ನುವಂತೆ ವರ್ತಿಸುತ್ತೇವೆ. ಉತ್ತರ ಕರ್ನಾಟಕದ ಕಡೆ ತನ್ನ ಕಷ್ಟಗಳ ಬಗ್ಗೆ ಮಾತನಾಡುತ್ತಾ ಇರುವವರಿಗೆ “ಕಷ್ಟಗಳು ಮನುಷ್ಯನಿಗಲ್ಲದೇ ಮರಕ್ಕೆ ಬರುತ್ತವೆಯೇ?’ ಎಂದು ಪ್ರಶ್ನಿಸುವ ಪದ್ಧತಿಯಿದೆ.  ಎರಡೂ ವಾಕ್ಯಗಳ ಅರ್ಥ ಒಂದೇ, ಕಷ್ಟವೋ ಸುಖವೋ ಯಾವುದೂ ಶಾಶ್ವತವಲ್ಲ. ಆದರೂ ಮನುಷ್ಯ ಚಿಂತೆ ಮಾಡುವುದು ಬಿಡಲ್ಲ. ಆದರೆ ಒಂದು ನೆನಪಿಡಬೇಕು  ಈ  ಸಮಯಕಳೆದು ಹೋಗುತ್ತದೆ.

ಈ ಮಾತುಗಳು ಈಗಿರುವ ಕರೋನಾ ಮಾಹಾಮಾರಿ ಸಮಯದಲ್ಲಂತೂ ಬಹಳ ಸೂಕ್ತವಾಗಿ ಹೊಂದುತ್ತವೆ. ಈ ಸಮಯ ಕಳೆದುಹೋಗುತ್ತದೆ ಎಂಬುದು ನಮಗೆ ಗೊತ್ತಿದೆ ಆದರೂ ಚಡಪಡಿಕೆ ಕಡಿಮೆಯಾಗುತ್ತಿಲ್ಲ. ಬಹುಶಃ ನೆರೆ, ಬರ, ಭೂಕಂಪ ಇಂಥಹ ನೈಸರ್ಗಿಕ ಪ್ರಕೋಪಗಳು, ಯುದ್ಧದಂತಹ ಮಾನವ ನಿರ್ಮಿತ ಸ್ಥಿತಿಗಳು ಆ ಸಮಯ ಕಳೆದುಹೋದರೂ ಸಹಜೀವನ ಸಹಜಸ್ಥಿತಿಗೆ ಬರುವಲ್ಲಿ ಸಮಯ ತಗೆದುಕೊಳ್ಳುತ್ತವೆ. ಅದರಲ್ಲಿ ಆಗಿರುವ ನಷ್ಟಗಳು , ಕಳೆದುಕೊಂಡ ಪ್ರೀತಿಪಾತ್ರರು, ಆಪ್ತರು ಎಲ್ಲದರ ಮೇಲೆ ಜೀವನ ಅವಲಂಬಿತವಾಗುತ್ತದೆ. ಕಾಲಕ್ಕೆ ಎಲ್ಲವನ್ನೂ ಮರೆಸುವ ಶಕ್ತಿ ಇದೆ, ಎಂದುಕೊಂಡರೂ ಸಹ ಕಳೆದುಕೊಂಡಿರುವವರಿಗೆ ಜೀವನವನ್ನು ಮರಳಿ ಮೊದಲಿನಂತೆ ಸಾಗಿಸಲು ಸಮಯ ಬೇಕಾಗಬಹುದು. ಆದರೆ ಒಂದು ವಿಷಯ ನೆನಪಿಡಬೇಕು  ಈ ಸಮಯ ಕಳೆದುಹೋಗುತ್ತದೆ.

ಇನ್ನು ಈ ಕೊರೊನಾ ಮಾಹಾಮಾರಿಗೆ ಸಂಬಂಧಿಸಿದಂತೆ ಹೇಳುವುದಾದರೆ ಇದರ ಮೂಲವೇ ಸ್ಪಷ್ಟವಾಗಿಲ್ಲ. ೧೯೨೦ ರಲ್ಲಿ ಬಂದಂತಹುದೇ ಮಹಾಮಾರಿ ನೂರು ವರ್ಷಗಳಿಗೊಮ್ಮೆ ಬಂದೇ ಬರುತ್ತದೆ ಮತ್ತು ಹೋಗುತ್ತದೆ ಅಂತ ಒಮ್ಮೆ, ಇಲ್ಲಾ ಇದು ಮಾನವ ನಿರ್ಮಿತ ಜೈವಿಕ ಯುದ್ಧವಾಗುತ್ತಿದೆ ಅಂತ ಒಮ್ಮೆ ಹೇಳಲಾಗುತ್ತಿದೆ. ಅಷ್ಟೇ ಅಲ್ಲದೇ ಒಂದನೇ ಅಲೆ ಮುಗಿಯಿತು ಈಗ ಎರಡನೇ ಅಲೆ ಇದೆ ಮುಂದೆ ಮೂರನೇ ಅಲೆ, ನಾಲ್ಕನೇ ಅಲೆ ಬರುತ್ತವೆ ಪ್ರತೀ ಬಾರಿಯೂ ಆ ವೈರಾಣು ಶಕ್ತಿಯನ್ನು ವೃದ್ಧಿಸಿಕೊಳ್ಳುತ್ತದೆ ಹಾಗಾಗಿ ಮೊದಲನೇ ಅಲೆಗಿಂತ ಎರಡನೇ ಅಲೆಯಲ್ಲಿ ಪ್ರಾಣಹಾನಿಗಳು ಹೆಚ್ಚಾಗುತ್ತಿವೆ ಅಂತ ಹೇಳಲಾಗುತ್ತಿದೆ.  

ಇಂತಹ ಪರಿಸ್ಥಿತಿಯಲ್ಲಿ  ನಾವೆಲ್ಲರೂ ಕೊರೋನಾ ತಡೆಗಟ್ಟಲು ಸರ್ಕಾರ ವಿಧಿಸಿದ ನಿಯಮಗಳಾದ

 ಸಾಮಾಜಿಕ ಅಂತರ, 

 ಮಾಸ್ಕ ಧರಿಸುವುದು, 

 ಸ್ಯಾನಿಟಜರ್ ಬಳಕೆ, 

 ಪದೇಪದೇ ಸಾಬೂನಿನಿಂದ ಕೈತೊಳೆಯುವುದು ಮುಂತಾದವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇವುಗಳನ್ನು ಕಳೆದ ಬಾರಿ ಸರಿಯಾಗಿ ಪಾಲಿಸದೆ ಸಮಸ್ಯೆಗಳಾದವು. ಇದರ ಪರಿಣಾಮವಾಗಿ ಈ ವರ್ಷವೂ ಸಮಸ್ಯೆಗಳಾದವು. ಲಾಕ್ ಡೌನ್ ಹಾಕಬೇಕಾಯಿತು. ಆದರೆ ಒಂದು ನೆನಪಿಡಬೇಕು ಈ ಸಮಯ ಕಳೆದುಹೋಗುತ್ತದೆ.

ಲಾಕ್ ಡೌನ್ನಿಂದಾಗಿ ಮತ್ತೆ ಜನಜೀವನ ಅಸ್ತವ್ಯಸ್ತವಾಯಿತು ಅಂತಲೇ ಅನಿಸುತ್ತಿದೆ ಆದರೆ ಇದು ಅನಿವಾರ್ಯ. ಪರಿಸ್ಥಿತಿಯಾಗಿದೆ. ಮಾನವನ ಸಹಜ ಗುಣಗಳಲ್ಲಿ ಒಂದೆಂದರೆ ನಿಯಮಗಳನ್ನು ಮುರಿಯಬೇಕೆನಿಸುವುದು, ಮಾಡಬೇಡಾ ಅಂದಾಗಲೇ ಮಾಡಬೇಕು ,ಹೋಗಬೇಡ ಅಂದಕಡೆಯೇ ಹೋಗಬೇಕೆನಿಸುವುದು , ಇದಕ್ಕೆ ಬಹುಶಃ ಯಾರೂ ಹೊರತಾಗಿಲ್ಲ. ಹಾಗಾಗಿಯೇ ಎನೋ ಕೆಲಸಕ್ಕೆ ಕಚೇರಿಗೆ, ಶಾಲೆ, ಕಾಲೇಜುಗಳಿಗೆ ಹೋಗುತ್ತಿರುವಾಗ ರಜೆಬೇಕು ,ಮನೆಯಲ್ಲಿ ವಿಶ್ರಾಂತಿ ಪಡೆಯಬೇಕು, ಮನೋರಂಜನೆಗಾಗಿ ಸಿನಿಮಾ ನೋಡುವುದು, ಇಷ್ಟವಾದ ಶೋಗಳನ್ನು ನೋಡುವುದುಮಾಡಬೇಕು, ಒಂದು ದಿನವಾದರೂ ಎನೂ ಮಾಡದೇ ಆರಾಮಾಗಿ ಬಿದ್ದುಕೊಂಡಿರಬೇಕು , ಕುಟುಂಬದ ಸದಸ್ಯರೆಲ್ಲಾ ಒಂದು ಕಡೆ ಕುಳಿತು ಮಾತನಾಡಬೇಕು, ಊಟ ಮಾಡಬೇಕು ಅಂತೆಲ್ಲಾ ಅನಿಸುತ್ತಿತ್ತು. ಏನು ಇದು ಕತ್ತೆಗಳ ಥರಾ ದುಡಿಯುತ್ತಿದ್ದೇವೆ, ಸ್ಪರ್ಧೆಗೆ ಬಿದ್ದವರಂತೆ ಓಡುತ್ತಿದ್ದೇವೆ, ಬಸ್ಸುಗಳಲ್ಲಿ ,ಮೆಟ್ರೋಗಳಲ್ಲಿ , ಟ್ರೇನ್ಗಳಲ್ಲಿ, ಸ್ವಂತ ದ್ವಿಚಕ್ರ, ನಾಲ್ಕುಚಕ್ರ ವಾಹನಗಳಲ್ಲಿ ಜೋತಾಡಿಕೊಂಡು, ರನ್ನಿಂಗ್ ರೇಸಿಗೆ ಬಿದ್ದವರಂತೆ ಓಡುತ್ತಿದ್ದೇವೆ ಇದಕ್ಕೆಲ್ಲಾ ಸ್ವಲ್ಪಬ್ರೆಕ್ ಬೀಳಬಾರದಾ ಅಂದುಕೊಳ್ಳುತ್ತಿದ್ದೆವು. ಈಗ ಬ್ರೇಕ್ ಬಿದ್ದಿದೆ ಆದರೆ ಖುಷಿಯಾಗಿದಿವಾ? ಇದು ಒಂದು ಮಿಲಿಯನ್ ಡಾಲರ್ ಮೌಲ್ಯದ ಪ್ರಶ್ನೆ. ಆದರೆ ಒಂದು ನೆನಪಿಡಬೇಕು  ಈ ಸಮಯ ಕಳೆದುಹೋಗುತ್ತದೆ.

 

ಮನೆಯಲ್ಲೇ ಇರುವುದು, ಇಲ್ಲಿಂದಲೇ ಕೆಲಸ ಮಾಡುವುದು ಬೇಜಾರೆನಿಸುತ್ತಿದೆ. ಶಾಲೆ ಕಾಲೇಜಿಗೆ ಒಂದು ದಿನ ಆಕಸ್ಮಿಕವಾಗಿ ರಜೆ ಸಿಕ್ಕರೆ ಸಾಕು ಎಂದುಕೊಳ್ಳುತ್ತಿದ್ದ ವಿದ್ಯಾರ್ಥಿಗಳಿಗೆ ಆನಲೈನ್ ಪಾಠ ಬೇಡವಾಗಿ ಹೋಗಿದೆ, ಶಾಲೆ, ಕಾಲೇಜುಗಳಿಗೆ ಹೋಗಬೇಕು ಶಿಕ್ಷಕರಿಂದ ಮುಖಾಮುಖಿ ಪಾಠಗಳನ್ನು ಕೇಳಬೇಕು, ಸ್ನೇಹಿತರೊಡನೆ ಸಮಯ ಕಳೆಯಬೇಕು ಅಂತ ಅನಿಸುತ್ತಿದೆ. ಶಿಕ್ಷಕರಿಗೂ ಸಹ ಮಕ್ಕಳ ಮುಖ ನೋಡದೇ ಪಾಠ ಮಾಡುವುದೆಂದರೆ ಫೊನ್ಗಳ ಮುಂದೆಯೋ, ಲ್ಯಾಪ್ಟಾಪ್ಗಳ ಮುಂದೆಯೋ ತಮ್ಮಷ್ಟಕ್ಕೆ ತಾವೇ ಮಾತನಾಡಿಕೊಳ್ಳುತ್ತಿರುವಂತೆ ಅನಿಸುತ್ತಿದೆ. ಇನ್ನಿತರ ಕಚೇರಿಗಳ, ಖಾಸಗಿ ಕಂಪನಿಗಳ ಕಥೆಯೂ ಭಿನ್ನವಾಗೇನಿಲ್ಲ. ಸಧ್ಯಕ್ಕೆ ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಪೋಲೀಸ್ ಇಲಾಖೆ, ಸ್ಥಳೀಯ ಆಡಳಿತಕ್ಕೆ ಹೀಗೆ ಕೆಲವು ಸರ್ಕಾರಿ ಇಲಾಖೆಗಳಿಗಂತೂ ಉಸಿರಾಡಲೂ ಪುರುಸೊತ್ತಿಲ್ಲದಂತಹ ಪರಿಸ್ಥಿತಿ. ಇನ್ನು ಖಾಸಗಿ ಕಂಪನಿಗಳು ಮನೆಯಿಂದ ಕೆಲಸ ಮಂತ್ರವನ್ನು ಅಳವಡಿಸಿಕೊಂಡಿರುವುದು ನಿಜವಾದರೂ ನೆಟ್ವರ್ಕ ಸಮಸ್ಯೆ ಅವರಿಗೆ ತಲೆನೋವಾಗಿ ಪರಿಣಮಿಸಿರುವುದೂ ಸುಳ್ಳಲ್ಲಾ. ಸಹೋದ್ಯೋಗಿಗಳ ಜೊತೆ ಆರಾಮವಾಗಿ ಮಾತನಾಡುವಂತಿಲ್ಲ, ಜೊತೆಗೆ ಕಾಫಿ, ಚಹಾ ಅಂತ ಸ್ವಲ್ಪ ಸಮಯ ಕಳೆಯುವಂತಿಲ್ಲ. ವ್ಯಾಪಾರ ಮಾಡುವವರಿಗೂ ಇದರ ಬಿಸಿ ತಟ್ಟಿದೆ, ಆಹಾರ ಪದಾರ್ಥಗಳು, ಔಷಧಿಗಳ ಹೊರತಾಗಿ ಯಾವ ವ್ಯವಹಾರವೂ ನಡೆಯುತ್ತಿಲ್ಲ, ಅಂತೂ ಸಮಸ್ಯೆಗಳು ಬೇರೆಬೇರೆ ಆದರೂ ಎಲ್ಲರಿಗೂ ಸಮಸ್ಯೆಗಳಿರುವುದಂತೂ ನಿಜ. ಆದರೆ ಒಂದು ನೆನಪಿಡಬೇಕು ಈ ಸಮಯ ಕಳೆದುಹೋಗುತ್ತದೆ.

ಆಹಾರ, ಆರೋಗ್ಯ ಇವೆರಡು ಮೊದಲು ಮುಖ್ಯ, ನಂತರ ಉಳಿದವುಗಳು ಎಂಬ ಸತ್ಯ ನಿಧಾವಾಗಿಯಾದರೂ ಅರ್ಥವಾಗುತ್ತಿದೆ. ಎಲ್ಲಕ್ಕಿಂತ ಮೊದಲು ಆಮ್ಲಜನಕ ಬಹಳವೇ ಮುಖ್ಯ ಎಂಬುದಂತೂ ಕ್ಷಣಕ್ಷಣದಲೂ ತಿಳಿಯುತ್ತಿದೆ. ಬಂಗಾರದ ಒಡವೆಗಳು, ಭಾರಿ ಬೆಲೆಯುಳ್ಳ ಉಡುಪುಗಳು, ದುಬಾರಿ ವಾಹನಗಳು, ಸಣ್ಣಸಣ್ಣ ವಿಷಯಗಳಿಗೆಲ್ಲಾ ರಾಜಕೀಯ ಪಕ್ಷ - ಪಾರ್ಟಿ ಅಂತ ಕುಣಿಯುವುದು, ದೇವರ ವಿಷಯದಲ್ಲಿ ಭಕ್ತಿಗಿಂತ ತೋರ್ಪಡಿಕೆಯೇ ಹೆಚ್ಚಾಗಿರುವುದು ಇವೆಲ್ಲಾ ವ್ಯರ್ಥ ಎಂಬುದು ಹೆಜ್ಜೆಹೆಜ್ಜೆಗೂ ಸಾಬೀತಾಗುತ್ತಿದೆ. ಸುಧಾರಿಸಿಕೊಳ್ಳೋಣ ಎಂಬ ಭಾವತೀವ್ರವಾಗಿಕಾಡುತ್ತಿದೆ. ಆದರೆ ಎರಡು ವರ್ಷಗಳಾಯಿತು ಏನೂ ಮಾಡಲಾಗುತ್ತಿಲ್ಲ, ಜೀವ ಉಳಿಸಿಕೊಳ್ಳಲು ಹೋರಾಡುವುದೇ ಆಗಿದೆ. ಆದರೆ ಒಂದು ನೆನಪಿಡಬೇಕು ಈ ಸಮಯ ಕಳೆದುಹೋಗುತ್ತದೆ.

ಈ ಮಹಾಮಾರಿಯಲ್ಲಿ ಬಹಳಷ್ಟು ಜೀವಗಳನ್ನುಕಳೆದುಕೊಂಡೆವು, ಕೆಲವು ಮಕ್ಕಳು ಪಾಲಕರನ್ನು ಕಳೆದುಕೊಂಡು ಅನಾಥರಾದರೆ, ಕೆಲವರು ಮಕ್ಕಳನ್ನು ಕಳೆದುಕೊಂಡು ಒಂಟಿಯಾದರು, ಹಲವರು ಕೆಲಸಗಳನ್ನು ಕಳೆದುಕೊಂಡರೆ, ಮತ್ತೆ ಕೆಲವರು ಹೊಸ ವೃತ್ತಿಗಳನ್ನು ಆಯ್ಕೆ ಮಾಡಿಕೊಂಡರು, ಬದಲಾವಣೆ ಜಗದ ನಿಯಮ ಅನ್ನುತ್ತಾರೆ, ಆದರೆ ಹೀಗೊಂದು ಬದಲಾವಣೆಯನ್ನ ನಾವು ಬಯಸಿದ್ದೆವಾ? ಊಂಹೂಂ ಇಲ್ಲಾ. ಎಲ್ಲ ಸರಿಯಾಗುವುದು ಯಾವಾಗ ಎನ್ನುವುದು ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ. ಆದರೆ ಒಂದು ನೆನಪಿಡಬೇಕು ಈ ಸಮಯ ಕಳೆದುಹೋಗುತ್ತದೆ.

ಹೌದು ಜೀವನ ಆಚೀಚೆ ಆಗಿರುವುದಂತೂ ನಿಜ ,ನಾವೀಗ ಯೋಚನೆ ಮಾಡಬೇಕಿರುವುದು ಜೀವನವನ್ನು ಸಾಮಾನ್ಯ ಸ್ಥಿತಿಗೆ ತರಲು ಏನು ಮಾಡಬೇಕು ಎನ್ನುವುದನ್ನು ಯೋಚಿಸುವುದು, ಮತ್ತು ಕಾರ್ಯಪ್ರವೃತ್ತರಾಗುವುದು. ಬಹುಶಃ ಆತ್ಮಾವಲೋಕನಕ್ಕೆ ಇದು ಸಕಾಲ ಎಂದೇ ಹೇಳಬೇಕು. ನಾವು ಪ್ರಕೃತಿಯನ್ನು ಬಹಳಷ್ಟು ನಾಶಮಾಡಿದ್ದೇವೆ. ವಾಯುಮಾಲಿನ್ಯ, ಜಲಮಾಲಿನ್ಯ, ಮಾಡಿ ನಮ್ಮ ಆರೋಗ್ಯಕ್ಕೆ ನಾವೇ ಕಷ್ಟ ತಂದುಕೊಂಡಿದ್ದೇವೆ. ಮೋಜುಮಸ್ತಿ ಅಂತ ಬಹಳಷ್ಟು ನೈಸರ್ಗಿಕ ತಾಣಗಳಾದ ಅರಣ್ಯ, ಸಮುದ್ರದ ದಂಡೆ, ನದಿ ತೀರ, ಗುಡ್ಡ ,ಬೆಟ್ಟಗಳನ್ನು ಕಲುಷಿತಗೊಳಿಸಿದ್ದೇವೆ. ಪ್ರಾಣಿಗಳಲ್ಲಿಯೇ ಅತ್ಯಂತ ಬುದ್ಧಿವಂತ ಪ್ರಾಣಿ ಮನುಷ್ಯ ಹೌದಾಅಲ್ಲವಾ ಎಂದಿನಿಸುವಷ್ಟು ಪೃಕೃತಿಯೊಂದಿಗೆ ಕೆಟ್ಟದಾಗಿ ನಡೆದುಕೊಂಡಿದ್ದೇವೆ. ಇದನ್ನೆಲ್ಲಾ ಅವಲೋಕನ ಮಾಡಿಕೊಂಡು ಆಗಿರುವ ತಪ್ಪುಗಳು ಪುನರಾವರ್ತನೆಯಾಗದಂತೆ ಎಚ್ಚರಿಕೆ ವಹಿಸಿ ಸರಿಪಡಿಸಿಕೊಳ್ಳಬೇಕಾಗಿದೆ.

ಕೊರೋನಾ ಟೆಸ್ಟ್ ರಿಪೋರ್ಟ್ ಪೊಸಿಟಿವ್ ಬರುವುದು ಬೇಡಾ ಆದರೆ ನಮ್ಮ ಆಲೋಚನೆಗಳು, ವರ್ತನೆಗಳು ಸದಾ ಪೊಸಿಟಿವ್ ಆಗಿರಲಿ. ಆತ್ಮಾವಲೋಕನ ಎಂಬುದು ಬಹಳ ಭಾರೀ ತೂಕದ ಶಬ್ದಇದಕ್ಕೇ ತಪಸ್ಸೇ ಮಾಡಬೇಕಾಗಬಹುದು ಅಂತೇನು ಇಲ್ಲಾ, ಸಣ್ಣಸಣ್ಣ ವಿಷಯಗಳತ್ತ ಗಮನಹರಿಸಿದರೆ ಸಾಕು. ಗಿಡ, ಮರಗಳನ್ನು ಬೆಳೆಸುವುದು ಇದರಿಂದ ಆಮ್ಲಜನಕ ಸಿಗುವುದಷ್ಠೇ ಅಲ್ಲದೇ ಮಳೆ ಕಾಲಕಾಲಕ್ಕೆ ಆಗಿ ಬೆಳೆ ಸರಿಯಾಗಿ ಬರುತ್ತದೆ, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು, ಕಸ ವಿಲೇವಾರಿ ಸರಿಯಾಗಿ ಮಾಡುವುದು, ಆದಷ್ಟು ಧನಾತ್ಮಕವಾಗಿ ಆಲೋಚನೆಗಳನ್ನುಮಾಡುವುದು. ಕರೋನಾ ಪೀಡಿತರಿಗೆ ಧೈರ್ಯದ ಮಾತುಗಳನ್ನಾಡುವುದು, ಕೈಲಾದ ಸಹಾಯ ಮಾಡುವುದು. ಕೆಲಸ ಕಳೆದುಕೊಂಡವರಿಗೆ ಸರ್ಕಾರಿ ಯೋಜನೆಗಳ ಬಗ್ಗೆ ತಿಳುವಳಿಕೆ ನೀಡುವುದು, ಸ್ಥಳೀಯ ಬೆಳೆಗಾರರಿಂದ ಸಾಮಾನುಗಳನ್ನು ಖರೀದಿಸುವುದು, ವಿದ್ಯಾರ್ಥಿಗಳಿಗೆ ಧೈರ್ಯತುಂಬುವುದು , ಎಷ್ಟು ಸಾಧ್ಯವೋ ಅಷ್ಟು ಆನ್ಲೈನ್ ಮೂಲಕ ಪಾಠಗಳನ್ನು, ಉದ್ಯೋಗ ಮಾಹಿತಿಯನ್ನು , ಸಾಮಾನ್ಯಜ್ಞಾನ ವಿಷಯಗಳನ್ನು ತಲುಪಿಸಲು ಪ್ರಯತ್ನಿಸುವುದು. ಸಣ್ಣ ಮಕ್ಕಳಿರುವ ಮನೆಗಳಲ್ಲಿ ಪಾಲಕರು ತಮಗೆ ಸಿಗುತ್ತಿರುವ ಸಮಯವನ್ನು ಮಕ್ಕಳ ಜ್ಞಾನವೃದ್ಧಿಗೆ ಕೈಲಾದಷ್ಟು ಪ್ರಯತ್ನಿಸುವುದು ಹೀಗೆ ಜೀವನವನ್ನು ಚಾಲನೆಯಲ್ಲಿ ಇಡಬೇಕಾಗಿದೆ. ನಕಾರಾತ್ಮಕ ಯೋಚನೆಗಳು ಕಾಡುವುದು ಸಹಜ, ಆದರೆ ಒಂದು ನೆನಪಿಡಬೇಕು ಈ ಸಮಯ ಕಳೆದುಹೋಗುತ್ತದೆ.